40 ದಾಟಿದ ನಂತರ ಮುಖ ಹಾಗೂ ಕೈಕಾಲುಗಳ ಮೇಲೆ ಉಂಟಾಗುವ ಸುಕ್ಕು, ನೆರಿಗೆ, ಕಂಗಳ ಕೆಳಗಿನ ಕಪ್ಪು ಉಂಗುರಗಳು, ನರೆತ ಕೂದಲು, ದೇಹದಲ್ಲಿ ಸುಸ್ತು, ಬೇಡ ಎನಿಸುವ ಕಾಮ, ಮಂಡಿ ನೋವು, ಆಯಾಸ, ಒತ್ತಡ, ಸದಾ ಬೇಸರದ ಭಾವ…. ನಿಮ್ಮನ್ನು ಬೇಗನೆ ವೃದ್ಧಾಪ್ಯದತ್ತ ಎಳೆದೊಯ್ಯುತ್ತದೆ. ಹೆಚ್ಚುತ್ತಿರುವ ವಯಸ್ಸನ್ನು ನಿಯಂತ್ರಿಸಲು ನಾವು ಹಲವಾರು ಬಗೆಯ ಲೋಶನ್, ಕ್ರೀಂ, ವಿವಿಧ ಕಾಸ್ಮೆಟಿಕ್ಸ್ ಬಳಸುತ್ತಲೇ ಇರುತ್ತೇವೆ. ಎನರ್ಜಿ ಟಾನಿಕ್, ವಿಟಮಿನ್ ಮಾತ್ರೆಗಳ ಸೇವನೆ… ಇಷ್ಟೆಲ್ಲ ಮಾಡಿದರೂ ಮುಖದಲ್ಲಿ ಮುದಿತನದ ಆರಂಭದ ಸೂಚನೆ ಕಾಣಿಸುತ್ತದೆ, ವಯಸ್ಸಾಗುತ್ತಿರುವ ಲಕ್ಷಣಗಳನ್ನು ಮುಚ್ಚಿಡಲಾಗದು.
ಇದೀಗ ಬಂದಿದೆ ಹೊಸ ವರ್ಷ….. ಹೊಸ ಬೆಳಕಿನ ಉದಯ….. ಹೊಸ ವಿಚಾರಧಾರೆಗಳು ಹಾಗೂ 2020ರ ನಿಮ್ಮ ಮೊದಲ ಸಂಕಲ್ಪ, ಹೇಗಾದರೂ ಹೆಚ್ಚುತ್ತಿರುವ ವಯಸ್ಸಿಗೆ ಬ್ರೇಕ್ ಹಾಕಬೇಕೆನ್ನುವುದು. ಹೌದು, ಇದು ತಮಾಷೆಯ ವಿಷಯವಲ್ಲ. ಸೀರಿಯಸ್ ಆಗಿ ಇಲ್ಲಿನ ಸಲಹೆ ಅನುಸರಿಸಿದರೆ ಅದು ಖಂಡಿತಾ ಸಾಧ್ಯ. ನೀವು ದೃಢಮನಸ್ಸು ಮಾಡಿ ಈ ನಿಮ್ಮ ಸಂಕಲ್ಪಕ್ಕೆ ಬದ್ಧರಾಗಿರಬೇಕಷ್ಟೆ. ಕೈಯಲ್ಲಿ ಹಿಡಿದ ಮರಳು ಬೆರಳ ಸಂಧಿಯಲ್ಲಿ ಸೋರಿಹೋಗುವಂತೆ ದಿನೇದಿನೇ ಕರಗುತ್ತಿರುವ ಆಯುಸ್ಸನ್ನು, ವೃದ್ಧಾಪ್ಯದ ಗುರುತುಗಳನ್ನು ಖಂಡಿತಾ ತಡೆಯಬಹುದು. ಹೆಚ್ಚುತ್ತಿರುವ ವಯಸ್ಸನ್ನು ತಗ್ಗಿರುವಂತೆ ತೋರಿಸಬಹುದು. ಇದಕ್ಕಾಗಿ ದುಬಾರಿ ಕ್ರೀಂ, ಲೋಶನ್ ಎನರ್ಜಿ ಟಾನಿಕ್ ಗಳ ಅಗತ್ಯವಿಲ್ಲ. ಮನೆಯಲ್ಲೇ ಲಭ್ಯವಿರುವ ವಸ್ತುಗಳಿಂದಲೇ ಇದನ್ನು ಸಾಧಿಸಬಹುದು. ಇವುಗಳ ದೆಸೆಯಿಂದಲೇ ನಮ್ಮ ಪ್ರಾಚೀನ ಕಾಲದ ಹಿರಿಯರು 100 ವರ್ಷಗಳಿಗೂ ಮೇಲ್ಪಟ್ಟು ಸ್ವಸ್ಥ, ಆನಂದಮಯ ಜೀವನ ನಡೆಸುತ್ತಿದ್ದರು. ಹೌದು, ಆ್ಯಂಟಿ ಏಜಿಂಗ್ ಫುಡ್ ಕುರಿತಾಗಿ ನೀವು ಅಗತ್ಯ ಅರಿಯಬೇಕು.
