ಕೊರೋನಾ 2020 ಹಾಗೂ 2021ನೇ ಸಾಲಿನಲ್ಲಿ ತನ್ನ ಅಬ್ಬರ ತೋರಿಸಿತ್ತು. ಈ ವರ್ಷ ಅದು ಅಷ್ಟಾಗಿ ಇನ್ನೂ ತನ್ನ ಕೆಂಗಣ್ಣು ಬೀರಿಲ್ಲ. ಇದು ಒಳ್ಳೆಯ ಬೆಳವಣಿಗೆಯೇ ಸರಿ. ಆದರೆ ಹಾಗೆಂದು ನೀವು ನಿರ್ಲಕ್ಷ್ಯ ತೋರದಿರಿ. ಕೆಳಕಂಡ ಟಿಪ್ಸ್ ನಿಮಗೆ ಮೊದಲಿನಿಂದಲೇ ಸನ್ನದ್ಧರಾಗಿರಲು ನೆರವಾಗುತ್ತದೆ…….
ಕೊರೋನಾ ಮೊದಲು ಮತ್ತು ಎರಡನೇ ಅಲೆಗಳು ಭಾರತದ ಬೇರೆ ಬೇರೆ ರಾಜ್ಯಗಳಲ್ಲಿ `ಹೆಲ್ತ್ ಎಮರ್ಜೆನ್ಸಿ’ ಸ್ಥಿತಿಯನ್ನು ತಂದೊಡ್ಡಿದ. ಮೂರನೇ ಅಲೆ ಕೂಡ ಒಂದಷ್ಟು ಮಟ್ಟಿಗೆ ಸಮಸ್ಯೆ ತಂದೊಡ್ಡಿತು. ಇನ್ನು ಮುಂದೆ ಆ ಸಮಸ್ಯೆ ಬರುವುದೇ ಇಲ್ಲವೆಂದು ಬಹಳಷ್ಟು ಜನ ಅಂದುಕೊಂಡಿದ್ದಾರೆ. ಅದನ್ನೇ ಗಮನದಲ್ಲಿಟ್ಟುಕೊಂಡು ಸಾಕಷ್ಟು ನಿರ್ಲಕ್ಷ್ಯ ಧೋರಣೆ ಹೊಂದಿದ್ದಾರೆ.
ಕೊರೋನಾದ ಅಪಾಯ ಸಂಪೂರ್ಣವಾಗಿ ಮಾಯವಾಗಿಲ್ಲ. ಅದಿನ್ನೂ ಜೀವಂತವಾಗಿದೆ. ಭಾರತದ ಅಲ್ಲಲ್ಲಿ ಕೆಲವೊಮ್ಮೆ ಹೆಚ್ಚು, ಕೆಲವೊಮ್ಮೆ ಕಡಿಮೆ ಪ್ರಮಾಣದಲ್ಲಿ ಕಾಣಿಸಿಕೊಳ್ಳುವುದರ ಮೂಲಕ ತಾನಿನ್ನೂ ಅಸ್ತಿತ್ವದಲ್ಲಿದ್ದೇನೆ ಎಂದು ಸಾಬೀತುಪಡಿಸುತ್ತಿದೆ. ಕೊರೋನಾದ ಹಾವಳಿ ಸಂಪೂರ್ಣವಾಗಿ ಕಡಿಮೆ ಆಗಿಲ್ಲ. ಹಾಗಾಗಿ ನೀವು ಆತಂಕಗೊಳ್ಳದೆ, ಕೆಲವು ಮುನ್ನೆಚ್ಚರಿಕೆ ವಹಿಸುವುದರ ಮೂಲಕ ಅದನ್ನು ಎದುರಿಸಲು, ಸದಾ ಸನ್ನದ್ಧರಾಗಿರಿ. ಏಕೆಂದರೆ ಸಂಕಷ್ಟ ಎದುರಾದಾಗ ನೀವು ಒಮ್ಮೆಲೆ ಆತಂಕಗೊಳ್ಳುವ ಸ್ಥಿತಿ ಬರಬಾರದು. ಹಾಗಾಗಿ ಮನೆಯ ಯಾವ ಸಿದ್ಧತೆ ಮಾಡಿಕೊಳ್ಳಬೇಕೆಂದು ತಿಳಿದುಕೊಳ್ಳಲು ಈ ಟಿಪ್ಸ್ ಅನುಸರಿಸಿ :
ಕೊರೋನಾ ಫಸ್ಟ್ ಏಡ್ ಕಿಟ್
ನಾವು ನಮ್ಮ ಮನೆಯಲ್ಲಿ, ವಾಹನದಲ್ಲಿ, ಬ್ಯಾಗ್ ನಲ್ಲಿ ಫಸ್ಟ್ ಏಡ್ ಕಿಟ್ ಇರಿಸಿಕೊಳ್ಳುತ್ತೇವೆ. ಏಕೆಂದರೆ ಸಂದರ್ಭ ಬಂದಾಗ ಅದನ್ನು ನಿಯಂತ್ರಣದಲ್ಲಿ ತರಲು ಸಾಧ್ಯವಾಗುತ್ತದೆ. ಅದೇ ರೀತಿ ಕೊರೋನಾ ಆತಂಕದ ದಿನಗಳಲ್ಲಿ ಕೊರೋನಾದ ಫಸ್ಟ್ ಏಡ್ ಕಿಟ್ ಇರಿಸಿಕೊಳ್ಳಬೇಕು. ಏಕೆಂದರೆ ತುರ್ತು ಸ್ಥಿತಿ ಉಂಟಾದ ಸಂದರ್ಭದಲ್ಲಿ ನಾವು ಒಮ್ಮೆಲೇ ಗಾಬರಿಗೊಳ್ಳುವ ಸಂದರ್ಭ ಬಂದು ಬಿಡಬಾರದು.
