ಅನೇಕ ವರ್ಷಗಳಿಂದ ಈವರೆಗೂ ತನ್ನ ತಾಜಾತನ, ರುಚಿ ಸುಗಂಧಗಳಿಂದಾಗಿ ಅಪಾರ ಬೇಡಿಕೆ ಹಾಗೂ ಗುಣಮಟ್ಟ ಉಳಿಸಿಕೊಂಡಿರುವ ವೀಳ್ಯದೆಲೆ, ಕರ್ನಾಟಕದ ಸಾಂಸ್ಕೃತಿಕ ನಗರದ ಒಂದು ಪಾರಂಪರಿಕ ಬೆಳೆ ಎಂದೇ ಹೇಳಬಹುದು.

ಒಂದು ಶುಭ ಕಾರ್ಯವಾಗಲಿ ಅಥವಾ ಮತ್ತಿನ್ಯಾವುದೇ ಸಮಾರಂಭವಿರಲಿ, ಅಲ್ಲಿ ವೀಳ್ಯದೆಲೆ ಪ್ರಮುಖ ಪಾತ್ರ ವಹಿಸುತ್ತದೆ. ಎಲ್ಲಾ ಶುಭಕ್ಕೂ ವೀಳ್ಯ ಇರಲೇಬೇಕು. ಮದುವೆ, ಮುಂಜಿ, ಜನ್ಮದಿನ, ವಿಶೇಷ ಔತಣ ಕೂಟಗಳು ಮುಂತಾದ ಅನೇಕ ಸಮಾರಂಭಗಳಲ್ಲೂ ವೀಳ್ಯದೆಲೆ ಕಾರ್ಯಗಳು ಪ್ರಮುಖ ಸ್ಥಾನ ಪಡೆಯುತ್ತವೆ. ಹೊಸದಾಗಿ ಮದುವೆಯಾದವರಿಗಂತೂ ಹಿರಿಯರು ಎಲೆ ಅಡಕೆ ಹಾಕ್ಕೋಳ್ರೀ ಎಂದು ಹೇಳಲು ಮರೆಯುವುದಿಲ್ಲ.

ಊಟವಾದ ಮೇಲೆ `ವೀಳ್ಯದೆಲೆ ಇಲ್ವಾ?’ ಎಂದು ಕೇಳುವುದು ಸಾಮಾನ್ಯ. ಅದರಲ್ಲೂ ಎಲೆ ಸಿಕ್ಕಿದರೂ `ಮೈಸೂರ ಎಲೆ ಇದ್ದಿದ್ದರೆ……… ಚೆನ್ನಾಗಿರ್ತಿತ್ತು!’ ಎನ್ನುವ ಒಂದು ಡೈಲಾಗ್‌ ಕೂಡ ಅನೇಕರ ಬಾಯಿಂದ ತಂತಾನೆ ಬಂದುಬಿಡುತ್ತದೆ.

images1

ಒಟ್ಟಾರೆ ಮೈಸೂರು ವೀಳ್ಯದೆಲೆ ಈಸ್‌ ಎ ಮಸ್ಟ್ ಎನ್ನಬಹುದು! ಭಾವೈಕ್ಯತೆಗೆ ಹೆಸರಾದ ತಮಿಳಿನ ರಾಷ್ಟ್ರಕವಿ ಸುಬ್ರಹ್ಮಣ್ಯಭಾರತಿ ತನ್ನ ಕಾವ್ಯ ಲಹರಿಯಲ್ಲಿ, ಕಾವೇರಿ ನದಿಯ ತೀರದಲ್ಲಿ ಬೆಳೆದ ಮೈಸೂರು ವೀಳ್ಯದೆಲೆ ಸವಿದ ರಸಿಕರೇ ಧನ್ಯರು ಎಂದಿದ್ದಾರೆಂದರೆ ಅದರ ಮಹಿಮೆ ನಾವು ಗುರುತಿಸಬಹುದು. ಎಲೆ ಅಡಕೆ ಜಗಿಯುವ ಪ್ರಿಯರಿಗೆ ಮೈಸೂರು ವೀಳ್ಯದೆಲೆ ಎಂದರೆ ಮೈಸೂರುಪಾಕ್‌ ತಿಂದಷ್ಟೇ ಖುಷಿ, ಏಕೆಂದರೆ ಖಾರ ಕಡಿಮೆ ಇದ್ದು  ಬಾಯಿಗೆ ಒಂದಷ್ಟು ಹಿತವಾದ ರುಚಿ ನೀಡುತ್ತದೆ.

