ಕೊರೋನಾದ ಹಾವಳಿಯಿಂದ ಬಹಳಷ್ಟು ಜನರು ಮನೆಯಿಂದ ಹೊರಗೆ ಬರುತ್ತಿಲ್ಲ. ಹೀಗಾಗಿ ಅವರ ದೈಹಿಕ ಚಟುಟಿಕೆಗೆ ಕಡಿವಾಣ ಬಿದ್ದಿದೆ. ಅದರ ನೇರ ಪರಿಣಾಮ ನಮ್ಮ ಮೂಳೆಗಳ ಮೇಲೆ ಆಗುತ್ತಿದೆ. ನಮ್ಮ ಮೂಳೆಗಳು ದುರ್ಬಲಗೊಳ್ಳದಂತೆ ನೋಡಿಕೊಳ್ಳುವುದು ಹೇಗೆ ಒಂದಿಷ್ಟು ತಿಳಿದುಕೊಳ್ಳಿ…….
ಕೊರೋನಾ ಒಂದು ಮಹಾಮಾರಿಯ ರೂಪ ಪಡೆದುಕೊಂಡಿದೆ. ಹೀಗಾಗಿ ಬಹಳಷ್ಟು ಜನರು ಬೇರೆ ಬೇರೆ ತೆರನಾದ ಸಮಸ್ಯೆಗಳನ್ನು ಎದುರಿಸಬೇಕಾಗಿ ಬರುತ್ತಿದೆ. ಇಂತಹ ಸ್ಥಿತಿಯಲ್ಲಿ ಆರೋಗ್ಯದ ಬಗ್ಗೆ ಗಮನಕೊಡುವುದು ಅತ್ಯಂತ ಅವಶ್ಯವಾಗಿದೆ. ಲಾಕ್ಡೌನ್ ಬಳಿಕ ಅನ್ಲಾಕ್ ದಿನಗಳು ಶುರುವಾದವು. ಆದರೂ ಕೆಲವು ಜನರು ಮನೆಯಿಂದ ಹೊರಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಇದರ ನೇರ ಪರಿಣಾಮ ಮೂಳೆಗಳ ಮೇಲೆ ಬೀಳುತ್ತಿದೆ.
ಮೂಳೆಗಳು ದೇಹದ ವ್ಯವಸ್ಥೆಯ ಅಡಿಪಾಯವಾಗಿವೆ. ಆದರೆ ಮಕ್ಕಳು ಹಾಗೂ ವೃದ್ಧರು ತಪ್ಪು ಜೀನಶೈಲಿಯಿಂದಾಗಿ ಮೂಳೆಗಳಿಗೆ ಸಂಬಂಧಪಟ್ಟ ಸಮಸ್ಯೆಯಿಂದ ಬಳಲುತ್ತಿದ್ದಾರೆ.
ಕೊರೋನಾದಿಂದಾಗಿ ನಾವು ಮನೆಯಲ್ಲಿಯೇ ಉಳಿಯಬೇಕಾದ ಸಂದರ್ಭದಲ್ಲಿ ಅವುಗಳ ಬಗ್ಗೆ ಹೇಗೆ ಕಾಳಜಿ ವಹಿಸಬೇಕು ಎಂಬುದರ ಬಗ್ಗೆ ಮೂಳೆತಜ್ಞ ಡಾ. ಸತ್ಯಂ ಭಾಸ್ಕರ್ ಇಲ್ಲಿ ಉತ್ತರಿಸಿದ್ದಾರೆ :
ಕೊರೋನಾದ ಕಾರಣದಿಂದಾಗಿ ಎಲ್ಲರ ಜೀವನದಲ್ಲೂ ಸಾಕಷ್ಟು ಬದಲಾವಣೆ ಬಂದಿದೆ. ಮೊದಲು ಜನರು ವರ್ಕ್ಔಟ್ಗಾಗಿ ಗಾರ್ಡನ್, ಜಿಮ್ ಗೆ ಹೋಗುತ್ತಿದ್ದರು. ಆದರೆ ಈಗ ಅದಾವುದೂ ಇಲ್ಲ. ಜನರು ದೈಹಿಕ ಚಟುವಟಿಕೆಗಳಿಂದ ದೂರಾಗುತ್ತಿದ್ದಾರೆ. ಇದರ ಬಗ್ಗೆ ನೀವೇನು ಹೇಳುತ್ತೀರಿ?
