ಸರಸ್ವತಿ*
ನಟ, ನಿರ್ದೇಶಕ ಹಾಗೂ ನಿರ್ಮಾಪಕ ‘ಆಕ್ಷನ್ ಕಿಂಗ್’ ಅರ್ಜುನ್ ಸರ್ಜಾ ಅವರ ನಿರ್ದೇಶನದ, ಶ್ರೀ ರಾಮ್ ಫಿಲಂಸ್ ಇಂಟರ್ನ್ಯಾಷನಲ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಹಾಗೂ ನಿರಂಜನ್ – ಐಶ್ವರ್ಯ ಅರ್ಜುನ್ ನಾಯಕ – ನಾಯಕಿಯಾಗಿ ನಟಿಸಿರುವ ಬಹು ನಿರೀಕ್ಷಿತ “ಸೀತಾ ಪಯಣ” ಚಿತ್ರ ಫೆಬ್ರವರಿ 14 ರಂದು ವಿಶ್ವದಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ. ಈ ಕುರಿತು ಹೆಚ್ಚಿನ ಮಾಹಿತಿ ನೀಡಲು ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡದ ಸದಸ್ಯರು ಮಾತನಾಡಿದರು.
‘ಸೀತಾ ಪಯಣ” ನಾನು ನಿರ್ದೇಶಿಸಿರುವ ಕನ್ನಡದ ಎರಡನೇ ಸಿನಿಮಾ. ಈವರೆಗೂ ಸುಮಾರು ಹದಿನೈದು ಚಿತ್ರಗಳ ನಿರ್ದೇಶನ ಮಾಡಿದ್ದೇನೆ. “ಸೀತಾ ಪಯಣ”ದ ಕಥೆಯನ್ನು ಹದಿಮೂರು ವರ್ಷಗಳ ಹಿಂದೆಯೇ ಸಿದ್ದಮಾಡಿಕೊಂಡಿದೆ. ಯಾವಾಗ ಇದನ್ನು ಚಿತ್ರ ಮಾಡುತ್ತೇನೊ ಎಂದು ಕಾಯುತ್ತಿದೆ. ಈಗ ಕಾಲ ಕೂಡಿಬಂದಿದೆ. ನನ್ನ ಮಗಳು ಐಶ್ವರ್ಯ ನಾಯಕಿಯಾಗಿ, ನಿರಂಜನ್ ನಾಯಕನಾಗಿ ನಟಿಸಿರುವ ಚಿತ್ರವಿದು. ಪ್ರಕಾಶ್ ರೈ, ಸತ್ಯರಾಜ್, ಕೋವೈ ಸರಳ ಅವರಂತಹ ಅನುಭವಿ ಕಲಾವಿದರ ತಾರಾಬಳಗವಿರುವ ಈ ಚಿತ್ರದಲ್ಲಿ ನಾನು ಕೂಡ ಅಭಿನಯಿಸಿದ್ದೇನೆ. ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರು ವಿಶೇಷಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಧ್ರುವ ಅವರ ಅಭಿಮಾನಿಗಳಿಗೆ ಈ ಪಾತ್ರ ಮೆಚ್ಚುಗೆಯಾಗುತ್ತದೆ. ಅನೂಪ್ ರುಬೆನ್ಸ್ ಸಂಗೀತ ಸಂಯೋಜನೆ, ಬಾಲಮುರುಗನ್ ಛಾಯಾಗ್ರಹಣ ಹಾಗೂ ಆಯೂಬ್ ಅವರ ಸಂಕಲನ ಈ ಚಿತ್ರಕ್ಕಿದೆ. “ಸೀತಾ ಪಯಣ”, ಇದು ಬರೀ ವ್ಯಕ್ತಿಯ ಪಯಣವಲ್ಲ. ಮನಸ್ಸಿನ ಪಯಣ, ನಾವು ತಿಳಿದುಕೊಳ್ಳಬೇಕಿರುವ ಮೌಲ್ಯಗಳ ಪಯಣ ಹಾಗೂ ಭಾವನೆಗಳ ಜೊತೆಗಿನ ಸುಂದರ ಪಯಣ. ಒಟ್ಟಿನಲ್ಲಿ ಈ ಚಿತ್ರ ನೋಡಿದವರು ಚಿತ್ರಮಂದಿರದಿಂದ ಹೋಗುವಾಗ ಒಂದು ನಗುವಿನ ಜೊತೆ ಹೋಗುವುದು ಖಂಡಿತ. ಫೆಬ್ರವರಿ 14 ರಂದು ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಚಿತ್ರವಾಗಿ ” ಸೀತಾ ಪಯಣ” ಬಿಡುಗಡೆಯಾಗುತ್ತಿದೆ. ಎಲ್ಲರೂ ನೋಡಿ. ಪ್ರೋತ್ಸಾಹ ನೀಡಿ ಎಂದರು ಚಿತ್ರದ ನಿರ್ಮಾಪಕ, ನಿರ್ದೇಶಕ ಹಾಗೂ ನಟ ಅರ್ಜುನ್ ಸರ್ಜಾ.

