ಈಗಾಗಲೇ `ತೇರೆ ಮೇರೆ ಸಪ್ನೆ’ ಹಾಗೂ `ರುಕ್‌ ಜಾನಾ ನಹೀ’ ಧಾರಾವಾಹಿಗಳಲ್ಲಿ ನಟಿಸಿ ಸೈ ಎನಿಸಿಕೊಂಡ ಪರಿಧಿ ಶರ್ಮ, `ಜೋಧಾ ಅಕ್ಬರ್‌’ನಂಥ ಐತಿಹಾಸಿಕ ಧಾರಾವಾಹಿಯಲ್ಲೂ ನಾಯಕಿ ಜೋಧಾಳ ಪಾತ್ರ ನಿರ್ವಹಿಸಿ ಮನೆ ಮನೆಯ ಮಾತಾಗಿದ್ದಾರೆ. ವೀಕ್ಷಕರು ಈಕೆಯ ನಟನೆಗೆ ಮಾರುಹೋಗಿ ಹೊಗಳುತ್ತಿರುತ್ತಾರೆ. ಪರಿಧಿ ಹೇಳುವುದೆಂದರೆ, ದೇಶವಿಡೀ ನಡೆದ 7,000 ಆಡಿಷನ್‌ಗಳಲ್ಲಿ ಈಕೆಯನ್ನು ಈ ಧಾರಾವಾಹಿಗೆ ಆರಿಸಲಾಯ್ತಂತೆ. ಅದು ತನ್ನ ಪಾಲಿನ ಸೌಭಾಗ್ಯವೆನ್ನುತ್ತಾರೆ.

ಇಂದೋರ್‌ ನಿವಾಸಿ ಪರಿಧಿ ಜೋಧಾಳ ಪಾತ್ರಕ್ಕಾಗಿ ಕತ್ತಿವರಸೆ ಹಾಗೂ ಕುದುರೆ ಸಾರಿಯಂಥ ಕ್ಲಿಷ್ಟ ಕಲೆಗಳಲ್ಲೂ ಪಳಗಿದ್ದಾರೆ. ಜೊತೆಗೆ ದಿನವಿಡೀ ಶೂಟಿಂಗ್‌ಗಾಗಿ ಭಾರಿ ಭಾರಿ ರಾಜಾಸ್ಥಾನಿ ಪೋಷಾಕುಗಳನ್ನು ಧರಿಸಿ ರೂಢಿಸಿಕೊಂಡರು. ತಮ್ಮ ರಾಜಾಸ್ಥಾನಿ ಶೈಲಿಯ ಉಚ್ಚಾರಣೆಯನ್ನೂ ಎಷ್ಟೋ ಸುಧಾರಿಸಿಕೊಂಡರು. ಇವತ್ತಿಗೂ ಸಹ ಅವರು ಪ್ರತಿ ದೃಶ್ಯಕ್ಕೂ ತಮ್ಮ ಗುರು ಕೃಷ್ಣಾ ಚೌಧರಿ ಜೊತೆ ಚರ್ಚಿಸದೆ ಇರುವುದಿಲ್ಲ. ಆಕೆ ತಮ್ಮ ಫ್ರೆಂಡ್‌, ಫಿಲಾಸಫರ್‌ ಮತ್ತು ಗೈಡ್‌ ಎನ್ನುತ್ತಾರೆ. ಕೃಷ್ಣಾ ನಿಜ ಅರ್ಥದಲ್ಲಿ ತಮ್ಮನ್ನು ಕಲಾವಿದೆ ಆಗಿಸಿದ್ದಾರೆ ಎನ್ನುತ್ತಾರೆ. ಯಾವಾಗ ತಮ್ಮ ಪಾತ್ರದ ಬಗ್ಗೆ ಜನ ಮೆಚ್ಚಿ ಮಾತನಾಡುತ್ತಾರೋ, ಆಗ ತಮ್ಮ ನಟನೆ ಸಾರ್ಥಕವಾಯ್ತು ಎನ್ನುತ್ತಾರೆ.

ಇಂದೂ ಸಹ ಪ್ರತಿ ಎಪಿಸೋಡ್‌ನ ತಮ್ಮ ಜೋಧಾ ಪಾತ್ರಕ್ಕಾಗಿ 2-3 ತಾಸಿನ ಪೂರ್ವ ತಯಾರಿ ಮಾಡಿಕೊಳ್ಳುತ್ತಾರೆ.

