ಸಿಂಗಪುರ್‌ ಮಾರ್ಕೆಟ್‌, ಸ್ಯಾಂಟೋ ಸಾ ಐಲೆಂಡ್‌, ನೈಟ್‌ ಸಫಾರಿ, ಭಾರಿ ಮಾಲ್‌ಗಳು, ಇತರೆ ಪ್ರವಾಸಿ ಕೇಂದ್ರಗಳ ಬಗ್ಗೆ ಬಹಳಷ್ಟು ಬರೆಯಲಾಗುತ್ತದೆ. ಇಲ್ಲಿನ `ಡೌನ್‌ ಟೌನ್‌’ ಒಂದು ಅಪರೂಪದ ತಾಣ. ಸಿಂಗಪುರ್‌ ನಿವಾಸಿಗಳಿಗೆ ನಿರ್ಮಿಸಲಾದ ಕ್ಲಬ್‌ ಈಗ ಪರಿಪೂರ್ಣವಾಗಿ ಒಂದು ರೆಸಾರ್ಟ್‌ ಆಗಿ ಮಾರ್ಪಟ್ಟಿದೆ. ಇಲ್ಲಿ ಹಲವು ಬಗೆಯ ವಾಟರ್‌ ಗೇಮ್ ಗಳಿವೆ. ತಿಂಡಿ ತಿನ್ನುವ ಬಗೆಬಗೆಯ ವ್ಯವಸ್ಥೆಗಳಿವೆ. ಇಲ್ಲಿ ಕಠೋರ ನಿಯಮಗಳೇನೂ ಇಲ್ಲ. ಹೀಗಾಗಿ ಪ್ರವಾಸಿಗರಿಗೆ ಸ್ವತಂತ್ರ ವಾತಾವರಣ.

ತನ್ನಷ್ಟಕ್ಕೆ ತಾನು ಸ್ವತಂತ್ರವಾಗಿರುವ ಒಂದು ಪುಟ್ಟ ನಗರ. ನಿಮಗೆ ಬೇರೆಡೆ ಹೋಗಬೇಕಾದ ಅಗತ್ಯವೇ ಇಲ್ಲ. ಇಲ್ಲಿ ಯಾವುದೇ ರಸ್ತೆಗಳು ಹಾಯ್ದು ಹೋಗುವುದಿಲ್ಲ. ಟ್ರಾಫಿಕ್‌ ಜಾಮ್ ನ ಮಾತೇ ಇಲ್ಲ. ವಾಸಕ್ಕೆ ಹಲವು ಬಗೆಯ ವ್ಯವಸ್ಥೆಗಳಿವೆ. ಭಾರತೀಯ ಪ್ರವಾಸಿಗರಿಗೆ ದೇಶಿ ಖಾದ್ಯ ಕೂಡ ಸುಲಭವಾಗಿ ಲಭಿಸುತ್ತದೆ.

ನೂರಾರು ಎಕರೆಯಲ್ಲಿ  ಪಸರಿಸಿರುವ ನದಿ ತಟದ ಡೌನ್‌ ಟೌನ್‌ ಈಸ್ಟ್ ಮೇನ್‌ ಸಿಂಗಪುರದಿಂದ ಪ್ರತ್ಯೇಕವಾಗಿರುವಂತೆ ಭಾಸವಾಗುತ್ತದೆ. ಇದು ಛಂಗಿ ಏರ್‌ಪೋರ್ಟ್‌ನಿಂದ ಬಹಳ ದೂರವೇನೂ ಇಲ್ಲ. ಇಲ್ಲಿ ಪ್ರವಾಸಿಗರು ಬಂದರೆ 2-3 ದಿನಗಳ ಕಾಲ ತಂಗದೇ ಹೋಗುವುದಿಲ್ಲ.

ಇವನ್ನು ಅವಶ್ಯ ನೋಡಿ

ಡೌನ್‌ ಟೌನ್‌ ಈಸ್ಟ್ ನ ಮುಖ್ಯ ಆಕರ್ಷಣೆ ಇಲ್ಲಿನ ವೈಲ್ಡ್‌ ವೈಲ್ಡ್ ವೆಟ್‌ ವಾಟರ್‌ಪಾರ್ಕ್‌.

