ನೇಪಾಳದಲ್ಲಿ ಪ್ರವಾಹ ಹಾಗೂ ಇತರ ಅವಘಡಗಳಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದರೂ ಸುರಕ್ಷಿತವಾಗಿರುವ ಕರ್ನಾಟಕ ಮೂಲದ ಮಲ್ಲಿನಾಥ್‌ ಅವರೊಂದಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಗುರುವಾರ ವಿಡಿಯೋ ಕಾಲ್ ಮೂಲಕ ಮಾತನಾಡಿದ್ದಾರೆ.

ಪ್ರಸ್ತುತ ನವದೆಹಲಿಯಲ್ಲಿರುವ ಶಿವಕುಮಾರ್, ದುರಂತದಿಂದ ಬಾಧಿತವಾಗಿರುವ ಕನ್ನಡಿಗರಿಗೆ ನೆರವು ನೀಡಲು ರಾಜ್ಯ ಸರ್ಕಾರ ಎಲ್ಲ ರೀತಿಯ ಪ್ರಯತ್ನ ನಡೆಸುತ್ತಿದೆ ಎಂದು ಭರವಸೆ ನೀಡಿದರು.

ಸುರಕ್ಷಿತ ಸ್ಥಳದಲ್ಲಿರುವವರು ಆತಂಕಗೊಳ್ಳಬಾರದು ಹಾಗೂ ತಮ್ಮಷ್ಟಕ್ಕೆ ತಾವೇ ಸುರಕ್ಷಿತ ಸ್ಥಳಗಳಿಂದ ಹೊರಬರಲು ಪ್ರಯತ್ನಿಸಬಾರದು ಎಂದು ಮನವಿ ಮಾಡಿದರು.‘ಧೈರ್ಯವಾಗಿರಿ. ನೀವು ಇರುವ ಸುರಕ್ಷಿತ ಸ್ಥಳದಿಂದ ಹೊರಬರಲು ಪ್ರಯತ್ನಿಸಬೇಡಿ. ನಿಮ್ಮ ಸರ್ಕಾರ ನಿಮ್ಮೊಂದಿಗಿದೆ. ನಿಮ್ಮ ಸಮಸ್ಯೆಗಳಿಗೆ ಸ್ಪಂದಿಸುತ್ತೇವೆ’ ಎಂದು ಸಿಎಂ ಧೈರ್ಯ ತುಂಬಿದರು.

ನೇಪಾಳಕ್ಕೆ ತೆರಳಿರುವ ಕರ್ನಾಟಕದ ಇತರ ನಿವಾಸಿಗಳೊಂದಿಗೆ ಸಂಪರ್ಕ ಸಾಧಿಸಲು ಸರ್ಕಾರ ಪ್ರಯತ್ನಿಸುತ್ತಿದೆ. ದುರಂತದ ಬಳಿಕ ಹಲವರ ಸಂಪರ್ಕ ಕಡಿತಗೊಂಡಿರುವ ಹಿನ್ನೆಲೆಯಲ್ಲಿ ಅವರ ಸುರಕ್ಷತೆ ಹಾಗೂ ಇರುವಿಕೆಯ ಬಗ್ಗೆ ಮಾಹಿತಿ ಪಡೆಯಲು ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದರು.

12 ಕನ್ನಡಿಗರು ಸುರಕ್ಷಿತ: ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ಪಟ್ಟಣದ ಆರು ಕುಟುಂಬಗಳ 12 ಮಂದಿ ನೇಪಾಳ ಪ್ರವಾಸಕ್ಕೆ ತೆರಳಿದ್ದು, ಅಲ್ಲಿನ ಭೀಕರ ನೈಸರ್ಗಿಕ ವಿಕೋಪದ ನಡುವೆಯೂ ಸುರಕ್ಷಿತವಾಗಿದ್ದಾರೆ.

ಇವರು ಶೀಘ್ರದಲ್ಲೇ ನೇಪಾಳದ ಸೋನೌಲಿ ಪ್ರದೇಶ ತಲುಪುವ ನಿರೀಕ್ಷೆಯಿದೆ. ಅಲ್ಲಿಂದ ಅವರನ್ನು ಕರ್ನಾಟಕಕ್ಕೆ ವಾಪಸ್ ಕರೆತರಲು ಅಗತ್ಯ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ ಎಂದು ಪ್ರವಾಸಕ್ಕೆ ತೆರಳಿರುವ ಕನ್ನಡಿಗರು ತಿಳಿಸಿದ್ದಾರೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