Sj*

ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಪ್ರಚಾರದ ಮೂಲಕ ಗಮನ ಸೆಳೆಯುತ್ತಿರುವ ‘ಮಿಸ್‌ಮ್ಯಾಚ್’ ಚಿತ್ರತಂಡ ಇದೀಗ ಬೆಂಗಳೂರಿನ ಲುಲು ಮಾಲ್‌ನಲ್ಲಿ ಚಿತ್ರದ ‘ಸುಂದರಿ’ ಹಾಡಿಗೆ ಫ್ಲ್ಯಾಶ್‌ಮಾಬ್ ಆಯೋಜಿಸುವ ಮೂಲಕ ಪ್ರೇಕ್ಷಕರ ಗಮನ ಸೆಳೆದಿದೆ.

ಚಿತ್ರದ ಪ್ರಚಾರದ ಭಾಗವಾಗಿ ನಡೆದ ಈ ಫ್ಲ್ಯಾಶ್‌ಮಾಬ್‌ನಲ್ಲಿ ನೃತ್ಯಗಾರರು ‘ಸುಂದರಿ’ ಹಾಡಿನ ಲಯಕ್ಕೆ ತಕ್ಕಂತೆ ಉತ್ಸಾಹಭರಿತವಾಗಿ ಹೆಜ್ಜೆ ಹಾಕಿದರು. ಮಾಲ್‌ಗೆ ಆಗಮಿಸಿದ್ದ ಜನರಿಗೆ ಈ ವಿಶೇಷ ನೃತ್ಯ ಪ್ರದರ್ಶನ ಮನರಂಜನೆಯ ಅನುಭವ ನೀಡಿದ್ದು, ಚಿತ್ರದ ಬಿಡುಗಡೆಯ ಮುನ್ನವೇ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ.

ಸ್ನೇಹ, ಕುಟುಂಬ, ಪ್ರೀತಿ, ನಗು ಹಾಗೂ ಬದುಕಿನಲ್ಲಿ ಎದುರಾಗುವ ಅನಿರೀಕ್ಷಿತ ಪ್ರೇಮದ ಕ್ಷಣಗಳನ್ನು ಒಳಗೊಂಡಿರುವ ‘ಮಿಸ್‌ಮ್ಯಾಚ್’ ಒಂದು ಕನ್ನಡ ಫ್ಯಾಮಿಲಿ ರೊಮ್ಯಾಂಟಿಕ್ ಕಾಮಿಡಿ ಚಿತ್ರವಾಗಿದೆ. ಎಲ್ಲರ ಬದುಕಿನಲ್ಲೂ ಒಂದಲ್ಲ ಒಂದು ರೀತಿಯಲ್ಲಿ ನಡೆಯುವ ಪ್ರೀತಿ, ಸಂಬಂಧಗಳ ಗೊಂದಲ ಹಾಗೂ ಭಾವನಾತ್ಮಕ ಸನ್ನಿವೇಶಗಳನ್ನು ಮನರಂಜನಾತ್ಮಕವಾಗಿ ಚಿತ್ರದಲ್ಲಿ ಕಟ್ಟಿಕೊಡಲಾಗಿದೆ.

1000471549

ಸಾಯಿ ಶ್ರೀನಿಧಿ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರವನ್ನು ತೇಜಸ್ ವೆಂಕಟೇಶ್ ನಿರ್ಮಿಸಿದ್ದಾರೆ. ಚಿತ್ರದ ಛಾಯಾಗ್ರಹಣವನ್ನು ಗಣೇಶ್ ಮಹಾಬಲ ನಿರ್ವಹಿಸಿದ್ದು, ಸಂಕಲನವನ್ನು ದೀಪಕ್ ಎಂ. ಕುಲಾಲ್ ಮಾಡಿದ್ದಾರೆ.