ಇಲ್ಲಿ ಟ್ಯೂಬ್‌ನಿಂದ ಹೊರಹೊಮ್ಮುವ ವೋರ್ಟೆಕ್ಸ್ ಗಳಿವೆ. ನೀರಿನಲ್ಲಿ ಬಹಳ ಎತ್ತರದಿಂದ ಜಾರುವ ಬ್ರೋಕನ್‌ ರೇಸರ್ಸ್‌ಗಳಿವೆ. ವೋರ್ಟೆಕ್ಸ್ ನ ಎತ್ತರ 18.5 ಮೀಟರ್‌ ಇದೆ ಹಾಗೂ ಸ್ಲೈಡ್‌ 134 ಮೀಟರ್‌ ಆಗಿದೆ. ಅದರಿಂದ ಜಾರುವ ವೇಗ ಪ್ರತಿ ನಿಮಿಷಕ್ಕೆ 600 ಮೀಟರ್‌ ಆಗುತ್ತದೆ. ನಿಮ್ಮ ತೂಕ ಸ್ವಲ್ಪ ಜಾಸ್ತಿ ಇದ್ದರೂ ಏನೂ ಸಮಸ್ಯೆ ಇಲ್ಲ. 136 ಕಿಲೋ ತೂಕ ಇರುವ ಪ್ರವಾಸಿಗರಿಗೂ ಇಲ್ಲಿ ಅನುಮತಿ ಇದೆ. ಬ್ರೋಕನ್‌ ರೇಸರ್ಸ್‌ 13 ಮೀಟರ್‌ ಆಗಿದ್ದು ಸ್ಲೈಡ್‌ 91 ಮೀಟರ್‌ ಇದೆ.

ವಾಟರ್‌ ಪಾರ್ಕ್‌ನಲ್ಲಿ ರಾಯನ್‌ ಫ್ಲಶ್‌ ಇದ್ದು, ಇದರಿಂದ ಸುತ್ತುಹಾಕುವ ನೀರಿನ ಹೊಸ ಥ್ರಿಲ್ ಉತ್ಪನ್ನವಾಗುತ್ತದೆ. ಫ್ರೀ ಫಾಲ್‌ ನೇರವಾಗಿ ನೀರಿನೊಂದಿಗೆ ಧೈರ್ಯವನ್ನು ಒಗ್ಗೂಡಿಸಿ 55 ಕಿ.ಮೀ. ವೇಗದಲ್ಲಿ ಒಂದು ದೊಡ್ಡ ಪಾಂಡ್‌ನಲ್ಲಿ ಹೋಗಿ ಕುಕ್ಕುತ್ತದೆ.

ಒಂದು ವೇಳೆ ಮಕ್ಕಳಿಗೆ ಈ ವಾಟರ್‌ ಗೇಮ್ ಗಳು ಹೆದರಿಕೆ ಹುಟ್ಟಿಸಿದರೆ ಅವರನ್ನು ಕಿಂಗ್‌ಡಮ್ ಝೋನ್‌, ವೆಟ್‌ ಅಂಡ್‌ ವೈಲ್ಡ್, ಫೌಂಟೆನ್‌ ಸ್ಪ್ಯಾಶ್‌ ಪ್ಲೇ ಮುಂತಾದವು ಇವೆ. ವಿಶ್ರಾಂತಿ ಮಾಡಲು ಟೆಂಟ್‌ನಂಥವು ಲಭ್ಯವಿವೆ. ಇಲ್ಲಿ 50ಕ್ಕೂ ಹೆಚ್ಚು ರೆಸ್ಟೋರೆಂಟ್‌ಗಳು ಕೂಡ ಇವೆ.

