ರಾಘವೇಂದ್ರ ಅಡಿಗ ಎಚ್ಚೆನ್.

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದವರೆಲ್ಲರೂ ಯಶಸ್ಸು ಕಾಣುವುದಿಲ್ಲ. ಆದರೆ ಸಿಕ್ಕ ಜನಪ್ರಿಯತೆಯನ್ನು ಸರಿಯಾಗಿ ಬಳಸಿಕೊಂಡರೆ ಖಂಡಿತವಾಗಿಯೂ ಅದರಿಂದ ಹೊಸ ಅವಕಾಶಗಳು ಸೃಷ್ಟಿಯಾಗುತ್ತವೆ. ಈ ಮಾತಿಗೆ ಉದಾಹರಣೆಯಾಗಿ ಮಹಾಕುಂಭಮೇಳದಲ್ಲಿ ವೈರಲ್ ಆಗಿದ್ದ ಮೊನಾಲಿನಾ ಭೋಸ್ಲೆ ಇದೀಗ ಹೊರಹೊಮ್ಮಿದ್ದಾರೆ.
ಕಳೆದ ವರ್ಷ ಮಹಾಕುಂಭಮೇಳದಲ್ಲಿ ಮಣಿ ಸರಗಳನ್ನು ಮಾರುತ್ತಿದ್ದ ಮೊನಾಲಿನಾ ಭೋಸ್ಲೆ ರಾತ್ರೋರಾತ್ರಿ ಸೋಶಿಯಲ್ ಮೀಡಿಯಾದಲ್ಲಿ ಜನಪ್ರಿಯತೆ ಪಡೆದಿದ್ದರು. ಅವರ ಸರಳತೆ ಮತ್ತು ಮುಖಭಾವಗಳು ಲಕ್ಷಾಂತರ ಜನರ ಗಮನ ಸೆಳೆದವು. ಇದರ ಬೆನ್ನಲ್ಲೇ ಬಾಲಿವುಡ್‌ನಿಂದ ಅವರಿಗೆ ಸಿನಿಮಾ ಆಫರ್ ಕೂಡ ಬಂದಿತ್ತು.
ಮೊನಾಲಿನಾ ಭೋಸ್ಲೆ ನಟಿಸಿರುವ ಮೊದಲ ಹಿಂದಿ ಚಿತ್ರದ ಹೆಸರು ‘ದಿ ಡೈರಿ ಆಫ್ ಮಣಿಪುರ್’. ಈ ಚಿತ್ರವನ್ನು ನಿರ್ದೇಶಕ ಸನೋಜ್ ಮಿಶ್ರಾ ನಿರ್ದೇಶನ ಮಾಡಿದ್ದಾರೆ. ಬಾಲಿವುಡ್‌ನ ಖ್ಯಾತ ನಟ ರಾಜ್‌ಕುಮಾರ್ ರಾವ್ ಅವರ ಸಹೋದರ ಅಮಿತ್ ರಾವ್ ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ.
ನಾಲ್ಕು ಹಂತಗಳಲ್ಲಿ ‘ದಿ ಡೈರಿ ಆಫ್ ಮಣಿಪುರ್’ ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದ್ದು, ಉತ್ತರ ಪ್ರದೇಶ, ಮಣಿಪುರ್, ನೇಪಾಳ ಹಾಗೂ ಡೆಹರಾಡೂನ್‌ನಲ್ಲಿ ಶೂಟಿಂಗ್ ನಡೆಸಲಾಗಿದೆ. ಶೂಟಿಂಗ್ ಮುಗಿದ ಹಿನ್ನೆಲೆಯಲ್ಲಿ ಚಿತ್ರತಂಡ ಗಂಗಾ ಮಾತೆಯ ಆಶೀರ್ವಾದ ಪಡೆಯಲು ತೆರಳುತ್ತಿದೆ ಎಂದು ಮಾಹಿತಿ ನೀಡಲಾಗಿದೆ.
ಸಿನಿಮಾ ಪ್ರಾರಂಭದ ಹಂತದಲ್ಲಿ ನಿರ್ದೇಶಕ ಸನೋಜ್ ಮಿಶ್ರಾ ಅವರ ಮೇಲೆ ಹಲವು ಆರೋಪಗಳು ಕೇಳಿಬಂದಿದ್ದವು. ಕೆಲವರು ಚಿತ್ರೀಕರಣಕ್ಕೆ ಅಡ್ಡಿಪಡಿಸಲು ಪ್ರಯತ್ನಿಸಿದ್ದರು. ಆದರೂ ಎಲ್ಲ ಅಡೆತಡೆಗಳನ್ನು ಎದುರಿಸಿ ನಿರ್ದೇಶಕರು ಶೂಟಿಂಗ್ ಪೂರ್ಣಗೊಳಿಸಿದ್ದಾರೆ.
ಮೊನಾಲಿನಾ ಭೋಸ್ಲೆ ಅವರು ಮೊದಲಿಗೆ ಸಿನಿಮಾ ಒಪ್ಪಿಕೊಂಡಾಗ ನಟನೆಯ ಬಗ್ಗೆ ಹೆಚ್ಚಿನ ಅರಿವು ಹೊಂದಿರಲಿಲ್ಲ. ನಂತರ ಅವರು ನಟನೆಯ ತರಬೇತಿ ಪಡೆದಿದ್ದು, ಜೊತೆಗೆ ವಿದ್ಯಾಭ್ಯಾಸವನ್ನು ಕೂಡ ಮುಂದುವರಿಸಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ದಕ್ಷಿಣ ಭಾರತೀಯ ಚಿತ್ರರಂಗದಿಂದಲೂ ಅವರಿಗೆ ಅವಕಾಶಗಳು ಸಿಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