ಜನರು ದೈಹಿಕ ಚಟುವಟಿಕೆಯಿಂದ ದೂರವಾಗಿಲ್ಲ. ಅವರು ಉದ್ದೇಶಪೂರ್ವಕವಾಗಿ ತಮ್ಮನ್ನು ತಾವು ದೂರ ಇಟ್ಟುಕೊಂಡಿದ್ದಾರೆ. ನಾವು ಇಷ್ಟಪಟ್ಟರೆ ಮನೆಯಲ್ಲಿ ಅದರಲ್ಲೂ ಬಾಲ್ಕನಿಯಲ್ಲಿ ಸುಲಭಾಗಿ ವ್ಯಾಯಾಮ ಮಾಡಬಹುದು. ಈ ವ್ಯಾಯಾಮದಿಂದ ಮೂಳೆಗಳಿಗೆ ಲಾಭ ದೊರೆಯುತ್ತದೆ. ಅದರಿಂದ ನಮ್ಮ ದೇಹ ಚೆನ್ನಾಗಿ ಚಲನೆ ಪಡೆದುಕೊಳ್ಳುತ್ತದೆ. ಮೂಳೆಗಳನ್ನು ಆರೋಗ್ಯಕರವಾಗಿಡಲು ಎಲ್ಲಕ್ಕೂ ಉತ್ತಮ ವ್ಯಾಯಾಮವೆಂದರೆ ಮುಖ ಮೇಲೆ ಮಾಡಿಕೊಂಡು ನೇರವಾಗಿ ಮಲಗಿ. ನಿಮ್ಮ ಬೆನ್ನಿನ ಕೆಳಭಾಗದಲ್ಲಿ ಒಂದು ಸಣ್ಣ ದಿಂಬು ಇಟ್ಟುಕೊಳ್ಳಿ. ಪುನಃ 2 ನಿಮಿಷಗಳ ಕಾಲ ನೇರವಾಗಿ ಮಲಗಿಕೊಳ್ಳಿ. ಇದನ್ನು `ಸ್ಪೈನ್ ಎಕ್ಸ್ ಟೆನ್ಶನ್’ ಎಂದು ಹೇಳಲಾಗುತ್ತದೆ. ನೀವು ಈ ಎಕ್ಸರ್ಸೈಜ್ನ್ನು ಮಲಗುವ ಮುಂಚೆ ದಿನ ಮಾಡುತ್ತಾ ಇದ್ದರೆ, ನಿಮ್ಮ ಬೆನ್ನುನೋವು ಹೆಚ್ಚು ಕಡಿಮೆ ಹೊರಟೇ ಹೋಗುತ್ತದೆ. ಇದನ್ನು ಪ್ರತಿದಿನ 10-15 ನಿಮಿಷಗಳ ಕಾಲ ಮಾಡಿ.
ಬಹಳಷ್ಟು ಜನರು ಈಗ ಮನೆಯಿಂದಲೇ ಆಫೀಸ್ ಕೆಲಸ ಮಾಡುತ್ತಿದ್ದಾರೆ. ಅವರು ಗಂಟೆಗಟ್ಟಲೇ ಸೋಫಾ ಅಥವಾ ಬೀನ್ಬ್ಯಾಗ್ ಮೇಲೆ ಕುಳಿತು ಕೆಲಸ ಮಾಡುತ್ತಾರೆ. ಅದರಿಂದ ಅವರ ಬೆನ್ನಿನ ಭಂಗಿ ಹಾಳಾಗುತ್ತದೆ. ಮೂಳೆಗಳಿಗೆ ಸರಿಯಾದ ಕುಳಿತುಕೊಳ್ಳುವ ಭಂಗಿ ಯಾವುದು? ಅದಕ್ಕಾಗಿ ನಾವು ಯಾವ ಎಚ್ಚರಿಕೆಗಳನ್ನು ವಹಿಸಬೇಕು?
ನಾವು ಆಫೀಸಿನಲ್ಲಿ ಕೆಲಸ ಮಾಡುವಾಗ ಕೆಲಸಕ್ಕಾಗಿ ಹಾಗೂ ಸೀಟಿಗಾಗಿ ಬಂಧಿಗಳ ಥರ ಆಗಿಬಿಟ್ಟಿರುತ್ತೇವೆ. ಆದರೆ ಮನೆಯಲ್ಲಿದ್ದಾಗ ನಮ್ಮ ಮೇಲೆ ಯಾವುದೇ ನಿಬಂಧನೆಗಳು ಇರುವುದಿಲ್ಲ. ಹಾಗಾಗಿ ಆಗಾಗ ನಾವು ಒಂದಿಷ್ಟು ಚಲನೆ ಮಾಡಿಕೊಳ್ಳುತ್ತಾ ಇರಬೇಕು. ನೀವು ಮನೆಯಲ್ಲಿಯೇ ಕೆಲಸ ಮಾಡುತ್ತಿದ್ದರೆ ಪ್ರತಿನಿತ್ಯ 30 ನಿಮಿಷಗಳಿಗೊಮ್ಮೆ ನಿಮ್ಮ ಕುಳಿತುಕೊಳ್ಳುವ ಭಂಗಿಯನ್ನು ಬದಲಿಸಿಕೊಳ್ಳಿ. ಒಂದೇ ರೀತಿಯ ಭಂಗಿಯಲ್ಲಿ ಕುಳಿತುಕೊಳ್ಳುವುದರಿಂದ ಮೂಳೆಗಳಲ್ಲಿ ನೋವು ಶುರುವಾಗುತ್ತದೆ. ಅದು ಸರ್ವೈಕಲ್ ಪೇನ್ಗೆ ಆಹ್ವಾನ ಕೊಡಬಹುದು.
