ಡಿನ್ನರ್‌ ಮಾಡುತ್ತಲೇ ದಿನಪತ್ರಿಕೆ ನೋಡುತ್ತ ಅಮರ್‌ ಮುಖ ಒಮ್ಮೆಲೆ ಕೋಪಕ್ಕೆ ತಿರುಗಿತು. ಪತ್ನಿ ಸೀಮಾ ಮುಖವನ್ನು ಅವಲೋಕಿಸುತ್ತಾ ಕೇಳಿದಳು, “ಯಾಕೆ ಏನಾಯ್ತು? ನೀವು ಟೆನ್ಶನ್‌ ನಲ್ಲಿ ಇದ್ದಂತೆ ಕಾಣ್ತಿದೆಯಲ್ಲ?”

“ಇದು ಟೆನ್ಶನ್‌ ವಿಷಯವೇ. ಸರ್ಕಾರ ಎಷ್ಟೇ ಒಳ್ಳೆಯ ಕೆಲಸ ಮಾಡಿದರೂ, ವಿರೋಧ ಪಕ್ಷದ ಕೆಲಸ ಟೀಕೆ ಮಾಡುವುದು. ಯಾರು ನೋಟು ರದ್ಧತಿಯನ್ನು ಟೀಕಿಸುತ್ತಿದ್ದಾರೊ ಅವರೆಲ್ಲ ಭ್ರಷ್ಟಾಚಾರದ ಬೇರುಗಳಿದ್ದಂತೆ!”

ಸೀಮಾ ವ್ಯಂಗ್ಯವಾಗಿ, “ಅದ್ಹೇಗೆ ಸ್ವಲ್ಪ ಹೇಳ್ತಿರಾ? ನೋಟು ಬ್ಯಾನ್‌ ನಿಂದ ಏನು ಲಾಭ ಆಯಿತು? ಬೆಲೆ ಏರಿಕೆಯಿಂದ ಏನೇನು ಸಮಸ್ಯೆ ಆಯಿತು ಗೊತ್ತಲ್ಲ. ಹಾಲು, ಹಣ್ಣು, ತರಕಾರಿಯಲ್ಲಿಯೇ ನಮ್ಮ ಬಜೆಟ್‌ ಬಿಗಡಾಯಿಸುತ್ತಿದೆ. ಬಡವರ ಬಗೆಗಂತೂ ಕೇಳಲೇಬೇಡಿ. ಅವರು ಹೇಗೆ ಜೀವನ ಸಾಗಿಸುತ್ತಾರೊ ಏನೋ? ಈ ಸರ್ಕಾರವಂತೂ ಹೀಗೆ…..”

ಅಮರ್‌ ಅಂತೂ ಕೈಯಲ್ಲಿದ್ದ ತುತ್ತನ್ನು ಪ್ಲೇಟ್‌ ನಲ್ಲಿಯೇ ಎಸೆಯುತ್ತ, “ಯಾಕೆ, ಏನೇನೊ ಹೇಳ್ತಿದೀಯಾ? ನಿನಗೆ ರಾಜಕೀಯದ ಬಗ್ಗೆ ಸ್ವಲ್ಪ ತಿಳಿವಳಿಕೆ ಇಲ್ಲ. 60 ವರ್ಷಗಳಿಂದ ಪಸರಿಸಿದ ಕೊಳೆಯನ್ನು ಸ್ವಚ್ಛಗೊಳಿಸಲು ಸ್ವಲ್ಪ ಸಮಯ ಬೇಕೇಬೇಕು. ನೀನೂ ಸಹ ಮೂರ್ಖರ ಥರ ಕಾರಣವಿಲ್ಲದೆಯೇ ಸರ್ಕಾರವನ್ನು ನಿಂದಿಸುತ್ತಿದೀಯಾ?”

ಸೀಮಾಳಿಗಂತೂ ಭಾರಿ ಕೋಪ ಬಂತು. ಅವಳೂ ತನ್ನ ಊಟವನ್ನು ಅರ್ಧದಲ್ಲಿಯೇ ಬಿಟ್ಟು ತಟ್ಟೆಯನ್ನು ಅಡುಗೆಮನೆಗೆ ಹೋಗಿ ಕುಕ್ಕಿದಳು.

ಅಮರ್‌ ಕೂಡ ಏನೇನೋ ಬಡಬಡಿಸುತ್ತ, ಕಾಲು ಅಪ್ಪಳಿಸುತ್ತ ಮನೆಯಿಂದ ಹೊರಗೆ ಹೋದ. ಅಂತಹ ದೃಶ್ಯ ಅವರ ಮನೆಯಲ್ಲಿ ಸಾಮಾನ್ಯವಾಗಿತ್ತು. ಇಬ್ಬರಲ್ಲೂ ರಾಜಕೀಯದ ಬಗ್ಗೆ ತದ್ವಿರುದ್ಧ ಅಭಿಪ್ರಾಯಗಳಿದ್ದವು.

