ಮಡಿಕೇರಿ : ಗಾಂಜಾ ಸೇವನೆ ಪ್ರಕರಣ ಸಂಬಂಧ ನ್ಯಾಯಾಲಯದ ಆದೇಶದಂತೆ ವ್ಯಕ್ತಿಯೋರ್ವ ಸಂಚಾರಿ ಪೊಲೀಸರ ಜೊತೆಗೆ ಕರ್ತವ್ಯ ನಿರ್ವಹಿಸಿರುವ ಅಪರೂಪದ ಘಟನೆಗೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಸಿದ್ದಾಪುರ ಪಟ್ಟಣ ಸಾಕ್ಷಿಯಾಗಿದೆ.

ಗಾಂಜಾ ಸೇವನೆ ಮಾಡಿದ ಪ್ರಕರಣದಲ್ಲಿ ಸಿದ್ದಾಪುರ ನಿವಾಸಿ ಆಸೀಮ್ ಎಂಬಾತನಿಗೆ 5,000 ರೂಪಾಯಿ ದಂಡ ವಿಧಿಸಿದ್ದ ನ್ಯಾಯಾಲಯ, ಇದರ ಜೊತೆಗೆ ಸಮುದಾಯ ಸೇವೆ ಮಾಡುವಂತೆ ಶಿಕ್ಷೆಯನ್ನೂ ನೀಡಿತ್ತು.

ಪೊಲೀಸರ ಮೇಲ್ವಿಚಾರಣೆಯಲ್ಲಿ ಸಂಚಾರ ನಿಯಂತ್ರಣ

ನ್ಯಾಯಾಲಯದ ಆದೇಶದಂತೆ ಆಸೀಮ್ ನವೆಂಬರ್ 15ರಂದು ಸಿದ್ದಾಪುರ ಪಟ್ಟಣದಲ್ಲಿ ಪೊಲೀಸರ ಮೇಲ್ವಿಚಾರಣೆಯಲ್ಲಿ ಸಂಚಾರ ನಿಯಂತ್ರಣ ಕರ್ತವ್ಯಕ್ಕೆ ಹಾಜರಾಗಿದ್ದಾರೆ.

ಇದು ಅವರ ಸಮುದಾಯ ಸೇವೆಯ ಭಾಗವಾಗಿತ್ತು. ಪಟ್ಟಣದ ಸಂಚಾರಕ್ಕೆ ಅಡ್ಡಿಯಾಗದಂತೆ ವಾಹನಗಳ ಓಡಾಟವನ್ನು ಸುಗಮಗೊಳಿಸುವುದು ಅವರ ಕೆಲಸವಾಗಿತ್ತು.

ದಿನವಿಡೀ ವಾಹನಗಳ ಸಂಚಾರ ನಿಯಂತ್ರಿಸುವುದರ ಜೊತೆಗೆ ಪಾದಚಾರಿಗಳ ಓಡಾಟವನ್ನೂ ಅವರು ನಿರ್ವಹಿಸಿದ್ದಾರೆ.

ಕೇವಲ ದಂಡ ಅಥವಾ ಜೈಲು ಶಿಕ್ಷೆ ವಿಧಿಸುವ ಬದಲು ಸಮುದಾಯ ಸೇವೆಗೆ ಆದೇಶಿಸಿದ ನ್ಯಾಯಾಲಯ, ಸಾರ್ವಜನಿಕ ಸೇವೆಯ ಮೂಲಕ ಅಪರಾಧಿಗೆ ತನ್ನ ಸಾಮಾಜಿಕ ಜವಾಬ್ದಾರಿಗಳ ಅರಿವು ಮೂಡುತ್ತದೆ ಎಂದು ಅಭಿಪ್ರಾಯಪಟ್ಟಿದೆ.

ಇದೇ ವರ್ಷ ಮಾರ್ಚ್‌ನಲ್ಲಿ ಕಡೂರು ಉಪವಿಭಾಗದಲ್ಲಿ ಮದ್ಯಪಾನ ಮಾಡಿ ಬೈಕ್ ಚಾಲನೆ ಮಾಡಿದ್ದ ವ್ಯಕ್ತಿಯೊಬ್ಬರಿಗೆ ರಸ್ತೆ ಬದಿಯಲ್ಲಿ ನಿಂತು ಸಂಚಾರ ನಿಯಮಗಳ ಫಲಕ ಹಿಡಿದುಕೊಳ್ಳುವಂತೆ ನ್ಯಾಯಾಲಯ ಸೂಚಿಸಿದ್ದ ಪ್ರಕರಣ ಕೂಡ ಗಮನ ಸೆಳೆದಿತ್ತು.

ಬೈಕ್ ಸವಾರ ತನ್ನ ತಪ್ಪನ್ನು ಒಪ್ಪಿಕೊಂಡಿದ್ದ ಹಿನ್ನೆಲೆ ಶಿಕ್ಷೆಯ ಅವಧಿಯಲ್ಲಿ ಫಲಕವನ್ನು ಹಿಡಿದಿರುವುದನ್ನು ಖಚಿತಪಡಿಸಿಕೊಳ್ಳಲು ಸಮೀಪದಲ್ಲೇ ಪೊಲೀಸ್ ಸಿಬ್ಬಂದಿಯೊಬ್ಬರನ್ನು ನಿಯೋಜಿಸಲಾಗಿತ್ತು ಎಂದು ಎನ್​​ಡಿ ಟಿವಿ ವರದಿ ಮಾಡಿದೆ.

*ಕೃಪೆ: TV9*

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