– ರಾಘವೇಂದ್ರ ಅಡಿಗ ಎಚ್ಚೆನ್.
ಮಾಜಿ ಸಚಿವ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ಮಾಜಿ ಅಧ್ಯಕ್ಷ, ಶತಾಯುಷಿ ಡಾ.ಭೀಮಣ್ಣ ಖಂಡ್ರೆ (102) ಅವರು ವಯೋಸಹಜ ಅನಾರೋಗ್ಯದಿಂದ ಶುಕ್ರವಾರ ನಿಧನರಾದರು.
ವಯೋಸಹಜ ಕಾಯಿಲೆಯಿಂದ ಬಳಲುತ್ತಿರುವ ಅವರನ್ನು ಕಳೆದ ಒಂದೆರಡು ವಾರದಿಂದ ಬೀದರ್ ನಗರದ ಗುದುಗೆ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಭೀಮಣ್ಣ ಖಂಡ್ರೆ ಅವರ ಮಗ, ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ.ಖಂಡ್ರೆ ಅವರು ಜಿಲ್ಲೆಯಲ್ಲಿಯೇ ಉಳಿದು ಅನೇಕ ಸಲ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರಿಂದ ಮಾಹಿತಿ ಪಡೆದಿದ್ದರು.
ಆದರೂ ಆರೋಗ್ಯ ಮತ್ತಷ್ಟು ಕ್ಷೀಣಿಸುತ್ತ ಹೋಗಿರುವ ಹಿನ್ನೆಲೆ ಖಂಡ್ರೆ ಕುಟುಂಬದವರ ಸಮ್ಮುಖದಲ್ಲಿ ಭೀಮಣ್ಣ ಖಂಡ್ರೆ ಅವರನ್ನು ಆಸ್ಪತ್ರೆಯಿಂದ ಮನೆಗೆ ಕರೆದೊಯ್ದು ಚಿಕಿತ್ಸೆ ಮುಂದುವರಿಸಿದರು. ಚಿಕಿತ್ಸೆಗೆ ಸ್ಪಂದಿಸದೆ ಮನೆಯಲ್ಲಿಯೇ ಕೊನೆಯುಸಿರೆಳೆದಿದ್ದಾರೆ ಎಂದು ಅವರ ಪುತ್ರ, ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.
ಮೃತ ಭೀಮಣ್ಣ ಖಂಡ್ರೆ ಅವರಿಗೆ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವರೂ ಆದ ಪುತ್ರ ಈಶ್ವರ ಖಂಡ್ರೆ, ಬೀದರ್ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಮರಕುಮಾರ್ ಖಂಡ್ರೆ ಹಾಗೂ ಮೊಮ್ಮಗ, ಬೀದರ್ ಸಂಸದ ಸಾಗರ ಖಂಡ್ರೆ ಸೇರಿದಂತೆ ಪುತ್ರ, ಪುತ್ರಿಯರು ಹಾಗೂ ಮೊಮ್ಮಕ್ಕಳು ಇದ್ದಾರೆ.
ಭೀಮಣ್ಣ ಖಂಡ್ರೆ ಅವರು ಪಾರ್ವತಮ್ಮ-ಶಿವಲಿಂಗಪ್ಪ ದಂಪತಿಯ ಮಗನಾಗಿ 1925 ನವೆಂಬರ್ 1ರಂದು ಭಾಲ್ಕಿಯಲ್ಲಿ ಜನಿಸಿದರು. 1952ರಲ್ಲಿ ಭಾಲ್ಕಿ ಪುರಸಭೆ ಚುನಾವಣೆಯಲ್ಲಿ ಗೆದ್ದು ರಾಜಕೀಯ ಪ್ರವೇಶಿಸಿದರು. 1962ರಲ್ಲಿ ಪ್ರಜಾ ಸೋಸಿಯಲಿಸ್ಟ್ ಪಾರ್ಟಿಯಿಂದ ಸ್ಪರ್ಧಿಸಿ ಮೊದಲ ಬಾರಿಗೆ ಭಾಲ್ಕಿ ಕ್ಷೇತ್ರದಿಂದ ವಿಧಾನಸಭೆ ಪ್ರವೇಶಿಸಿದರು. ನಂತರ 1967, 1978 ಹಾಗೂ 1983ರಲ್ಲಿ ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗಿದ್ದರು. ವಿಧಾನ ಪರಿಷತ್ ಸದಸ್ಯರಾಗಿ, ಸಾರಿಗೆ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು
ಇಂದು ಅಂತ್ಯಕ್ರಿಯೆ
ಭೀಮಣ್ಣ ಖಂಡ್ರೆ ಅಂತಿಮ ದರ್ಶನ ಹಾಗೂ ಅಂತ್ಯಕ್ರಿಯೆ ಇಂದೇ ನಡೆಯಲಿದೆ ಎಂದು ಅವರ ಪುತ್ರರಾಗಿರುವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ. ಭಾಲ್ಕಿಯ ಗಾಂಧಿ ಗಂಜ್ನಲ್ಲಿರುವ ಸ್ವಗೃಹದ ಆವರಣದಲ್ಲಿ ಇಂದು ಮಧ್ಯಾಹ್ನದವರೆಗೆ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
ಸಿಎಂ ಸಂತಾಪ
ಭೀಮಣ್ಣ ಖಂಡ್ರೆ ನಿಧನಕ್ಕೆ ಸಿಎಂ ಸಿದ್ದರಾಮಯ್ಯ,ಡಿಸಿಎಂ ಡಿ ಕೆ ಶಿವಕುಮಾರ್ ಸೇರಿದಂತೆ ಹಲವು ರಾಜಕೀಯ ನಾಯಕರು, ಗಣ್ಯರು ಸಂತಾಪ ಸೂಚಿಸಿದ್ದಾರೆ. ಎಕ್ಸ್ ಸಂದೇಶದಲ್ಲಿ ಅವರು, ಮಾಜಿ ಸಚಿವರು, ನಾಡಿನ ಹಿರಿಯ ರಾಜಕಾರಣಿಗಳು ಆದ ಭೀಮಣ್ಣ ಖಂಡ್ರೆಯವರ ನಿಧನದಿಂದ ದುಃಖಿತನಾಗಿದ್ದೇನೆ. ಶರಣ ಚಿಂತನೆಗಳ ನೆರಳಂತೆ ಬಾಳಿದ ಧೀಮಂತ ನಾಯಕನ ನಿಧನದಿಂದ ನಾಡಿಗೆ ತುಂಬಲಾರದ ನಷ್ಟವಾಗಿದೆ ಎಂದು ಹೇಳಿದ್ದಾರೆ