ಕೊರೋನಾದ ಫಸ್ಟ್ ಏಡ್ ಕಿಟ್ ನಲ್ಲಿ ಏನೇನು ಇರಬೇಕು ಎಂದರೆ, ಪ್ಯಾರಾಸಿಟಮಲ್ ಮಾತ್ರೆ, ವಿಟಮಿನ್ ಸಿ, ಡಿ, ಝಿಂಕ್‌ಟ್ಯಾಬ್ಲೆಟ್, ಬಿ ಕಾಂಪ್ಲೆಕ್ಸ್, ಬಾಯಿ ಮುಕ್ಕಳಿಸಲು ಬೀಟಾಡೋನ್, ಪ್ಸ್ ಆಕ್ಸಿಮೀಟರ್, ಹಬೆ ತೆಗೆದುಕೊಳ್ಳಲು ಸ್ಟೀಮರ್, ಕ್ಯಾಪ್ಸೂಲ್ ಹಾಗೂ ಥರ್ಮಾಮೀಟರ್ ಅವಶ್ಯವಾಗಿ ಇಟ್ಟುಕೊಳ್ಳಿ. ಇವು ದೇಹದ ಯಾವುದೇ ಭಾಗಕ್ಕೆ ಯಾವುದೇ ತೊಂದರೆ ಉಂಟು ಮಾಡುವುದಿಲ್ಲ.
ನಿಮಗೆ ಯಾವುದಾದರೂ ಲಕ್ಷಣಗಳು ಕಂಡುಬಂದರೆ ತಕ್ಷಣವೇ ಅವನ್ನು ತೆಗೆದುಕೊಳ್ಳಬೇಕಾಗುತ್ತದೆ. ವಿಟಮಿನ್ ಹಾಗೂ ಝಿಂಕ್‌ಟ್ಯಾಬ್ಲೆಟ್ ಗಳನ್ನು ನೀವು ಯಾವುದೇ ಲಕ್ಷಣಗಳು ಇಲ್ಲದೇ ಇದ್ದಾಗಲೂ ಆರಂಭಿಸಬಹುದು. ಏಕೆಂದರೆ ಇವು ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಕೆಲಸ ಮಾಡುತ್ತವೆ.
ಮಾಸ್ಕ್ ಸಂಗ ತೊರೆಯದಿರಿ
ಆರೋಗ್ಯ ತಜ್ಞರು ಹೊರಗೆ ಹೋಗುವಾಗ ಮಾಸ್ಕ್ ಧರಿಸಲೇಬೇಕೆಂದು ಹೇಳುತ್ತಾರೆ. ಅವರ ಈ ಸಲಹೆಯನ್ನು ನಿರ್ಲಕ್ಷಿಸಬೇಡಿ. ನೀವು ನಿಮ್ಮ ಕಿಟ್ ನಲ್ಲೇ ಮಾಸ್ಕ್ ಗಳನ್ನು ಅವಶ್ಯವಾಗಿ ಇಡಿ. ಎನ್ -95 ಮಾಸ್ಕ್ ಅಥವಾ 3 ಪದರದ ಮಾಸ್ಕ್ ಗಳನ್ನು ಬಳಸಿ. ಇವು ಬ್ಯಾಕ್ಟೀರಿಯಾಗಳು ಹಾಗೂ ವೈರಸ್ ಗಳಿಂದ ಸುರಕ್ಷತೆ ದೊರಕಿಸಿಕೊಡುತ್ತವೆ.
ನೀವು ಮರು ಬಳಸಲ್ಪಡುವ ಮಾಸ್ಕ್ ಗಳನ್ನು ಸಹ ಜೊತೆಗಿಟ್ಟುಕೊಳ್ಳಿ. ಏಕೆಂದರೆ ಕುಟುಂಬದ ಯಾವುದೇ ಸದಸ್ಯರಲ್ಲಿ ಇದರ ಲಕ್ಷಣಗಳು ಗೋಚರಿಸಿದರೆ, ನೀವು ಅವರಿಗೆ ಈ ಮಾಸ್ಕ್ ಗಳನ್ನು ಕೊಟ್ಟು ಉಳಿದವರಿಗೆ ಸುರಕ್ಷತೆ ದೊರಕಿಸಿಕೊಡಬಹುದು. ಸಾಧ್ಯವಾದರೆ 2-3 ಜೊತೆ ಗ್ಲೌಸ್ ಗಳನ್ನು ಕೂಡ ತಂದಿಟ್ಟುಕೊಳ್ಳಿ. ಏಕೆಂದರೆ ಆ ಸಂದರ್ಭದಲ್ಲಿ ಯಾರಿಗೆ ಯಾವುದರ ಉಪಯೋಗ ಆಗಬಹುದೋ ಹೇಳಲಾಗದು.
