ಸ್ಪೆಷಲ್ ಸಲಾಡ್
ಸಾಮಗ್ರಿ : 100 ಗ್ರಾಂ ಟೊಮೇಟೊ, 80 ಗ್ರಾಂ ಚಿಕನ್ ಪೀಸಸ್, ಒಂದಿಷ್ಟು ಬೆಂದ ಸುವರ್ಣಗೆಡ್ಡೆ ಹೋಳು, ಹೆಚ್ಚಿದ ಈರುಳ್ಳಿ ತೆನೆ, ಕಾಫರ್ ಲೈವ್ ಲೀವ್ಸ್ 1-2 ಇಡೀ ಒಣ ಮೆಣಸಿನಕಾಯಿ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ನಿಂಬೆ ರಸ, ಪುದೀನಾ, ಫಿಶ್ ಸಾಸ್, ಪಾವ್ ಶುಗರ್, ಗಾರ್ನಿಶಿಂಗ್‌ಗಾಗಿ ಹೆಚ್ಚಿದ ಸೌತೆಬಿಲ್ಲೆ, ಬೆಂದ ಹಣ್ಣು ಹುರುಳಿಕಾಯಿ [ರಜ್ಮಾ], ಕೊ.ಸೊಪ್ಪು.
ವಿಧಾನ : ಮೊದಲು ಚಿಕನ್ ಪೀಸ್‌ಗಳನ್ನು ಬೇಯಿಸಿಕೊಳ್ಳಿ. ಅದನ್ನು ಸೋಸಿ ಬೇರ್ಪಡಿಸಿ. ಒಂದು ಮಿಕ್ಸಿಗೆ ಉಪ್ಪು, ಖಾರ, ಪಾವ್ ಶುಗರ್, ಫಿಶ್ ಸಾಸ್, ನಿಂಬೆ ರಸ, ಇಡೀ ಒಣಮೆಣಸಿನಕಾಯಿ ಹಾಕಿ ಪೇಸ್ಟ್ ಮಾಡಿ. ಉಳಿದ ಸಾಮಗ್ರಿಗಳನ್ನೂ ಇದಕ್ಕೆ ಹಾಕಿ ಮತ್ತೆ ಬ್ಲೆಂಡ್ ಮಾಡಿ. ನಂತರ ಈ ಮಿಶ್ರಣನ್ನು ಚಿಕನ್ ಪೀಸ್‌ಗೆ, ಸುವರ್ಣ ಗೆಡ್ಡೆಯ ಹೋಳುಗಳಿಗೆ ಸವರಿ ನೆನೆಯಲು ಬಿಡಿ. ಇವನ್ನು ಒಂದು ಟ್ರೇನಲ್ಲಿ ಜೋಡಿಸಿಕೊಂಡು, ಮೈಕ್ರೋವೇವ್‌ನಲ್ಲಿ 5 ನಿಮಿಷ ಗ್ರಿಲ್ ಮಾಡಿ. ಗಾರ್ನಿಶಿಂಗ್ ಸಾಮಗ್ರಿಯಿಂದ ಚಿತ್ರದಂತೆ ಅಲಂಕರಿಸಿ ಸವಿಯಲು ಕೊಡಿ.
ಸ್ಪೆಷಲ್ ಮಟನ್ ಮಸಾಲ
ಸಾಮಗ್ರಿ : 250 ಗ್ರಾಂ ಮಟನ್ ಪೀಸ್, ರುಚಿಗೆ ತಕ್ಕಷ್ಟು ಉಪ್ಪು, ಖಾರ, ನಿಂಬೆರಸ, ಕಿಚನ್ ಕಿಂಗ್ ಮಸಾಲ, ಲವಂಗದ ಎಲೆ, ಏಲಕ್ಕಿ, ಲವಂಗ, ದಾಲ್ಚಿನ್ನಿ, ಶುಂಠಿ-ಬೆಳ್ಳುಳ್ಳಿ, ಈರುಳ್ಳಿ ಪೇಸ್ಟ್, ಗರಂ ಮಸಾಲ, ಧನಿಯಾಪುಡಿ, ಜೀರಿಗೆ ಪುಡಿ, ಕಡಲೆಹಿಟ್ಟು, ಕೇದಗೆ ಎಸೆನ್ಸ್, ಸ್ಕೂಪೈನ್ ಎಸೆನ್ಸ್, ಮಟನ್ ಸ್ಟಾಕ್, ಮೊಸರು, ತುಪ್ಪ, ಕೊ.ಸೊಪ್ಪು.
