– ರಾಘವೇಂದ್ರ ಅಡಿಗ ಎಚ್ಚೆನ್.

ಕೆಜಿಎಫ್ ಮೂಲಕ ಜಾಗತಿಕ ಮಟ್ಟದಲ್ಲಿ ಸದ್ದು ಮಾಡಿದ್ದ ರಾಕಿಂಗ್ ಸ್ಟಾರ್ ಯಶ್, ಇದೀಗ ಮತ್ತೊಂದು ಬೃಹತ್ ಐತಿಹಾಸಿಕ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರಾ? ಬಾಲಿವುಡ್ ನಿರ್ದೇಶಕ ಆದಿತ್ಯ ಧರ್ ನಿರ್ದೇಶನದ ಹೊಸ ಸಿನಿಮಾದಲ್ಲಿ ಯಶ್ ಮತ್ತು ರಣವೀರ್ ಸಿಂಗ್ ಒಟ್ಟಿಗೆ ನಟಿಸಲಿದ್ದಾರೆ ಎಂಬ ಸುದ್ದಿ ಚಿತ್ರರಂಗದಲ್ಲಿ ಭಾರಿ ಕುತೂಹಲ ಮೂಡಿಸಿದೆ.

ಮೌರ್ಯ ಸಾಮ್ರಾಜ್ಯದ ಸ್ಥಾಪಕ ಚಂದ್ರಗುಪ್ತ ಮೌರ್ಯನ ಜೀವನಗಾಥೆಯನ್ನು ಆಧರಿಸಿ ಬಿಗ್ ಬಜೆಟ್ ಸಿನಿಮಾ ನಿರ್ಮಿಸಲು ಆದಿತ್ಯ ಧರ್ ಯೋಜನೆ ರೂಪಿಸುತ್ತಿದ್ದಾರೆ ಎನ್ನಲಾಗಿದೆ. ಈ ಸಿನಿಮಾದಲ್ಲಿ ಚಂದ್ರಗುಪ್ತ ಮೌರ್ಯನ ಪಾತ್ರಕ್ಕೆ ಯಶ್ ಅವರನ್ನು ಪರಿಗಣಿಸಲಾಗುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಇನ್ನು ಚಂದ್ರಗುಪ್ತನಿಗೆ ಮಾರ್ಗದರ್ಶನ ನೀಡಿದ ಮಹಾನ್ ಗುರು ಚಾಣಕ್ಯನ ಪಾತ್ರದಲ್ಲಿ ರಣವೀರ್ ಸಿಂಗ್ ಕಾಣಿಸಿಕೊಳ್ಳುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

ಚಂದ್ರಗುಪ್ತ ಮೌರ್ಯನ ಸಾಮ್ರಾಜ್ಯದ ಉದಯ, ಆತನ ಜೀವನದ ಏಳುಬೀಳುಗಳು ಮತ್ತು ಚಾಣಕ್ಯನ ರಾಜಕೀಯ ತಂತ್ರಗಳು ಈ ಸಿನಿಮಾದ ಪ್ರಮುಖ ಕಥಾಹಂದರವಾಗಿರಲಿವೆ ಎನ್ನಲಾಗಿದೆ.

ಇಷ್ಟೇ ಅಲ್ಲ, ವಿಜಯ್ ಸೇತುಪತಿ ಮತ್ತು ಅಕ್ಷಯ್ ಖನ್ನಾ ಕೂಡ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಬಹುದು ಎಂಬ ಚರ್ಚೆ ನಡೆಯುತ್ತಿದೆ. ಜೂನಿಯರ್ ಎನ್‌ಟಿಆರ್, ಫಹಾದ್ ಫಾಸಿಲ್ ಮತ್ತು ಪೃಥ್ವಿರಾಜ್ ಸುಕುಮಾರನ್ ಹೆಸರುಗಳೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಆದರೆ, ಈ ಯಾವ ನಟರ ಆಯ್ಕೆಯೂ ಇನ್ನೂ ಅಧಿಕೃತವಾಗಿ ಖಚಿತವಾಗಿಲ್ಲ. ವರೈಟಿ ಇಂಡಿಯಾ ವರದಿಯ ಪ್ರಕಾರ, ಈ ಐತಿಹಾಸಿಕ ಸಿನಿಮಾ ಕುರಿತು ಆದಿತ್ಯ ಧರ್ ಅವರು ರಣವೀರ್ ಸಿಂಗ್ ಜೊತೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.

ಒಂದು ವೇಳೆ ಯಶ್ ಮತ್ತು ರಣವೀರ್ ಸಿಂಗ್ ಒಂದೇ ಸಿನಿಮಾದಲ್ಲಿ ಕಾಣಿಸಿಕೊಂಡರೆ, ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಪ್ರಾಜೆಕ್ಟ್‌ಗಳಲ್ಲಿ ಇದೂ ಒಂದಾಗಬಹುದು. ಆದರೆ, ಅಧಿಕೃತ ಘೋಷಣೆ ಬರುವವರೆಗೆ ಈ ಸುದ್ದಿಯನ್ನು ಸದ್ಯಕ್ಕೆ ಸಾಧ್ಯತೆಯ ಹಂತದಲ್ಲೇ ನೋಡಬೇಕಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