ಸ್ಯಾನಿಟೈಸರ್ ಕೂಡ ಅವಶ್ಯ
ಯಾವಾಗ, ಯಾವ ವಸ್ತುವನ್ನು ಮುಟ್ಟಿದಾಗ ನಾವು ಬ್ಯಾಕ್ಟೀರಿಯಾ ಹಾಗೂ ವೈರಸ್ ನ ಸಂಪರ್ಕಕ್ಕೆ ಬರುತ್ತೇವೆ ಹೇಳಲಾಗದು. ಹೀಗಾಗಿ ಮಾಸ್ಕ್ ಜೊತೆಗೆ ಕೈಗಳನ್ನು ಸ್ವಚ್ಛಗೊಳಿಸುವ ಸ್ಯಾನಿಟೈಸರ್ ಕೂಡ ಅವಶ್ಯ. ನೀವು ಅದಕ್ಕಾಗಿ ಎಂತಹ ಸ್ಯಾನಿಟೈಸರ್‌ಬಳಸಬೇಕೆಂದರೆ, ಅದರಲ್ಲಿ 70% ಆಲ್ಕೋಹಾಲ್ ಇರಬೇಕು. ಜೊತೆಗೆ ತ್ವಚೆಯನ್ನು ಮಾಯಿಶ್ಚರೈಸ್ ಗೊಳಿಸುವ ಪ್ರಾಪರ್ಟೀಸ್ ಕೂಡ ಇರಬೇಕು. ಏಕೆಂದರೆ ತ್ವಚೆ ಸ್ಯಾನಿಟೈಸರ್ ನ ಪ್ರಭಾವಕ್ಕೊಳಗಾಗಿ ಡ್ರೈ ಆಗಬಾರದು. ನೀವು ಸ್ಯಾನಿಟೈಸರ್ ನ ಸಣ್ಣ ಸಣ್ಣ ಬಾಟಲ್ ಗಳನ್ನು ಖರೀದಿಸಿ ಇಟ್ಟುಕೊಳ್ಳಿ. ಮನೆಯಲ್ಲಿ ನೀವು ಸ್ಯಾನಿಟೈಸರ್ ಬದಲಿಗೆ ಸೋಪ್ ಅಥವಾ ಹ್ಯಾಂಡ್ ವಾಶ್ ಬಳಸಿ.
ವೈದ್ಯರ ನಂಬರ್ ಇಟ್ಟುಕೊಳ್ಳಿ
ನಿಮ್ಮ ಆಸುಪಾಸು ಹೆಚ್ಚಿನ ಜನರು ಕೊರೋನಾ ಪಾಸಿಟಿವ್ ಆಗಿದ್ದಲ್ಲಿ, ನಿಮ್ಮ ಕುಟುಂಬದವರು ಅಂತಹ ಸಮಸ್ಯೆಗೆ ತುತ್ತಾಗದೇ ಇದ್ದರೂ ಕೂಡ ನೀವು ನಿಶ್ಚಿಂತರಾಗಿ ಕುಳಿತುಕೊಳ್ಳಬೇಡಿ. ನೀವು ನಿಮ್ಮ ಆಸುಪಾಸಿನ ಡಾಕ್ಟರ್ ಗಳ ನಂಬರ್ ಹಾಗೂ ಆಸ್ಪತ್ರೆಗಳ ವಿವರ ಸಂಗ್ರಹಿಸಿ ಇಟ್ಟುಕೊಳ್ಳಿ. ಸಾಧ್ಯವಾದರೆ ಮನೆಯಲ್ಲಿ ಆಕ್ಸಿಜನ್ ಸಿಲಿಂಡರ್ ನ್ನು ತಂದಿರಿಸಿಕೊಂಡರೂ ಅಡ್ಡಿಯಿಲ್ಲ. ನಿಮ್ಮ ಪರಿಚಯದವರಲ್ಲಿ ಯಾರಾದರೂ ಕೊರೋನಾ ಪಾಸಿಟಿವ್ ಆಗಿದ್ದಲ್ಲಿ, ಅಂಥವರಿಂದ ಲಕ್ಷಣಗಳ ಬಗ್ಗೆ ಕೇಳಿ ತಿಳಿದುಕೊಂಡು ಬಹುಬೇಗ ಜಾಗೃತರಾಗಲು ಅನುಕೂಲವಾಗುತ್ತದೆ.
ಕೊರೋನಾದಲ್ಲಿ ಏನು ಮಾಡಬೇಕು?