ನಮ್ಮ ಅಡುಗೆಮನೆಯಲ್ಲೇ ಲಭ್ಯವಿರುವ ಇಂಥ ಹಲವಾರು ವಸ್ತುಗಳನ್ನು ನಿತ್ಯ ಬಳಸುವುದರಿಂದ ದಿನೇದಿನೇ ಹೆಚ್ಚುವ ವಯಸ್ಸನ್ನು ತಡೆಯಬಹುದು. ಈ ರೀತಿ ಚಿರಯೌವನ ಉಳಿಸಿಕೊಳ್ಳಲು ಇದು ಮೂಲ ಇಂಧನವಾಗಿದೆ.
ಆಹಾರ ಪದ್ಧತಿಯ ಇಂಥ ಆರೋಗ್ಯಕರ ಅಭ್ಯಾಸದಿಂದ ಅದರ ಪ್ರಭಾವವನ್ನು ನಿಮ್ಮ ಚರ್ಮ, ದೇಹ ಮತ್ತು ಮುಖದ ಮೇಲೆ ಮೂಡುವಂತೆ ಮಾಡಿ. ಈ ಹೊಸ ವರ್ಷದಲ್ಲಿ ನೀವು ಆ್ಯಂಟಿ ಏಜಿಂಗ್ ಫುಡ್ ನ್ನು ನಿಮ್ಮದಾಗಿಸಿ ಕೊಂಡು ಚಿರಯೌವನ ಉಳಿಯುವಂತೆ ಮಾಡಿ. ಇದರಿಂದಾಗಿ ದೀರ್ಘ ಕಾಲದವರೆಗೆ ಯೌವನದ ಜೊತೆಗೆ ಆರೋಗ್ಯ ಸೌಂದರ್ಯವನ್ನೂ ಕಾಪಾಡಿಕೊಳ್ಳಬಹುದು. ವೃದ್ಧಾಪ್ಯದ ರೋಗಗಳು ನಿಮ್ಮನ್ನು ಎಂದೂ ಕಾಡಲಾರವು.
ಮೊಟ್ಟೆ :
ಇದರಲ್ಲಿ ವಿಟಮಿನ್ಸ್ ತುಂಬಿರುತ್ತದೆ. ಇದು ಹೆಚ್ಚುತ್ತಿರುವ ವಯಸ್ಸನ್ನು ನಿಯಂತ್ರಿಸುವಲ್ಲಿ ಪೂರಕ. ಪ್ರತಿದಿನ 2 ಮೊಟ್ಟೆ ಸೇವಿಸುವುದರಿಂದ ದೇಹ ನಶಿಸುತ್ತಿರುವ ತನ್ನ ಜೀವಕೋಶಗಳನ್ನು ಪುನರುಜ್ಜೀವನ ಗೊಳಿಸಲು ಸಾಕಷ್ಟು ಪ್ರಮಾಣದಲ್ಲಿ ಕೊಬ್ಬು ಮತ್ತು ಪ್ರೋಟೀನ್ ಲಭ್ಯವಾಗುತ್ತದೆ. ಹೀಗಾಗಿ ಇಂದಿನಿಂದಲೇ ನಿಮ್ಮ ರೆಗ್ಯುಲರ್ ಉಪಾಹಾರದಲ್ಲಿ ಅಗತ್ಯ 2 ಮೊಟ್ಟೆ ಇರಲಿ.