ಮೈಸೂರು ವೀಳ್ಯದೆಲೆ ತನ್ನ ವಿಶಿಷ್ಟ ರುಚಿಯಿಂದಾಗಿ ರಾಜ್ಯದೆಲ್ಲೆಡೆ ಪ್ರಖ್ಯಾತಿಯನ್ನು ಪಡೆದಿದೆ. ಸದಾ ಬೇಡಿಕೆ ಹೊಂದಿರುವ ಈ ಬೆಳೆ ರೈತರಿಗೆ ಎಂದಿಗೂ ನಷ್ಟ ಉಂಟು ಮಾಡಿಲ್ಲ. ಅಪಾರ ಬೇಡಿಕೆಯ ಕಾರಣದಿಂದಾಗಿ ಒಂದು ಕಾಲದಲ್ಲಿ ಮೈಸೂರಿನ ಸುತ್ತಮುತ್ತ ರೈತರು ಸಾವಿರಾರು ಎಕರೆ ವೀಳ್ಯದೆಲೆ ಬೆಳೆಯನ್ನು ಬೆಳೆಯುತ್ತಿದ್ದರು. ಒಂದು ಕಾಲದಲ್ಲಿ ಮೈಸೂರು ವೀಳ್ಯದೆಲೆ ಹೊರಗೆ ಭಾರೀ ಬೇಡಿಕೆ ಹೊಂದಿತ್ತು. ನಗರ ಸಮೀಪದ ನಾಚನಹಳ್ಳಿ ಒಂದರಲ್ಲೇ ಸುಮಾರು ಐನೂರಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ ವೀಳ್ಯದೆಲೆ ಬೆಳೆಯಲಾಗುತ್ತಿತ್ತು. ಅಲ್ಲದೆ ಹೊಸತೋಟ, ವಿದ್ಯಾರಣ್ಯಪುರಂ, ಎಲೆತೋಟ, ಸೇಂಟ್‌ ಮೇರೀಸ್‌ ವೃತ್ತದ ಬಸವನಗುಡಿ ತೋಟಗಳಲ್ಲಿ ಬೆಳೆಯುವ ವೀಳ್ಯದೆಲೆಗೆ ಈಗಲೂ ಬೇಡಿಕೆ ಹೆಚ್ಚು.

beetal-leaf

2-12 ಗುಂಟೆ ಜಮೀನು ಹೊಂದಿರುವ ರೈತರ ಜೀವನಕ್ಕೆ ವೀಳ್ಯದೆಲೆಯೇ ಆಧಾರ. ಬೇಡಿಕೆಯ ದಿನಗಳಲ್ಲಿ ಒಂದು ಕವಳಿಗೆ ಮೈಸೂರು ವೀಳ್ಯದೆಲೆಗೆ 25-30 ರೂ.ಗಳಿಷ್ಟಿದ್ದರೂ ಮಾರುಕಟ್ಟೆಯಲ್ಲಿ ಅದು ಬಿಕರಿಯಾಗಿ ಹೋಗಿರುತ್ತದೆ. ಹಾಗಾಗಿಯೇ ಚಿತ್ರ ಸಾಹಿತಿಯೊಬ್ಬರು `ಮಲ್ನಾಡ್‌ ಅಡಕೆ ಮೈಸೂರು ವೀಳ್ಯದೆಲೆ ಬೆರೆತರೆ ಕಂಪೂ…..’ ಎಂದು `ಸಿಂಹಾದ್ರಿಯ ಸಿಂಹ’ ಚಿತ್ರದಲ್ಲಿ ಹಾಡು ಬರೆದಿದ್ದರು.