ಕೊರೋನಾಗೆ ಇನ್ನೂ ಪ್ರಭಾವಿ ಚಿಕಿತ್ಸೆ ಇಲ್ಲ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. ಈಗ ಬಂದಿರುವ ಲಸಿಕೆಗಳು ನಿಮ್ಮನ್ನು ಕೊರೋನಾದಿಂದ ಅಷ್ಟಿಷ್ಟು ಪ್ರಮಾಣದಲ್ಲಿ ಮಾತ್ರ ರಕ್ಷಿಸುತ್ತವೆ. ಒಂದು ವೇಳೆ ನಿಮ್ಮ ಕುಟುಂಬದಲ್ಲಿ ಯಾರಿಗಾದರೂ ಕೊರೋನಾ ಪಾಸಿಟಿವ್ ಬಂದಿದ್ದರೆ ಗಾಬರಿಗೊಳಗಾಗಬೇಡಿ. ಲಕ್ಷಣಗಳನ್ನು ಗಮನಿಸಿ. ಒಂದು ವೇಳೆ ಉಸಿರು ತೆಗೆದುಕೊಳ್ಳುವಲ್ಲಿ ಯಾವುದಾದರೂ ಸಮಸ್ಯೆ ಆಗುತ್ತಿದ್ದರೆ, ಆಕ್ಸಿಜನ್ ಲೆವೆಲ್ ನಾರ್ಮಲ್ ಆಗಿದ್ದರೆ ಇದು ಆರಂಭಿಕ ಹಂತ ಎನ್ನುವುದು ನಿಮ್ಮ ಗಮನದಲ್ಲಿರಲಿ. ಇದನ್ನು ಮನೆಯಲ್ಲಿಯೇ ಔಷಧಿಗಳ ಮುಖಾಂತರ ಹಾಗೂ ಹೋಮ್ ಐಸೋಲೇಶನ್ ಮುಖಾಂತರ ಇಂಪ್ರೂವ್ ಮಾಡಬಹುದು. ನೀವು ವೈದ್ಯರೊಬ್ಬರ ಸಂಪರ್ಕದಲ್ಲಿರಬೇಕು, ಸೂಕ್ತ ಕಾಳಜಿ ಹಾಗೂ ಸಕಾಲಕ್ಕೆ ಔಷಧಿಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಅದರಿಂದ 15-20 ದಿನಗಳಲ್ಲಿ ರೋಗಿ ಆರೋಗ್ಯವಂತನಾಗುತ್ತಾನೆ.
ಒಂದು ವೇಳೆ ಜ್ವರ ಹೆಚ್ಚಾಗಿದ್ದಲ್ಲಿ, ಅತಿಯಾದ ಕೆಮ್ಮಿನ ಜೊತೆಗೆ ಉಸಿರು ತೆಗೆದುಕೊಳ್ಳಲು ಸಮಸ್ಯೆ ಆಗುತ್ತಿದ್ದಲ್ಲಿ, ತಕ್ಷಣವೇ ವೈದ್ಯರ ಸಲಹೆಯ ಮೇರೆಗೆ ರೋಗಿಯನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಬೇಕು. ಏಕೆಂದರೆ ರೋಗಿಯ ಆಕ್ಸಿಜನ್ ಲೆವೆಲ್ ಕಡಿಮೆ ಆಗದಂತೆ ನೋಡಿಕೊಳ್ಳಬೇಕು.
ಸ್ವತಃ ಮೋಟಿವೇಟ್ ಮಾಡಿಕೊಳ್ಳಿ
ಕೊರೋನಾ ತನ್ನ ಕಬಂಧ ಬಾಹುಗಳನ್ನು ಪಸರಿಸುತ್ತಿದ್ದಂತೆ ಬಹಳಷ್ಟು ಜನರಿಗೆ ಗಾಬರಿ ಆತಂಕವಾಗುತ್ತದೆ. ಆದರೆ ಆ ಸಮಯದಲ್ಲಿ ಗಾಬರಿಗೊಳಗಾಗಬೇಡಿ. ಧೈರ್ಯದಿಂದ ಕಾರ್ಯಪ್ರವೃತ್ತರಾಗಿ. ನಿಮ್ಮ ಮನಸ್ಸಿನಲ್ಲಿನ ನಕಾರಾತ್ಮಕ ಭಾವನೆಗಳ ಹೊರತಾಗಿ, ಕೊರೋನಾವನ್ನು ಸೋಲಿಸಿ, ಈಗ ನೆಮ್ಮದಿಯಿಂದ ಜೀವನ ನಡೆಸುತ್ತಿರುವವರನ್ನು ಸಂಪರ್ಕಿಸಿ, ಅಂಥವರ ಸಕಾರಾತ್ಮಕ ನಡೆಯನ್ನು ನಿಮ್ಮ ಜೀವನದಲ್ಲೂ ಅನ್ವಯಿಸಿ. ಕೊರೋನಾ ವರದಿ ಪಾಸಿಟಿವ್ ಆಗುತ್ತಿದ್ದಂತೆ ಅದರ ಪರಿಣಾಮ ಕೆಟ್ಟದ್ದೇ ಆಗುತ್ತೆ ಎಂದು ಯೋಚಿಸಲು ಹೋಗಬೇಡಿ. ಆದರೆ ವಾಸ್ತವ ಹಾಗಿರುವುದಿಲ್ಲ.
