ನೈಸರ್ಗಿಕ ವಿಧಾನದಲ್ಲಿ ಆರೋಗ್ಯದ ಬಗ್ಗೆ ಗಮನ ಕೊಡಬೇಕೆಂದಿದ್ದರೆ ಚಿಯಾ ಸೀಡ್ಸ್ ಗಳಿಗಿಂತ ಉತ್ತಮವಾದುದು ಮತ್ತೊಂದು ಇರಲಿಕ್ಕಿಲ್ಲ.
ಒಮೇಗಾ 3 ಫ್ಯಾಟಿ ಆ್ಯಸಿಡ್
ಫೈಬರ್ ಪ್ರೋಟೀನ್, ಆ್ಯಂಟಿ ಆಕ್ಸಿಡೆಂಟ್ ಹಾಗೂ ಕ್ಯಾಲ್ಶಿಯಂನಿಂದ ಭರ್ತಿಯಾಗಿರುವ ಚಿಯಾ ಸೀಡ್ಸ್ ನ ವೈಜ್ಞಾನಿಕ ಹೆಸರು `ಸಾಲ್ವಿಯಾ ಹಿಸ್ಪೆನಿಕಾ.’ ಇದರ ಮೊದಲ ಕೃಷಿ ನಡೆದದ್ದು ಮೆಕ್ಸಿಕೊದಲ್ಲಿ. ಸಾಮಾನ್ಯವಾಗಿ ಚಿಯಾ ಸೀಡ್ಸ್ ಮತ್ತು ತುಳಸಿ ಬೀಜಗಳಲ್ಲಿ ವ್ಯತ್ಯಾಸ ಗುರುತಿಸಲಾರದೆ ಜನರು ಗೊಂದಲಕ್ಕೊಳಗಾಗುತ್ತಾರೆ. ಎರಡೂ ಒಂದೇ ರೀತಿ ಕಂಡುಬರುತ್ತವೆ.
ಆದರೆ ಅವು ಪರಿಪೂರ್ಣ ಭಿನ್ನ. ಅವುಗಳ ಗುಣವಿಶೇಷಗಳು ಸಹ ವಿಭಿನ್ನ. ಚಿಯಾ ಸೀಡ್ಸ್ ರುಚಿ ಅಖರೋಟಿನಂತೆ ಇರುತ್ತದೆ. ಹೀಗಾಗಿ ಇವನ್ನು ಆಹಾರ ಪದಾರ್ಥಗಳು ಹಾಗೂ ಪೇಯಗಳಲ್ಲಿ ಮಿಶ್ರ ಮಾಡುವುದು ಸುಲಭವಾಗುತ್ತದೆ.
ತೂಕ ಕಡಿಮೆ ಮಾಡಲು ಉಪಯುಕ್ತ : 1 ಗ್ಲಾಸ್ ನೀರಿನಲ್ಲಿ ಚಿಯಾ ಸೀಡ್ಸನ್ನು ಹಾಗೆಯೇ ಮಿಶ್ರಣ ಮಾಡಿಕೊಂಡು ಅವು ಹಿಗ್ಗುವ ಮೊದಲೇ ಕುಡಿದುಬಿಡಬೇಕು. ಅದರಿಂದ ತೃಪ್ತಿಯ ಅನುಭವ ಸಿಗುತ್ತದೆ. ಜೊತೆ ಜೊತೆಗೆ ತೂಕ ಕೂಡ ನಿಧಾನವಾಗಿ ಕಡಿಮೆಯಾಗುತ್ತದೆ.
ಹೃದ್ರೋಗಗಳಿಗೆ ಸಹಾಯಕ : ಇದಕ್ಕೆ ದೇಹದಲ್ಲಿ ಜಮೆಗೊಂಡಿರುವ ಹೆಚ್ಚುವರಿ ಕೊಬ್ಬನ್ನು ಕಡಿಮೆಗೊಳಿಸುವ ಸಾಮರ್ಥ್ಯವಿರುತ್ತದೆ. ಇವುಗಳ ಸೇವನೆ ಕೊಲೆಸ್ಟ್ರಾಲ್ ನ್ನು ನಿಯಂತ್ರಣಗೊಳಿಸುತ್ತದೆ. ಲೋ ಬಿ.ಪಿ ರೋಗಿಗಳಿಗೆ ಇದು ಉಪಯುಕ್ತ.
