ಆಹಾರ ಹಾಗೂ ವ್ಯಾಯಾಮ ವ್ಯಕ್ತಿಯ ದೈಹಿಕ ಹಾಗೂ ಮಾನಸಿಕ ಸ್ವಾಸ್ಥ್ಯವನ್ನು ಸುಧಾರಿಸುತ್ತದೆ. ಜೊತೆಗೆ ಕ್ಯಾನ್ಸರ್‌, ಡಿಪ್ರೆಶನ್, ಹೃದ್ರೋಗಗಳನ್ನು ಕಡಿಮೆ ಮಾಡುತ್ತವೆ. ಸೀಲ್ಡ್ ಡಬ್ಬಿಗಳಲ್ಲಿನ ರೀಫೈಂಡ್‌ ಫುಡ್‌ಗೆ ಬದಲಾಗಿ ಆರೋಗ್ಯಕರ ಪೌಷ್ಟಿಕ ಆಹಾರ ತುಸು ದುಬಾರಿ ಅನಿಸಬಹುದು, ಆದರೂ ಸಿಹಿ ಪೇಯಗಳು ಮತ್ತು ಫಾಸ್ಟ್ ಫುಡ್‌ಗಾಗಿ ಮಾಡಲಾಗುವ ಖರ್ಚನ್ನು ಉಳಿಸಿ, ನೀವು ಉತ್ತಮ ಆಹಾರಕ್ಕಾಗಿ ಖರ್ಚು ಮಾಡಬಹುದು.

ಯಾರಾದರೂ ಆಹಾರ ತಜ್ಞರ ಸಲಹೆ ಮೇರೆಗೆ, ನೀವು ನಿಮ್ಮ ದೈನಂದಿನ ಆಹಾರಕ್ಕೆ ಸಂಬಂಧಿಸಿದ ಅಭ್ಯಾಸಗಳನ್ನು ಅರಿತುಕೊಳ್ಳಬಹುದು. ಅವರು ನಿಮ್ಮ ಅವಶ್ಯಕತೆಗಳಿಗೆ ಅನುಸಾರ ಒಂದು ಸಮತೋಲಿತ ಆಹಾರದ ಪಟ್ಟಿ ಕೊಡುತ್ತಾರೆ. ನಿಮ್ಮ ಮಾನಸಿಕ ಹಾಗೂ ದೈಹಿಕ ಆರೋಗ್ಯದ ರಕ್ಷಣೆಗಾಗಿ ನೀವು, ಆಹಾರಕ್ಕೆ ಸಂಬಂಧಿಸಿದ ಈ ಸಲಹೆಗಳನ್ನು ಗಮನಿಸಿ :

ನಿಯಮಿತ ಆಹಾರ ಸೇವಿಸಿ

ಪ್ರತಿದಿನ ನೀವು ನಿಗದಿತ ಪ್ರಮಾಣದಲ್ಲಿ 3 ಬಾರಿ ಆಹಾರ ಸೇವಿಸುವುದಾಗಿ ನಿಶ್ಚಯಿಸಿ. ಒಂದು ಹೊತ್ತಿನ ಆಹಾರ, ಮುಖ್ಯವಾಗಿ ಬೆಳಗಿನ ಉಪಾಹಾರ ಸೇವಿಸದಿದ್ದರೆ ಬ್ಲಡ್‌ ಶುಗರ್‌ ಲೆವೆಲ್ ‌ಕಡಿಮೆಯಾಗುತ್ತದೆ. ಇದರಿಂದ ಮೂಡ್‌ ಕೆಡುತ್ತದೆ, ಸಿಡಿಗುಟ್ಟುವಿಕೆ, ಸುಸ್ತು ಸಂಕಟ ಹೆಚ್ಚುತ್ತದೆ. ನಿಮಗೆ ಈ 3 ಹೊತ್ತಿನ ಆಹಾರ ಸೇವನೆ ಮಧ್ಯೆ ತುಸು ಹಸಿವು ಎನಿಸಿದರೆ, ಕಡಿಮೆ ಕ್ಯಾಲೋರಿಯ ಸ್ನ್ಯಾಕ್ಸ್ ಅಂದರೆ ತಾಜಾ ಹಣ್ಣು, ಡ್ರೈ ಫ್ರೂಟ್ಸ್, ಮೊಳಕೆ ಕಾಳುಗಳು ಇತ್ಯಾದಿ ಸೇವಿಸಿ. ಜೊತೆಗೆ ನಿಯಮಿತವಾಗಿ ವ್ಯಾಯಾಮ ಮಾಡಿ. ವ್ಯಾಯಾಮದಿಂದ ಟೆನ್ಶನ್‌ ದೂರವಾಗುತ್ತದೆ, ದೇಹದ ತೂಕ ನಿಯಂತ್ರಣದಲ್ಲಿರುತ್ತದೆ. ನೀವು ಎಷ್ಟು ಹೆಚ್ಚು ವ್ಯಾಯಾಮ ಮಾಡುವಿರೋ ಅಷ್ಟೇ ಧಾರಾಳವಾಗಿ ಆಹಾರ ಸೇವಿಸಬಹುದು, ವ್ಯಾಯಾಮದಿಂದ ಅದು ಸುಲಭವಾಗಿ ಕರಗುತ್ತದೆ.