ಒಂದು ವೇಳೆ ನೀವು ಸಾಮಾನ್ಯ ಲಕ್ಷಣಗಳನ್ನು ನಿರ್ಲಕ್ಷಿಸದೇ ಸಕಾಲಕ್ಕೆ ನಿಮಗೆ ಚಿಕಿತ್ಸೆ ದೊರೆತಲ್ಲಿ ನೀವು ಮೊದಲಿನಂತೆ ಸಾಮಾನ್ಯ ಜೀವನ ನಡೆಸಬಹುದು. ಕೊರೋನಾ ಪಸರಿಸುವ ಸಂದರ್ಭದಲ್ಲಿ ಕೆಟ್ಟ ಸುದ್ದಿಗಳಿಂದ ನಿಮ್ಮನ್ನು ನೀವು ದೂರ ಇಟ್ಟುಕೊಳ್ಳಿ. ಒಳ್ಳೆಯ ಯೋಚನೆ, ಒಳ್ಳೆಯ ವಾತಾವರಣ ನಿಮ್ಮನ್ನು ಬಹುಬೇಗ ಸಾಮಾನ್ಯ ಸ್ಥಿತಿಗೆ ತರಲು ನೆರವಾಗುತ್ತದೆ.
ಎಲ್ಲರ ಟೆಸ್ಟ್ ಗಳೂ ಅಗತ್ಯ
ಕುಟುಂಬದಲ್ಲಿ ಯಾರಾದರೂ ಒಬ್ಬರಿಗೆ ಕೊರೋನಾ ಪಾಸಿಟಿವ್ ಬಂದ್ದಿದ್ದಲ್ಲಿ, ಕುಟುಂಬದ ಇತರೆ ಸದಸ್ಯರ ಪರೀಕ್ಷೆಗಳನ್ನೂ ಅವಶ್ಯವಾಗಿ ಮಾಡಿಸಿ. ಏಕೆಂದರೆ ಬಹಳಷ್ಟು ಜನರಲ್ಲಿ ಕಂಡುಬಂದ ಸಂಗತಿಯೆಂದರೆ, ಅರಲ್ಲಿ ಯಾವುದೇ ಲಕ್ಷಣಗಳು ಗೋಚರಿಸದಿದ್ದರೂ ಅವರ ವರದಿ ಪಾಸಿಟಿವ್ ಬರುತ್ತದೆ.
ಸಕಾಲಕ್ಕೆ ಮಾಡಿಸಿಕೊಳ್ಳುವ ಪರೀಕ್ಷೆಯಿಂದ ಚಿಕಿತ್ಸೆ ದೊರೆಯಲು ಸುಲಭವಾಗುತ್ತದೆ. ನಿಮ್ಮ ಕುಟುಂಬದಲ್ಲಿ ಮಕ್ಕಳು ಇದ್ದಲ್ಲಿ, ಅವರು ನೆಗೆಟಿವ್ ಆಗಿದ್ದಲ್ಲಿ ಅವರನ್ನು ನಿಮ್ಮ ಸಂಬಂಧಿಕರ ಬಳಿ ಕಳಿಸಿಕೊಡಿ. ಏಕೆಂದರೆ ಅವರಿಗೆ ಸೋಂಕಿನ ಯಾವುದೇ ಅಪಾಯ ಉಂಟಾಗಬಾರದು.
ಕುಟುಂಬದ ಯಾರಾದರೂ ಸದಸ್ಯರಿಗೆ ಪಾಸಿಟಿವ್ ಬಂದಲ್ಲಿ ವೈದ್ಯರ ಸಂಪರ್ಕ ಮಾಡಿ, ಯಾವುದೇ ಟೆಸ್ಟ್ ಮಾಡಿಸದೆಯೇ ಉಳಿದವರಿಗೆ ಔಷಧಿ ಚಿಕಿತ್ಸೆ ಆರಂಭಿಸಿ ಅವರನ್ನು ಸೇಫ್‌ಝೋನ್ ನಲ್ಲಿ ಇಡಬಹುದು.
