Sj*
ಕನ್ನಡ ಚಿತ್ರರಂಗಕ್ಕೆ ಸದಭಿರುಚಿಯ, ಮನಮುಟ್ಟುವ ಹಾಗೂ ವಿಭಿನ್ನ ಕಥಾಹಂದರದ ಹಲವು ಯಶಸ್ವಿ ಚಿತ್ರಗಳನ್ನು ನೀಡಿರುವ ಕಲಾಸಾಮ್ರಾಟ್ ಡಾ. ಎಸ್. ನಾರಾಯಣ್ ಅವರ ನೂತನ ಚಿತ್ರ ಸದ್ಯದಲ್ಲೇ ಆರಂಭವಾಗಲಿದೆ. ಈ ಹೊಸ ಚಿತ್ರದ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯ ಬರವಣಿಗೆಯಲ್ಲಿ ಸದ್ಯ ಅವರು ನಿರತರಾಗಿದ್ದು, ಚಿತ್ರದ ಪೂರ್ವಸಿದ್ಧತಾ ಕೆಲಸಗಳು ಬಿರುಸಿನಿಂದ ಸಾಗುತ್ತಿವೆ.
ಕನ್ನಡ ಚಿತ್ರರಂಗದ ಮೇರುನಟರಾದ ಡಾ. ರಾಜ್ಕುಮಾರ್, ಡಾ. ವಿಷ್ಣುವರ್ಧನ್, ಅಂಬರೀಶ್ ಸೇರಿದಂತೆ ಹಲವು ಪ್ರಮುಖ ನಾಯಕ ನಟರ ಚಿತ್ರಗಳನ್ನು ನಿರ್ದೇಶಿಸಿರುವ ಹೆಗ್ಗಳಿಕೆ ಡಾ. ಎಸ್. ನಾರಾಯಣ್ ಅವರದ್ದು. ನಿರ್ದೇಶಕರಾಗಿ ಮಾತ್ರವಲ್ಲದೆ, ನಿರ್ಮಾಪಕರಾಗಿ ಹಾಗೂ ಕಲಾವಿದರಾಗಿಯೂ ತಮ್ಮದೇ ಆದ ಪ್ರತಿಭೆಯನ್ನು ಸಾಬೀತುಪಡಿಸಿರುವ ಅವರು, ಕನ್ನಡ ಚಿತ್ರರಂಗದಲ್ಲಿ ವಿಶಿಷ್ಟ ಸ್ಥಾನ ಗಳಿಸಿದ್ದಾರೆ.
ತಮ್ಮದೇ ಆದ ವಿಶಿಷ್ಟ ನಿರ್ದೇಶನ ಶೈಲಿ, ಸದಭಿರುಚಿಯ ಕಥೆಗಳು ಹಾಗೂ ಮನರಂಜನೆಯೊಂದಿಗೆ ಉತ್ತಮ ಸಂದೇಶ ನೀಡುವ ಚಿತ್ರಗಳ ಮೂಲಕ ಅಪಾರ ಅಭಿಮಾನಿಗಳನ್ನು ಸಂಪಾದಿಸಿರುವ ಡಾ. ಎಸ್. ನಾರಾಯಣ್, ಇದೀಗ ಮತ್ತೊಂದು ವಿಭಿನ್ನ ಕಥೆಯನ್ನು ಪ್ರೇಕ್ಷಕರ ಮುಂದೆ ತರಲು ಸಿದ್ಧತೆ ನಡೆಸಿದ್ದಾರೆ.
ಈ ನೂತನ ಚಿತ್ರದ ನಿರ್ಮಾಪಕರು ಯಾರು? ಯಾವ ಕಲಾವಿದರು ಅಭಿನಯಿಸಲಿದ್ದಾರೆ? ಚಿತ್ರಕ್ಕೆ ಯಾರೆಲ್ಲಾ ತಂತ್ರಜ್ಞರು ಕೈಜೋಡಿಸಲಿದ್ದಾರೆ? ಚಿತ್ರದ ಕಥಾವಸ್ತು ಏನು? ಎಂಬ ಕುತೂಹಲ ಸಹಜವಾಗಿಯೇ ಚಿತ್ರರಂಗದಲ್ಲಿ ಮೂಡಿದೆ. ಸದ್ಯದಲ್ಲೇ ಈ ಕುರಿತು ಸಂಪೂರ್ಣ ಮಾಹಿತಿಯನ್ನು ನಿರ್ದೇಶಕರು ಅಧಿಕೃತವಾಗಿ ಪ್ರಕಟಿಸಲಿದ್ದಾರೆ.
ತಮ್ಮ ಚಿತ್ರಗಳ ಮೂಲಕ ಪ್ರೇಕ್ಷಕರ ಮನಸ್ಸಿನಲ್ಲಿ ಅಚ್ಚಳಿಯದ ಛಾಪು ಮೂಡಿಸಿರುವ ಕಲಾಸಾಮ್ರಾಟ್ ಡಾ. ಎಸ್. ನಾರಾಯಣ್ ಅವರ ಈ ನೂತನ ಚಿತ್ರ ಯಾವ ರೀತಿಯ ಕಥೆ ಹಾಗೂ ವಿಶೇಷತೆಯನ್ನು ಒಳಗೊಂಡಿರಲಿದೆ ಎಂಬ ನಿರೀಕ್ಷೆ ಎಲ್ಲರಲ್ಲೂ ಇದೆ. ಹೊಸ ಚಿತ್ರದ ಆರಂಭಕ್ಕೆ ಚಿತ್ರಪ್ರೇಮಿಗಳು ಕಾತರದಿಂದ ಕಾಯುತ್ತಿದ್ದಾರೆ.
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ





