– ರಾಘವೇಂದ್ರ ಅಡಿಗ ಎಚ್ಚೆನ್.
ಸೈಕಲ್ ಸವಾರಿ ಮೂಲಕ ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸುತ್ತಿರುವ ಯುವಕ | ಪ್ರಜ್ವಲ್ನ ಶಿಕ್ಷಣದ ಜವಾಬ್ದಾರಿ ವಹಿಸಿಕೊಂಡ ಕುಲಪತಿ ಡಾ. ಭಗವಾನ್ ಬಿ.ಸಿ.
ಮಾದಕ ವ್ಯಸನದ ವಿರುದ್ಧ ಜಾಗೃತಿ ಮೂಡಿಸಲು ಸೈಕಲ್ ಯಾತ್ರೆ ಕೈಗೊಂಡಿರುವ 16 ವರ್ಷದ ಪ್ರಜ್ವಲ್ ಹಿರೇಮಠನ ಸಾಮಾಜಿಕ ಕಳಕಳಿಗೆ ಮೆಚ್ಚುಗೆ ವ್ಯಕ್ತಪಡಿಸಿರುವ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ (RGUHS) ಕುಲಪತಿ ಡಾ. ಭಗವಾನ್ ಬಿ.ಸಿ. ಅವರು, ಆತನ ಮುಂದಿನ ಶಿಕ್ಷಣದ ಸಂಪೂರ್ಣ ವೆಚ್ಚವನ್ನು ವೈಯಕ್ತಿಕವಾಗಿ ಭರಿಸುವ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಪ್ರಜ್ವಲ್ನಿಗೆ ಹೊಸ ಸೈಕಲ್ ಒದಗಿಸುವ ಮೂಲಕ ಆತನ ಜಾಗೃತಿ ಯಾತ್ರೆಗೆ ಬೆಂಬಲ ನೀಡಿರುವ ಅವರು, ಆತನನ್ನು ವಿಶ್ವವಿದ್ಯಾಲಯದ ನಶಾಮುಕ್ತ ಕ್ಯಾಂಪಸ್ ಅಭಿಯಾನದ ಯುವ ರಾಯಭಾರಿಯಾಗಿಯೂ ಘೋಷಿಸಿದ್ದಾರೆ.
ಸಮಾಜದ ಒಳಿತಿಗಾಗಿ ಕೇವಲ 16ನೇ ವಯಸ್ಸಿನಲ್ಲೇ ಸೈಕಲ್ ಯಾತ್ರೆ ಆರಂಭಿಸಿರುವ ವಿಜಯಪುರ ಜಿಲ್ಲೆಯ ಇಟಗಿ ಗ್ರಾಮದ ಪ್ರಜ್ವಲ್ ಹಿರೇಮಠನ ಪ್ರಯತ್ನಕ್ಕೆ ಕುಲಪತಿಗಳು ನೀಡಿರುವ ಈ ಬೆಂಬಲ, ಯುವಜನರ ಸಾಮಾಜಿಕ ಕಳಕಳಿಯನ್ನು ಗುರುತಿಸಿ ಪ್ರೋತ್ಸಾಹಿಸುವ ಒಂದು ಮಹತ್ವದ ಪರಂಪರೆಗೆ ಉದಾಹರಣೆಯಾಗಿದೆ. ಚಿಕ್ಕ ವಯಸ್ಸಿನಲ್ಲಿಯೇ ಮಹತ್ವದ ಸಂಕಲ್ಪದೊಂದಿಗೆ ಹೆಜ್ಜೆ ಇಟ್ಟಿರುವ ಪ್ರಜ್ವಲ್ನ ಮೆಚ್ಚುಗೆ ವ್ಯಕ್ತಪಡಿಸುವುದರ ಜೊತೆಗೆ, ಆತನ ಶಿಕ್ಷಣದ ಜವಾಬ್ದಾರಿಯನ್ನೂ ವಹಿಸಿಕೊಳ್ಳುವ ಮೂಲಕ ಡಾ. ಭಗವಾನ್ ಅವರು ಆತನ ಭವಿಷ್ಯಕ್ಕೆ ಭದ್ರ ಬುನಾದಿ ಕಲ್ಪಿಸಲು ಮುಂದಾಗಿದ್ದಾರೆ.