ಈ ಮುಂಚೆ 35ರ ಬಳಿಕ ಮೂಳೆಗೆ ಸಂಬಂಧಪಟ್ಟ ಸಮಸ್ಯೆಗಳು ಕಂಡುಬರುತ್ತಿದ್ದವು. ಆದರೆ ಈಗ 25ರ ವಯಸ್ಸಿನಲ್ಲಿಯೇ ಕಂಡುಬರುತ್ತಿವೆಯಲ್ಲ ಅದಕ್ಕೆ ಏನು ಕಾರಣ?
ಮೊದಲು ಜನರು ದೈಹಿಕವಾಗಿ ಬಹಳ ಕ್ರಿಯಾಶೀಲರಾಗಿರುತ್ತಿದ್ದರು. ಅದರ ಜೊತೆ ಜೊತೆಗೆ ತಮ್ಮ ಆಹಾರದ ಬಗೆಗೂ ಹೆಚ್ಚಿನ ಗಮನ ಕೊಡುತ್ತಿದ್ದರು. ಆದರೆ ಈಗಿನ ಜೀವನಶೈಲಿಗೂ ಹಳೆಯ ಜೀವನಶೈಲಿಗೂ ಬಹಳ ವ್ಯತ್ಯಾಸ ಬಂದಿದೆ. ಈಗ ಜನರು ಕುರ್ಚಿಯ ಮೇಲೆಯೇ ಕುಳಿತು ಕೆಲಸ ಮಾಡುತ್ತಾರೆ. ಆಹಾರದಲ್ಲಿ ಹಾಲುಮೊಸರಿನ ಬದಲಿಗೆ ಪಿಜ್ಜಾಬರ್ಗರ್ಗಳು ಸ್ಥಾನ ಪಡೆದುಕೊಂಡಿವೆ. ಮೂಳೆಗಳ ಬಲವರ್ಧನೆಗೆ ಬಾಲ್ಯದಿಂದಲೇ ಆಹಾರದ ಬಗ್ಗೆ ಹೆಚ್ಚಿನ ಗಮನಕೊಡುವ ಅಗತ್ಯ ಇದೆ.
ದೇಹಕ್ಕೆ ಸೂಕ್ತ ಪ್ರಮಾಣದಲ್ಲಿ ಪೋಷಣೆ ದೊರೆತರೆ ಮೂಳೆಗಳು ಗಟ್ಟಿಗೊಳ್ಳುತ್ತವೆ. ದೈಹಿಕ ಬೆಳವಣಿಗೆಯೂ ಸಮರ್ಪಕವಾಗಿರುತ್ತದೆ. ಆದರೆ ಇಂದಿನ ಮಕ್ಕಳು ಕೂಲ್ ಡ್ರಿಂಕ್ಸ್ ಕುಡಿಯಲು ಹೆಚ್ಚು ಇಷ್ಟಪಡುತ್ತಾರೆ. ಆದರೆ ಈ ತೆರನಾದ ತಂಪು ಪಾನೀಯಗಳಿಂದ ದೇಹಕ್ಕೆ ಯಾವುದೇ ಪೋಷಕಾಂಶಗಳು ದೊರಕುವುದಿಲ್ಲ. ಹೀಗಾಗಿ ಮೂಳೆಗಳು ದುರ್ಬಲಗೊಳ್ಳುತ್ತವೆ. ದೇಹದಲ್ಲಿ ಕ್ಯಾಲ್ಶಿಯಂ ಪ್ರಮಾಣ ಕಡಿಮೆಯಾದರೆ ಕಡಿಮೆ ವಯಸ್ಸಿನಲ್ಲಿಯೇ ಕೀಲುಗಳ ಸಮಸ್ಯೆ ಬಾಧಿಸುತ್ತದೆ. 20 ವರ್ಷಗಳ ತನಕ ದೇಹಕ್ಕೆ ಸರಿಯಾದ ಪೋಷಣೆ ದೊರಕುವುದು ಅತ್ಯವಶ್ಯಕ. ನಿಮಗೆ ಕಡಿಮೆ ವಯಸ್ಸಿನಲ್ಲಿಯೇ ಈ ಸಮಸ್ಯೆ ಉಂಟಾದರೆ ವೈದ್ಯರ ಬಳಿ ಕ್ಯಾಲ್ಶಿಯಂ ಪರೀಕ್ಷೆ ಮಾಡಿಸಿಕೊಳ್ಳಿ.
