ಪ್ರವಾಸ ಎಂದಾಗ ಅದಕ್ಕೊಂದಷ್ಟು ಟ್ರಾವೆಲ್ಸ್ ಏಜೆನ್ಸಿಗಳು, ಅವರಿಗೆ ಇಂತಿಷ್ಟು ಹಣ ಕೊಟ್ಟರಾಯಿತು, ಪ್ರವಾಸಿ ತಾಣಗಳನ್ನು ತೋರಿಸುವುದರಿಂದ ಹಿಡಿದು, ಊಟ, ಉಪಚಾರ ಎಲ್ಲದರ ಜವಾಬ್ದಾರಿಯೂ ಅವರದೇ. ನಿರಾಳವಾಗಿ ಅವರ ಜೊತೆ ಹೋಗಿ ಬಂದರಾಯಿತು. ಅಲ್ಲಿ ಅವರು ಏನು ತೋರಿಸುತ್ತಾರೋ ಅಥವಾ ಎಷ್ಟು ತೋರಿಸುತ್ತಾರೋ ಅಷ್ಟು ಮಾತ್ರವೇ ನೋಡಲು ಸಾಧ್ಯ. ನಮಗೆ ಇಷ್ಟ ಇವರು ಯಾವುದೇ ಸ್ಥಳವನ್ನು ವಿವರವಾಗಿ ನೋಡಲಾಗುವುದಿಲ್ಲ. ಆದ್ದರಿಂದ ಈಗಿನ ಯುವ ಜನತೆ ತಾವೇ ಪ್ರವಾಸ ಯೋಜಿಸುತ್ತಾರೆ. ತಮಗಿಷ್ಟ ಬಂದ ರೀತಿಯಲ್ಲಿ ಪ್ರವಾಸದ ಸ್ಥಳಗಳ ಪಟ್ಟಿ, ಐಟಿನರಿಯನ್ನು ಸಿದ್ಧಪಡಿಸುತ್ತಾರೆ. ಇದಕ್ಕಿಂತ ವಿಭಿನ್ನವಾದ ಮತ್ತೊಂದು ರೀತಿಯ ಪ್ರವಾಸವೆಂದರೆ ತಾವೇ ವಾಹನವನ್ನು ಡ್ರೈವ್ ಮಾಡಿಕೊಂಡು ಒಂದಷ್ಟು ಊರುಗಳನ್ನು ನೋಡಿಕೊಂಡು ಬರುತ್ತಾರೆ. ಅನೇಕ ಬಾರಿ ಇಲ್ಲಿ ಪ್ರವಾಸದ ರಂಜನೆಯೇ ಮುಖ್ಯವಾಗಿರುತ್ತದೆ. ಇದನ್ನು ರೋಡ್ ಟ್ರಿಪ್ ಎಂದು ಹೆಸರಿಸುತ್ತಾರೆ. ಇದಕ್ಕಿಂತ ಭಿನ್ನವಾದದ್ದು, ಒಂದು ಗುರಿಯನ್ನಿಟ್ಟುಕೊಂಡು, ಈ ಪ್ರವಾಸದಲ್ಲಿ ಹಾದು ಹೋಗುವ ಊರುಗಳಲ್ಲಿ ತಾವು ಅಂದುಕೊಂಡ ಗುರಿಯನ್ನು ಸಾಧಿಸುವ ವಿಷಯ ಅಲ್ಲಿ ಮುಖ್ಯವಾಗಿರುತ್ತದೆ. ಬೆಂಗಳೂರಿನ ನಾಲ್ವರೂ ಮಹಿಳೆಯರು ಒಂದು ಗುರಿಯನ್ನಿಟ್ಟುಕೊಂಡು ಬೆಂಗಳೂರಿನಿಂದ ಧನುಷ್ಕೋಡಿಯವರೆಗೆ ಇಂತಹ ಒಂದು ರೋಡ್ ಟ್ರಿಪ್ ನ್ನು ಆಯೋಜಿಸಿದರು. ಬೆಂಗಳೂರಿನ ಎಚ್.ಎಸ್.ಆರ್. ಲೇಔಟ್ ಬಿ.ಡಿ.ಎ. ಕಾಂಪ್ಲೆಕ್ಸ್ ನಿಂದ ಫೆಬ್ರವರಿ 12 ರಂದು ಇವರು ಪ್ರಯಾಣವನ್ನು ಆರಂಭಿಸಿದರು. ಬೆಂಗಳೂರಿನಿಂದ ಶ್ರೀರಂಗಂ, ಚೆಟ್ಟಿನಾಡು, ರಾಮೇಶ್ವರಂ, ಮಧುರೈ ಮತ್ತು ಧನುಷ್ಕೋಡಿಯವರೆಗೆ ಅವರ ಪಯಣ. ಅವರ ಉದ್ದೇಶ ಪ್ರತಿಯೊಂದು ಊರಿನಲ್ಲೂ, ಹಳ್ಳಿಯಲ್ಲೂ ಇಳಿದು ಅಲ್ಲಿನವರಿಗೆ ಪುಸ್ತಕಗಳನ್ನು ವಿತರಿಸುವುದು, ಓದು ಹವ್ಯಾಸವನ್ನು ಬೆಳೆಸುವುದು, ಪ್ರೋತ್ಸಾಹಿಸುವುದು. ಒಟ್ಟಾರೆ `ಪಡೆ ಭಾರತ ಅಭಿಯಾನ’ ಇವರ ಮೂಲ ಉದ್ದೇಶ. ಈ ನಾಲ್ವರೂ ವಿಭಿನ್ನ ರಂಗಗಳಿಂದ ಬಂದರು.