ಆಹಾರದಲ್ಲಿ ಪ್ರೋಟೀನ್

ಆಹಾರದಲ್ಲಿ ಪ್ರೋಟೀನ್‌ ಪ್ರಮಾಣ ಧಾರಾಳಾವಾಗಿರಬೇಕು. ಆಗ ಮಸ್ತಿಷ್ಕದಲ್ಲಿ ಸಾಕಷ್ಟು ಅಮೈನೋ ಆಮ್ಲದ ಪೂರೈಕೆಯಾಗುತ್ತದೆ. ನಾವು ನಮ್ಮ ಚರ್ಮ, ಅಂಗಾಂಗ, ಮಾಂಸಖಂಡಗಳು, ರೋಗ ನಿರೋಧಕ ಕಾರ್ಯಸರಣಿಯನ್ನು ಸರಿಯಾಗಿಟ್ಟುಕೊಳ್ಳಲು ಪ್ರೋಟೀನಿನ ಅವಶ್ಯಕತೆ ಇದೆ.

ನಾವು ಸೇವಿಸುವ ಪ್ರತಿ ಆಹಾರದಲ್ಲೂ ಸಾಕಷ್ಟು ಪ್ರೋಟೀನ್‌ ಇರಲೇಬೇಕು. ಅಂದರೆ ಹಾಲು, ಮೊಟ್ಟೆ, ಪನೀರ್‌, ಡ್ರೈ ಫ್ರೂಟ್ಸ್, ಬೇಳೆ, ಕಾಳು, ಫಿಶ್‌ ಇತ್ಯಾದಿ.

ಆಹಾರದಲ್ಲಿ ವೈವಿಧ್ಯತೆ

ಆಹಾರವನ್ನು ಹೆಚ್ಚು ರುಚಿಕರವಾಗಿಸಲು ಹಾಗೂ ಎಲ್ಲಾ ಪೌಷ್ಟಿಕ ಅಂಶಗಳನ್ನೂ ಪಡೆಯಲು, ಆಹಾರದಲ್ಲಿ ವೈವಿಧ್ಯತೆ ಕಾಪಾಡಿಕೊಳ್ಳುವುದು ಅತ್ಯಗತ್ಯ. ನೀವು ಬೆಳಗಿನ ಉಪಾಹಾರಕ್ಕೆ ಬ್ರೆಡ್‌ ಅಥವಾ ರೊಟ್ಟಿ ತಿಂದಿದ್ದರೆ, ಮಧ್ಯಾಹ್ನ ತೆಳು ಚಪಾತಿ, ಮಿಶ್ರ ತರಕಾರಿ ಪಲ್ಯ, ಮೊಸರು ಸೇವಿಸಿ. 1 ದಿನಕ್ಕೆ ಕನಿಷ್ಠ 2 ಬಗೆಯ ಹಣ್ಣು ಮತ್ತು ತರಕಾರಿ ಸೇವಿಸಲೇಬೇಕು.