ಮೆನೊಪಾಸ್ ಬಳಿಕ ಮಹಿಳೆಯರ ಮೂಳೆಗಳು ದುರ್ಬಲಗೊಳ್ಳುತ್ತವೆ. ಇಂತಹ ಸ್ಥಿತಿಯಲ್ಲಿ ಅವರು ಯಾವ ಸಂಗತಿಗಳ ಬಗ್ಗೆ ಗಮನಹರಿಸಬೇಕು?
ಮುಟ್ಟಂತ್ಯದ ಬಳಿಕ ಮಹಿಳೆಯರಲ್ಲಿ ಈಸ್ಟ್ರೋಜನ್ ಪ್ರಮಾಣ ಇಳಿಮುಖವಾಗುತ್ತದೆ. ಅದರಿಂದ ಆಸ್ಟೋಬ್ಲಾಸ್ಟ್ ಜೀವಕೋಶಗಳ ಮೇಲೆ ಪ್ರಭಾವ ಬೀರುತ್ತದೆ. ಪುರುಷರಿಗೆ ಹೋಲಿಸಿದಲ್ಲಿ ಮಹಿಳೆಯರಲ್ಲಿ ಇದರ ಪ್ರಮಾಣ ಹೆಚ್ಚು. ಮೂಳೆಗಳ ಸಾಂದ್ರತೆಯ ಮೇಲೂ ಪರಿಣಾಮ ಉಂಟಾಗುತ್ತದೆ. ಅದರಿಂದಾಗಿ ಮಹಿಳೆಯರಲ್ಲಿ ಆಸ್ಟೊಪೊರೊಸಿಸ್ ಮತ್ತು ಆಸ್ಟೊ ಆರ್ಥ್ರೈಟೀಸ್ನಂತಹ ಮೂಳೆಗಳಿಗೆ ಸಂಬಂಧಪಟ್ಟಂತೆ ರೋಗಗಳುಂಟಾಗುವ ರಿಸ್ಕ್ ಹೆಚ್ಚುತ್ತದೆ. ಅಂದಹಾಗೆ ಮಹಿಳೆಯರು ಆಹಾರದ ಬಗ್ಗೆ ಬಾಲ್ಯದಿಂದಲೇ ಗಮನಹರಿಸಬೇಕು. ಮಹಿಳೆಯೊಬ್ಬಳು ಮೆನೊಪಾಸ್ಗೆ ಹತ್ತಿರವಾಗಿದ್ದಾಳೆಂದರೆ ಅವರು ಪೋಷಕಾಂಶವುಳ್ಳ ಆಹಾರ ಸೇವನೆ ಮಾಡಬೇಕು.
ಇತ್ತೀಚಿನ ದಿನಗಳಲ್ಲಿ ಜನರು ಹೊರಗಿನ ಆಹಾರಗಳ ಸೇವನೆ ಕಡಿಮೆ ಮಾಡಿದ್ದಾರೆ. ಆದರೆ ಮನೆಯಲ್ಲಿ ಮೈದಾಹಿಟ್ಟಿನಿಂದ ತಯಾರಾದ ರುಚಿಕರ ಆಹಾರಗಳನ್ನು ಸೇವಿಸುತ್ತಿದ್ದಾರೆ.
ಮೈದಾಹಿಟ್ಟು ಮೂಳೆಗಳ ಆರೋಗ್ಯಕ್ಕೆ ಹಾನಿಕಾರಕವೇ?
