—ಶರತ್ ಚಂದ್ರ
ಸ್ಯಾಂಡಲ್ ವುಡ್ ನಲ್ಲಿ ಇತ್ತೀಚೆಗೆ ಬೇರೆ ನಟರು ನಟಿಸಿರುವ ಚಿತ್ರಗಳಿಗೆ ಪ್ರೋತ್ಸಾಹ ನೀಡಲು ಸ್ಟಾರ್ ನಟರುಗಳು,ಸಿನಿಮಾ ಕ್ಕೆ ಸಂಬಂಧ ಪಟ್ಟ ಕಾರ್ಯಕ್ರಮಗಳಿಗೆ ಅತಿಥಿಗಳಾಗಿ ಬಂದು ಬೆನ್ನು ತಟ್ಟುವ ಸಂಪ್ರದಾಯ ನಡೆದು ಕೊಂಡು ಬಂದಿದೆ. ಕಳೆದ ವರ್ಷ ಬಘೀರಾ ಎಂಬ ಯಶಸ್ವಿ ಚಿತ್ರ ನೀಡಿ ಸ್ಯಾಂಡಲ್ ವುಡ್ ನ ಜನಪ್ರಿಯ ನಟ ಮುರಳಿ ಕೂಡ ಇದಕ್ಕೆ ಹೊರತಾಗಿಲ್ಲ. ಹೊಸಬರಾಗಲಿ,ಜನಪ್ರಿಯ ನಟರ ಸಿನಿಮಾ ಆಗಲಿ,ಚಿತ್ರಗಳ ಕಾರ್ಯಕ್ರಮಕ್ಕೆ ಕರೆದಾಗ ಕಾಲಾವಕಾಶ ಮಾಡಿ ಕಾರ್ಯಕ್ರಮಕ್ಕೆ ಬಂದು ಶುಭ ಹಾರೈಸುವ ಮೂಲಕ ಬೆಂಬಲ ನೀಡುತ್ತಿದ್ದಾರೆ.
ಮುರಳಿ ಇತ್ತೀಚೆಗೆ ಯುವ ಪ್ರತಿಭೆ ಭರತ ವರ್ಷ ನಿರ್ದೇಶನ ಮಾಡುತ್ತಿರುವ ‘ಇಂಟರ್ವಲ್ ‘ ಚಿತ್ರದ ಟ್ರೈಲರ್ ಬಿಡುಗಡೆ ಮಾಡಿ ಶುಭ ಹಾರೈಸಿದರು. ಈ ಮುಂಚೆ ಚಿತ್ರ ತಂಡ ಮುರಳಿ ಯವರನ್ನು ಸಂಪರ್ಕಿಸಿ ಚಿತ್ರದ ಹಿನ್ನಲೆಯಲ್ಲಿ ಅವರ ಧ್ವನಿ ಬಳಸುವ ಬಗ್ಗೆ ಕೋರಿಕೆ ಇಟ್ಟಿದ್ದರಂತೆ. ಚಿತ್ರದ ಹಾಡು ಮತ್ತು ಒಂದಷ್ಟು ಸನ್ನಿವೇಶಗಳನ್ನು ನೋಡಿದ ಮುರಳಿ, ತಂಡ ಮಾಡಿರುವ ಕೆಲಸ ಅಚ್ಚುಕಟ್ಟಾಗಿದೆ ಸುಮ್ಮನೆ ನನ್ನ ವಾಯ್ಸ್ ಓವರ್ ಈ ಸಿನಿಮಾದಲ್ಲಿ ತುರುಕುವ ಅಗತ್ಯವಿಲ್ಲ ಎಂದು ತಿಳಿಸಿದರಂತೆ. ಟ್ರೈಲರ್ ರಿಲೀಸ್ ಗೆ ಆಹ್ವಾನಿಸಿ,ಖಂಡಿತ ಬರ್ತೀನಿ ಅಂತ ಹೇಳಿ ಕೊಟ್ಟ ಮಾತು ಉಳಿಸಿಕೊಂಡಿದ್ದಾರೆ.
ಟ್ರೈಲರ್ ಸಾಕಷ್ಟು ಪ್ರಾಮಿಸಿಂಗ್ ಆಗಿದ್ದು ಇಂಜಿನಿಯರ್ ಪದವಿ ಮುಗಿಸಿ ಕೆಲಸ ಗಿಟ್ಟಿಸುವಾಗ ಮೂರು ಯುವಕರು ಪಡುವ ಪಾಡು, ಲವ್, ಕೀಟಲೆಗಳು, ಹೀಗೆ ಯುವ ಜನತೆಗೆ ಇಷ್ಟವಾಗುವ ವರ್ಣ ರಂಜಿತ ಕಥೆಯನ್ನು ಹಾಸ್ಯದ ಮೂಲಕ ತೆರೆಯ ಮೇಲೆ ತರುವ ಪ್ರಯತ್ನ ವನ್ನು ನಿರ್ದೇಶಕರು ಮಾಡಿದ್ದಾರೆ.
ಕಿರುತೆರೆಯಲ್ಲಿ ಪ್ರಸಾರವಾದ ಜನಪ್ರಿಯ ಧಾರವಾಹಿ’ ಸತ್ಯ ‘ದಲ್ಲಿ ಬಾಲನ ಪಾತ್ರ ಮಾಡಿರುವ ಶಶಿ ರಾಜ್ ಈ ಚಿತ್ರದ ಮೂಲಕ ನಾಯಕನಾಗಿ ಭಡ್ತಿ ಪಡೆದಿದ್ದರೆ. ಉಳಿದ ತಾರಾಗಣದಲ್ಲಿ ಪ್ರಜ್ವಲ್ ಗೌಡ, ಸುಖೇಶ್, ಚಾರಿತ್ರಾ ರಾವ್,ಸಹನಾ ಆರಾಧ್ಯ ಹೀಗೆ ಹೊಸಬರ ದಂಡು ಈ ಚಿತ್ರದಲ್ಲಿದೆ.
ಈಗಾಗಲೇ ವಿಕಾಸ್ ವಶೀಷ್ಠ ಸಂಗೀತ ನೀಡಿರುವ ಚಂದನ್ ಶೆಟ್ಟಿ ಹಾಡಿರುವ ಗಣೇಶ ಫಂಕ್ಷನ್ ಹಾಡು ಹಿಟ್ ಆಗಿದ್ದು,ಏನೋ ಶುರುವಾಗಿದೆ ಎಂಬ ಮೆಲೋಡಿ ಹಾಡು ಕೂಡ ಜನರ ಮನ ಸೆಳೆದಿದೆ. ಭರತ ವರ್ಷ ಲಾಂಛನದಲ್ಲಿ ನಿರ್ಮಿಸಲಾಗಿರುವ ಈ ಚಿತ್ರ ಮುಂದಿನ ತಿಂಗಳು ಬಿಡುಗಡೆಯಾಗಲಿದೆ.