ಮನೆಯಲ್ಲಿ ಕಲಹ

ರಮೇಶ್‌ ಹಾಗೂ ಶಿಸ್ಪಾಳ ವೈವಾಹಿಕ ಜೀವನ ಸುಖಕರವಾಗಿದೆ. ಇಬ್ಬರಿಗೂ 4 ವರ್ಷದ ಮಗ ಕೂಡ ಇದ್ದಾನೆ. ಅರ್ಜುನ್ ರಾಮಪಾಲ್ ‌ಹಾಗೂ ಅವರ ಹೆಂಡತಿ ತಮ್ಮ ಸಂಬಂಧವನ್ನು ಕೊನೆಗೊಳಿಸಲು ನಿರ್ಧರಿಸಿದ್ದನ್ನು ಕೇಳಿ ಶಿಲ್ಪಾಳ ಬಾಯಿಂದ ಪ್ರತಿಕ್ರಿಯೆ ಹೊರಬಂತು, “ಈ ಪುರುಷರೇ ಹಾಗೆ.”

ರಮೇಶ್‌ ಗೆ ಆ ಮಾತು ಬಹಳ ಕಹಿ ಎನಿಸಿ ಅವನು ಹೇಳಿದ, “ಎಲ್ಲರೂ ಅಲ್ಲ.”

“ಏಕೆ? ಇನ್ನೂ ಉದಾಹರಣೆ ಬೇಕಾ? ಹೃತಿಕ್‌ ಸುಜೈನಾ ಫರ್ಹಾನ್‌ ಅಧುನಾ ಕೂಡ ಹಾಗೆಯೇ ಅಲ್ವಾ?”

“ಶಿಲ್ಪಾ, ಅವರೆಲ್ಲ ಸಿನಿಮಾ ಮಂದಿ. ಸಾಮಾನ್ಯ ಜನರ ಜೀವನ ಅವರಿಗಿಂತ ಭಿನ್ನವಾಗಿರುತ್ತದೆ.”

“ಸಾಮಾನ್ಯ ಜನರು ಪಕ್ಕದ ಮನೆಯ ಚಂದ್ರಶೇಖರ್‌ ಅವರನ್ನು ಮರೆತುಬಿಟ್ರಾ? ಅನಾರೋಗ್ಯಪೀಡಿತ ತಾಯಿಯನ್ನು ನೋಡಲು ಪತ್ನಿ ತವರಿಗೆ ಹೋಗುತ್ತಿದ್ದಂತೆ ಇತ್ತ ಚಂದ್ರಶೇಖರ್‌ ಬೇರೊಬ್ಬ ಮಹಿಳೆಯ ಜೊತೆ ಚಕ್ಕಂದ ಆಡಲು ಶುರು ಮಾಡಿದರು. ನನಗಂತೂ ಪುರುಷರ ಮೇಲಿನ ವಿಶ್ವಾಸವೇ ಹೊರಟುಹೋಗಿದೆ.”

ರಮೇಶ್‌ ಪ್ರೀತಿಯಿಂದ, “ನೀನು ಬೇರೆಯವರ ವಿಷಯಕ್ಕೆ ಸಂಬಂಧಪಟ್ಟಂತೆ ಇಷ್ಟೊಂದು ಸೀರಿಯಸ್‌ ಆಗುತ್ತಿರುವುದೇಕೆ? ನಿನ್ನ ಗಂಡ ನಿನ್ನನ್ನು ಬಹಳ ಪ್ರೀತಿ ಮಾಡ್ತಾನಲ್ವಾ….. ನಿನಗೆ ಇಷ್ಟೇ ಸಾಕಿತ್ತು, ಬೇರೇನೂ ಬೇಕಿಲ್ಲ ಅಲ್ವ?”

“ಆದರೆ ಇವೆಲ್ಲ ವಿಷಯಗಳು ಗಂಡಸರ ಮೇಲೆ ಕಣ್ಮುಚ್ಚಿ ವಿಶ್ವಾಸ ಇಡಬಾರದು ಎಂಬುದನ್ನು ತೋರಿಸುತ್ತದೆ ಅಲ್ವಾ?”

ಈಗ ರಮೇಶ್‌ಗೆ ಸಿಟ್ಟು ಬಂತು ಅವನು, “ಪುರುಷರೇ ಯಾವಾಗಲೂ ತಪ್ಪು ಮಾಡುತ್ತಾರಾ? ಮಹಿಳೆಯರೇನು ತಪ್ಪು ಮಾಡಲ್ವಾ? ನನಗೆ ಈ ರೀತಿಯ ಮಾತುಗಳು ಇಷ್ಟವಾಗುವುದಿಲ್ಲ.”

“ಹೌದು, ನಿಮಗೆ ಆ ಮಾತುಗಳು ಏಕೆ ಇಷ್ಟವಾಗುವುದಿಲ್ಲ ಅಂದರೆ ನೀವು ಪುರುಷರೇ ಅಲ್ವ ಅದಕ್ಕೆ.”

ಒಂದು ಸಣ್ಣ ಮಾತಿಗೆ ಇಬ್ಬರ ನಡುವೆ ವಾದವಿವಾದ ಶುರುವಾಯಿತು ಹಾಗೂ ಇಬ್ಬರ ಮೂಡ್‌ ಹಾಳಾಗಿ ಹೋಯಿತು.