ಹಾಗೇ ನೋಡಿದರೆ ಮೈದಾ ಸೇವನೆ ಮಾಡಲೇಬಾರದು. ಅದು ನಮ್ಮ ಆಹಾರಕ್ಕೆ ಯಾವುದೇ ಪೋಷಕಾಂಶ ಕೊಡುವುದಿಲ್ಲ. ಅದು ಬಹುಬೇಗ ಪಚನ ಕೂಡ ಆಗುವುದಿಲ್ಲ. ಅದರಿಂದ ಮಲಬದ್ಧತೆಯ ಸಮಸ್ಯೆ ಉಂಟಾಗುತ್ತದೆ. ಮೈದಾದಿಂದ ಮೂಳೆಗಳ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ಮೈದಾ ಸಿದ್ಧಪಡಿಸುವಾಗ ಅದರಿಂದ ಪ್ರೋಟೀನ್ ಬೇರ್ಪಡಿಸಲಾಗುತ್ತದೆ. ಆ ಬಳಿಕ ಅದು ಅಸಿಡಿಕ್ ಆಗುತ್ತದೆ. ಹೀಗಾಗಿ ಕ್ಯಾಲ್ಶಿಯಂ ಹೀರಿಕೊಳ್ಳುತ್ತದೆ. ಅದರಿಂದ ವ್ಯಕ್ತಿಗೆ ನಿಶ್ಶಕ್ತಿ ಉಂಟಾಗುತ್ತದೆ. ಹೀಗಾಗಿ ಮೈದಾ ಸೇವನೆ ಮಾಡಬಾರದು.
ನಮ್ಮ ಮೂಳೆಗಳನ್ನು ಗಟ್ಟಿಗೊಳಿಸಲು ನಾವು ಯಾವ ಯಾವ ಆಹಾರಗಳನ್ನು ಹೆಚ್ಚು ಸೇವಿಸಬೇಕು?
ಮೂಳೆಗಳನ್ನು ಗಟ್ಟಿಗೊಳಿಸಲು ಮೆಗ್ನಿಷಿಯಂ, ಕ್ಯಾಲ್ಶಿಯಂ ಹಾಗೂ ವಿಟಮಿನ್ `ಡಿ’ ಅತ್ಯವಶ್ಯ.
ಮೆಗ್ನಿಷಿಯಂ : ಮೆಗ್ನಿಷಿಯಂಗಾಗಿ ಹಸಿರು ಸೊಪ್ಪುಗಳನ್ನು ಹೆಚ್ಚು ಸೇವಿಸಬೇಕು. ಪಾಲಕ್ ಮೆಗ್ನಿಷಿಯಂನ ಉತ್ಕೃಷ್ಟ ಮೂಲವಾಗಿದೆ. ಇದರ ಹೊರತಾಗಿ ಟೊಮೇಟೊ, ಆಲೂಗೆಡ್ಡೆ, ಬೀಟ್ರೂಟ್, ಸಿಹಿಗೆಣಸು ಇವುಗಳನ್ನು ಆಹಾರದಲ್ಲಿ ಸೇರಿಸಿಕೊಳ್ಳಿ.
ಕ್ಯಾಲ್ಶಿಯಂ : ಹಾಲು, ಮೊಸರು ಕ್ಯಾಲ್ಶಿಯಂನ ಉತ್ಕೃಷ್ಟ ಮೂಲ. ಇದರ ಜೊತೆಗೆ ಹಸಿರು ಸೊಪ್ಪುಗಳನ್ನು ಸೇವಿಸಬೇಕು. ಹಸಿರು ಸೊಪ್ಪುಗಳು ಕಬ್ಬಿಣಾಂಶವನ್ನೂ ದೊರಕಿಸಿಕೊಡುತ್ತವೆ. ನಾನ್ವೆಜ್ ಸೇವಿಸುವವರು ಕ್ಯಾಲ್ಶಿಯಂಗಾಗಿ ಮೀನು ಸೇವನೆ ಮಾಡಬೇಕು. ಕಾಳುಗಳು, ಬಾಳೆಹಣ್ಣು, ಬಾದಾಮಿ, ಬ್ರೆಡ್, ಪನೀರ್ ಇವು ಸಹ ಕ್ಯಾಲ್ಶಿಯಂ ಕೊರತೆ ನೀಗಿಸಲು ಸಹಾಯ ಮಾಡುತ್ತವೆ.
ವಿಟಮಿನ್ ಡಿ : ದೇಹಕ್ಕಾಗಿ ವಿಟಮಿನ್ ಡಿ ಕೂಡ ಅತ್ಯವಶ್ಯ. ಸೋಯಾ ಜಂಕ್, ಮಶ್ರೂಮ್, ಹಾಲು, ಮೊಸರು, ಕಿತ್ತಳೆ ಇವನ್ನು ಸೇವಿಸಬೇಕು. ಬೆಳಗಿನ ಹೊತ್ತು ಎಳೆ ಬಿಸಿಲಲ್ಲಿ ವಾಕಿಂಗ್ ಮಾಡಿ.
– ಪ್ರತಿನಿಧಿ.