ಸೋಯಾ :
ಸೋಯಾಬೀನ್ಸ್, ಸೋಯಾಹಿಟ್ಟು, ಸೋಯಾ ಅರೆಯ ಹಾಲು, ಇದರ ಟೋಫು (ಹಾಲಿನಿಂದ ಪನೀರ್ ತರಹ ತಯಾರಿಸಿಕೊಳ್ಳಿ, ರೆಡಿಮೇಡ್ ಸಹ ಲಭ್ಯ) ಇತ್ಯಾದಿಗಳಲ್ಲಿ ಕಡಿಮೆ ಕೊಬ್ಬಿನಂಶ ಆದರೆ ಹೆಚ್ಚು ಕ್ಯಾಲ್ಶಿಯಂ ಅಂಶ ಇರುತ್ತದೆ. ಸೋಯಾ ಉತ್ಪನ್ನಗಳು ದೇಹವನ್ನು ಆರೋಗ್ಯಕರವಾಗಿ ಹಾಗೂ ಯೌವನ ಉಳಿಸಿಕೊಳ್ಳುವಂತೆ ಮಾಡುತ್ತವೆ. ಇದರ ಬಳಕೆಯಿಂದ ಎಷ್ಟೋ ಬಗೆಯ ಕ್ಯಾನ್ಸರ್ ರೋಗ ಹತ್ತಿರ ಸುಳಿಯುವುದಿಲ್ಲ.
ದಾಳಿಂಬೆ :
ಇದು ಏಜಿಂಗ್ ಪ್ರಕ್ರಿಯೆಯನ್ನು ತಗ್ಗಿಸಿ ದೇಹದ ತಂತುಗಳಲ್ಲಿ ಆಕ್ಸಿಡೇಶನ್ ಕ್ರಿಯೆಯನ್ನೂ ತಗ್ಗಿಸುತ್ತದೆ. ಇದನ್ನು ನಿಯಮಿತವಾಗಿ ಸೇವಿಸುವುದರಿಂದ ಚರ್ಮ ಸ್ವಸ್ಥ ಹಾಗೂ ಕಾಂತಿಯುತ ಆಗುತ್ತದೆ. ಪ್ರತಿದಿನ 1 ಮಾಗಿದ ದಾಳಿಂಬೆಯ ಸೇವನೆ ನಿಮ್ಮ ಯೌವನ ಉಳಿಸಿಕೊಳ್ಳುವುದಕ್ಕೆ ಪುಷ್ಟಿ ನೀಡುತ್ತದೆ.
ಗ್ರೀನ್ ಟೀ :
ಇದರಲ್ಲಿ ಆ್ಯಂಟಿ ಆಕ್ಸಿಡೆಂಟ್ಸ್ ಧಾರಾಳ ತುಂಬಿವೆ. ಇದರಿಂದ ಹೆಚ್ಚುತ್ತಿರುವ ವಯಸ್ಸಿನ ಪ್ರಭಾವ ಎಷ್ಟೋ ತಗ್ಗುತ್ತದೆ. ಇದು ನಿಮ್ಮ ಜೀರ್ಣಕ್ರಿಯೆಯನ್ನೂ ಸದಾ ಕ್ರಿಯಾಶೀಲವಾಗಿಡುತ್ತದೆ. ನೀವು ಚಿರಯೌವನ ಉಳಿಸಿಕೊಳ್ಳಲು ಬಯಸಿದರೆ, ದಿನಕ್ಕೆ 2 ಸಲ ಅಗತ್ಯ ಗ್ರೀನ್ ಟೀ (ಬೇರೆ ಕಾಫಿ, ಟೀ ಬೇಡ) ಸೇವಿಸಿ.