ವಿಧಾನ : ಒಂದು ದಪ್ಪ ತಳದ ಬಾಣಲೆಯಲ್ಲಿ ಮಟನ್ ಹಾಕಿ ಬೇಯಿಸಿ, ಸ್ಟಾಕ್ ರೆಡಿ ಆಯ್ತು. ಇದನ್ನು ಪಕ್ಕಕ್ಕಿರಿಸಿ, ಅದರಲ್ಲಿ ಎಣ್ಣೆ ಬಿಸಿ ಮಾಡಿ ಇಡಿಯಾದ ಡ್ರೈ ಮಸಾಲ, ಶುಂಠಿ, ಬೆಳ್ಳುಳ್ಳಿ, ಈರುಳ್ಳಿ ಪೇಸ್ಟ್ ಹಾಕಿ ಬಾಡಿಸಿ. ಆಮೇಲೆ ಒಂದೊಂದಾಗಿ ಇತರ ಎಲ್ಲಾ ಮಸಾಲೆ ಹಾಕಿ ಕೆದಕಬೇಕು. ಇದಕ್ಕೆ ಬೆಂದ ಮಟನ್ ಹಾಕಿ ಚೆನ್ನಾಗಿ ಬೆರೆತುಕೊಳ್ಳುವಂತೆ ಕೈಯಾಡಿಸಿ. ನಂತರ ಸ್ಟಾಕ್‌ಗೆ ಮೊಸರು, ಕಡಲೆಹಿಟ್ಟು ಹಾಕಿ ಚೆನ್ನಾಗಿ ಗೊಟಾಯಿಸಿ. ಇದಕ್ಕೆ ಬೆರೆಸಿ ಮಂದ ಉರಿಯಲ್ಲಿ ಗ್ರೇವಿ ಕುದಿಸಿರಿ. ಕೆಳಗಿಳಿಸಿ ಕೊ.ಸೊಪ್ಪು ಉದುರಿಸಿ ಬಿಸಿಯಾಗಿ ಚಪಾತಿ, ಅನ್ನದ ಜೊತೆ ಸವಿಯಲು ಕೊಡಿ.
ಸ್ಪೆಷಲ್ ಬಟರ್ ಚಿಕನ್
ಮ್ಯಾರಿನೇಟ್‌ಗಾಗಿ ಸಾಮಗ್ರಿ : 500 ಗ್ರಾಂ ಬೋನ್‌ಲೆಸ್ ಚಿಕನ್ ಪೀಸ್, 2-2 ಚಮಚ ಶುಂಠಿ, ಬೆಳ್ಳುಳ್ಳಿ ಪೇಸ್ಟ್, 1 ಕಪ್ ಹುಳಿ ಮೊಸರು, 1 ನಿಂಬೆಹಣ್ಣು, ರುಚಿಗೆ ತಕ್ಕಷ್ಟು ಉಪ್ಪು, ಖಾರ, ವಿನಿಗರ್, ಧನಿಯಾ ಪುಡಿ, ಜೀರಿಗೆ ಪುಡಿ, 2-3 ಈರುಳ್ಳಿ, ಕೊ.ಸೊಪ್ಪು.