ಶರ್ಕರದ ಮೇಲೆ ನಿಯಂತ್ರಣ : `ನ್ಯಾಷನಲ್ ಇನ್ ಸ್ಟಿಟ್ಯೂಟ್ ಆಫ್ ಹೆಲ್ತ್’ ಪ್ರಕಾರ, ಚಿಯಾ ಸೀಡ್ಸ್ ನಲ್ಲಿರುವ ನಾರಿನಂಶ ಮತ್ತು ಕೊಬ್ಬಿನಂಶದಿಂದಾಗಿ ನೈಸರ್ಗಿಕವಾಗಿ ರಕ್ತ ಶರ್ಕರದ ಮೇಲೆ ನಿಯಂತ್ರಣ ಹೇರಲು ಸಾಧ್ಯವಾಗುತ್ತದೆ. ಚಿಯಾ ಸೀಡ್ಸ್ ರಕ್ತದಲ್ಲಿರುವ ಕೊಬ್ಬು ಮತ್ತು ಇನ್ ಸ್ಯುಲಿನ್ ಪ್ರತಿರೋಧದಂತಹ ವಿಕಾರಗಳನ್ನು ತಡೆಯುವಲ್ಲಿ ನೆರವಾಗುತ್ತದೆ. ಅವೆರಡು ಮಧುಮೇಹಕ್ಕೆ ಕಾರಣವಾಗುತ್ತವೆ. ಅಂದರೆ ಚಿಯಾ ಸೀಡ್ಸ್ ಮಧುಮೇಹ ನಿಯಂತ್ರಣಕ್ಕೆ ನೆರವಾಗುತ್ತದೆ.
ಕ್ಯಾನ್ಸರ್ ಚಿಕಿತ್ಸೆಗೆ ಉಪಯುಕ್ತ : ಚಿಯಾ ಸೀಡ್ಸ್ ಆರೋಗ್ಯಕರ ಜೀವಕೋಶಗಳಿಗೆ ಹಾನಿಯುಂಟು ಮಾಡದೆ ಕ್ಯಾನ್ಸರ್ ರೋಗಾಣುಗಳನ್ನು ನಾಶ ಮಾಡಲು ಉಪಯುಕ್ತ ಎಂದೂ ಸಾಬೀತಾಗಿದೆ. ಇದರ ತೈಲದಲ್ಲೂ ಕ್ಯಾನ್ಸರ್ ಜೀವಕೋಶಗಳನ್ನು ನಿವಾರಿಸುವ ಗುಣಗಳು ಕಂಡುಬಂದಿವೆ. ಇವು ಟ್ಯೂಮರ್ ನ ಬೆಳವಣಿಗೆ ಕುಂಠಿತಗೊಳಿಸುವ ಹಾಗೂ ಕ್ಯಾನ್ಸರ್ ಜೀವಕೋಶಗಳ ಪ್ರತಿಕೃತಿಯನ್ನು ತಡೆಯುವಲ್ಲಿ ನೆರವಾಗುತ್ತದೆ.
ಚರ್ಮದ ಕಾಂತಿ ಹೆಚ್ಚಿಸುತ್ತದೆ : ಚಿಯಾ ಸೀಡ್ಸ್ ನಲ್ಲಿ ಪ್ರೋಟೀನ್, ಕಬ್ಬಿಣಾಂಶ ಹಾಗೂ ವಿಟಮಿನ್ ಹೇರಳ ಪ್ರಮಾಣದಲ್ಲಿ ಕಂಡುಬರುತ್ತದೆ. ಈ ಪೋಷಕಾಂಶಗಳು ಚರ್ಮವನ್ನು ಹೊಳಪುಳ್ಳದ್ದಾಗಿಸುತ್ತವೆ. ಇವುಗಳ ನಿಯಮಿತ ಸೇವನೆಯಿಂದ ಕೂದಲು ಉದುರುವ ಸಮಸ್ಯೆಗೆ ಅಷ್ಟಿಷ್ಟು ಪರಿಹಾರ ದೊರಕುತ್ತದೆ. ಇದರಲ್ಲಿರುವ ಒಮೇಗಾ 3 ಫ್ಯಾಟಿ ಆ್ಯಸಿಡ್ ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ. ಚರ್ಮದ ಶುಷ್ಕತನ ನಿವಾರಿಸುತ್ತದೆ. ಇದರಲ್ಲಿ ಸತುವಿನ ಅಂಶ ಇರುವುದರಿಂದ ಚರ್ಮವನ್ನು ಮೃದುಗೊಳಿಸುತ್ತದೆ. ಹೆಚ್ಚುತ್ತಿರುವ ವಯಸ್ಸಿನ ಸಂಕೇತಗಳನ್ನು ತಡೆಯಲು ಚಿಯಾ ಸೀಡ್ಸ್ ಸೇವನೆ ಉಪಯುಕ್ತ.
