ದೀಪಾವಳಿಯ ದಿನಗಳಲ್ಲಿ ಅಕ್ಕಪಕ್ಕದ ಮನೆಗಳಲ್ಲಿ ನೆಂಟರಿಷ್ಟರು ಬಂದುಹೋಗುವುದು ನಡೆದಿತ್ತು. ಆದರೆ ಸುಮಿತ್ರಾ ಈ ಬಾರಿಯಾದರೂ ದೊಡ್ಡಕ್ಕ ದೀಪಾವಳಿಯಂದು ಬರುತ್ತಾಳೋ ಇಲ್ಲವೋ? ತನ್ನ ಮೇಲೆ ಇನ್ನೂ ಅವಳಿಗೆ ಕೋಪವಿದೆಯೇ? ಎಂಬ ಚಿಂತೆಯಲ್ಲಿ ಮುಳುಗಿದ್ದಳು. ಸ್ವಲ್ಪ ಹೊತ್ತಿನ ನಂತರ, ಈ ದೀಪಾವಳಿಗೆ ತಾನೇ ಅವಳಿಗೆ ಇಷ್ಟವಾದ ಸ್ವೀಟ್ಸ್ ನ್ನು ತೆಗೆದುಕೊಂಡು ಅವಳ ಮನೆಗೆ ಹೋಗಿ ಹಬ್ಬ ಆಚರಿಸುವುದು ಎಂದು ನಿರ್ಧರಿಸಿದಳು. ಆಗಲಾದರೂ ಅಕ್ಕನ ಮುನಿಸು ಕಡಿಮೆಯಾಗಬಹುದು.

ಗೌರವವಹಿಸಿ

ಹೌದು, ದೀಪಾವಳಿ ಎಂತಹ ಹಬ್ಬವೆಂದರೆ ಎಲ್ಲ ದೂರು, ದುಮ್ಮಾನಗಳನ್ನು ಮರೆತು ನಾವು ಒಂದಾಗಬೇಕು. ಏಕೆಂದರೆ ಜೊತೆಯಲ್ಲಿ ಸಂಬಂಧಿಗಳಿಲ್ಲದೆ ಅದು ಹಬ್ಬವೆನಿಸಿಕೊಳ್ಳುವುದಿಲ್ಲ. ನಿಮ್ಮ ಸಂಬಂಧಿಗಳನ್ನು ಗೌರವಿಸಬೇಕು. ಕೌಟುಂಬಿಕ ಜೀವನದಲ್ಲಿ ಎಲ್ಲ ಸಂಬಂಧಗಳಿಗೂ ಅದರದೇ ಆದ ಸ್ಥಾನವಿದೆ. ಭಿನ್ನ ಭಿನ್ನ ಸಂಬಂಧಗಳಲ್ಲಿ ಭಿನ್ನ ಭಿನ್ನ ಗುಣಗಳು ಇರುತ್ತವೆ. ಸಂಬಂಧಗಳಿಗೆ ತಕ್ಕಂತೆ ಸ್ಥಾನಮಾನಗಳಿರುತ್ತವೆ. ಎಲ್ಲಾ ಸಂಬಂಧಿಗಳೂ ಇತರರಿಂದ ಗೌರವ ಅಪೇಕ್ಷಿಸುತ್ತಾರೆ. ಅವರು ಪರಸ್ಪರ ಎಷ್ಟೇ ದೂರದಲ್ಲಿದ್ದರೂ ಯಥೋಚಿತ ಆದರ ನೀಡಲೇಬೇಕು. ಅದು ಹಬ್ಬಗಳ ದಿನಗಳಂದು ಇನ್ನೂ ಹೆಚ್ಚಾಗುತ್ತದೆ. ಹಬ್ಬಗಳಲ್ಲಿ ದೊಡ್ಡವರಿಗೆ ಚಿಕ್ಕವರು ಗೌರವ ಕೊಡಬೇಕು. ಚಿಕ್ಕವರನ್ನು ದೊಡ್ಡವರು ಆದರಿಸಬೇಕು. ಅದರಿಂದ ಪರಸ್ಪರರಲ್ಲಿ ಪ್ರೀತಿಯ ಭಾವನೆ ಹೆಚ್ಚುತ್ತದೆ.