ಗ್ರೇವಿಗಾಗಿ ಸಾಮಗ್ರಿ : 6-8 ಹುಳಿ ಟೊಮೇಟೊ, ಅರ್ಧ ಸೌಟು ಬೆಣ್ಣೆ, ಉಪ್ಪು, ಖಾರ, ಹೆಚ್ಚಿದ ಶುಂಠಿ, ಬೆಳ್ಳುಳ್ಳಿ, ಹಸಿ ಮೆಣಸು, ಈರುಳ್ಳಿ, 2 ಚಿಟಕಿ ಆರೆಂಜ್ ಕಲರ್, ಫ್ರೆಶ್ ಕ್ರೀಂ, ಧನಿಯಾ ಪುಡಿ, ಜೀರಿಗೆ ಪುಡಿ, ಸಕ್ಕರೆ, ಕರಿಬೇವು.
ಗಾರ್ನಿಶಿಂಗ್ ಸಾಮಗ್ರಿ : 2 ಉದ್ದನೆ ಹಸಿ ಮೆಣಸು, ಅರ್ಧ ಸೌಟು ಬೆಣ್ಣೆ, ಫ್ರೆಶ್ ಕ್ರೀಂ, ಕೊ.ಸೊಪ್ಪು.
ವಿಧಾನ : ಮಿಕ್ಸಿಗೆ ಟೊಮೇಟೊ ಹಾಕಿ ಪೇಸ್ಟ್ ಮಾಡಿಡಿ. ಮ್ಯಾರಿನೇಟ್ ಸಾಮಗ್ರಿ ಎಲ್ಲಾ ಸೇರಿಸಿ ಪೇಸ್ಟ್ ತರಹ ಮಾಡಿಕೊಂಡು, ಅದರಲ್ಲಿ ಚಿಕನ್ ಪೀಸ್ ಹಾಕಿ ನೆನೆಯಲು ಬಿಡಿ. ನಂತರ ಬಾಣಲೆಯಲ್ಲಿ ಬೆಣ್ಣೆ ಬಿಸಿ ಮಾಡಿ, ಅದಕ್ಕೆ ಚಿಕನ್ ಹಾಕಿ ಮೃದು ಆಗುವವರೆಗೂ ಫ್ರೈ ಮಾಡಿ. ಮಂದ ಉರಿಯಲ್ಲಿ ಅದು ಬೇಯುತ್ತಿರಲಿ. ಪಕ್ಕದ ಒಲೆಯಲ್ಲಿ ಚಿಕ್ಕ ಬಾಣಲೆಯಲ್ಲಿ ಬೆಣ್ಣೆ ಬಿಸಿ ಮಾಡಿ. ಇದಕ್ಕೆ ಖಾರದ ಪುಡಿ, ಧನಿಯಾ/ಜೀರಿಗೆ ಪುಡಿ, ಹೆಚ್ಚಿದ ಶುಂಠಿ, ಹಸಿ ಮೆಣಸು ಹಾಕಿ ಮಂದ ಉರಿಯಲ್ಲಿ ತುಸು ಕೆದಕಬೇಕು. ಇದಕ್ಕೆ ಟೊಮೇಟೊ ಪೇಸ್ಟ್ ಬೆರೆಸಿ ಗ್ರೇವಿ ಗಟ್ಟಿಯಾಗುವಂತೆ ಕುದಿಸಿ. ನಂತರ ಇದನ್ನು ಚಿಕನ್ ಬಾಣಲೆಗೆ ರವಾನಿಸಿ, ಮೇಲೆ ಬೆಣ್ಣೆ, ಕ್ರೀಂ ಹಾಕಿ ಮತ್ತಷ್ಟು ಹೊತ್ತು ಕುದಿಸಬೇಕು. ಕೆಳಗಿಳಿಸಿದ ಮೇಲೆ ಫ್ರೆಶ್ ಕ್ರೀಂ, ಉದ್ದಕ್ಕೆ ಸೀಳಿದ ಹಸಿ ಮೆಣಸು, ಕೊ.ಸೊಪ್ಪು ಉದುರಿಸಿ ಬಿಸಿ ಬಿಸಿಯಾಗಿ ಚಪಾತಿ, ಅನ್ನದ ಜೊತೆ ಸವಿಯಲು ಕೊಡಿ.