ಒಮೇಗಾ 3 ಫ್ಯಾಟಿ ಆ್ಯಸಿಡ್ಸ್

ಕೆಲವು ಅಧ್ಯಯನಗಳ ಪ್ರಕಾರ, ಒಮೇಗಾ 3 ಫ್ಯಾಟಿ ಆ್ಯಸಿಡ್ಸ್ ಯುಕ್ತ ಆಹಾರ ಮಾನಸಿಕ ಒತ್ತಡವನ್ನು ಕಡಿಮೆ ಮಾಡುವಲ್ಲಿ ಪೂರಕ. ಇವುಗಳ ಅಸಮತೋಲನದಿಂದಲೂ ಆಧುನಿಕ ಬಗೆಯ ರೋಗಗಳು ಉಂಟಾಗುತ್ತವೆ ಎಂದು ತಿಳಿದುಬಂದಿದೆ. ಫ್ರೈ, ಚಿಪ್ಸ್, ಕೇಕ್‌ ಮುಂತಾದ ಪ್ರೊಸೆಸ್ಡ್ ಆಹಾರಗಳ ಸೇವನೆಯಿಂದ, ಅವುಗಳಲ್ಲಿನ ಅಧಿಕ ಟ್ರಾನ್ಸ್ ಫ್ಯಾಟ್‌ ಅಂಶ ಹೆಚ್ಚು ಹಾನಿಕರ. ಆದ್ದರಿಂದ ಇದನ್ನು ತ್ಯಜಿಸಿ. ನೀವು ಸಸ್ಯಾಹಾರಿ ಅಥವಾ ಮೀನು ತಿನ್ನದವರಾಗಿದ್ದರೆ ಒಮೇಗಾ 3 ಸಪ್ಲಿಮೆಂಟ್ಸ್ ವುಳ್ಳ ಅಗಸೆ ಬೀಜದ ಎಣ್ಣೆಯನ್ನು ನಿಮ್ಮ ಆಹಾರದಲ್ಲಿ ಬಳಸಿರಿ. ಹೀಗಾಗಿ ಸಸ್ಯ ಮೂಲ್ಯದ ಒಮೇಗಾ 3 ಆ್ಯಸಿಡ್ಸ್ ಅಂಶ ಬಲು ಅಪರೂಪವಾದ್ದರಿಂದ, ಮೀನಿನ ಸೇವನೆ ಒಳ್ಳೆಯದು.

ಸಮತೋಲಿತ ತೂಕ

ಹಲವಾರು ಜನ ತೂಕ ಕಡಿಮೆ ಮಾಡಬೇಕು, ಸದಾ ಬಿಝಿ, ಒತ್ತಡ, ಉದ್ವಿಗ್ನತೆ, ಮಾನಸಿಕ ಸಮಸ್ಯೆಗಳು ಮುಂತಾದ ವಿವಿಧ ಕಾರಣಗಳಿಗಾಗಿ ಊಟ ತಿಂಡಿ ಬಿಟ್ಟುಬಿಡುತ್ತಾರೆ. ಸಮಯ ಕಳೆದಂತೆ ಅವರಿಗೆ ಆಹಾರ ಸೇವನೆಯಲ್ಲಿ ಸ್ವಾರಸ್ಯವೇ ಉಳಿಯುವುದಿಲ್ಲ, ಇದರಿಂದ ಅಸ್ಥಿರ ಅಭ್ಯಾಸಗಳು ಅಂಟಿಕೊಳ್ಳುತ್ತವೆ.

ಪೋಷಣೆಯ ಕೊರತೆ ಹಾಗೂ ದೇಹ ತೂಕದಲ್ಲಿನ ವ್ಯತ್ಯಾಸಗಳಿಂದಾಗಿ, ನಮ್ಮ ದೇಹದಲ್ಲಿನ ಗ್ಲೂಕೋಸ್‌ ಲೆವೆಲ್ ‌ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಇದರ ಮೇಲೆ ನಿಯಂತ್ರಣವಿಡಲು ಕುಶಲ ಡಯೆಟಿಶಿಯನ್‌ರ ಸಲಹೆ ಪಡೆಯುವುದು ಅವಶ್ಯಕ.

–  ಪೂಜಾ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