ಶಾಪಿಂಗ್‌ನ ಹವ್ಯಾಸವಿದ್ದರೆ ಅಗ್ಗದ ಹಲವು ಸಾಮಗ್ರಿಗಳು ಲಭಿಸುತ್ತವೆ. ಚಿಯರ್ಸ್‌ ಕನ್ವಿನಿಯೆನ್ಸ್ ಸೆಂಟರ್‌ಗಳು 24 ಗಂಟೆ ತೆರೆದಿರುತ್ತದೆ. ಗ್ಯಾಜೆಟ್‌ ಮಿಕ್ಸ್ ನಿಂದ ಹೊಸ ಹೊಸ ಎಲೆಕ್ಟ್ರಾನಿಕ್‌ ವಸ್ತುಗಳನ್ನು ಖರೀದಿಸಬಹುದು. ಸಿಂಗಲ್ ಟೇ‌ಲ್‌ನಿಂದ ಲೋಕಲ್ ಸಿಮ್ ಕಾರ್ಡ್‌ ಕೂಡ ಖರೀದಿಸಬಹುದು.

ಡೌನ್‌ಟೌನ್‌ ಈಸ್ಟ್ ಹಿಂದೊಮ್ಮೆ ಸಿಂಗಪುರ್‌ ನಿವಾಸಿಗಳಿಗಾಗಿ ಸ್ಥಾಪಿಸಿದ್ದ ಶಾಪಿಂಗ್‌ ಹಾಗೂ ಮನರಂಜನಾ ಕೇಂದ್ರ ಆಗಿರಬಹುದು. ಆದರೆ ಅದು ಈಗ ಸಿಂಗಪುರದ ಒಂದು ಮುಖ್ಯ ಕ್ಷೇತ್ರವಾಗಿದ್ದು, ಅಲ್ಲಿ ವಿದೇಶಿಗರು ಸಾಕಷ್ಟು ಖುಷಿಯ ಅನುಭವ ಪಡೆದುಕೊಳ್ಳುತ್ತಾರೆ.

ಲಿಟಲ್ ಇಂಡಿಯಾ

ಪೀಕಾಕ್‌ ಚೌಕ್‌ ಸಮೀಪವೇ ಲಿಟಲ್ ಇಂಡಿಯಾ ಎಂಬ ಸ್ಥಳವಿದೆ. ಅದು ಭಾರತೀಯರಿಗೆ ಬಹಳ ಮೆಚ್ಚಿನ ಸ್ಥಳ. ಅಲ್ಲಿ ಬಹಳಷ್ಟು ಭಾರತೀಯರು ವಾಸಿಸುತ್ತಾರೆ.

ಲಿಟಲ್ ಇಂಡಿಯಾದಲ್ಲಿ ದಕ್ಷಿಣ ಭಾರತದವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇಲ್ಲಿ ಬಹುಮಹಡಿಯ ಹಲವು ಮಾಲ್‌ಗಳು ಕೂಡ ಇವೆ. ಇಲ್ಲಿನ ಪ್ರಸಿದ್ಧ ಮಾಲ್‌ ಎಂದರೆ ಮುಸ್ತಾಫಾ ಮಾಲ್‌. ಅದು ವಾರದ ಎಲ್ಲ ದಿನಗಳಲ್ಲೂ 24 ಗಂಟೆ ತೆರೆದಿರುತ್ತದೆ. ಇಲ್ಲಿ ಕೆಲಸ ಮಾಡುವವರಲ್ಲಿ ಭಾರತೀಯರೇ ಹೆಚ್ಚು.

ಈ ಪ್ರದೇಶದಲ್ಲಿ `ಆನಂದಭವನ’ ಎಂಬ ಪ್ರಸಿದ್ಧ ಹೋಟೆಲ್ ಇದೆ. ಅಲ್ಲಿ ದಕ್ಷಿಣ ಭಾರತದ ವೈವಿಧ್ಯಮಯ ತಿಂಡಿಗಳು ದೊರೆಯುತ್ತವೆ. ಹೀಗಾಗಿ ಭಾರತೀಯರೂ ಸೇರಿದಂತೆ, ವಿದೇಶಿ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತಾರೆ.