ತಿಳಿವಳಿಕೆ ಅಗತ್ಯ
ಒಂದು ವೇಳೆ ನಿಮಗೆ ಅಥವಾ ಕುಟುಂಬದ ಯಾರಾದರೂ ಸದಸ್ಯರಿಗೆ ಕೊರೋನಾ ಪಾಸಿಟಿವ್ ಬಂದಲ್ಲಿ, ಆತಂಕಕ್ಕೆ ಒಳಗಾಗದೆ, ತಿಳಿವಳಿಕೆಯಿಂದ ಹೆಜ್ಜೆ ಹಾಕುವುದು ಅತ್ಯಗತ್ಯ. ಕೊರೋನಾ ವೇಗವಾಗಿ ಪಸರಿಸುವ ಸಂದರ್ಭದಲ್ಲಿ ವೈದ್ಯರ ಮೇಲೆ ಸಾಕಷ್ಟು ಒತ್ತಡ ಬೀಳುತ್ತದೆ. ಇಂತಹ ಸಂದರ್ಭದಲ್ಲಿ ನೀವು ಒಬ್ಬ ಡಾಕ್ಟರ್ ಜೊತೆಗೆ ಆನ್ ಲೈನ್ ಕನ್ಸಲ್ಟ್ ಮಾಡುತ್ತಿದ್ದರೆ, ಬೇರೆ ಡಾಕ್ಟರ್ ನ್ನು ಕೂಡ ಬ್ಯಾಕ್ ಅಪ್ ನಲ್ಲಿ ಇಟ್ಟುಕೊಳ್ಳಿ. ಏಕೆಂದರೆ ಒಬ್ಬರಿಂದ ಉತ್ತರ ಬರದಿದ್ದಾಗ, ನೀವು ಇನ್ನೊಬ್ಬರ ಸಲಹೆಯ ಮೇರೆಗೆ ರೋಗಿಗೆ ಸೂಕ್ತ ಚಿಕಿತ್ಸೆ ಕೊಡಿಸಬಹುದು.
ಇದರ ಜೊತೆಗೆ ನಿಮ್ಮ ಪರಿಚಿತರಲ್ಲಿ ಯಾರಿಗಾದರೂ ಕೊರೋನಾ ಬಂದಿದ್ದರೆ ಅವರ ಸಂಪರ್ಕದಲ್ಲೂ ಇರಿ. ಅವರಿಂದ ನಿಮಗೆ ಸೂಕ್ತ ಮಾಹಿತಿ ಹಾಗೂ ಸಲಹೆ ದೊರಕುವುದರಿಂದ ಬಹಳ ಉಪಯೋಗವಾಗುತ್ತದೆ. ಅಷ್ಟೇ ಅಲ್ಲ, ಆಸ್ಪತ್ರೆಗಳ ಬೆಡ್ ಲಭ್ಯತೆ ಮತ್ತು ಆಕ್ಸಿಜನ್ ಸಿಲಿಂಡರ್ ಗಳ ಬಗೆಗೂ ತಿಳಿದುಕೊಳ್ಳಿ.
ಆತಂಕಗೊಳ್ಳದಿರಿ….
ಕೋವಿಡ್ ವರದಿ ಪಾಸಿಟಿವ್ ಬರುತ್ತಿದ್ದಂತೆ ಕುಟುಂಬದಲ್ಲಿ ಆತಂಕ ಮನೆ ಮಾಡುತ್ತದೆ. ಆದರೆ ಆರ್.ಟಿ.ಪಿ.ಸಿ.ಆರ್ ನಲ್ಲಿ ಸಿಟಿ ವ್ಯಾಲ್ಯೂ ಕಡಿಮೆ ಇದ್ದಲ್ಲಿ ನಿಮಗೆ ಹೆಚ್ಚು ಎಚ್ಚರಿಕೆ ವಹಿಸುವ ಅಗತ್ಯ ಇರುತ್ತದೆ. ಏಕೆಂದರೆ ಇಂತಹ ರೋಗಿಗಗಳಲ್ಲಿ ವೈರಸ್ ಲೋಡ್‌ಸಾಕಷ್ಟು ಹೆಚ್ಚು ಇರುತ್ತದೆ. ಹೀಗಾಗಿ ಅವರಿಗೆ ಹಾಗೂ ಇತರರಿಗೆ ಸಾಕಷ್ಟು ಅಪಾಯವಿರುತ್ತದೆ. ಆದರೆ ಜ್ವರ ತೀವ್ರವಾಗಿರದಿದ್ದಲ್ಲಿ, ಕೆಮ್ಮು ಕಡಿಮೆ ಇದ್ದು, ಆಕ್ಸಿಜನ್ ಲೆವೆಲ್ ಸಾಮಾನ್ಯವಾಗಿದ್ದಲ್ಲಿ, ಹೋಮ್ ಐಸೋಲೇಶನ್ ನಿಂದ ರೋಗಿಯನ್ನು ಗುಣಪಡಿಸಬಹುದಾಗಿದೆ.
ಬಹಳಷ್ಟು ಜನರು ಜ್ವರ ಬರುತ್ತಿದ್ದಂತೆ ಎಚ್.ಆರ್.ಟಿ.ಸಿ ಮಾಡಿಸಿಕೊಳ್ಳಲು ಹೋಗುತ್ತಾರೆ. ಆದರೆ ಅದರಿಂದ ಹೆಚ್ಚಿನ ಲಾಭವೇನೂ ಆಗದು. ವೈದ್ಯರು 5-6 ದಿನಗಳ ಬಳಿಕವೇ ಅದನ್ನು ಮಾಡಿಸಿಕೊಳ್ಳಲು ಸಲಹೆ ನೀಡುತ್ತಾರೆ. ಆಗಲೇ ಅದರ ಪರಿಣಾಮ ನಿಖರವಾಗಿ ಬರುತ್ತದೆ. ಸಿಟಿ ಸ್ಕ್ಯಾನ್ ನಲ್ಲಿ 24ರಲ್ಲಿ ಸ್ಕೋರ್ ನೀಡಲಾಗುತ್ತದೆ. ಆದರೆ ಲಂಗ್ಸ್ ತನಕ ಇನ್‌ಫೆಕ್ಷನ್ ತಲುಪಿದ್ದಲ್ಲಿ ಇದರ ಸ್ಕೋರ್ ಕೂಡ ಹೆಚ್ಚಿಗೆ ಬರುತ್ತದೆ. ಆಗ ವೈದ್ಯರು ಹೆಚ್ಚು ಎಚ್ಚರಿಕೆ ವಹಿಸಲು ತಿಳಿಸುತ್ತಾರೆ.