ಹುಳಿ ಹಳದಿ ಹಣ್ಣುಗಳು :
ಮೂಸಂಬಿ, ಕಿತ್ತಳೆ ಹಣ್ಣು, ದ್ರಾಕ್ಷಿ, ನಿಂಬೆ ಇತ್ಯಾದಿಗಳಲ್ಲಿ ವಿಟಮಿನ್ ಸಿ ಧಾರಾಳ ತುಂಬಿರುತ್ತದೆ. ಇವುಗಳಲ್ಲಿ ಬಲೋಫ್ಲಾವಿನಾಯ್ಡ್ಸ್ ಮತ್ತು ಲೈಮೋನಿನ್ ಅಂಶಗಳಿರುತ್ತವೆ. ಈ ಅಂಶಗಳು ಕ್ಯಾನ್ಸರ್ ಉಂಟು ಮಾಡುವ ಕಾರ್ಸಿನೋಜನ್ಸ್ ನ್ನು ದೇಹದಿಂದ ಹೊರತೆಗೆಯಲು ಸಹಕಾರಿ. ಎಲ್ಲಾ ಹುಳಿ ಹಣ್ಣುಗಳಲ್ಲೂ ಆ್ಯಂಟಿ ಆಕ್ಸಿಡೆಂಟ್ಸ್ ಧಾರಾಳ ಅಡಗಿರುತ್ತವೆ. ಹೀಗಾಗಿ ಇಂದಿನಿಂದಲೇ ಇವನ್ನು ನಿತ್ಯ ಸೇವಿಸಲು ಆರಂಭಿಸಿ. ಬೆಳಗ್ಗೆ ನಿಂಬೆ ನೀರು ಕುಡಿಯಿರಿ, ಮಧ್ಯಾಹ್ನ 1 ಆರೆಂಜ್ ಸೇವಿಸಿ, ರಾತ್ರಿ ಲೈಟ್ ಡಿನ್ನರ್ ಜೊತೆ 1 ಮೂಸಂಬಿ ಸೇವಿಸಿ.
ಬ್ಲೂಬೆರಿ :
ಇದು ದ್ರಾಕ್ಷಿ, ಕಿತ್ತಳೆಗಳಿಗಿಂತ ಖಂಡಿತಾ ದುಬಾರಿ ಹಣ್ಣು. ಆದರೆ ಇದರಲ್ಲಿ ಅನೇಕ ಮಹತ್ವಪೂರ್ಣ ವಿಟಮಿನ್, ಪಾಲಿಫೆನಾಲ್ ಅಂಶಗಳಿರುತ್ತಿವೆ. ಇದರ ನಿತ್ಯ ಸೇವನೆಯಿಂದ ಏಜಿಂಗ್ ತಗ್ಗುವುದಲ್ಲದೆ, ಮಧುಮೇಹ, ಕ್ಯಾನ್ಸರ್ ನಂತರ ಕಾಯಿಲೆ ಹತ್ತಿರ ಸುಳಿಯದಂತೆ ಮಾಡಬಲ್ಲದು. ಹೀಗಾಗಿ ನಿಮ್ಮ ದಿನನಿತ್ಯದ ಡಯೆಟ್ ನಲ್ಲಿ ಬ್ಲೂಬೆರಿಯನ್ನು ಅಗತ್ಯ ಸೇರಿಸಿಕೊಳ್ಳಿ. ಇದು ನಿಮ್ಮ ಯೌವನ ಉಳಿಸಿಕೊಡುತ್ತದೆ.
ಮೊಸರು :
ಇದರಲ್ಲಿ ಮಾನವನಿಗೆ ಅನುಕೂಲಕರವಾದ ಬ್ಯಾಕ್ಟೀರಿಯಾ ಅಡಗಿದೆ. ಅದು ಆಹಾರ ಜೀರ್ಣವಾಗಲು ಸಹಕಾರಿ. ಇದರಲ್ಲಿ ಧಾರಾಳ ಕ್ಯಾಲ್ಶಿಯಂ ಅಡಗಿದೆ. ಮೂಳೆ ಸವೆತ ಅಥವಾ ಆಸ್ಟೂಪೊರೋಸಿಸ್ ಕಾಡದಂತೆ ರಕ್ಷಿಸುತ್ತದೆ. ಜೊತೆಗ ಚರ್ಮ ಕಾಂತಿಯುತವಾಗಿ ಹೊಳೆಯುವಂತೆ ಮಾಡುತ್ತದೆ.