ಹಬ್ಬಗಳಲ್ಲಿ ಹಿಂದಿನಂತಹ ಕಳೆ ಇಲ್ಲ

ಈಗ ಹಬ್ಬಗಳಲ್ಲಿ ಹಿಂದಿನಂತಹ ಉತ್ಸಾಹ ಕಳೆ ಇಲ್ಲ ಎಂದು ಜನ ಹೇಳುವುದನ್ನು ಕೇಳಿರಬಹುದು. ಏಕೆಂದರೆ ನಮ್ಮೆಲ್ಲರ ಬದುಕು ಬಹಳ ವ್ಯಸ್ತವಾಗಿದೆ. ಆದರೆ ಯಾವುದಾದರೂ ಹಬ್ಬ ಬಂದಾಗ ಒಂದು ರೀತಿಯ ಕೊರತೆ ಇರುತ್ತದೆ. ಒಮ್ಮೊಮ್ಮೆ ಕೆಲವು ನೆಂಟರಿಗೆ ನೀವು ಅವರನ್ನು ಮರೆತುಬಿಟ್ಟಿದ್ದೀರೆಂದು ನಿಮ್ಮ ಮೇಲೆ ಕೋಪ ಇರುತ್ತದೆ. ಈಗ ಅವರನ್ನು ಸಮಾಧಾನಪಡಿಸುವ ಸಮಯ. ದೀಪಾವಳಿ ಹಬ್ಬ ಎಲ್ಲರನ್ನೂ ಒಂದು ಸೂತ್ರದಲ್ಲಿ ಬಂಧಿಸುತ್ತದೆ. ಮುನಿಸಿಕೊಂಡ ನಿಮ್ಮ ನೆಂಟರನ್ನು ಈ ದೀಪಾವಳಿಯಂದು ಸ್ವಾಗತಿಸಿ ಅವರಿಗಿಷ್ಟವಾದ ಭೋಜನ ತಯಾರಿಸಿ ಬಡಿಸಿ. ಮನೆಯನ್ನು  ಚೆನ್ನಾಗಿ ಅಲಂಕರಿಸಿ. ನೆಂಟರು ತಮ್ಮ ಮನಸ್ತಾಪವನ್ನು ಮರೆತು ಖುಷಿಯಿಂದ ಹಬ್ಬದಲ್ಲಿ ಪಾಲ್ಗೊಳ್ಳುತ್ತಾರೆ. ನಂತರ ನಿಮ್ಮ ಮನೆಯಲ್ಲಿ ದೀಪಾವಳಿಯ ಬೆಳಕಿನೊಂದಿಗೆ ಸಂಬಂಧಗಳ ಬೆಳಕೂ ಹೊಳೆಯುತ್ತದೆ.

ಫೆಸ್ಟಿವಲ್ಸ್ ಎಂಜಾಯ್ಮಾಡಿ

ಎಲ್ಲಕ್ಕಿಂತಲೂ ಮುಖ್ಯವಾಗಿ ಅಗತ್ಯವಿರುವುದು ವೃದ್ಧರು ಹಾಗೂ ನಿಮಗೆ ಸರಿ ಮತ್ತು ತಪ್ಪಿನ ವ್ಯತ್ಯಾಸ ತಿಳಿಸುವ ಬಂಧುಗಳು. ಫೆಸ್ಟಿವಲ್ ನಿಮ್ಮ ಎಂಜಾಯ್‌ಮೆಂಟ್‌ನ ಸಾಧನವಷ್ಟೇ ಅಲ್ಲ ಮುಂದಿನ ಪೀಳಿಗೆಗಾಗಿ ನಿಮ್ಮ ಹಬ್ಬಗಳು, ಪದ್ಧತಿಗಳು ಮತ್ತು ಪರಂಪರೆಗಳ ಬಗ್ಗೆ ಹೆಚ್ಚು ಹೆಚ್ಚು ತಿಳಿದುಕೊಳ್ಳುವ ಅವಕಾಶ ಆಗಿದೆ. ಆರಂಭದಿಂದಲೇ ಹಬ್ಬಗಳ ಬಗ್ಗೆ ಮಕ್ಕಳಿಗೆ ತಿಳಿಸುವುದು ಅಗತ್ಯ. ಅವರು ಕೂಡ ತಮ್ಮ ಹಬ್ಬಗಳ ಬಗ್ಗೆ ಚೆನ್ನಾಗಿ ತಿಳಿದುಕೊಂಡಿರಬೇಕು. ತಮ್ಮ ಸಂಸ್ಕೃತಿಯನ್ನು ಜೀವನಪರ್ಯಂತ ಸಂಭಾಳಿಸುತ್ತಿರಬೇಕು. ಆದರೆ ನಿಮ್ಮ ಸ್ವಂತ ಸಂಬಂಧಿಕರೇ ನಿಮ್ಮಿಂದ ದೂರವಿರುತ್ತಾರೆಂದರೆ, ಇನ್ನು ನಿಮ್ಮ ಮಕ್ಕಳಿಗೆ ಈ ಹಬ್ಬಗಳ ಬಗ್ಗೆ ಅರ್ಥವಾಗುತ್ತದೆಯೇ? ನಿಮ್ಮ ಗೆಳೆಯರು ಮತ್ತು ನೆಂಟರನ್ನು ಭೇಟಿ ಮಾಡಿ. ಅವರ ಮನೆಗೆ ಹೋಗಿ. ನಿಮ್ಮ ಮನೆಗೆ ಬರಲು ಆಮಂತ್ರಿಸಿ. ದೀಪಾವಳಿಯಂದು ಅವರಿಗೆ ಇಷ್ಟವಾದ ಸ್ವೀಟ್ಸ್, ಡ್ರೈಫ್ರೂಟ್ಸ್, ಗಿಫ್ಟ್ ಇತ್ಯಾದಿಗಳನ್ನು ತೆಗೆದುಕೊಂಡು ಹೋಗಿ.