ಸಿ.ವಿ. ಮೀರಾ ರಮಣ್
ಈಕೆ ಆಶಾ ಇನ್ಛಿನೈಟ್ ಸಂಸ್ಥೆಯ ಮುಖ್ಯಸ್ಥೆ. ಬಡ ಮತ್ತು ದುರ್ಬಲ ವರ್ಗದ ಮಕ್ಕಳಿಗೆ ಅಂದರೆ ಸರ್ಕಾರಿ ಶಾಲೆಯ ಮಕ್ಕಳಿಗೆ ಇಂಗ್ಲಿಷ್ ಕಲಿಸುವುದು. ಮುಂದೆ ಅವರು ಹೆಚ್ಚಿನ ಶಿಕ್ಷಣ ಮತ್ತು ಉದ್ಯೋಗವನ್ನು ಪಡೆಯಲು ಅನುಕೂಲವಾಗುವ ಹಾಗೆ ಮಾಡುವುದು ಇವರ ಸಂಸ್ಥೆಯ ಉದ್ದೇಶ. ಮೊದಲು ಒಂದಿಷ್ಟು ಜನ ವಾಲೆಂಟಿಯರ್ಸ್ ಶಾಲೆಗಳಿಗೆ ಹೋಗಿ ಪಾಠ ಹೇಳಿ ಕೊಡುತ್ತಿದ್ದರು. ಈಗ ಕೊರೋನಾದ ಕಾರಣ ಮೊಬೈಲ್ ಮೂಲಕವೇ ಅವರಿಗೆ ಪೋನಿಕ್ಸ್ ನ ರೀತಿಯಲ್ಲಿ ಇಂಗ್ಲಿಷ್ ಕಲಿಸುವ ಕಾಯಕ ನಡೆಸುತ್ತಿದ್ದಾರೆ. ಜೊತೆಗೆ ಕಥೆಗಳ ಮೂಲಕ ಭಾಷೆಯನ್ನು ಕಲಿಸುತ್ತಿದ್ದಾರೆ.
ಇದಲ್ಲದೆ, ಅಗತ್ಯವಿರುವ ಕನ್ನಡೇತರರಿಗೆ ಮತ್ತು ಅವರ ಮಕ್ಕಳಿಗೆ ಕನ್ನಡ ಕಲಿಸುವ ಕೆಲಸವನ್ನೂ ಮಾಡುತ್ತಿದ್ದಾರೆ. ಈ ಬಾರಿ ಕನ್ನಡ ರಾಜ್ಯೋತ್ಸದ ಅಂಗವಾಗಿ `ಕೌನ್ ಬನೇಗಾ ಕನ್ನಡಿಗ’ ಎನ್ನುವ ಕಾರ್ಯಕ್ರಮವನ್ನು ಹಮ್ಮಿಕೊಂಡು ಅನೇಕರಿಗೆ ಕನ್ನಡ ಕಲಿಸಿದರು. ಚೆನ್ನಾಗಿ ಕಲಿಯುವ ಮಕ್ಕಳಿಗೆ ಪುಸ್ತಕಗಳನ್ನು ಬಹುಮಾನವನ್ನಾಗಿ ನೀಡುವ ಪರಿಪಾಠವನ್ನು ಇಟ್ಟುಕೊಂಡಿದ್ದಾರೆ. ತನ್ಮೂಲಕ ಪುಸ್ತಕ ಓದುವುದನ್ನು ಪ್ರೋತ್ಸಾಹಿಸುವ ಉದ್ದೇಶ ಇವರದು. ಈಗ ಈ ರೋಡ್ ಟ್ರಿಪ್ ನಲ್ಲೂ ದಾರಿಯುದ್ದಕ್ಕೂ ಸಿಗುವ ಹಳ್ಳಿಗಳಲ್ಲಿ ಪುಸ್ತಕ ವಿತರಿಸುವ ಅಭಿಪ್ರಾಯವನ್ನು ಹೊಂದಿದ್ದು, ಅಂತೆಯೇ ಮಾಡಿದರು ಕೂಡಾ.
ಮೀರಾ ರಮಣ್ ಹೇಳುವುದು, “ಒಂದು ಮಗುವಿಗೆ ಓದುವ ಹವ್ಯಾಸ ಅಥವಾ ಸಾಮರ್ಥ್ಯ ಬರುವಂತೆ ಮಾಡುವುದು ಬಹಳ ಮುಖ್ಯ. ನಂತರ ಆ ಓದುವಿಕೆಯನ್ನು ಅದು ಇಷ್ಟಪಡಬೇಕು. ಅದಕ್ಕಾಗಿ ಒಂದು ಮಗು ಮೊದಲಿಗೆ ಓದುಗನಾಗಬೇಕು. ನಂತರ ಅನ್ವೇಷಕನಾಗಿ, ಚಿಂತಕನಾಗುವುದು ಸಾಧ್ಯ. ಒಂದು ಪುಸ್ತಕವನ್ನು ಓದುವುದರಿಂದ ಜ್ಞಾನಾರ್ಜನೆಯಾಗುತ್ತದೆ. ಅದು ಮಗುವಿನ ಮುಂದೆ ಒಂದು ಹೊಸ ಪ್ರಪಂಚವನ್ನೇ ತೆರೆದಿಡುತ್ತದೆ. ಓದುವುದರ ಮೂಲಕ, ಕಲ್ಪನಾ ಶಕ್ತಿ, ವಿಮರ್ಶಾತ್ಮಕ ಚಿಂತನೆ, ಸೃಜನಶೀಲತೆ ಬರುತ್ತದೆ. ಇಷ್ಟಪಟ್ಟು ಓದುವುದೇ ನಿಜವಾದ ಶಿಕ್ಷಣ.
“ಬಡ ಮಕ್ಕಳಿಗೆ ಸರಿಯಾದ ಶಿಕ್ಷಣ ನೀಡುವ ಶಿಕ್ಷಕರಿಲ್ಲ, ಪ್ರೋತ್ಸಾಹ ನೀಡುವ ತಾಯಿ ತಂದೆಯರಿಲ್ಲ. ಅವರಲ್ಲಿ ಓದುವ ಆಸೆ ಮೂಡಲು ಹೇಗೆ ಸಾಧ್ಯ? ಅದೇ ರೀತಿ ಅನುಕೂಲವಂತರ ಮಕ್ಕಳಿಗೆ ಎಲ್ಲ ರೀತಿಯ ಗ್ಯಾಜೆಟ್ಸ್ ಮತ್ತು ಅವುಗಳಲ್ಲಿ ಅವರು ನೋಡುವ ಕಾರ್ಯಕ್ರಮಗಳನ್ನು ಯಾವ ರೀತಿ ರೂಪಿಸಿರುತ್ತಾರೆಂದರೆ, ಒಂದು ರೀತಿಯಲ್ಲಿ ಅವರನ್ನು ಅಡಿಕ್ಟ್ ಮಾಡಿಬಿಡುತ್ತದೆ. ಇನ್ನು ಓದುವ ಕಡೆ ಅವರ ಗಮನ ಬರಲು ಹೇಗೆ ಸಾಧ್ಯ? ಆದ್ದರಿಂದ ಮಕ್ಕಳಲ್ಲಿ ಓದುವ ಅಭ್ಯಾಸವನ್ನು ಮೂಡಿಸುವುದರಲ್ಲಿ ಪೋಷಕರು ಮತ್ತು ಶಿಕ್ಷಕರ ಬಾಧ್ಯತೆ ಬಹಳ ಹೆಚ್ಚಿನದು. ಈಗಿನ ಪೋಷಕರು ಮಕ್ಕಳನ್ನು ಎಲ್ಲಾ ಕ್ಲಾಸುಗಳಿಗೂ ಕಳುಹಿಸುತ್ತಾರೆ. ತಮ್ಮ ಮಕ್ಕಳು ಸರ್ವವಿದ್ಯಾ ಪಾರಂಗತರಾಗಬೇಕು ಎನ್ನುವುದು ಅವರ ಆಸೆ.