ಇಲ್ಲಿನ ಕ್ರೈಮ್ ರೇಟ್‌ ಝೀರೊ ಆಗಿದೆ. ವ್ಯಾಪಾರ ವಹಿವಾಟು ಅತ್ಯಂತ ವ್ಯವಸ್ಥಿತ ರೀತಿಯಲ್ಲಿ ನಡೆಯುತ್ತದೆ. ಸಿಂಗಪುರ್‌ ನಗರ ಸಂಪೂರ್ಣ ಸಿಸಿ ಕ್ಯಾಮೆರಾ ಆವೃತವಾಗಿದೆ. ಇಲ್ಲಿ ನಿಮಗೆ ಎಲ್ಲೂ `ಜೇಬುಗಳ್ಳರಿಂದ ಎಚ್ಚರಿಕೆ’ ಎಂಬರ್ಥ ಕೊಡುವ ಫಲಕಗಳು ನೋಡಲು ಸಿಗುವುದಿಲ್ಲ. ಇಲ್ಲಿನ ಇಂಟರ್‌ನೆಟ್‌ ವ್ಯವಸ್ಥೆ ಬಹಳ ಚೆನ್ನಾಗಿದೆ. ಇಲ್ಲಿನ ಕೃಷಿ ಅಷ್ಟಕ್ಕಷ್ಟೆ.

ಹಾಲು, ಹಣ್ಣು, ತರಕಾರಿಗಳನ್ನು ಮಲೇಷಿಯಾದಿಂದ, ಅಕ್ಕಿ, ಬೇಳೆ ನ್ಯೂಜಿಲೆಂಡ್‌, ಆಸ್ಟ್ರೇಲಿಯಾ ಹಾಗೂ ದೈನಂದಿನ ಉಪಯೋಗದ ವಸ್ತುಗಳನ್ನು ಥೈಲ್ಯಾಂಡ್‌ ಹಾಗೂ ಇಂಡೋನೇಷಿಯಾದಿಂದ ಆಮದು ಮಾಡಿಕೊಳ್ಳಲಾಗುತ್ತದೆ.

ಭಾರತೀಯರು ಹೋಟೆಲ್‌ ಬುಕ್‌ ಮಾಡುವ ಮುನ್ನ ಅದು ಲಿಟಲ್ ಇಂಡಿಯಾದಲ್ಲಿ ಆಗುವ ಹಾಗೆ ನೋಡಿಕೊಳ್ಳುವುದು ಸೂಕ್ತ. ಏಕೆಂದರೆ ಹೊರಗೆ ಸುತ್ತಾಡಲು ಮತ್ತು ವಸ್ತುಗಳ ಖರೀದಿಗೆ ಸೂಕ್ತವಾಗಿರುತ್ತದೆ.

ಪೀಕಾಕ್‌ ಚೌಕ್‌ನ ಒಂದು ಬದಿಗೆ ಲಿಟಲ್ ಇಂಡಿಯಾ ಹಾಗೂ ಇನ್ನೊಂದು ಬದಿಗೆ ಬುಗ್ಗಿ ಸ್ಟ್ರೀಟ್‌ ಇದೆ. ಅಲ್ಲಿನ ಮಾರುಕಟ್ಟೆ ನಮ್ಮ ಹಾಗೆಯೇ ಇದೆ. ಅಲ್ಲಿ ಪ್ರತಿಯೊಂದು ಬಗೆಯ ಸಾಮಗ್ರಿಗಳು ದೊರೆಯುತ್ತವೆ. ಹೀಗಾಗಿ ದಿನವಿಡೀ ಪ್ರವಾಸಿಗರ ಓಡಾಟ ಇದ್ದೇ ಇರುತ್ತದೆ.