ಮೊಳಕೆ ಕಾಳುಗಳು :
ಇದರ ಸೇವನೆಯಿಂದ ಹಲವು ಬಗೆಯ ರೋಗಗಳಿಂದ ಮುಕ್ತಿ ಸಿಗುತ್ತದೆ. ಇದರಲ್ಲಿ ಲಭ್ಯವಿರುವ ಬೀಟಾಕೆರೋಟಿನ್, ಐನೋಥಿಯೋ ಸೈನೆಟ್ಸ್ ನಂಥ ಅಂಶಗಳು ಕ್ಯಾನ್ಸರ್ ತಡೆಯುವಲ್ಲಿ ಪೂರಕ. ಇದರ ನಿಯಮಿತ ಸೇವನೆಯಿಂದ ಜೀವನವಿಡೀ ನೀವು ಯಂಗ್ ಎನರ್ಜಿಟಿಕ್ ಆಗಿರಬಹುದು.
ಸ್ಟ್ರಾಬೆರಿ :
ಇದರಲ್ಲಿ ರಕ್ತದಲ್ಲಿ ಸುಲಭವಾಗಿ ವಿಲೀನಗೊಳ್ಳಬಲ್ಲ ಫೈಬರ್ ಅಂಶವಿದೆ. ಇದು ಬ್ಲಡ್ ಶುಗರ್ ಲೆವೆಲ್ ನ್ನು ಎಷ್ಟೋ ನಿಯಂತ್ರಿಸುತ್ತದೆ. ಜೊತೆಗೆ ಇದರಲ್ಲಿ ಧಾರಾಳವಾಗಿ ಆ್ಯಂಟಿ ಆಕ್ಸಿಡೆಂಟ್ಸ್ ಕೂಡ ಇವೆ. ಅದು ಚಿರಯೌವನ ಉಳಿಸಿಕೊಡುವಲ್ಲಿ ಪೂರಕ.
ಟೊಮೇಟೊ ಕಲ್ಲಂಗಡಿ ಹಣ್ಣು :
ಇವೆರಡರಲ್ಲೂ ಲೈಕೋಪೇನ್ ಸಮೃದ್ಧವಾಗಿದೆ. ಅದು ಕ್ಯಾನ್ಸರ್ ಆಗುವ ಸಾಧ್ಯತೆಗಳನ್ನು ಎಷ್ಟೋ ತಗ್ಗಿಸುತ್ತವೆ. ಇವೆರಡನ್ನೂ ಆದಷ್ಟೂ ಹಸಿಯಾಗಿಯೇ ಸೇವಿಸಬೇಕು, ಪ್ರೋಟೀನ್ ಮೂಲ ಇದಾದ್ದರಿಂದ ಪೌಷ್ಟಿಕಶಕ್ತಿ ಕೊಡುತ್ತದೆ.
ನಟ್ಸ್ :
ಈ ಡ್ರೈ ಫ್ರೂಟ್ಸ್ ನಲ್ಲಿ ಆರೋಗ್ಯಕರ ಕೊಬ್ಬಿನಂಶ ಇರುತ್ತದೆ. ಇವು ಎಲಾಸ್ಟಿನ್ ಕೊಲೋಜನ್ ನ ಲಾಭ ನೀಡುತ್ತಾ ಚರ್ಮದ ಕಾಂತಿ ಉಳಿಸುತ್ತವೆ. ಪ್ರತಿದಿನ 1 ಮುಷ್ಟಿ ನಟ್ಸ್ ಸೇವನೆಯಿಂದ ಎಷ್ಟೋ ಆ್ಯಂಟಿ ಆಕ್ಸಿಡೆಂಟ್ಸ್ ನಿಮ್ಮ ದೇಹಕ್ಕೆ ಸೇರುತ್ತದೆ. ಇದನ್ನು ಅತಿಯಾಗಿ ಸೇವಿಸಬಾರದು. ಹೆಚ್ಚು ಕ್ಯಾಲೋರಿ ತುಂಬಿರುತ್ತದೆ. 2 ಪಿಸ್ತಾ, 2 ಗೋಡಂಬಿ, 2 ಅಖರೋಟ್, 1 ಬಾದಾಮಿ, 2 ದ್ರಾಕ್ಷಿ ನಿಮ್ಮ ಬೆಳಗಿನ ಜಾಗಿಂಗ್ ನಂತರ ಮೊದಲ ಆಹಾರವಾಗಿ ಸೇವಿಸಲು ಪರ್ಫೆಕ್ಟ್ ಎನಿಸುತ್ತದೆ.
– ಜಿ. ನಿರ್ಮಲಾ