“ಈ ಗಡಿಬಿಡಿಯಲ್ಲಿ ಮಕ್ಕಳಲ್ಲಿ ಓದುವ ಅಭ್ಯಾಸ ಮೂಡಿಸುವುದಕ್ಕೆ ಅವರಿಗೆ ಪುರಸತ್ತೆ ಇರುವುದಿಲ್ಲ. ಓದುವುದು ಎಂದಾಗ ಶಾಲೆಯ ಪಾಠದ ಪುಸ್ತಕವೇ ಆಗಬೇಕಿಲ್ಲ. ಕಥೆ ಪುಸ್ತಕ ಅಥವಾ ಸಾಧಕರ ಜೀವನ ಚರಿತ್ರೆಯಾಗಬಹುದು. ಅದಕ್ಕೆ ಮನೆಯ ವಾತಾರಣ ಮುಖ್ಯ. ಮನೆಯಲ್ಲಿ ತಾಯಿ ತಂದೆ ಮತ್ತು ಮಿಕ್ಕವರೂ ಓದುವ ಅಭ್ಯಾಸವನ್ನು ಇಟ್ಟುಕೊಂಡಿದ್ದರೆ ಮಕ್ಕಳಲ್ಲಿಯೂ ತಾನೇ ತಾನಾಗಿ ಓದುವುದರತ್ತ ಒಲವು ಮೂಡುತ್ತದೆ. ಆದರೆ ಮನೆಯಲ್ಲಿ ಈಗ ಎಲ್ಲರ ಕೈಯಲ್ಲೂ ಮೊಬೈಲ್ ಇರುತ್ತದೆ. ಹೀಗಾಗಿ ಓದುವ ಸಂಸ್ಕೃತಿಯೇ ನಾಶವಾಗುತ್ತಿದೆ.
“ನಮ್ಮ ಈ ಪ್ರವಾಸದಲ್ಲಿ ನಾವು ನಮ್ಮ ದಾರಿಯಲ್ಲಿ ಸಿಕ್ಕ ಊರುಗಳಲ್ಲಿ ಬಡವರು ಅಥವಾ ಶ್ರೀಮಂತರು ಎನ್ನುವ ಭೇದಭಾವವಿಲ್ಲದೆ, ಎಲ್ಲರಿಗೂ ಪುಸ್ತಕಗಳನ್ನು ಕೊಟ್ಟೆ. ನಂತರ ನಾವು ಅವರಿಗೆ ಹೇಳಿದ್ದು, ಈ ಪುಸ್ತಕವನ್ನು ನೀವೇ ಓದಿ, ನಿಮ್ಮ ಮಗುವಿನ ಹತ್ತಿರ ಓದಿಸಿ ಅಥವಾ ಓದುವುದು ಯಾವುದಾದರೂ ಮಗುವಿಗೆ ಕೊಡಿ ಅಥವಾ ನಮ್ಮ ಸಂಸ್ಥೆಯಲ್ಲಿ ಮಕ್ಕಳಿಗೆ ಶಿಕ್ಷಕರಾಗಿರಿ, ಕಲಿಯುವ ಆಸಕ್ತಿ ಇದ್ದು ಅನುಕೂಲವಿಲ್ಲದೆ ಇವರು ಮಕ್ಕಳ ನಂಬರ್ ಕೊಡಿ, ಅವರಿಗೆ ಮೊಬೈಲ್ ಮೂಲಕ ನಾವು ಹೇಳಿಕೊಡ್ತೀವಿ. ಇದರಲ್ಲಿ ನಿಮಗೆ ಬೇಕಾದ ಯಾವುದೇ ಆಯ್ಕೆಯನ್ನು ಮಾಡಿಕೊಳ್ಳಬಹುದು.
“ಆದರೆ ಅವರು ಯಾವ ರೀತಿ ಇದಕ್ಕೆ ಸ್ಪಂದಿಸುತ್ತಾರೋ ಎನ್ನುವ ಅನುಮಾನವಿತ್ತು. ಅವರಿಗೂ ಸಹ ಏನೋ ಕುತೂಹಲ. ಏಕೆ ನಮಗೆ ಪುಸ್ತಕ ಕೊಡುತ್ತಿದ್ದಾರೆ ಎನ್ನುವ ಹಿಂಜರಿಕೆಯ ಭಾವ, ನಿಜಕ್ಕೂ ಅವರ ಉತ್ತರಗಳು ನಮ್ಮಲ್ಲಿ ಬಹಳ ಆಶೋತ್ತರಗಳನ್ನು ಹುಟ್ಟಿಸಿತು. `ಅಯ್ಯೋ, ನಾನು ಮೊದಲು ತುಂಬಾ ಓದ್ತಾ ಇದ್ದೆ, ಈಗ ಬಿಟ್ಟುಬಿಟ್ಟಿದ್ದೇನೆ, ನಾನೂ ಓದ್ತೀನಿ, ನನ್ನ ಮಗುವಿಗೂ ಓದಿಸುತ್ತೀನಿ, ಬೇರೆ ಮಕ್ಕಳಿಗೂ ಕೊಡ್ತೀನಿ, ಎಂದರು. ಅನೇಕರು ನಮ್ಮ ಸಂಸ್ಥೆಯಲ್ಲಿ ಪಾಠ ಮಾಡುವುದಕ್ಕೆ ಒಪ್ಪಿಕೊಂಡರು. ಹೇಗಿದ್ದರೂ ಮೊಬೈಲ್ ಮೂಲಕ ತಾನೇ ಎಲ್ಲಿಂದ ಬೇಕಾದರೂ ಮಾಡಬಹುದು. ಅಗತ್ಯವಿರುವ ಮಕ್ಕಳ ನಂಬರ್ ಸಹ ನಿಮಗೆ ಕೊಡ್ತೀವಿ,’ ಎಂದರು.