ಮುಂಬೈಗೆ ಬರುವ ಮುನ್ನ ಪರಿಧಿ ಪೂನಾದ ಇಂದಿರಾ ಕಾಲೇಜಿನಲ್ಲಿ ಎಂಬಿಎ ಪೂರೈಸಿದ್ದರು. ಆಕೆಗೆ ಇತಿಹಾಸದಲ್ಲಿ ಅಂಥ ವಿಶೇಷ ಅಭಿರುಚಿ ಏನೂ ಇರಲಿಲ್ಲ. ಜೋಧಾಳಂಥ ಐತಿಹಾಸಿಕ ಪಾತ್ರಕ್ಕಾಗಿ ಸಾಕಷ್ಟು ಪುಸ್ತಕಗಳನ್ನು ಪರಾಮರ್ಶಿಸಿ, ತಂದೆಯ ಸಲಹೆಯಂತೆ ಇತಿಹಾಸದ ಬಗ್ಗೆ ವಿವರವಾಗಿ ಮಾಹಿತಿ ಪಡೆದುಕೊಂಡರು. ಅವರ ಮನೆಯವರು ಮಾತ್ರವಲ್ಲದೆ ನೆರೆಹೊರೆ, ಬಂಧುಬಳಗ, ಪರಿಚಿತರೆಲ್ಲರೂ ಇದರ ಪ್ರತಿ ಕಂತನ್ನೂ ನೋಡಿ ವಿಮರ್ಶಿಸುತ್ತಾರೆ. ಮುಂಬೈಗೆ ಬಂದು ಸಾಕಷ್ಟು ಕಷ್ಟಪಟ್ಟ ನಂತರವೇ ಈಕೆಗೆ ತಮ್ಮ ಮೊದಲ ಧಾರಾವಾಹಿ `ತೇರೇ ಮೇರೆ ಸಪ್ನೆ’ಯಲ್ಲಿ  ಪಾತ್ರ ಸಿಕ್ಕಿದ್ದು.

ಪರಿಧಿ ಹೇಳುತ್ತಾರೆ, ಎಲ್ಲ ಸುಲಭವಾಗಿ ಸಿಕ್ಕಿಬಿಟ್ಟಿದ್ದರೆ, ನನ್ನನ್ನು ಹಿಡಿಯುವವರೇ ಇರುತ್ತಿರಲಿಲ್ಲ. ಕಷ್ಟಪಟ್ಟು ಸಾಧಿಸಿದಾಗ ಮಾತ್ರವೇ ಅದರ ಮಹತ್ವ ತಿಳಿಯುವುದು. ಪುಣೆಯ ಹುಡುಗಿ ಮುಂಬೈನಲ್ಲಿ ಈ ಮಟ್ಟಕ್ಕೆ ಬೆಳೆಯುವಲ್ಲಿ ಅವರ ಕುಟುಂಬದವರ ಸಹಕಾರ ಅಪಾರ. ಪರಿಧಿ ವಿವಾಹಿತೆ. ಇವರ ಪತಿ ಕಾರ್ಪೊರೇಟ್‌ ಅಧಿಕಾರಿ. ಈಕೆಯ ಎಲ್ಲಾ ಕೆಲಸಗಳಿಗೂ ಅವರ ಹೆಚ್ಚಿನ ಸಹಾಯವಿರುತ್ತದೆ.

