Sj*
ಸ್ಯಾಂಡಲ್ವುಡ್ನ ಬ್ಲಾಕ್ಬಸ್ಟರ್ ಚಿತ್ರ ‘ಬೆಲ್ ಬಾಟಂ’ ಖ್ಯಾತಿಯ ನಿರ್ಮಾಪಕ ಸಂತೋಷ್ ಕುಮಾರ್ ಕೆ.ಸಿ. ಅವರ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಬಹುನಿರೀಕ್ಷಿತ ಚಿತ್ರ ‘ಹುಬ್ಬಳ್ಳಿ ಹಂಟರ್ಸ್’ ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದೆ. ದಿಗಂತ್ ನಟನೆಯ ‘ಎಡಗೈಯೇ ಅಪಘಾತಕ್ಕೆ ಕಾರಣ’ ಚಿತ್ರದ ಮೂಲಕ ಭರವಸೆ ಮೂಡಿಸಿದ್ದ ನಿರ್ದೇಶಕ ಸಮರ್ಥ್ ಬಿ. ಕಡಕೊಳ್ ಆ್ಯಕ್ಷನ್ ಕಟ್ ಹೇಳಿರುವ ಈ ಸಿನಿಮಾ, ಇದೇ ವರ್ಷ ಡಿಸೆಂಬರ್ 11ರಂದು ರಾಜ್ಯಾದ್ಯಂತ ಅದ್ಧೂರಿಯಾಗಿ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ. ಇದರ ಬೆನ್ನಲ್ಲೇ ಚಿತ್ರತಂಡ ಮತ್ತೊಂದು ದೊಡ್ಡ ಸಿಹಿಸುದ್ದಿ ನೀಡಿದ್ದು, ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಅವರ ‘ರಿಷಬ್ ಶೆಟ್ಟಿ ಮ್ಯೂಸಿಕ್’ ಸಂಸ್ಥೆಯು ಈ ಸಿನಿಮಾದ ಆಡಿಯೋ ಹಕ್ಕುಗಳನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದೆ.

‘ಬೆಲ್ ಬಾಟಂ’ ಚಿತ್ರದಲ್ಲಿ ರಿಷಬ್ ಶೆಟ್ಟಿ ನಾಯಕನಾಗಿ ನಟಿಸಿ ಗೆಲುವಿನ ನಗೆ ಬೀರಿದ್ದರು. ಇದೀಗ ಅದೇ ನಿರ್ಮಾಪಕರ ಮತ್ತೊಂದು ವಿಭಿನ್ನ ಹಾಗೂ ಪ್ರತಿಷ್ಠಿತ ಚಿತ್ರ ‘ಹುಬ್ಬಳ್ಳಿ ಹಂಟರ್ಸ್’ಗೆ ರಿಷಬ್ ಬೆನ್ನೆಲುಬಾಗಿ ನಿಂತು, ತಮ್ಮದೇ ಮ್ಯೂಸಿಕ್ ಕಂಪನಿ ಮೂಲಕ ಚಿತ್ರದ ಹಾಡುಗಳನ್ನು ಹೊರತರಲು ಮುಂದಾಗಿರುವುದು ಚಿತ್ರತಂಡಕ್ಕೆ ಆನೆಬಲ ತಂದಿದೆ. ಈ ಮಹತ್ವದ ಬೆಳವಣಿಗೆಯಿಂದಾಗಿ ಸಿನಿಮಾದ ಹಾಡುಗಳು ಹಾಗೂ ಸಂಗೀತದ ಮೇಲಿನ ನಿರೀಕ್ಷೆ ಗಣನೀಯವಾಗಿ ಹೆಚ್ಚಾಗಿದೆ.
ಪ್ರಸನ್ನ ಕೇಶವ ಅವರ ಸಂಗೀತ ನಿರ್ದೇಶನ, ಸುಜಿತ್ ನಾಯರ್ ಅವರ ಹಿನ್ನೆಲೆ ಸಂಗೀತ ಇದೆ. ವಿಜಯಪ್ರಕಾಶ್, ವ್ಯಾಸರಾಜ್ ಸೊಸಲೆ ಮುಂತಾದವರು ಹಾಡಿದ್ದು, ವಿ. ನಾಗೇಂದ್ರ ಪ್ರಸಾದ್, ತ್ರಿಲೋಕ್ ತ್ರಿವಿಕ್ರಮ್ ಹಾಡುಗಳನ್ನು ಬರೆದಿದ್ದಾರೆ. ಅಭಿಮನ್ಯು ಸದಾನಂದನ್ ಅವರ ಛಾಯಾಗ್ರಹಣ, ಧರಣಿ ಗಂಗೆಪುತ್ರ ಅವರ ಕಲಾ ನಿರ್ದೇಶನವಿದೆ. ಸದ್ಯ ಬಿಡುಗಡೆಗೆ ಸಜ್ಜಾಗಿರುವ ಚಿತ್ರತಂಡ, ಶೀಘ್ರದಲ್ಲೇ ‘ರಿಷಬ್ ಶೆಟ್ಟಿ ಮ್ಯೂಸಿಕ್’ ಮೂಲಕ ಟೀಸರ್ ಮತ್ತು ಹಾಡುಗಳನ್ನು ಪ್ರೇಕ್ಷಕರ ಮುಂದಿಡಲು ಸಿದ್ಧತೆ ನಡೆಸುತ್ತಿದೆ.