“ನಮ್ಮ ಉದ್ದೇಶ ಅದೇ ಆಗಿತ್ತು. ಮಕ್ಕಳ ಕೈಗೆ ಮೊಬೈಲ್ ಬದಲು ಪುಸ್ತಕ ಬರಲಿ ಎನ್ನುವ ಆಸೆ. ಈಗಂತೂ ಕೊರೋನಾ ಬಂದು ಎರಡು ವರ್ಷಗಳಿಂದ ಮಕ್ಕಳ ಶಿಕ್ಷಣಕ್ಕೆ ಬಹಳ ಪೆಟ್ಟು ಬಿದ್ದಿದೆ. ಸದಾ ಮನೆಯಲ್ಲೇ ಇದ್ದು ಇದ್ದೂ ಮಕ್ಕಳ ಮನಸ್ಸು ಜಡ್ಡುಗಟ್ಟಿದೆ. ನೀವು ಮಕ್ಕಳಿಗೆ ಪುಸ್ತಕವನ್ನು ಓದುತ್ತಾ, ದಿನಕ್ಕೊಂದು ಕಥೆ ಹೇಳಿ ಮಲಗಿಸಿದಾಗ, ಮಗುವಿಗೂ ಓದಲು ಆಸಕ್ತಿ ಮೂಡಬಹುದು. ಒಟ್ಟಾರೆ ಮಕ್ಕಳು ಅಥವಾ ದೊಡ್ಡವರು ಮೊಬೈಲ್ ನ್ನು ಪಕ್ಕಕ್ಕಿಟ್ಟು ತಮ್ಮ ಕೈಗಳಲ್ಲಿ ಪುಸ್ತಕ ಹಿಡಿಯಲಿ ಎನ್ನುವುದೇ ನಮ್ಮ ಈ ಪ್ರವಾಸದ ಉದ್ದೇಶ ಆಗಿತ್ತು. ಅದು ಖಂಡಿತಾ ಬಹು ಮಟ್ಟಿಗೆ ಯಶಸ್ವಿಯಾಯಿತು ಎನ್ನಬಹುದು.”
ಸವಿತಾ ರೆಡ್ಡಿ
ಈಕೆ ಇನ್ ಲಿಂಗ್ವಾ ಇಂಟಿಮೇಷನ್ ಸ್ಕೂಲ್ ಆಫ್ ಲ್ಯಾಂಗ್ವೇಜ್ ಸಂಸ್ಥೆಯ ಮುಖ್ಯಸ್ಥೆ. ಲಾಂಗ್ವೇಜ್ ಸ್ಟೇಷನ್ ನ ಸಂಸ್ಥಾಪಕಿ. ಇವುಗಳೆಲ್ಲದರ ಜೊತೆಗೆ ಭರತನಾಟ್ಯದ ನರ್ತಕಿ, ಯೋಗ ಬೋಧಕರೂ ಹೌದು. ಸವಿತಾ ರೆಡ್ಡಿ ಪ್ರಕಾರ, “ಬೆಂಗಳೂರಿನಿಂದ ರಾಮೇಶ್ವರಂ, ಧನುಷ್ಕೋಡಿಯವರೆಗೆ ಹೋಗಿದ್ದ ಈ ಪ್ರವಾಸ ನಿಜಕ್ಕೂ ಜೀವನ ಬದಲಿಸುವಂತಹುದಲ್ಲದೆ, ಸದಾಕಾಲ ನೆನಪಿನಲ್ಲಿ ಉಳಿಯುವಂತಹುದೂ ಹೌದು. ಹೊಸ ಜನ, ಹೊಸ ಸ್ನೇಹಿತರು ದೊರಕಿದ್ದಲ್ಲದೆ, ಅನೇಕ ಶಾಲೆಗಳಿಗೆ ಭೇಟಿ ನೀಡಿದೆ. ಮಕ್ಕಳನ್ನು ಮಾತನಾಡಿಸಿದೆ. ಆಗ ಓದಲು ಮತ್ತು ಬರೆಯಲು ಅವರಿಗಿದ್ದ ಪ್ರೀತಿ ಅರ್ಥವಾಯಿತು. ಇದೇ ನನ್ನ ಮೊದಲ ಅನುಭವ ಮತ್ತು ಇಂತಹ ಒಂದು ವಿಭಿನ್ನವಾದುದನ್ನು ಮಾಡಿದ್ದು ಇದೇ ಮೊದಲು.
“ನಾವು ನಾಲ್ವರು ಮಹಿಳೆಯರು ಹೋಗಿದ್ದು, ಹೇಳಬೇಕೆಂದರೆ ನಮಗೆ ಮೊದಲಿಗೆ ಪರಸ್ಪರ ಅಷ್ಟಾಗಿ ಪರಿಚಯವಿರಲಿಲ್ಲ. ನಾವೇ 1400 ಕಿ.ಮೀ. ದೂರ ಡ್ರೈವ್ ಮಾಡಿಕೊಂಡು ಹೋಗಿದ್ದೇ ನಮಗೆ ಒಂದು ವಿಶಿಷ್ಟ ಅನುಭವ. ಜೊತೆಗೆ ಶಾಲೆಗಳ ಭೇಟಿ, ಮಕ್ಕಳನ್ನು ಮಾತಾಡಿಸಿ ಅವರಿಗೆ ಪುಸ್ತಕ ನೀಡುವುದರಲ್ಲಿ ನಿಜಕ್ಕೂ ಏನೋ ಸುಖವಿದೆ ಎನಿಸಿತು. ಗೂಗಲ್ ನಕ್ಷೆಗನುಸಾರವಾಗಿ ದಾರಿಯ ಹುಡುಕಾಟ, ಹೋಟೆಲ್ ಗಳನ್ನು ಬುಕ್ ಮಾಡುವುದರ ಜೊತೆಗೆ ಊಟಕ್ಕೆ ಸ್ಥಳವನ್ನು ಹುಡುಕುವುದು ಇದೆಲ್ಲ ಒಂದು ಒಳ್ಳೆಯ ಅನುಭವ. ಐದು ದಿನಗಳು ಕಳೆಯುವುದರಲ್ಲಿ ನಾವು ಒಳ್ಳೆಯ ಗೆಳೆತಿಯರಾಗಿಬಿಟ್ಟೆವು.