ನಿದ್ರಾಹೀನತೆ ಹಾಗೂ ಮೂಡ್ ಸ್ವಿಂಗ್ಸ್ ನಲ್ಲಿ ಸುಧಾರಣೆ : ಚಿಯಾ ಸೀಡ್ಸ್ ನಲ್ಲಿ ಅಮೀನೊ ಆ್ಯಸಿಡ್ ಹೇರಳ ಪ್ರಮಾಣದಲ್ಲಿ ಇರುವುದರಿಂದ, ಇದು ಮೂಡ್ ಸ್ವಿಂಗ್ ಹಾಗೂ ನಿದ್ರಾಹೀನತೆ ಸಮಸ್ಯೆಯಿಂದ ನಿರಾಳತೆ ದೊರಕಿಸಿಕೊಡುತ್ತದೆ.
ಚಿಯಾ ಸೀಡ್ಸ್ ಬಳಕೆ ಹೇಗೆ? : ಚಿಯಾ ಸೀಡ್ಸ್ ಹೈಡ್ರೊಫಿಲಿಕ್ ಅಂದರೆ ನೀರನ್ನು ಹೀರಿಕೊಳ್ಳುವ ಸಾಮರ್ಥ್ಯ ಹೊಂದಿರುತ್ತವೆ. ಹೀಗಾಗಿ ಇವನ್ನು ನೀರಲ್ಲಿ ನೆನೆಸಿಯೇ ಸೇವಿಸಬೇಕೆಂದು ಸಲಹೆ ನೀಡಲಾಗುತ್ತದೆ.
ಚಿಯಾ ಸೀಡ್ಸ್ ನ್ನು ಪುಡಿ ಮಾಡಿ ಹಿಟ್ಟಿನಲ್ಲಿ ಮಿಶ್ರಣಗೊಳಿಸಿ, ಸಲಾಡ್ ಮೇಲೆ ಸಿಂಪಡಿಸಿಕೊಂಡು, ಹಾಲು ಅಥವಾ ಮೊಸರಿನಲ್ಲಿ ಮಿಶ್ರಣ ಮಾಡಿಕೊಂಡು ಸೇವಿಸಬಹುದು.
ಚಿಯಾ ಸೀಡ್ಸ್ ನಿಂದ ಏನೇನು ಹಾನಿ?
ಹಾಗೆ ನೋಡಿದರೆ ಚಿಯಾ ಸೀಡ್ಸ್ ನಿಂದ ಆಗುವ ಹಾನಿ ಅತ್ಯಂತ ಕಡಿಮೆ. ಆದರೂ ಪ್ರೊಸ್ಟೇಟ್ ಕ್ಯಾನ್ಸರ್ ಬಗ್ಗೆ ನಡೆಸಿದ ಅಧ್ಯಯನದಿಂದ ಇದು ಪ್ರೊಸ್ಟೇಟ್ ಕ್ಯಾನ್ಸರ್ ನ ಅಪಾಯವನ್ನು ಹೆಚ್ಚಿಸುತ್ತವೆ ಎಂದು ತಿಳಿದುಬಂದಿದೆ.
ಚಿಯಾ ಸೀಡ್ಸ್ ನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನಾರಿನಂಶ ಇರುವುದರಿಂದ ಹೊಟ್ಟೆಗೆ ತೊಂದರೆಯಾಗಬಹುದು. ಹೀಗಾಗಿ ಇವುಗಳ ಸೇವನೆಯನ್ನು ಮಿತ ಪ್ರಮಾಣದಲ್ಲಿ ಮಾಡಬೇಕು.
ಇವುಗಳ ಅತಿಯಾದ ಸೇವನೆಯಿಂದ ಅಲರ್ಜಿ ಆಗಬಹುದು. ಈ ಅಲರ್ಜಿಯಿಂದ ದೇಹದ ಮೇಲೆ ಗುರುತು, ಉಸಿರಾಟದಲ್ಲಿ ತೊಂದರೆ, ವಾತಿ, ಊತ ಹಾಗೂ ಇತರ ಸಮಸ್ಯೆಗಳಾಗಬಹುದು.
ಒಮೇಗಾ 3 ಫ್ಯಾಟಿ ಆ್ಯಸಿಡ್ `ನ್ಯಾಚುರಲ್ ಬ್ಲಡ್ ಥಿನ್ನರ್’ನಂತೆ ಕೆಲಸ ಮಾಡುತ್ತದೆ. ನೀವು ಮೊದಲಿನಿಂದಲೇ ರಕ್ತ ತೆಳ್ಳಗಾಗಿಸುವ ಔಷಧಿ ಸೇವನೆ ಮಾಡುತ್ತಿದ್ದರೆ ಚಿಯಾ ಸೀಡ್ಸ್ ಸೇವನೆಯಿಂದ ದೂರ ಇರಿ.
– ಪುಷ್ಪಾ ಭಟ್