ಸಿಂಗಪುರದ ಸಂಚಾರ ವ್ಯವಸ್ಥೆ

ಇಲ್ಲಿನ ಸಂಚಾರ ವ್ಯವಸ್ಥೆ ಅಂತಾರಾಷ್ಟ್ರೀಯ ಗುಣಮಟ್ಟದ್ದು. ರಸ್ತೆಗಳು ಬಹಳ ಸುಂದರ ಹಾಗೂ ವ್ಯವಸ್ಥಿತವಾಗಿವೆ. ಇಲ್ಲಿ ದೊಡ್ಡ ಹಾಗೂ ಸಣ್ಣ ವಾಹನಗಳಿಗೆ ಪ್ರತ್ಯೇಕ ವ್ಯವಸ್ಥೆ ಇದೆ. ಪಾದಚಾರಿಗಳಿಗೆ, ಸೈಕಲ್ ಚಾಲಕರಿಗೆ ಪ್ರತ್ಯೇಕ ಲೇನ್‌ ಕಲ್ಪಿಸಲಾಗಿದೆ. ಪಾದಚಾರಿಗಳಿಗೆ ಅಲ್ಲಲ್ಲಿ ವಿಶ್ರಾಂತಿ ತಂಗುದಾಣಗಳನ್ನು ನಿರ್ಮಿಸಲಾಗಿದೆ. ಗಾಜಿನ ವಾಟರ್‌ಪ್ರೂಫ್‌  ಶೆಡ್‌ ಹಾಗೂ ದೊಡ್ಡ ದೊಡ್ಡ ವಾಟರ್‌ಪ್ರೂಫ್‌ ಟೆಂಟ್‌ಗಳನ್ನು ಅಳವಡಿಸಲಾಗಿದೆ. ಜನರು ಮಳೆ ಹಾಗೂ ಬಿಸಿಲಿನಿಂದ ರಕ್ಷಣೆ ಪಡೆದುಕೊಳ್ಳಲು ತಂಗುದಾಣಗಳಲ್ಲಿ ಮಲಗಿರುವುದು ಕೂಡ ಕಂಡುಬರುತ್ತದೆ.

ಸಿಂಗಪುರ್‌ ಪ್ರವಾಸಿಗರ ಸ್ವರ್ಗ. ಇಲ್ಲಿ ಸಿಂಗಪುರ್‌ ಪ್ಲೈರ್‌, ಯೂನಿವರ್ಸ್‌ ಸ್ಟುಡಿಯೊ, ಸೀ ಅಕ್ವೇರಿಯಂ, ಮೆರಿನಾ ಬೇ, ನೈಟ್‌ ಸಫಾರಿ, ಜೋರಾಂಗ್‌ ಬರ್ಡ್‌ ಪಾರ್ಕ್‌ಗಳಿವೆ. ಕೇಬಲ್ ಕಾರ್‌ ರೈಡ್‌, ಸ್ಕೈ ಟವರ್‌,  ಗಾರ್ಡನ್‌ ಬೈ ದಿ ಬೇ ಆಕರ್ಷಣೆಯ ಕೇಂದ್ರಗಳಾಗಿವೆ. ಸಿಂಗಪುರ್‌ ಮಾನವ ನಿರ್ಮಿತ ದೇಶ. ಅದನ್ನು ಪ್ರವಾಸಿಗರ ದೃಷ್ಟಿಯಿಂದ ಬಹಳ ಅಚ್ಚುಕಟ್ಟಾಗಿ ನಿರ್ಮಿಸಲಾಗಿದೆ. ಈ ಎಲ್ಲ ಕಡೆ ಸ್ಥಳಗಳು ಹಾಗೂ ಸಲಕರಣೆಗಳನ್ನು ಬಹಳ ಅಚ್ಚುಕಟ್ಟಾಗಿ ವಿನ್ಯಾಸ ಮಾಡಲಾಗಿದೆ.