“ಅಲ್ಲಿಯ ಸ್ಥಳೀಯರೊಂದಿಗೆ ಒಂದಿಷ್ಟು ಕಾಲ ಕಳೆದೆವು. ಬೆಸ್ತರೊಂದಿಗೆ ಒಂದಿಷ್ಟು ಮಾತುಕಥೆ, ಕೆಲವು ವಿಲಕ್ಷಣ ಸ್ಥಳಗಳ ವೀಕ್ಷಣೆ ನಡೆಯಿತು. ಎಲ್ಲಕ್ಕಿಂತಲೂ ಮುಖ್ಯವಾಗಿ ಸ್ವಲ್ಪ ತಮಿಳು ಭಾಷೆಯನ್ನು ಕಲಿತೆವು. ನಿಜಕ್ಕೂ ನಾವು ಕನ್ನಡಿಗರು ಅವರಿಂದ ಕಲಿಯಬೇಕಾದದ್ದು ಅದೇ. ಹೊಸಬರು ಯಾರು ಬಂದರೂ ಅವರಿಗೆ ತಮ್ಮ ಭಾಷೆಯನ್ನು ಕಲಿಸುವುದರಲ್ಲಿ ತಮಿಳರು ನಿಷ್ಣಾತರು. ಅದೇ ನಾವು ಕನ್ನಡಿಗರು ಅವರ ಭಾಷೆಯನ್ನು ಕಲಿತು ಬಿಡುತ್ತೇವಷ್ಟೇ ಹೊರತು ಅವರಿಗೆ ನಮ್ಮ ಕನ್ನಡವನ್ನು ಕಲಿಸುವ ಗೋಜಿಗೇ ಹೋಗುವುದಿಲ್ಲ.”
ಮೀನಾ ಗುಪ್ತ
ಈಕೆ ಬೆಂಗಳೂರಿನ ಎಫೆಕ್ಟಿವ್ ಎಜುಕೇಶನ್ ಟಾಸ್ಕ್ ಫೋರ್ಸ್ ಸಹ ಸಂಚಾಲಕಿ, ವಾಣಿಜ್ಯೋದ್ಯಮಿ, ಪ್ರವಾಸಪ್ರಿಯರು. ಇವರು ವೃತ್ತಿಯಲ್ಲಿ ಎಂಜಿನಿಯರ್. ಪ್ರಸ್ತುತ ಅಮೆರಿಕಾದಲ್ಲಿ ವಾಸಿಸುತ್ತಿದ್ದಾರೆ. ಆದರೆ ಅವರ ಮನಸ್ಸೆಲ್ಲಾ ಭಾರತದಲ್ಲೇ ಇರುತ್ತದೆ. ಆಗಾಗ ಭಾರತಕ್ಕೆ ಬರುತ್ತಿರುತ್ತಾರೆ. ಇವರಿಗೆ ಒಬ್ಬರೇ ಪ್ರವಾಸ ಮಾಡುವುದೆಂದರೆ ಬಹಳ ಪ್ರೀತಿ. ಕಾಡುಗಳಲ್ಲಿ ವಾಸಿಸುವ ಅಲ್ಲಿನ ನಿವಾಸಿಗಳ ಜೀವನವನ್ನು ತಿಳಿಯಲು ಬಿಹಾರ್ ಮತ್ತು ಛತ್ತೀಸ್ ಗರ್ ಪ್ರವಾಸವನ್ನು ಮಾಡಿದರು. ನಂತರ 2018 ಮತ್ತು 2019ರಲ್ಲಿ ಜೀವನದ ಬಗ್ಗೆ ಅವರಿಗಿದ್ದ ಅಭಿಪ್ರಾಯವೇ ಬದಲಾಯಿತು.
ಅಲ್ಲಿನ ಜನ ಬಹಳ ಕಡಿಮೆ ಅನುಕೂಲ, ಕಡಿಮೆ ಹಣ ಮತ್ತು ಕಡಿಮೆ ವಿದ್ಯಾಭ್ಯಾಸ, ಎಲ್ಲದಕ್ಕೂ ಕೊರತೆಯಿದ್ದರೂ ಅವರು ತಮ್ಮ ಜೀವನವನ್ನು ಎಷ್ಟು ಪ್ರೀತಿಸುತ್ತಿದ್ದರು ಎನ್ನುವುದು ಇವರಿಗೆ ಅಚ್ಚರಿಯ ವಿಚಾರವಾಗಿತ್ತು. ಒಂಟಿಯಾಗಿ ಪ್ರಯಾಣಿಸುವಾಗ ಬಹಳಷ್ಟನ್ನು ಕಲಿಯುವುದು, ಅರ್ಥ ಮಾಡಿಕೊಳ್ಳುವುದರ ಮೇಲೆ ಅವಲಂಬಿತವಾಗುವುದು, ಸ್ವಯಂ ಅನ್ವೇಷಣೆ ಮತ್ತು ಎಲ್ಲವನ್ನೂ ಯೋಚಿಸುವುದರಲ್ಲಿ ಪರಿಣಿತರಾಗಿದ್ದರು.
ಯಾವುದೇ ಸಮಸ್ಯೆ ಬಂದರೂ ಅದನ್ನು ಎದುರಿಸಲು ಸಿದ್ಧರಾಗಿಬಿಡುತ್ತಾರೆ. ಒಂಟಿಯಾಗಿ ಪಯಣಿಸಿದ ಅನುಭವದ ರುಚಿಯನ್ನು ಕಂಡ ಇವರಿಗೆ ಮತ್ತಷ್ಟು ಅದೇ ರೀತಿಯ ಪ್ರಯಾಣ ಮಾಡುವ ಆಸೆ ಚಿಗುರಿತು. ದೆಹಲಿಯಿಂದ ವಾರಾಣಸಿ, ರಾಜಾಸ್ಥಾನ್ ಎಲ್ಲೆಡೆ ಹೋಗುವ ಆಸೆ. ಆದರೆ ಕೋವಿಡ್ ಇವರ ಆಸೆಗೆ ತಣ್ಣಿರೆರಚಿತು.