ವಿಜಯಪುರ ಜಿಲ್ಲೆಯ ಇಟಗಿಯಿಂದ ಸೈಕಲ್ ಯಾತ್ರೆ ಆರಂಭಿಸಿರುವ ಪ್ರಜ್ವಲ್, ಅಂಜನಾದ್ರಿ ಬೆಟ್ಟ, ಮಂತ್ರಾಲಯ, ಗದಗ, ಹುಬ್ಬಳ್ಳಿ ಹಾಗೂ ತುಮಕೂರು ಮಾರ್ಗವಾಗಿ ಬೆಂಗಳೂರಿಗೆ ತಲುಪಿದ್ದಾನೆ. ದಾರಿಯುದ್ದಕ್ಕೂ ಜನರನ್ನು ಭೇಟಿಯಾಗಿ ಮದ್ಯಪಾನ ಸೇರಿದಂತೆ ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸುತ್ತಿದ್ದಾನೆ.
ಸಾಮಾಜಿಕ ಜಾಲತಾಣಗಳಲ್ಲಿ ಪ್ರಜ್ವಲ್ನ ಪ್ರಯತ್ನದ ಕುರಿತು ಮಾಹಿತಿ ಪಡೆದ ಡಾ. ಭಗವಾನ್ ಬಿ.ಸಿ. ಅವರು ಆತನನ್ನು ಬೆಂಗಳೂರಿಗೆ ಕರೆಸಿ, ತಮ್ಮ ಬೆಂಬಲ ಸೂಚಿಸಿದ್ದಾರೆ. ಜೊತೆಗೆ ವಿವಿಯ ನಶಾಮುಕ್ತ ಕ್ಯಾಂಪಸ್ ಅಭಿಯಾನದ ಯುವ ರಾಯಭಾರಿಯಾಗಿ ಘೋಷಿಸಿದ್ದಾರೆ. ಆತನ ಜಾಗೃತಿ ಯಾತ್ರೆಯನ್ನು ಮುಂದುವರಿಸಲು ಹೊಸ ಸೈಕಲ್ ಒದಗಿಸುವುದರ ಜೊತೆಗೆ, ಮುಂದಿನ ಶಿಕ್ಷಣದ ಸಂಪೂರ್ಣ ವೆಚ್ಚವನ್ನು ವೈಯಕ್ತಿಕವಾಗಿ ಭರಿಸುವುದಾಗಿ ಭರವಸೆ ನೀಡಿದ್ದಾರೆ.

*ಯುವ ಸಂಕಲ್ಪಕ್ಕೆ ಬೆಂಬಲ ನೀಡುವುದು ನಮ್ಮ ಜವಾಬ್ದಾರಿ— ಡಾ. ಭಗವಾನ್ ಬಿ.ಸಿ.*
ತನ್ನ ಸುತ್ತಮುತ್ತ ನಡೆಯುವ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಗಮನಿಸಿ, ಮಾದಕ ವ್ಯಸನದ ವಿರುದ್ಧ ಜಾಗೃತಿ ಮೂಡಿಸಲು ವಿನೂತನ ಹೆಜ್ಜೆ ಇಟ್ಟಿರುವ ಪ್ರಜ್ವಲ್ ಹಿರೇಮಠನ ಪ್ರಯತ್ನ ನಿಜಕ್ಕೂ ಶ್ಲಾಘನೀಯ. ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರಲು ವಯಸ್ಸು, ಹಣ ಅಥವಾ ಅಂತಸ್ತು ಮುಖ್ಯವಲ್ಲ; ದೃಢಸಂಕಲ್ಪ ಮತ್ತು ಸಮಾಜದ ಬಗ್ಗೆ ಕಾಳಜಿ ಇದ್ದರೆ ಸಾಕು ಎಂಬುದನ್ನು ಈ ಬಾಲಕ ಸಾಬೀತುಪಡಿಸಿದ್ದಾನೆ.
