ಬೇಸಿಗೆಯಲ್ಲಿ ಕಪ್ಪೆಚಿಪ್ಪು ಆರಿಸಲು ಹೋಗಿದ್ದ ಒಂದೇ ಕುಟುಂಬದ 11 ಮಂದಿಯ ಬದುಕು ಜಲಸಮಾಧಿಯಾಗಿದೆ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಬಳಿಯ ಅಳ್ವೆಕೋಡಿ ಕಡಲತೀರ ಪ್ರದೇಶದಲ್ಲಿ ಕಪ್ಪೆ ಚಿಪ್ಪು ಆಯುತ್ತಿದ್ದ 11 ಮಂದಿ ಸಾವನ್ನಪ್ಪಿರುವ ದುರಂತ ಸಂಭವಿಸಿದೆ.

ವಾಡಿಕೆಯಂತೆ ಬೇಸಿಗೆ ವೇಳೆ ನದಿಯ ಉಬ್ಬರ ಕಡಿಮೆಯಾದಾಗ ಕಪ್ಪೆಚಿಪ್ಪು ಆಯ್ದುಕೊಂಡು ಬರುವುದು ಸಾಮಾನ್ಯ. ನದಿಯ ಉಬ್ಬರ ಬರುತ್ತಿದ್ದಂತೇ ನೀರಿನಿಂದ ಹೊರಬರಬೇಕು. ಆದರೆ,  ನಿನ್ನೆ ಅಂದಾಜು ಮಾಡುವಲ್ಲಿ ವಿಫಲವಾಗಿದ್ದರಿಂದ ಅಮಾಯಕರ ಪ್ರಾಣಪಕ್ಷಿ ಹಾರಿಹೋಗಿದೆ. ವಿಧಿಯಾಟಕ್ಕೆ ಬಲಿಯಾದವರ ಕಟುಂಬದವರ ಆಕ್ರಂದನ ಮುಗಿಲುಮುಟ್ಟಿತ್ತು. 11 ಜನರ ಪೈಕಿ ನಾಪತ್ತೆಯಾಗಿದ್ದ ಮಾದೇವ್ ನಾಯ್ಕ್ ಮೃತದೇಹ ಇಂದು ಪತ್ತೆಯಾಗಿದೆ. ಎನ್‌ಡಿಆರ್‌ಎಫ್‌, ಈಶ್ವರ ಮಲ್ಪೆ ತಂಡ ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ಮೃತದೇಹವನ್ನು ಪತ್ತೆ ಮಾಡಿ ಹೊರತೆಗೆಯಲಾಗಿದೆ. ಇಬ್ಬರು ಮಹಿಳೆಯರನ್ನು ರಕ್ಷಣೆ ಮಾಡಲಾಗಿದೆ.ಸಾಮೂಹಿಕ ಅಂತ್ಯಕ್ರಿಯೆ : ಸದ್ಯ ಭಟ್ಕಳದ ಶಾರದಾಹೊಳೆಯಲ್ಲಿ ಇಂದು 11 ಮಂದಿಯ ಸಾಮೂಹಿಕ ಅಂತ್ಯಸಂಸ್ಕಾರ ನೆರವೇರಿದೆ. ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಇಡೀ ಪ್ರದೇಶವೇ ಶೋಕ ಸಾಗರದಲ್ಲಿ ಮುಳುಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಮೃತರ ಅಂತಿಮ ದರ್ಶನ ಪಡೆದು, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಬಳಿಕ ಮಾತನಾಡಿದ ಅವರು, ಭಟ್ಕಳದ ಇತಿಹಾಸದಲ್ಲಿ ಇಂತಹ ದುರಂತ ನಡೆದಿರಲಿಲ್ಲ. ಏಪ್ರಿಲ್-ಮೇ ತಿಂಗಳಲ್ಲಿ ಕಪ್ಪೆ ಚಿಪ್ಪು ತೆಗೆಯುವುದು ಸಾಮಾನ್ಯ. ಆದರೆ, ಈ ದುರ್ಘಟನೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಕಾರಣ ಪತ್ತೆ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದಿದ್ದಾರೆ.

ಪ್ರಧಾನಿ ಪರಿಹಾರ ಘೋಷಣೆ : ಈ ನಡುವೆ, ಪ್ರಧಾನಿ ನರೇಂದ್ರ ಮೋದಿ “ಕರ್ನಾಟಕದ ಕಾರವಾರ ಜಿಲ್ಲೆಯಲ್ಲಿ ನಡೆದ ಘಟನೆಯನ್ನು ಕೇಳಿ ತೀವ್ರ ನೋವುಂಟಾಗಿದೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ನನ್ನ ಸಂತಾಪಗಳು. ಗಾಯಾಳುಗಳು ಆದಷ್ಟು ಬೇಗ ಚೇತರಿಸಿಕೊಳ್ಳಲಿ” ಎಂದು ಎಕ್ಸ್ ನಲ್ಲಿ ಸಂತಾಪ ವ್ಯಕ್ತಪಡಿಸಿದ್ದಾರೆ. ಭೀಕರ ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ 2 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಗಾಯಾಳುಗಳಿಗೆ ತಲಾ 50 ಸಾವಿರ ರೂ. ನೆರವು ನೀಡಲಾಗುವುದು ಎಂದೂ ತಿಳಿಸಿದ್ದಾರೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