ಬಹಳ ದಿನಗಳ ನಂತರ “ಸೀತಾ ಪಯಣ” ಚಿತ್ರದಲ್ಲಿ ನಟಿಸಿದ್ದೇನೆ. ನನ್ನ ಮೊದಲ ಚಿತ್ರ “ಪ್ರೇಮ ಬರಹ” ಕ್ಕೆ ತಾವು ನೀಡಿದ ಪ್ರೋತ್ಸಾಹ ಈ ಚಿತ್ರಕ್ಕೂ ಮುಂದುವರೆಯಲಿ. ಇನ್ನೂ ಅಪ್ಪ ಒಂದೊಳ್ಳೆ ಚಿತ್ರ ನಿರ್ದೇಶನ ಮಾಡಿದ್ದಾರೆ. ಎಲ್ಲರೂ ಕುಟುಂಬ ಸಮೇತ ನೋಡಬಹುದಾದ ಚಿತ್ರವಿದು. ಪ್ರಕಾಶ್ ರೈ, ಸತ್ಯಜಿತ್ ಹಾಗೂ ಅಪ್ಪ ಸೇರಿದಂತೆ ಹಿರಿಯ ಕಲಾವಿದರ ಜೊತೆಗೆ ಅಭಿನಯಿಸಿದ್ದು ಬಹಳ ಖುಷಿಯಾಗಿದೆ. ನಿರಂಜನ್ ಅವರು ಕೂಡ ಒಳ್ಳೆಯ ನಟ. ಇನ್ನೂ, ಧ್ರುವ ಸರ್ಜಾ ಅವರು ವಿಶೇಷ ಪಾತ್ರದಲ್ಲ ಕಾಣಿಸಿಕೊಂಡಿದ್ದಾರೆ. ಅವರ ಪಾತ್ರ ಕೂಡ ಎಲ್ಲರ ಗಮನ ಸೆಳೆಯಲಿದೆ. ಅನೂಪ್ ರುಬೆನ್ಸ್ ಸಂಗೀತ ಸಂಯೋಜಿಸಿರುವ ಹಾಡುಗಳು ಈಗಾಗಲೇ ಎಲ್ಲರ ಮೆಚ್ಚುಗೆ ಗಳಿಸಿದೆ. ಇನ್ನು ಎರಡು ಹಾಡುಗಳು ಸದ್ಯದಲ್ಲೇ ಅನಾವರಣವಾಗಲಿದೆ. ನಮ್ಮ ಚಿತ್ರ ಫೆಬ್ರವರಿ 14 ರಂದು ತೆರೆಗೆ ಬರುತ್ತಿದೆ ಎಂದು ನಾಯಕಿ ಐಶ್ವರ್ಯ ಅರ್ಜುನ್ ತಿಳಿಸಿದರು.
“ಸೀತಾ ಪಯಣ” ದಲ್ಲಿ ನಟಿಸಿದ್ದು ಬಹಳ ಸಂತೋಷವಾಗಿದೆ. ಬೇರೆ ಚಿತ್ರದಲ್ಲಿ ಅಭಿನಯಿಸಿದ್ದು ಅಂತ ಅನಿಸಲಿಲ್ಲ. ನಮ್ಮ ಕುಟುಂಬದವರ ಜೊತೆಗೆ ಇದ್ದ ಹಾಗೆ ಇತ್ತು. ನನ್ನ ಪಾತ್ರ ಕೂಡ ಚೆನ್ನಾಗಿದೆ ಎಂದು ನಾಯಕ ನಿರಂಜನ್ ಹೇಳಿದರು.
ಹಾಡುಗಳ ಬಗ್ಗೆ ಸಂಗೀತ ನಿರ್ದೇಶಕ ಅನೂಪ್ ರುಬೆನ್ಸ್ ಮಾಹಿತಿ ನೀಡಿದರು. ಚಿತ್ರದ ತಂತ್ರಜ್ಞರಾದ ಅಂಜನ ಅರ್ಜುನ್ ಹಾಗೂ ಸೂರಜ್ ಸರ್ಜಾ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.