ಸಮಾಜದ ಒಳಿತಿಗಾಗಿ ಯುವಕನೊಬ್ಬ ದೃಢಸಂಕಲ್ಪದಿಂದ ಮುನ್ನಡೆಯುವಾಗ ಆತನ ಬೆನ್ನಿಗೆ ನಿಲ್ಲುವುದು ನಮ್ಮ ಜವಾಬ್ದಾರಿ. ಪ್ರಜ್ವಲ್ನನ್ನು ನಮ್ಮ ನಶಾಮುಕ್ತ ಕ್ಯಾಂಪಸ್ ಅಭಿಯಾನದ ಯುವ ರಾಯಭಾರಿಯಾಗಿ ಘೋಷಿಸುವುದರ ಜೊತೆಗೆ, ಆತನ ಮುಂದಿನ ಶಿಕ್ಷಣದ ಸಂಪೂರ್ಣ ವೆಚ್ಚವನ್ನು ಭರಿಸಲು ನಿರ್ಧರಿಸಲಾಗಿದೆ. ಆತನ ಜಾಗೃತಿ ಕಾರ್ಯಕ್ಕೆ ಅಗತ್ಯ ಬೆಂಬಲ ನೀಡುವುದರೊಂದಿಗೆ, ಶಿಕ್ಷಣದ ಮೂಲಕ ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ಅವಕಾಶ ಕಲ್ಪಿಸುವುದು ನನ್ನ ಆಶಯ. ಯುವಜನರ ಸಕಾರಾತ್ಮಕ ಪ್ರಯತ್ನಗಳಿಗೆ ಪ್ರೋತ್ಸಾಹ ನೀಡಿದಾಗ ಮಾತ್ರ ಆರೋಗ್ಯಕರ ಮತ್ತು ವ್ಯಸನಮುಕ್ತ ಸಮಾಜವನ್ನು ನಿರ್ಮಿಸಲು ಸಾಧ್ಯ.

— ಡಾ. ಭಗವಾನ್ ಬಿ.ಸಿ.
ಕುಲಪತಿಗಳು, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ, ಕರ್ನಾಟಕ (RGUHS)
*ಕುಲಪತಿಗಳ ಬೆಂಬಲ ನನಗೆ ಹೊಸ ಸ್ಫೂರ್ತಿ— ಪ್ರಜ್ವಲ್ ಹಿರೇಮಠ*
ಮದ್ಯಪಾನದಂತಹ ದುಶ್ಚಟಗಳಿಂದ ಕುಟುಂಬಗಳು ಬೀದಿಗೆ ಬರುವುದನ್ನು ಕಣ್ಣಾರೆ ಕಂಡಿದ್ದೇನೆ. ಇಂತಹ ವ್ಯಸನಗಳಿಂದ ಮಕ್ಕಳ ಶಿಕ್ಷಣ ಮತ್ತು ಭವಿಷ್ಯದ ಮೇಲೂ ಗಂಭೀರ ಪರಿಣಾಮ ಉಂಟಾಗುತ್ತದೆ. ಜನರು ಇಂತಹ ದುಶ್ಚಟಗಳಿಂದ ದೂರವಿರಬೇಕು ಎಂಬ ಉದ್ದೇಶದಿಂದಲೇ ಸೈಕಲ್ ಯಾತ್ರೆ ಆರಂಭಿಸಿದ್ದೇನೆ.
ನನ್ನ ಪ್ರಯತ್ನವನ್ನು ಗುರುತಿಸಿ, ನಶಾಮುಕ್ತ ಕ್ಯಾಂಪಸ್ ಅಭಿಯಾನದ ಯುವ ರಾಯಭಾರಿಯನ್ನಾಗಿ ನೇಮಿಸಿರುವುದಲ್ಲದೆ, ಹೊಸ ಸೈಕಲ್ ಒದಗಿಸಿ ನನ್ನ ಮುಂದಿನ ಶಿಕ್ಷಣದ ಜವಾಬ್ದಾರಿಯನ್ನೂ ವಹಿಸಿಕೊಳ್ಳಲು ನಿರ್ಧರಿಸಿರುವ ಕುಲಪತಿ ಡಾ. ಭಗವಾನ್ ಬಿ.ಸಿ. ಅವರ ಬೆಂಬಲ ನನಗೆ ಅಪಾರ ಸ್ಫೂರ್ತಿ ಮತ್ತು ಮನೋಬಲ ನೀಡಿದೆ. ಅವರ ಪ್ರೋತ್ಸಾಹದಿಂದ ಇನ್ನಷ್ಟು ಉತ್ಸಾಹದಿಂದ ನನ್ನ ಜಾಗೃತಿ ಯಾತ್ರೆಯನ್ನು ಮುಂದುವರಿಸುತ್ತೇನೆ.
ಪ್ರಜ್ವಲ್ ಹಿರೇಮಠ