ಸಂಜೆಯ ವಾಕಿಂಗ್‌ ಬಳಿಕ ಮನೆಗೆ ಬಂದ ಸುಷ್ಮಾಳ ಮೂಡ್‌ ಹದಗೆಟ್ಟು ಹೋಗಿತ್ತು. ಆಕೆಯ ಇಬ್ಬರು ಮಕ್ಕಳು ಚೇತನ್‌ ನಿಖಿತಾ ಯಾವುದೊ ಪ್ರಾಜೆಕ್ಟ್ ಕೆಲಸದಲ್ಲಿ ಮಗ್ನರಾಗಿದ್ದರು. ಅಮ್ಮನ ಹಾಳಾದ ಮೂಡ್‌ ನೋಡಿ ಅವರು ಕೇಳಿಯೇ ಬಿಟ್ಟರು, “ಯಾಕಮ್ಮಾ, ನಿನ್ನ ಮೂಡ್‌ ಇಷ್ಟೊಂದು ಗರಂ ಆಗಿದೆಯಲ್ಲಮ್ಮ?”

“ಇಂದಿನ ಹುಡುಗರನ್ನು ನೋಡಿ ತಲೆ ತಿರುಗುತ್ತೆ. ರಸ್ತೆ ಬದಿ ನಿಂತು ಸಿಗರೇಟ್‌ ಸೇದುತ್ತಾರೆ. ಅವರ ಜೊತೆ ಹುಡುಗೀರು ತುಂಡು ಲಂಗ ಹಾಕ್ಕೊಂಡು ಅವರೂ ದಮ್ಮು ಎಳೆಯುತ್ತಿದ್ದರು. ಹುಡುಗರು ಹುಡುಗೀರು ದಾರಿ ತಪ್ಪುತ್ತಿದ್ದಾರೆ ಅವರಿಗೆ ಕಪಾಳಕ್ಕೆ ಬಾರಿಸೋಣ ಅನಿಸ್ತಾ ಇತ್ತು.”

ಚೇತನ್‌ ಹೇಳಿದ, “ಅಮ್ಮಾ, ಅವರು ಹಾಗೆ ಮಾಡಿದ್ರೆ, ನಿನಗೇನಮ್ಮ ತೊಂದರೆ? ನಾವು ಹಾಗೆಲ್ಲ ಮಾಡ್ತೀದೀರಾ ಹೇಳು ನೋಡೋಣ. ಬೇರೆಯವರು ಹಾಳಾದ್ರೆ ನಿನಗೇನಮ್ಮ…..?”

ಹೀಗೆ ಮಾಡದಿರಿ

ಸುಷ್ಮಾ ಬಹಳ ಹೊತ್ತಿನ ತನಕ ಸಿಡುಕುತ್ತಲೇ ಇದ್ದಳು. ತನ್ನ ಮಕ್ಕಳ ಎದುರು ಯುವ ಪೀಳಿಗೆಯನ್ನು ಬಾಯಿಗೆ ಬಂದಂತೆ ತೆಗಳುತ್ತಲೇ ಇದ್ದಳು. ಮಕ್ಕಳಿಗೆ ತಮ್ಮ ಕೆಲಸ ಮಾಡಿಕೊಳ್ಳುವುದು ಕಷ್ಟವೆನಿಸಿತು. ಬಾಹ್ಯ ಸಂಗತಿಗಳ ಬಗ್ಗೆ ಮನೆಯಲ್ಲಿ ವಿವಾದ ಮಾಡಿಕೊಳ್ಳುವುದು ನಿರರ್ಥಕ ವಿಷಯ. ಬಾಹ್ಯ ವ್ಯಕ್ತಿಗಳ ಜೀವನದಲ್ಲಿ ಏನು ನಡೆಯುತ್ತಿದೆ. ಅವರ ಸ್ಥಿತಿಗತಿ ಏನು? ಅವರ ವಿಚಾರವೇನು? ಈ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಬಹುದು, ಅದಕ್ಕಾಗಿ ಜಗಳವಾಡುವುದು ನಿಮ್ಮ ಅಮೂಲ್ಯ ಸಮಯ ಹಾಳು ಮಾಡಿಕೊಂಡಂತೆ. ನಿಮಗೆ ಯಾವಾಗ ಜೊತೆ ಜೊತೆಗೆ ಕಳೆಯಬಹುದಾದ ಅವಕಾಶ ದೊರೆಯುತ್ತದೋ ಅದನ್ನು ತಪ್ಪಿಸಿಕೊಳ್ಳಬೇಡಿ. ಆ ಸಮಯವನ್ನು ಯಾವುದೇ ಟೆನ್ಶನ್‌ ಇಲ್ಲದೆ ಕಳೆಯಿರಿ. ಬೇರೆಯವರ ಬಗ್ಗೆ ವ್ಯರ್ಥವಾಗಿ ಚಿಂತಿಸಿ ನಿಮ್ಮ ಮನಶ್ಶಾಂತಿ ಕಳೆದುಕೊಳ್ಳಬೇಡಿ.

ಪ್ರೇಮಲತಾ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