ಚಿತ್ರದ ‘ಸುಂದರಿ’ ಹಾಡಿಗೆ ಜೂಡಾ ಸ್ಯಾಂಡಿ ಸಂಗೀತ ಸಂಯೋಜಿಸಿ, ಧ್ವನಿ ನೀಡಿದ್ದಾರೆ. ವಿಶೇಷವೆಂದರೆ, ಜೂಡಾ ಸ್ಯಾಂಡಿ ಇದೇ ಮೊದಲ ಬಾರಿಗೆ ಕನ್ನಡದಲ್ಲಿ ಹಾಡಿದ್ದಾರೆ. ತ್ರಿಲೋಕ್ ತ್ರಿವಿಕ್ರಮ ಹಾಡಿಗೆ ಸಾಹಿತ್ಯ ರಚಿಸಿದ್ದಾರೆ. ಕನ್ನಡದ ಪ್ರೇಕ್ಷಕರಿಗೆ ಹೊಸ ಸಂಗೀತದ ಅನುಭವ ನೀಡುವ ‘ಸುಂದರಿ’ ಹಾಡು ಚಿತ್ರದ ಪ್ರಚಾರಕ್ಕೆ ಮತ್ತಷ್ಟು ಮೆರುಗು ನೀಡಿದೆ.

ಫ್ಲ್ಯಾಶ್‌ಮಾಬ್‌ಗೆ ಸಧ್ವಿನ್ ಶೆಟ್ಟಿ ನೃತ್ಯ ಸಂಯೋಜನೆ ಮಾಡಿದ್ದಾರೆ. ಸುಜನ್ ಎಸ್. ಹೆಗಡೆ ಹಾಗೂ ಅರವಿಂದ್ ಎಂ. ಸಹಾಯಕ ನೃತ್ಯ ಸಂಯೋಜಕರಾಗಿ ಕಾರ್ಯನಿರ್ವಹಿಸಿದ್ದಾರೆ. ತೇಜಸ್, ಹರಿವತ್ಸ, ಲೋಚನ್, ನಿಶಾಂತ್, ಕೀರ್ತಿ, ಸಂಜನಾ, ಲಕ್ಷ್ಮಿ ಹಾಗೂ ಅನುಶ್ರೀ ನೃತ್ಯ ಪ್ರದರ್ಶನದಲ್ಲಿ ಭಾಗವಹಿಸಿದ್ದಾರೆ. ಫ್ಲ್ಯಾಶ್‌ಮಾಬ್‌ನ ಛಾಯಾಗ್ರಹಣವನ್ನು ವೀರೇಂದ್ರ ಪಾಟೀಲ್ ಹಾಗೂ ಶಿಶಿರ್ ಜಿ. ನಿರ್ವಹಿಸಿದ್ದು, ಸಂಕಲನವನ್ನು ಸಂಜೀವ್ ಜಗೀರ್ಡಾರ್ ಮಾಡಿದ್ದಾರೆ.

ಕೌಶಿಕ್ ಗೌಡ, ಅಶ್ವಿತಾ ಹೆಗ್ಡೆ, ತೇಜೇಶ್ ಎಸ್.ಎಂ. ಹಾಗೂ ಅಮೃತಾ ಕೆ.ಪಿ. ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿರುವ ‘ಮಿಸ್‌ಮ್ಯಾಚ್’ ಚಿತ್ರವು 2027ರ ಜನವರಿ 8ರಂದು ಬಿಡುಗಡೆಯಾಗಲಿದೆ.

ಪ್ರೀತಿ, ಸ್ನೇಹ, ಕುಟುಂಬದ ಭಾವನೆಗಳು ಹಾಗೂ ಹಾಸ್ಯದ ಸೊಗಡಿನಿಂದ ಕೂಡಿರುವ ಈ ಚಿತ್ರ ಪ್ರೇಕ್ಷಕರಿಗೆ ಮನರಂಜನೆಯ ರಸದೌತಣ ನೀಡಲು ಸಜ್ಜಾಗಿದೆ.

ಚಿತ್ರದ ‘ಸುಂದರಿ’ ಹಾಡು ಈಗಾಗಲೇ ಬಿಡುಗಡೆಯಾಗಿದ್ದು, ತೇಜಸ್ ಪಬ್ಲಿಕೇಶನ್ಸ್ ಯೂಟ್ಯೂಬ್ ಚಾನೆಲ್‌ನಲ್ಲಿ ವೀಕ್ಷಣೆಗೆ ಲಭ್ಯವಿದೆ. ಪ್ರೇಕ್ಷಕರು ಈ ಹಾಡನ್ನು ಯೂಟ್ಯೂಬ್‌ನಲ್ಲಿ ವೀಕ್ಷಿಸಿ ಆನಂದಿಸಬಹುದು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