“ಈ ಬಾರಿ ನಾನು ಅಮೆರಿಕಾದಿಂದ ಬಂದ ಮೇಲೆ ಬೆಂಗಳೂರಿನಿಂದ ರಾಮೇಶ್ವರಂ, ಧನುಷ್ಕೋಡಿಯವರೆಗೆ ಪಯಣಿಸುವ ಆಸೆಯಾಯಿತು. ನನ್ನ ಗೆಳತಿಯರನ್ನು ಈ ವಿಷಯವಾಗಿ ಸಂಪರ್ಕಿಸಿದಾಗ, ಅವರೂ ಸಹ ಒಪ್ಪಿಕೊಂಡರು. ನಾವು ನಾಲ್ವರು ಪ್ರವಾಸ ಕೈಗೊಂಡೆವು.
“ನಾವೆಲ್ಲರೂ ಸ್ವಲ್ಪ ಹೆಚ್ಚೂ ಕಡಿಮೆ ಒಂದೇ ವಯಸ್ಸಿನವರು 45-50ರ ಒಳಗಿನವರು. 1400 ಕಿ.ಮೀ., ಆರು ದಿನಗಳಲ್ಲಿ ಮಾಡುವ ಒಂದು ಪ್ರವಾಸವಿದು. ನನ್ನ ಗೆಳತಿ ಮೀರಾಳನ್ನು ಮಾತನಾಡಿಸಿದಾಗ, ಈ ಪ್ರವಾಸವನ್ನು ಒಂದು ನಿರ್ದಿಷ್ಟ ಗುರಿಯನ್ನಿಟ್ಟುಕೊಂಡು ಮಾಡಬಹುದಲ್ಲವೇ ಎನ್ನುವ ವಿಷಯ ನಮ್ಮ ತಲೆಗೆ ಬಂದಿತು. ನಾವು ಮಕ್ಕಳಿಗೆ ಕಥೆ ಪುಸ್ತಕಗಳನ್ನು ಕೊಟ್ಟುಬಿಡೋಣವೆಂದು ನಿರ್ಧಾರ ಮಾಡಿದೆವು. ಜೊತೆಗೆ ಆಶಾ ಇನ್ಛಿನೈಟ್ ಫೌಂಡೇಶನ್ನಿನ ರೀಡಿಂಗ್ ಪ್ರೋಗ್ರಾಮ್ ಗೆ ಸಾಧ್ಯವಾದಷ್ಟು ಮಕ್ಕಳನ್ನು ಸೇರಿಸೋಣವೆಂದು ಅಭಿಪ್ರಾಯಪಟ್ಟೆವು.
“ನಾವು ತಮಿಳುನಾಡಿನ ಅನೇಕ ಶಾಲೆಗಳಿಗೆ ಹೋಗಿ ಆ ಮಕ್ಕಳಿಗೆ ಪುಸ್ತಕಗಳನ್ನು ಕೊಟ್ಟಾಗ ನಿಜಕ್ಕೂ ಅವರಿಂದ ಒಳ್ಳೆಯ ಪ್ರತಿಕ್ರಿಯೆ ಮೂಡಿಬಂದಿತು. ಜೊತೆಗೆ ಮೆಚ್ಚುಗೆ ಕೂಡ. ನನ್ನ ಅಭಿಪ್ರಾಯದಲ್ಲಿ ಈ ರೀತಿಯ ಸಾಹಸಗಳು ಮಹಿಳೆಗೆ ಖಂಡಿತ ಸಾಧ್ಯ. ರಸ್ತೆಗಳು ಚೆನ್ನಾಗಿವೆ. ಧೈರ್ಯದಿಂದ ಸರಾಗವಾಗಿ ವಾಹನವನ್ನು ಚಲಾಯಿಸಬಲ್ಲೆವು ಎನ್ನುವ ಆತ್ಮವಿಶ್ವಾಸ ಮೂಡಿಬಂದಿತು,” ಎನ್ನುತ್ತಾರೆ.
ಗಿರಿಜಾ ಸುಬ್ರಹ್ಮಣ್ಯಂ
ಇವರು ವೃತ್ತಿಯಲ್ಲಿ ಎಂಜಿನಿಯರ್, ವಾಣಿಜ್ಯೋದ್ಯಮಿ. ಪ್ರವಾಸ, ತೋಟಗಾರಿಕೆ ಮತ್ತು ಪಾದಯಾತ್ರೆ (ಟ್ರೆಕ್ಕಿಂಗ್) ಇವರಿಗೆ ಬಹಳ ಪ್ರಿಯ. ಪ್ರಸ್ತುತ ಈಗ ಅಮೆರಿಕಾದಲ್ಲಿ ನೆಲೆಸಿದ್ದಾರೆ. ಆದರೆ ಭಾರತವೆಂದರೆ ಇವರಿಗೆ ಬಹಳ ಪ್ರೀತಿ. ಭಾರತದಲ್ಲಿ ಪ್ರವಾಸ ಮಾಡುವುದಂತೂ ಇವರ ಇಷ್ಟದ ವಿಷಯ. ಅವರ ಮಾತಿನಲ್ಲೇ ಹೇಳಬೇಕೆಂದರೆ, “ಈ ಪ್ರವಾಸಕ್ಕೆ ಹೋಗಿದ್ದು ನನ್ನ ಜೀವನದ ಅತೀ ಉತ್ತಮ ನಿರ್ಧಾರವೆನ್ನುವುದು ನನ್ನ ಅಭಿಪ್ರಾಯ. ಈ ನಾಲ್ವರಲ್ಲಿ ಒಬ್ಬಳು ನನ್ನ ಬಾಲ್ಯದ ಗೆಳತಿ. ಮಿಕ್ಕವರಿಬ್ಬರನ್ನು ನೋಡಿದ್ದೇ ಈ ಪ್ರವಾಸದ ದಿನದಂದು. ನನಗೆ ನಿಜಕ್ಕೂ ಬಹಳ ಉತ್ಸಾಹ, ಆತಂಕ ಎಲ್ಲವೂ ಇತ್ತು. ಈ ಪ್ರವಾಸ ಯಾವ ರೀತಿ ಇರುತ್ತದೋ ಎನ್ನುವ ಕಳಕಳಿ. ಜೊತೆಗೆ ಕುಟುಂಬದ ಯಾವುದೇ ಸದಸ್ಯರಿಲ್ಲ. ಮಕ್ಕಳು ಅಥವಾ ಪೋಷಕರಾರೂ ಇಲ್ಲ. ಯಾವುದೇ ಜವಾಬ್ದಾರಿ ಇಲ್ಲ. ಎಲ್ಲ ನಿರ್ಣಯಗಳೂ ನಮ್ಮಲ್ಲೇ ಅಲ್ಲವೇ? ಆ ದಿನ ನನಗೆ ನಮ್ಮ ಪ್ರವಾಸದ ಇನ್ನಿಬ್ಬರು ಸಂಗಾತಿಗಳ ಪರಿಚಯಾಯಿತು. ಎಲ್ಲರೂ ಬೇರೆ ಬೇರೆಯ ರಂಗಗಳಿಂದ ಬಂದವರು. ನಮ್ಮ ಹಿನ್ನೆಲೆ, ಗುರಿ ಎಲ್ಲವೂ ಬೇರೆ ಬೇರೆಯೇ ಆಗಿದ್ದವು.