ಶೂಟಿಂಗ್‌ ಮಧ್ಯೆ ಬ್ರೇಕ್‌ ಸಿಕ್ಕಾಗ ಪರಿಧಿ ಗಂಡನ ಆಫೀಸ್‌ಗೆ ಹೋಗುತ್ತಾರೆ, ಅಥವಾ ಸತತ ಶೂಟಿಂಗ್‌ ಇದ್ದಾಗ ಪತಿ ಈಕೆಯ ಸ್ಪಾಟ್‌ಗೇ ಬಂದುಬಿಡುತ್ತಾರೆ. ಆಕೆ ಅವರಿಗೆ ಪ್ರತಿದಿನ ಫೋನ್‌ ಮಾಡುತ್ತಾ ಕೌಟುಂಬಿಕ ವಿಷಯ ಮಾತನಾಡುತ್ತಾರೆ. ಆಕೆ ಪ್ರಕಾರ, ಮದುವೆ ಮಾಡಿಕೊಂಡ ಮಾತ್ರಕ್ಕೆ ಯಾರದೇ ಕೆರಿಯರ್‌ ಇರಲಿ, ಇಳಿಮುಖ ಆಗುವುದಿಲ್ಲ, ಬದಲಿಗೆ ಅದಕ್ಕೆ ಇನ್ನೊಂದು ಹೊಸ ಆಯಾಮ ಸಿಗುತ್ತದೆ. ಜೀವನದ ನೈಜತೆ, ವಾಸ್ತನತೆ ಅರಿತಾಗಲೇ ಅದನ್ನು ನಾವು ಧಾರಾವಾಹಿಗಳ ಪಾತ್ರಗಳಲ್ಲಿ ಜೀವ ತುಂಬಿ ನಟಿಸಲು ಸಾಧ್ಯ. ಈಕೆಯ ಮುಖ್ಯ ಆಶಯವೆಂದರೆ, ಎಲ್ಲಾ ಸುಶಿಕ್ಷಿತ ಯುವತಿಯರಿಗೂ, ಅವರು ಯಾವ ಕ್ಷೇತ್ರದಲ್ಲಿ ತಮ್ಮ ಕೆರಿಯರ್‌ ಬೆಳೆಸಿಕೊಳ್ಳಲು ಬಯಸುವರೋ ಖಂಡಿತಾ ಅವರ ಮನೆಯವರು ಅದಕ್ಕೊಂದು ಅವಕಾಶ ಕಲ್ಪಿಸಿಕೊಡಬೇಕು.

ವಾಸ್ತವ ಜೀವನದಲ್ಲಿ ಪರಿಧಿ ಶಾಂತ, ಸೌಮ್ಯ ಸ್ವಭಾದವರು. ಆಕೆಗೆ ಭಾರತೀಯ ಉಡುಗೆಗಳೇ ಇಷ್ಟ. ಒಮ್ಮೆ ಕಾಲೇಜಿನ ದಿನಗಳಲ್ಲಿ ಆಕೆ ಜೀನ್ಸ್ ಟೀಶರ್ಟ್‌ ಕೊಂಡುತಂದಾಗ, ತಂದೆ ಬಹಳ ಕೋಪಿಸಿ ಕೊಂಡಿದ್ದರಂತೆ. ಸದಾ ಸಲ್ವಾರ್‌ ಸೆಟ್‌, ಪಂಜಾಬಿ ಕುರ್ತಾ, ಸೀರೆ ಉಡುವಂತೆ ಸಲಹೆ ನೀಡಿದರಂತೆ. ಆದರೆ ಈಗ ಈಕೆ ಈ ಮೇಲಿನ ಉಡುಗೆಗಳು ಮಾತ್ರವಲ್ಲದೆ, ಪಾತ್ರಕ್ಕೆ ತಕ್ಕಂತೆ ಎಲ್ಲಾ ಆಧುನಿಕ ಡ್ರೆಸ್‌ ಧರಿಸುತ್ತಾರೆ.

ಆಕೆ ಶುದ್ಧ ಸಸ್ಯಾಹಾರಿ. ಊಟದ ಜೊತೆ ಜೊತೆಗೆ ಹಣ್ಣುಹಂಪಲು, ಜೂಸ್‌ ಇಷ್ಟವಂತೆ. ಎಂದೂ ಜಂಕ್‌ ಫುಡ್‌ ಬಯಸುವುದಿಲ್ಲ. ಜಿಮ್ ಗೆ ಹೋಗಿ ವರ್ಕ್‌ ಔಟ್‌ ಮಾಡುತ್ತಾರೆ. ಸಮಯಾನುಕೂಲವಿದ್ದಂತೆ ಅಗತ್ಯವಾಗಿ ಯೋಗ, ಮೆಡಿಟೇಷನ್‌ ಮಾಡುತ್ತಾರೆ.

ಪರಿಧಿ ಒಬ್ಬ ಸಾಧಾರಣ ಹುಡುಗಿಯ ದಿನಚರ್ಯೆ ಫಾಲೋ ಮಾಡುತ್ತಾರೆ. ತಮ್ಮ ಪ್ರತಿ ಧಾರಾವಾಹಿಯ ಆದರ್ಶವನ್ನೂ ವಾಸ್ತವ ಜೀವನದಲ್ಲಿ ರೂಢಿಸಿಕೊಳ್ಳುತ್ತಾರೆ.

– ಜಿ. ಸುಮಾ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