ಸ್ಪೆಶಲ್ ಆದ ಅನುಭವ

ಒಂದು ವೇಳೆ ನೀವು ನಿಮ್ಮ ಬಂಧುಗಳನ್ನು ಹಬ್ಬಕ್ಕೆ ಕರೆಯಬೇಕು. ಅವರೊಡನೆ ನಿಮ್ಮ ಸಂಬಂಧ ಉಳಿಸಿಕೊಳ್ಳಬೇಕೆಂದುಕೊಂಡಿದ್ದರೆ, ಅವರನ್ನು ಒಪ್ಪಿಸುವುದು ಬಹಳ ಮುಖ್ಯವಾಗುತ್ತದೆ. ಅದಕ್ಕಾಗಿ ನೀವು ಅವರಿಗೆ ಒಳ್ಳೆಯ ಟ್ರೀಟ್‌ಮೆಂಟ್‌ ಕೊಡಬೇಕು. ಅವರು ನಿಮಗೆಷ್ಟು ಸ್ಪೆಶಲ್ ಎನ್ನುವ ಅನುಭವ ಉಂಟು ಮಾಡಿಸಿ. ನಿಮ್ಮ ಬದುಕಿನಲ್ಲಿ ಅವರಿಗೆಷ್ಟು ಮಹತ್ವ ಇದೆ ಎಂದು ತಿಳಿಯಪಡಿಸಿ.

ಹಳೆಯ ವಿಷಯಗಳನ್ನು ಮರೆತುಬಿಡಿ

ಹಬ್ಬಗಳ ಉದ್ದೇಶವೇ ಎಲ್ಲರನ್ನೂ ಪರಸ್ಪರ ಜೋಡಿಸುವುದು. ಜೊತೆಗೆ ನೀರಸ ಜೀವನದಲ್ಲಿ ಸಂತಸ ತುಂಬುವುದು. ಆದ್ದರಿಂದ ಅಂತಹ ಸಮಯದಲ್ಲಿ ನೀವು ಜಗಳ ಮರೆತು ನಿಮ್ಮ ಬಂಧುಗಳೊಡನೆ ಬೆರೆಯಬೇಕು. ಹಳೆಯ ವಿಷಯಗಳನ್ನು ಮನಸ್ಸಿನಲ್ಲಿ ಇಟ್ಟುಕೊಂಡರೆ ವೃಥಾ ಒತ್ತಡ ಉಂಟಾಗುತ್ತದೆ. ನಿಮ್ಮ ರಿಲೇಷನ್‌ ಶಿಪ್‌ ಇನ್ನಷ್ಟು ಕೆಡುತ್ತದೆ.

ನಿಮ್ಮ ಸಂಬಂಧಗಳು ಹಾಳಾಗಬಾರದೆಂದು ಬಯಸಿದರೆ, ಅವರ ಬಳಿ ಹೋಗಿ ಈ ಮಾತನ್ನು ಅಗತ್ಯವಾಗಿ ಹೇಳಿ. ಎದುರಿಗೆ ಹೇಳಲು ಧೈರ್ಯವಿಲ್ಲದಿದ್ದರೆ ಮೊಬೈಲ್‌ನಲ್ಲಿ ಎಸ್‌ಎಂಎಸ್‌ ಕಳಿಸಬಹುದು. ನಿಮ್ಮದೇನೂ ತಪ್ಪಿರದಿದ್ದರೂ ಅವರನ್ನು ಒಪ್ಪಿಸಲು ನೀವೇ ಮುಂದುವರಿಯುವುದರಲ್ಲಿ ಯಾವ ತಪ್ಪೂ ಇಲ್ಲ. ಅವರು ಖಂಡಿತಾ ಉತ್ತರಿಸುತ್ತಾರೆ ಮತ್ತು ನೀವು ಅವರೂ ಸೇರಿ ದೀಪಾವಳಿಯನ್ನು ವಿಜೃಂಭಣೆಯಿಂದ ಆಚರಿಸಬಹುದು.

ಎಂ. ವಂದನಾ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