“ಒಂದೇ ಒಂದು ನಮ್ಮೆಲ್ಲರ ಮಧ್ಯೆ ಇದ್ದ ಕೊಂಡಿ ಎಂದರೆ ನಾವೆಲ್ಲರೂ ಕನ್ನಡ ಮಾತನಾಡುವವರು. ಅದೊಂದು ವಿಷಯವೇ ನಮ್ಮ ಮಧ್ಯೆ ಸಮಾಧಾನವೆನಿಸಿಕೊಂಡಿತ್ತು. ನಾವೆಲ್ಲರೂ ತಾಯಂದಿರು. ಆದ್ದರಿಂದ ಯಾರ ಜೊತೆಯಾದರೂ ಹೊಂದಿಕೊಳ್ಳಲು ಕಷ್ಟವಾಗಲಾರದು ಎನ್ನುವುದು ನನ್ನ ಭಾವನೆ. ಏಕೆಂದರೆ ಜೀವನದಲ್ಲಿ ಎಲ್ಲರದೂ ವಿಭಿನ್ನ ನಡೆ, ಮನೋಭಾವದವರೂ ತಾಯಂದಿರಿಗೆ ಯಾವಾಗಲೂ ಮನೆಯ ಇತರ ಸದಸ್ಯರೊಂದಿಗೆ ಅನುಸರಿಸಿಕೊಂಡು ಇರುವುದು ಅಭ್ಯಾಸವಲ್ಲವೇ? ಆದರೆ ಇಲ್ಲಿ ಆದದ್ದೇ ಬೇರೆ. ನಾಲ್ವರಲ್ಲಿ ಯಾರು ಏನು ಹೇಳಿದರೂ ಅದನ್ನು ಎಲ್ಲರೂ ಉತ್ಸಾಹದಿಂದ, ತೆರೆದ ಮನದಿಂದ, ಕುಣಿದು ಕುಪ್ಪಳಿಸಿಕೊಂಡು ಮಾಡುತ್ತಿದ್ದೆ. ನಿಜಕ್ಕೂ ನಾನು ನನ್ನ ಕುಟುಂಬ ಇತರ ಸದಸ್ಯರೊಂದಿಗೆ ಬಂದಿದ್ದರೆ ಈ ರೋಚಕ ಅನುಭವಗಳು ಆಗುತ್ತಿರಲಿಲ್ಲವೇನೋ? ನಮ್ಮ ಕುಟುಂಬದ ಮಧ್ಯೆ ನಮಗಿಂತ ಇತರರ ನಿರ್ಣಯಗಳೇ ನಮ್ಮದಾಗಿರುತ್ತವೆ. ಆದರೆ ಇಲ್ಲಿ ಅಭಿಪ್ರಾಯಗಳು, ನಿರ್ಣಯಗಳು ನಮ್ಮವೇ ಆಗಿದ್ದವು.
“ಒಂದು ರೀತಿಯ ಸ್ವಾತಂತ್ರ್ಯದ ಅನುಭವ. ಹಕ್ಕಿ ತನಗಿಷ್ಟ ಬಂದಂತೆ ಆಗಸದಲ್ಲಿ ಹಾರುವಂತೆ, ನಮಗೂ ನಮ್ಮದೇ ದಿಕ್ಕನ್ನು ಆರಿಸುವ ಸ್ವಾತಂತ್ರ್ಯದ ಜೊತೆಗೆ ಒಂದು ರೀತಿಯ ವಿಮೋಚನಾ ಭಾವ ಅಲ್ಲಿತ್ತು. ಜೊತೆಗೆ ಖಂಡಿತ ಅದೊಂದು ಉಲ್ಲಾಸದಾಯಕ, ರೋಚಕ ಅನುಭವವಾಗಿತ್ತು. ಈ ಪ್ರವಾಸದ ಮುಕ್ತಾಯದ ಹಂತದಲ್ಲಿ ನನಗನಿಸಿದ್ದು, ನಾನು ಇವರನ್ನು ಬಹಳ ವರ್ಷಗಳಿಂದ ಬಲ್ಲವನೇನೋ ಮತ್ತು ನನ್ನ ಆಪ್ತ ಗೆಳತಿಯರಿವರು ಎನಿಸಿದ್ದಂತೂ ನಿಜ. ಸಣ್ಣ ಪುಟ್ಟ ಪ್ರಸಂಗಗಳು, ಅನುಭವಗಳು, ಉಲ್ಲಾಸ ಮತ್ತು ಡ್ರೈವಿಂಗ್
ಈ ಪ್ರವಾಸದ ಎಲ್ಲಾ ವಿಷಯಗಳ ಬಗ್ಗೆ ಮಾತನಾಡಿದೆವು. ನಾನು ಭಾರತೀಯ ಹೈವೇಗಳಲ್ಲಿ ವಾಹನ ಚಾಲನೆ ಮಾಡಿದ್ದು ಇದೇ ಮೊದಲು, ಜೊತೆಗೆ ಒಂದು ವಿಶಿಷ್ಟ ಅನುಭವ ಹೌದು,” ಎನ್ನುತ್ತಾರೆ.
