ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ದಾಂಪತ್ಯ ಜೀವನದ ಬಗ್ಗೆ ಆಘಾತಕಾರಿ ವಿಷಯವೊಂದನ್ನು ಹಂಚಿಕೊಂಡಿದ್ದಾರೆ. ತಾವು ತಮ್ಮ ಪತಿ ಪರುಪಳ್ಳಿ ಕಶ್ಯಪ್ ಅವರಿಂದ ದೂರ ಆಗುತ್ತಿರುವ ಬಗ್ಗೆ ಹೇಳಿಕೊಂಡಿದ್ದಾರೆ.ನೆಹ್ವಾಲ್ ಇನ್​ಸ್ಟಾಗ್ರಾಮ್​​ನಲ್ಲಿ ಈ ವಿಚಾರ ಹಂಚಿಕೊಂಡಿದ್ದು, ಕಶ್ಯಪ್ ಜೊತೆಗಿನ ಏಳು ವರ್ಷಗಳ ದಾಂಪತ್ಯ ಜೀವನವನ್ನು ಕೊನೆಗೊಳಿಸಿದ್ದಾರೆ. ‘ಕೆಲವೊಮ್ಮೆ ಜೀವನವು ನಮ್ಮನ್ನು ವಿಭಿನ್ನ ದಿಕ್ಕುಗಳಲ್ಲಿ ಕರೆದೊಯ್ಯುತ್ತದೆ. ಸಾಕಷ್ಟು ಚಿಂತನೆ ಮತ್ತು ಪರಿಗಣನೆಯ ನಂತರ ಪರುಪಳ್ಳಿ ಕಶ್ಯಪ್ ಮತ್ತು ನಾನು ಬೇರೆಯಾಗಲು ನಿರ್ಧರಿಸಿದ್ದೇವೆ. ನಾವು, ನಮ್ಮಿಬ್ಬರಿಗಾಗಿ ಈ ಮಾರ್ಗವನ್ನು ಆರಿಸಿಕೊಳ್ಳುತ್ತಿದ್ದೇವೆ. ನಮ್ಮ ನೆನಪುಗಳಿಗೆ ಕೃತಜ್ಞಳಾಗಿದ್ದೇನೆ. ನಮ್ಮ ಗೌಪ್ಯತೆಯನ್ನು ಅರ್ಥಮಾಡಿಕೊಂಡಿದ್ದಕ್ಕಾಗಿ ಮತ್ತು ಗೌರವಿಸಿದ್ದಕ್ಕಾಗಿ ಧನ್ಯವಾದಗಳು ಎಂದು ನೆಹ್ವಾಲ್ ಬರೆದುಕೊಂಡಿದ್ದಾರೆ.ಸೈನಾ ಮತ್ತು ಕಶ್ಯಪ್ ಹೈದರಾಬಾದ್‌ನ ಪುಲ್ಲೇಲ ಗೋಪಿಚಂದ್ ಅಕಾಡೆಮಿಯಲ್ಲಿ ಒಟ್ಟಿಗೆ ಬೆಳೆದರು. ಸೈನಾ ಒಲಿಂಪಿಕ್​ನಲ್ಲಿ ಕಂಚು ಮತ್ತು ವಿಶ್ವದ ನಂ. 1 ಶ್ರೇಯಾಂಕದೊಂದಿಗೆ ಜಾಗತಿಕ ತಾರೆಯಾಗಿದ್ದಾರೆ. ಕಶ್ಯಪ್ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಸ್ಥಿರ ಪ್ರದರ್ಶನ ನೀಡುವ ಮೂಲಕ ಹೆಸರು ಮಾಡಿದ್ದಾರೆ. ದಶಕಕ್ಕೂ ಹೆಚ್ಚು ಕಾಲ ಡೇಟಿಂಗ್​ನಲ್ಲಿದ್ದ ಈ ಜೋಡಿ 2018 ರಲ್ಲಿ ವಿವಾಹವಾಗಿತ್ತು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