ಇಲ್ಲಿಗೆ ಹೋಗಲು ಮರೆಯಬೇಡಿ

ಭಾರತೀಯರ ಆಕರ್ಷಣೆಯ ಕೇಂದ್ರಿವೆಂದರೆ ಇಲ್ಲಿನ ಲಿಟಲ್ ಇಂಡಿಯಾ. ಇಲ್ಲಿನ ಮುಸ್ತಾಫಾ ಮಾಲ್‌, ಬುಗ್ಗಿ ಸ್ಟ್ರೀಟ್‌, ಸಿಂಗಪುರ್‌ ಫ್ಲೈಯರ್‌ ಏಷ್ಯಾದ ಅತಿದೊಡ್ಡ ತೂಗುಯ್ಯಾಲೆಯಾಗಿದೆ. ಅದರ ಉದ್ದ 514 ಅಡಿ. ಅದರಲ್ಲಿ 28 ಏರ್‌ ಕಂಡೀಶನ್ಡ್ ಕ್ಯಾಪ್ಸೂಲ್‌ಗಳನ್ನು ಅವಳವಡಿಸಲಾಗಿದೆ. ಪ್ರತಿಯೊಂದು ಕ್ಯಾಪ್ಸೂಲ್‌‌ನಲ್ಲಿ 28 ಜನರು ಕುಳಿತು ಅದರ ಆನಂದ ಪಡೆಯಬಹುದಾಗಿದೆ.  ಮೆರಿಲಿನ್‌ ಪಾರ್ಕ್‌ನಲ್ಲಿ ಪ್ರವಾಸಿಗರ ದಂಡು ಸೇರಿರುತ್ತದೆ. ನಗರದ ಮಧ್ಯ ಭಾಗದಲ್ಲಿರುವ ಇದು ಮೆರೀನಾ ಬೇ ಸಮೀಪ ಇದೆ. ಇಲ್ಲಿಂದ ಹುಲಿಮುಖ ಹಾಗೂ ಮೀನಿನ ದೇಹದ ಆಕೃತಿಯೊಂದನ್ನು ನಿರ್ಮಿಸಲಾಗಿದೆ. ಸ್ಯಾಂಟೋಸಾದಲ್ಲಿ ಕೇಬಲ್ ಕಾರ್‌ ರೈಡ್‌ ಅತ್ಯಂತ ಜನಪ್ರಿಯವಾಗಿದೆ. 1650 ಮೀ. ಉದ್ದದ ರೋಪ್‌ ವೇಯನ್ನು ಕೇಬಲ್ ಕಾರ್‌ 15 ನಿಮಿಷದಲ್ಲಿ ತಲುಪುತ್ತದೆ. ಸ್ಯಾಂಟೋಸಾದಲ್ಲಿ  ಮೇಡಮ್ ಟುಸಾಡ್‌ ಮ್ಯೂಸಿಯಂ ಕೂಡ ಇದೆ. ಇಲ್ಲಿ ಪ್ರಸಿದ್ಧ ವ್ಯಕ್ತಿಗಳ ಮೇಣದ ಪ್ರತಿಮೆಗಳನ್ನು ಸ್ಥಾಪಿಸಲಾಗಿದೆ.

ಇಲ್ಲಿ ಇನ್ನೊಂದು ಬಗೆಯ ತೂಗುಯ್ಯಾಲೆಯಿದ್ದು, ಅದರಲ್ಲಿ 4 ಜನರು ಕುಳಿತುಕೊಂಡು ವಾತಾವರಣದ ಆನಂದ ಪಡೆಯಬಹುದು. ಬಲಿಷ್ಠವಾದ ಕಬ್ಬಿಣದ ಕಂಬಿಗಳ ಮುಖಾಂತರ ಇದು ಚಲಿಸುತ್ತದೆ. ಸೀಟಿನ ಮುಂಭಾಗದಲ್ಲಿ ಹ್ಯಾಂಡಲ್ ರೀತಿಯ ಒಂದು ಲಾಕ್‌ ಇರುತ್ತದೆ. ಅದರಿಂದ ನಿಮ್ಮ ಸೀಟನ್ನು ಲಾಕ್‌ ಮಾಡಲಾಗುತ್ತದೆ. ಇದು ಕೂಡ ರೋಪ್‌ ವೇ ಮುಖಾಂತರ ಚಲಿಸುತ್ತದೆ.

`ವಿಂಗ್ಸ್ ಆಫ್‌ ಟೈಮ್’ ಇದು ಸ್ಯಾಂಟೋಸಾದಲ್ಲಿ ಸಂಜೆ ಸಮಯದಲ್ಲಿ ನಡೆಯುವ ಒಂದು ಲೇಸರ್‌ ಶೋ ಆಗಿದೆ. ಸಿಸಿಲಿ ಬೀಚ್‌ನಲ್ಲಿ ಸಮುದ್ರದ ಅಲೆಗಳ ಮೇಲೆ ನಡೆಯುವ ಶೋ ಇದು. ಬಹಳ ಜನ ಇದಕ್ಕಾಗಿ ಕಾಯುತ್ತಿರುತ್ತಾರೆ.