ಪರಿಸ್ಥಿತಿ ಹೇಗಿದೆ ಎಂದು ತಿಳಿದುಕೊಂಡು ಅದಕ್ಕನುಗುಣವಾಗಿ ಚಿಕಿತ್ಸೆ ಪಡೆಯಬೇಕು. ಆತುರಾತುರದಲ್ಲಿ ಯಾವುದೇ ನಿರ್ಧಾರಕ್ಕೆ ಬರಬೇಡಿ.
ಯಾವ ಯಾವ ಟೆಸ್ಟ್ ಅತ್ಯವಶ್ಯ?
ಕೋವಿಡ್ ನ ಸೋಂಕು ಎಷ್ಟರಮಟ್ಟಿಗೆ ಇದೆ, ದೇಹದ ಮೇಲೆ ಎಷ್ಟರಮಟ್ಟಿಗೆ ಅದರ ಪ್ರಭಾವ ಬೀರುತ್ತಿದೆ ಎನ್ನುವುದನ್ನು ತಿಳಿದುಕೊಳ್ಳಲು ಸಿಬಿಸಿ, ಸಿ.ಆರ್.ಪಿ, ಡಿಡೈಮರ್, ಸೀರಮ್ ಫೆರಿನಟನ್ ಎಚ್.ಆರ್.ಸಿ.ಟಿ ಮುಂತಾದ ಪರೀಕ್ಷೆಗಳನ್ನು ಮಾಡಿಸಲಾಗುತ್ತದೆ. ಆದರೆ ಈ ಎಲ್ಲ ಟೆಸ್ಟ್ ಗಳನ್ನು ವೈದ್ಯರು 14 ದಿನಗಳ ಸರ್ಕಲ್ ನ ಲೆಕ್ಕಾಚಾರದಂತೆ ಮಾಡಿಸುತ್ತಾರೆ. ಏಕೆಂದರೆ ಸೂಕ್ತ ಫಲಿತಾಂಶ ದೊರಕಬೇಕು. ಹೀಗಾಗಿ ಆರಂಭದಲ್ಲಿಯೇ ಇವನ್ನು ಮಾಡಿಸುವ ಆತುರ ತೋರಿಸಬೇಡಿ.
ರೋಗಿಯ ಕೋಣೆ ಹೇಗಿರಬೇಕು?
ವಿಷಯ ಹೋಮ್ ಐಸೋಲೇಶನ್ ದಾಗಿದ್ದರೆ, ರೋಗಿಯ ಕೋಣೆ ಸರಿಯಾಗಿ ಗಾಳಿ ಸಂಚರಿಸುವಂಥದ್ದಾಗಿರಬೇಕು. ಅದಕ್ಕೆ ಅಟ್ಯಾಚ್ಡ್ ವಾಶ್ ರೂಮ್ ಗಳ ವ್ಯವಸ್ಥೆ ಕೂಡ ಇರಬೇಕು. ಏಕೆಂದರೆ ಉಳಿದ ಸದಸ್ಯರಿಗೆ ಸೋಂಕಿನ ಭಯ ಇರಬಾರದು.
ರೋಗಿಗೆ ಔಷಧಿಗಳು ಅಥವಾ ಆಹಾರ ಕೊಡುವ ಸಂದರ್ಭ ಬಂದಾಗ, ರೂಮಿನ ಹತ್ತಿರವೇ ಒಂದು ಸ್ಟೂಲ್ ಇಡಿ. ಅದರ ಮೇಲೆ ಅವರಿಗೆ ಕೊಡುವ ವಸ್ತುಗಳನ್ನು ಇಡಿ. ರೋಗಿ ಉಪಯೋಗಿಸಿದ ತಟ್ಲೆ, ಪ್ಲೇಟ್ ಡಿಸ್ಪೋಸೆಬಲ್ ಆಗಿರಲಿ. ಉಳಿದ ಆಹಾರ ಹಾಕಲು ಒಂದು ಪಾಲಿಥಿನ್ ಕವರ್ ಇಡಿ. ಮರುದಿನ ಬೆಳಗ್ಗೆ ಪಾಲಿಥಿನ್ ಬ್ಯಾಗ್ ನ್ನು ಹೊರಗೆ ಸಾಗಿಸಿ. ಬಳಿಕ ಸ್ಯಾನಿಟೈಸ್ ಮಾಡಿ. ಇಷ್ಟೆಲ್ಲ ಮಾಡಲು ನೀವು ಡಬಲ್ ಮಾಸ್ಕ್ ಧರಿಸುವುದು ಅತ್ಯಗತ್ಯ.