ಅಳಿವಿನ ಅಂಚಿನಲ್ಲಿ ವೀಳ್ಯದೆಲೆ ತೋಟ ಉಳುವವನೇ ಭೂಮಿಯ ಒಡೆಯ ಕಾಯ್ದೆಯಡಿ ಸುಮಾರು ಒಂದು ಸಾವಿರ ರೈತರು ಈ ತೋಟಗಳ ಮಾಲೀಕರಾದರು. ಅಂದಿನಿಂದ ನಿರಂತರವಾಗಿ ನಡೆಸಿಕೊಂಡು ಬಂದ ಈ ವೀಳ್ಯದೆಲೆ ಕೃಷಿಕರು ಈಗ ಸಂಕಷ್ಟದಲ್ಲಿದ್ದಾರೆ. ತೋಟಗಳ ಬಾವಿಗಳು ಬರಿದಾಗಿ ನೀರಿನ ಸಮಸ್ಯೆ ಎದುರಾಗಿದೆ. ಹಾಗಾಗಿ ಅನೇಕ ಕಡೆ ಚರಂಡಿಯ ನೀರು ಬಳಕೆ ಅನಿವಾರ್ಯವಾಗಿದೆ. ಇದರಿಂದ ರೈತರು ಅನೇಕ ರೀತಿಯ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಎಲೆ ಬಳ್ಳಿ ಜೊತೆಗೆ ಅಡಕೆ ಗಿಡಗಳಿಗೂ ಸಹ ರೋಗ ಸೋಂಕಿದೆ.

ಇವೆಲ್ಲಕ್ಕಿಂತ ಹೆಚ್ಚಾಗಿ ನಗರಾಭಿೃದ್ಧಿ ಪ್ರಾಧಿಕಾರ ತಮ್ಮ ಭೂಮಿ ಕಬಳಿಸಿಕೊಳ್ಳಬಹುದೆಂಬ ಆತಂಕ. ಇತ್ತೀಚೆಗೆ ಭೂಮಿ ದರ ಹೆಚ್ಚಾಗಿ ಕಷ್ಟದಲ್ಲಿದ್ದ ರೈತರು ತಮ್ಮ ಭಾಗದ ಜಮೀನುಗಳನ್ನು ಗುಂಟೆ ಲೆಕ್ಕದಲ್ಲೇ ಮಾರಿಕೊಂಡಿರುವುದು ಹಾಗೂ ಬೆಳೆಗಾರರಿಗೆ ಸಾಲದ ಬಾಧೆ ಮುಂತಾದ ಅನೇಕ ಸಮಸ್ಯೆಗಳಿಂದಾಗಿ ವೀಳ್ಯದೆಲೆ ಕೃಷಿ ಈಗ ಕುಂಠಿತವಾಗಿದೆ. ಮೈಸೂರು ಪ್ರಾಂತ್ಯದಲ್ಲಿ ರಾಜಮನೆತನದ ಸಂಸ್ಥಾನದಿಂದ ವೀಳ್ಯದೆಲೆಯನ್ನು ಪಾರಂಪರಿಕ ಬೆಳೆಯನ್ನಾಗಿ ಬೆಳೆಯಲಾಗುತ್ತಿದೆ. ನಶಿಸಿ ಹೋಗುತ್ತಿರುವ ಈ ತಳಿಯನ್ನು ಸಂರಕ್ಷಿಸಲು ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಈ ಬೆಳೆಯ ರಕ್ಷಣೆ ಬಗ್ಗೆ ತೋಟಗಾರಿಕೆಯ ಕೃಷಿ ಚಿಂತಕರು ಆಲೋಚಿಸಿದ್ದಾರೋ ಇಲ್ಲವೋ? ಇನ್ನು ಮುಂದಾದರೂ ಮೈಸೂರು ವೀಳ್ಯದೆಲೆ ಬೆಳೆಗೆ ಹಾಗೂ ಈ ಬೆಳೆ ಬೆಳೆಯುತ್ತಿರುವ ರೈತರ ಬಗ್ಗೆ ಕಾಳಜಿ ವಹಿಸಲಿ. ರೈತ ಸಂಘದ ಮುಖಂಡರು ವೀಳ್ಯದೆಲೆಯಂಥ ಪಾರಂಪರಿಕ ಬೆಳೆಯ ಸಂರಕ್ಷಣೆ ಬಗ್ಗೆ ಗಮನಹರಿಸಲಿ.

ಸಾಲೋಮನ್‌.  

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