ಯೂನಿವರ್ಸ್‌ ಸ್ಟುಡಿಯೋ ಏಷ್ಯಾದ ಎರಡನೇ ಅತಿ ದೊಡ್ಡ ಥೀಮ್ ಪಾರ್ಕ್‌ ಆಗಿದೆ. ಸ್ಯಾಂಟೋಸಾ ದ್ವೀಪದಲ್ಲಿ 49 ಎಕರೆ ಪ್ರದೇಶದಲ್ಲಿ ಇದು ಸ್ಥಾಪನೆಗೊಂಡಿದೆ.  ಇದರಲ್ಲಿ 21 ರೈಡ್‌ಗಳು, 6 ರೋಲರ್‌ಗಳು ಮತ್ತು 2 ವಾಟರ್‌ ರೈಡ್‌ಗಳಿವೆ. ಗಾರ್ಡನ್‌ ಬೈ ದಿ ಬೇ ಇಲ್ಲಿನ ಒಂದು ನೈಸರ್ಗಿಕ ಪಾರ್ಕ್‌. ಇಲ್ಲಿ ದಿನ ಭಾರಿ ಸಂಖ್ಯೆಯಲ್ಲಿ ಜನ ಬರುತ್ತಿರುತ್ತಾರೆ.

ಜೋಕಾಂಗ್‌ ಬರ್ಡ್‌ ಪಾರ್ಕ್‌ ಅತ್ಯಂತ ಪ್ರಸಿದ್ಧ ಪ್ರವಾಸಿ ತಾಣ. ಇಲ್ಲಿನ ಪಕ್ಷಿಗಳಿಗೆ ವೈವಿಧ್ಯಮಯ ವಾತಾವರಣ ಕಲ್ಪಿಸಲಾಗಿದೆ. ಇದೊಂದು ಅರಣ್ಯದ ರೀತಿಯಲ್ಲಿ ಭಾಸವಾಗುತ್ತದೆ. ನೈಟ್‌ ಸಫಾರಿಗಾಗಿ ಹಲವರು ನಿರೀಕ್ಷಿಸುತ್ತ ಕೂತಿರುತ್ತಾರೆ. ವಿಶ್ವದ ವಿಶಿಷ್ಟ ಮೊದಲ ನೈಟ್‌ ಸಫಾರಿಯಾದ ಇಲ್ಲಿ 120 ಬಗೆಯ 1040 ಪ್ರಾಣಿಗಳನ್ನು ವೀಕ್ಷಿಸಬಹುದಾಗಿದೆ. ಇದು 4 ಲಕ್ಷ ಚದರ ಮೀ. ಪ್ರದೇಶದಲ್ಲಿ ವ್ಯಾಪಿಸಿದೆ. ಪ್ರಾಣಿಗಳ ನೈಸರ್ಗಿಕ ಚೆಲ್ಲಾಟಗಳನ್ನು ಇಲ್ಲಿ ಕಣ್ತುಂಬಿಸಿಕೊಳ್ಳಬಹುದು.

–  ರಾಧಿಕಾ ರಾಜೇಶ್‌

ವೈಲ್ಡ್‌ ವೈಲ್ಡ್‌ ವೆಟ್‌ ವಾಟರ್‌ ಪಾರ್ಕ್‌ಗೆ ಹೋದವರಿಗೆ ಮಾತ್ರ ಅಲ್ಲಿ ನೀರಿನ ಚಿನ್ನಾಟದ ಕುರಿತು ವರ್ಣಿಸಲು ಸಾಧ್ಯ, ಅದನ್ನು ಅನುಭವಿಸಿದರೇನೇ ಚೆನ್ನ!

ಸಿಂಗಪುರದಲ್ಲಿನ ರಮ್ಯ ಲಿಟಲ್ ಇಂಡಿಯಾ, ಮೆರೀನಾ ಬೇನಲ್ಲಿ ಟೈಂಪಾಸ್‌ ಅದ್ಭುತ ಅನುಭವ!

ಸೆಂಟೋಸಾ ಕೇಬಲ್ ಕಾರ್‌ ರೈಡ್‌ ಸೆಂಟೋಸಾ ಕೇಬಲ್ ಕಾರ್‌ ರೈಡ್‌

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