“ಓದು ನಮ್ಮ ಮುಂದೆ ಹೊಸ ಕನಸಿನ ಪ್ರಪಂಚವನ್ನೇ ತೆರೆದಿಡುತ್ತದೆ. ತಂತ್ರಜ್ಞಾನ ಮಾನವಕುಲಕ್ಕೆ ಬಹಳ ದೊಡ್ಡ ಕೊಡುಗೆಯನ್ನೇ ನೀಡಿದೆ. ಆದರೆ ನಮ್ಮ ಜೀವನದ ಸಣ್ಣ ಸಣ್ಣ ಆನಂದ ಉಲ್ಲಾಸಗಳನ್ನು ಕಸಿದುಕೊಳ್ಳುತ್ತಿದೆ. ಪಡೆ ಭಾರತ ಅಭಿಯಾನದ ಸಹಭಾಗಿತ್ವದೊಂದಿಗೆ ನಾವು 1400 ಕಿ.ಮೀ. ದೂರ ಪಯಣವನ್ನು ಸಂತಸದಿಂದ ಓದುವ ಸಂಸ್ಕೃತಿಯನ್ನು ಪ್ರೋತ್ಸಾಹ ಮತ್ತು ಪ್ರಚಾರ ಮಾಡುವ ನಿಟ್ಟಿನಲ್ಲಿ ಕೈಗೊಂಡೆವು. ಪ್ರತಿ 250 ಕಿ.ಮೀ. ಪಯಣಿಸಿ ಒಂದಷ್ಟು ಪುಸ್ತಕಗಳನ್ನು ಕೈಯಲ್ಲಿ ಹಿಡಿದುಕೊಂಡು ಅದು ಒಂದು ಕುಗ್ರಾಮವಾಗಲೀ ಅಥವಾ ಜಿಲ್ಲೆ, ತಾಲ್ಲೂಕು ಅಥವಾ ನಗರವಾಗಲೀ, ನಿಲ್ಲಿಸಿ ಅಲ್ಲಿ ಸಿಕ್ಕವರನ್ನು ನಮ್ಮ ಆಶಾ ಸಂಸ್ಥೆಯ ಓದನ್ನು ಕಲಿಸುವ ರಾಯಭಾರಿಗಳನ್ನಾಗಿ ಮಾಡಿ, ನಾವು ನೀಡಿದ ಪುಸ್ತಕಗಳನ್ನು ಮಕ್ಕಳಿಗೆ ತಲುಪಿಸುವ ಕಾರ್ಯವನ್ನು ಅವರಿಗೆ ಒಪ್ಪಿಸಿದೆವು,” ಎನ್ನುತ್ತಾರೆ ಆ ದಿಟ್ಟ ಮಹಿಳೆಯರು.
ಸಾಹಸ ಕಾರ್ಯ
ಈ ಪ್ರವಾಸದ ರೂವಾರಿಗಳಾದ ನಾಲ್ವರು ಮಹಿಳೆಯರ ಧೈರ್ಯ, ಛಲ ಮತ್ತು ಗುರಿ ಪ್ರತಿಯೊಬ್ಬರ ಕೈಯಲ್ಲೂ ಒಂದು ಪುಸ್ತಕವನ್ನು ಹಿಡಿಯುವಂತೆ ಮಾಡುವುದು, ಅವರನ್ನು ತಮ್ಮ ಉದ್ದೇಶಕ್ಕೆ ಸೇರಿಸಿಕೊಂಡು ಮುನ್ನುಗ್ಗಲು ಉತ್ಸಾಹ ನೀಡುವುದು, ನಾಲ್ಕು ತಿಂಗಳು ಆಶಾ ಸಂಸ್ಥೆಯ ಡಿಸೈನ್ಸ್ ರೀಡಿಂಗ್ ಪ್ರೋಗ್ರಾಮಿಗೆ ಯಾರಾದರೂ, ಎಲ್ಲಿಂದಾದರೂ ಸೇರಿಕೊಂಡು ಒಂದು ಮಗುವಿನ ವಿದ್ಯಾಭ್ಯಾಸಕ್ಕೆ ನಾಂದಿ ಹಾಡಬಹುದು ಎನ್ನುವ ವಿಷಯವನ್ನು ಎಲ್ಲರಿಗೂ ತಿಳಿಸುವುದು ಇವರ ಮೂಲ ಉದ್ದೇಶ. ಮೊದಲ ನಾಲ್ಕು ತಿಂಗಳಲ್ಲಿ ಏನನ್ನೂ ಓದಲು ಬಾರದ ಮಗು ಚಿಕ್ಕ ಚಿಕ್ಕ ಪದಗಳನ್ನು, ನಾಮಫಲಕಗಳನ್ನು ಓದಲು ಕಲಿಯುತ್ತದೆ. ಮುಂದಿನ ನಾಲ್ಕು ತಿಂಗಳಲ್ಲಿ ಚಿಕ್ಕ ಚಿಕ್ಕ ವಾಕ್ಯಗಳು, ಪತ್ರಿಕೆಯ ಶೀರ್ಷಿಕೆಗಳನ್ನು ಓದಲು ಕಲಿಯುತ್ತದೆ. ನಂತರದ ನಾಲ್ಕು ತಿಂಗಳಲ್ಲಿ ಮಗು ಸರಳವಾದ ಕಥೆಗಳನ್ನು ಓದಲು ಕಲಿಯುತ್ತದೆ. ಈ ಕಾರ್ಯದ ಯಶಸ್ಸು ಒಂದು ಮಗುವನ್ನು ಕೈ ಹಿಡಿದು ನಡೆಸಲು ನಮ್ಮಿಂದ ಎಷ್ಟು ಸಾಧ್ಯ ಎನ್ನುವುದರ ಮೇಲೆ ಅವಲಂಬಿತವಾಗಿರುತ್ತದೆ. ಒಟ್ಟಾರೆ ಎಲ್ಲರ ಕೈಯಲ್ಲೂ ಪುಸ್ತಕವನ್ನು ನೀಡುವ ಈ ಮಹಿಳೆಯರ ಪ್ರಯತ್ನ ನಿಜಕ್ಕೂ ಸ್ತುತ್ಯಾರ್ಹ.
– ಮಂಜುಳಾ ರಾಜ್