– ರಾಘವೇಂದ್ರ ಅಡಿಗ ಎಚ್ಚೆನ್
ಕನ್ನಡಿಗರ ಹೃದಯದಲ್ಲಿ ಶಾಶ್ವತವಾಗಿ ನೆಲೆಸಿರುವ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅಗಲಿ ಐದು ವರ್ಷಗಳು ಕಳೆದಿವೆ. ಅಪ್ಪು ಅವರ ಅಕಾಲಿಕ ನಿಧನದ ನೋವು ಇಂದಿಗೂ ಅಭಿಮಾನಿಗಳ ಮನಸ್ಸಿನಲ್ಲಿ ಹಸಿರಾಗಿದೆ. ಇದೀಗ ಅವರ ಕೊನೆಯ ದಿನದ ಘಟನೆಗಳನ್ನು ನೆನಪಿಸಿಕೊಂಡಿರುವ ವೈದ್ಯ ಡಾ. ರಮಣ ರಾವ್, ಜಿಮ್ನಲ್ಲಿ ಕಸರತ್ತು ನಡೆಸಿದ ಬಳಿಕ ಅಪ್ಪು ಕ್ಲಿನಿಕ್ಗೆ ಬಂದ ಕ್ಷಣದಿಂದ ಆಸ್ಪತ್ರೆ ತಲುಪುವವರೆಗಿನ ವಿವರಗಳನ್ನು ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ.
ಸಂದರ್ಶನದಲ್ಲಿ ಮಾತನಾಡಿದ ಡಾ. ರಮಣ ರಾವ್, ಪುನೀತ್ ರಾಜ್ಕುಮಾರ್ ಅವರೊಂದಿಗಿನ ಆತ್ಮೀಯ ಸಂಬಂಧವನ್ನು ನೆನಪಿಸಿಕೊಂಡಿದ್ದಾರೆ. ಅಪ್ಪು ತಮಗೆ ಮಗನ ಸಮಾನರಾಗಿದ್ದರು ಎಂದು ಭಾವುಕರಾಗಿದ್ದಾರೆ. ಅಂದು ಜಿಮ್ನಲ್ಲಿ ಪುನೀತ್ ಎಂದಿಗಿಂತ ಭಿನ್ನವಾಗಿ ಕಿಕ್ಬಾಕ್ಸಿಂಗ್ ಮಾಡಿದ್ದರು. ಸುಮಾರು ಒಂದೂವರೆ ಗಂಟೆಗಳ ಕಾಲ ಕಸರತ್ತು ನಡೆಸಿದ ಬಳಿಕ ತೀವ್ರ ಆಯಾಸದಿಂದ ತಮ್ಮ ಕ್ಲಿನಿಕ್ಗೆ ಬಂದಿದ್ದರು ಎಂದು ವಿವರಿಸಿದ್ದಾರೆ.
ಕ್ಲಿನಿಕ್ಗೆ ಬಂದಾಗ ಪುನೀತ್ ಅವರ ಮೈಯೆಲ್ಲ ಬೆವರಿನಿಂದ ತೋಯ್ದಿತ್ತು. ಅವರ ಸ್ಥಿತಿಯನ್ನು ಗಮನಿಸಿದ ವೈದ್ಯರಿಗೆ ತಕ್ಷಣ ಅನುಮಾನ ಮೂಡಿತ್ತು. ಹೀಗಾಗಿ ಕೂಡಲೇ ಇಸಿಜಿ ಪರೀಕ್ಷೆ ನಡೆಸಲಾಯಿತು. ಪರೀಕ್ಷೆಯಲ್ಲಿ ಹೃದಯದ ಮೇಲೆ ತೀವ್ರ ಒತ್ತಡದ ಲಕ್ಷಣಗಳು ಕಂಡುಬಂದಿದ್ದವು ಎಂದು ರಮಣ ರಾವ್ ತಿಳಿಸಿದ್ದಾರೆ.
ಪರಿಸ್ಥಿತಿಯ ಗಂಭೀರತೆಯನ್ನು ಅರಿತ ವೈದ್ಯರು ತಕ್ಷಣ ಪ್ರಥಮ ಚಿಕಿತ್ಸೆ ನೀಡಿದರು. ಹೆಚ್ಚಿನ ಚಿಕಿತ್ಸೆಗಾಗಿ ಪುನೀತ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ವ್ಯವಸ್ಥೆ ಮಾಡಲಾಯಿತು. ಅಪ್ಪು ತಮ್ಮ ಕಾರಿನಲ್ಲೇ ಆಸ್ಪತ್ರೆಗೆ ತೆರಳಿದ್ದರು. ಪ್ರಯಾಣದ ವೇಳೆ ಪತ್ನಿ ಅಶ್ವಿನಿ ಅವರೊಂದಿಗೆ ಮಾತನಾಡುತ್ತಾ, ಅವರ ತೊಡೆಯ ಮೇಲೆ ತಲೆ ಇಟ್ಟು ವಿಶ್ರಾಂತಿ ಪಡೆಯುತ್ತಿದ್ದರು ಎಂದು ವೈದ್ಯರು ನೆನಪಿಸಿಕೊಂಡಿದ್ದಾರೆ.
ಆದರೆ, ಆಸ್ಪತ್ರೆ ತಲುಪಲು ಕೇವಲ ಒಂದು ನಿಮಿಷ ಬಾಕಿ ಇರುವಾಗ ಪುನೀತ್ ಅವರ ಹೃದಯ ಬಡಿತ ನಿಂತಿತ್ತು ಎಂದು ರಮಣ ರಾವ್ ಹೇಳಿದ್ದಾರೆ. ಆಸ್ಪತ್ರೆಗೆ ತಲುಪಿದಾಗ ಅವರಿಂದ ಯಾವುದೇ ಸ್ಪಂದನೆ ಇರಲಿಲ್ಲ. ವೈದ್ಯರು ಅವರನ್ನು ಉಳಿಸಿಕೊಳ್ಳಲು ಸತತ ಪ್ರಯತ್ನ ನಡೆಸಿದರೂ ಸಾಧ್ಯವಾಗಲಿಲ್ಲ ಎಂಬ ನೋವಿನ ಸಂಗತಿಯನ್ನು ಅವರು ಹಂಚಿಕೊಂಡಿದ್ದಾರೆ.
ಅಪ್ಪು ಅವರ ಕೊನೆಯ ಕ್ಷಣಗಳನ್ನು ನೆನಪಿಸಿಕೊಂಡಿರುವ ಡಾ. ರಮಣ ರಾವ್ ಅವರ ಮಾತುಗಳು ಮತ್ತೊಮ್ಮೆ ಅಭಿಮಾನಿಗಳ ಮನಸ್ಸನ್ನು ಭಾರವಾಗಿಸಿವೆ. ಕೋಟ್ಯಂತರ ಜನರ ಪ್ರೀತಿಗೆ ಪಾತ್ರರಾಗಿದ್ದ ಪುನೀತ್ ರಾಜ್ಕುಮಾರ್ ಅವರ ಅಕಾಲಿಕ ನಿರ್ಗಮನ ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿ ಉಳಿದಿದೆ.