ಮೇಲಿಂದ ಮೇಲೆ ಕೈ ಸ್ವಚ್ಛಗೊಳಿಸಿ
ಮುಖಕ್ಕೆ ಮಾಸ್ಕ್ ಧರಿಸುವುದರ ಜೊತೆಗೆ ಕೈಗಳನ್ನು ಆಗಾಗ ಸೋಪ್ ಅಥವಾ ಸ್ಯಾನಿಟೈಸರ್ ನಿಂದ ಸ್ವಚ್ಛಗೊಳಿಸಿಕೊಳ್ಳಿ. ನೀವು ಬಳಸುವ ಸ್ಯಾನಿಟೈಸರ್ ನಲ್ಲಿ ಆಲ್ಕೋಹಾಲ್ ಪ್ರಮಾಣ ಹೆಚ್ಚಿಗೆ ಇರುವಂತೆ ನೋಡಿಕೊಳ್ಳಿ.
ಹೋಮ್ ಟ್ರೀಟ್ ಮೆಂಟ್ ಒಂದು ವೇಳೆ ರೋಗಿ ಹೋಮ್ ಐಸೋಲೇಶನ್ ನಲ್ಲಿ ಇದ್ದರೆ, ದಿನಕ್ಕೆ 3 ಸಲ ಬಾಯಿ ಮುಕ್ಕಳಿಸಬೇಕು. 3 ಸಲ ಹಬೆ ತೆಗೆದುಕೊಳ್ಳಬೇಕು, 2 ಸಲ ಕಷಾಯ ಕುಡಿಯಬೇಕು. ಕುಡಿಯಲು ಯಾವಾಗಲೂ ಬಿಸಿನೀರು ಕೊಡಬೇಕು. ಒಂದು ವೇಳೆ ರೋಗಿಗೆ ಮಧುಮೇಹ ಇಲ್ಲದಿದ್ದರೆ, ಎಳನೀರು ಕೂಡ ಕೊಡಬಹುದು. ಇದರಿಂದ ವಿಟಮಿನ್ಸ್ ಹಾಗೂ ಮಿನರಲ್ಸ್ ನ ಕೊರತೆ ನೀಗಿಸುವುದರ ಜೊತೆಗೆ ಬಾಡಿ ಹೈಡ್ರೇಟ್ ಕೂಡ ಆಗುತ್ತದೆ.
ಮಾಸ್ಕ್ ಹೇಗಿರಬೇಕು?
ಯಾವುದೇ ತೆರನಾದ 3 ಲೇಯರ್ ಮಾಸ್ಕ್ ಉಪಯುಕ್ತವಾಗಿರುತ್ತದೆ. ಏಕೆಂದರೆ ಇದು ವೈದ್ಯರನ್ನು ಜೊತೆ ಜೊತೆಗೆ ಧೂಳನ್ನು ಕೂಡ ನಿಮ್ಮಿಂದ ದೂರ ಇಡುತ್ತದೆ. ಅದಕ್ಕಾಗಿ ನೀವು ಮಾರುಕಟ್ಟೆಯಲ್ಲಿ ದೊರಕುವ ಎನ್ ಮಾಸ್ಕ್ ಅಥವಾ ಡಿಸ್ಪೋಸೆಬಲ್ ಮಾಸ್ಕ್ ನ್ನು ಬಳಸಬಹುದು. ರೋಗಿಗೆ ಉಸಿರುಗಟ್ಟಿದಂತಾಗದಿರಲು ಕಾಟನ್ ನ 3 ಲೇಯರ್ ನ ಮಾಸ್ಕ್ ಸಹ ಕೊಡಬಹುದು.
ಮಾನಸಿಕ ಫಿಟ್ ನೆಸ್ ಹೇಗೆ?
ಟಿ.ವಿ., ಲ್ಯಾಪ್ ಟಾಪ್, ಫೋನ್ ನಲ್ಲಿ ಸಿನಿಮಾ, ಮನರಂಜನೆ ಕಾರ್ಯಕ್ರಮ ವೀಕ್ಷಿಸುವುದರ ಮೂಲಕ ನಿಮ್ಮನ್ನು ಬಿಜಿಯಾಗಿಟ್ಟುಕೊಳ್ಳಿ. ದುಃಖಭರಿತ ಯಾವುದೇ ಕಾರ್ಯಕ್ರಮ ನೋಡಬೇಡಿ.
ಟಿವಿಯಲ್ಲಿ ನೆಗೆಟಿವ್ ನ್ಯೂಸ್ ಬರುತ್ತಿದ್ದರೆ, ಅವನ್ನು ನೋಡಲೇಬೇಡಿ.
ಮನಸ್ಸಿಗೆ ಖುಷಿ ಕೊಡುವ ಗೀತೆಗಳನ್ನು ಆಲಿಸಿ.
ಯೋಗ ಮಾಡಿ. ಇದು ಮನಸ್ಸನ್ನು ಶಾಂತಗೊಳಿಸುವುದಲ್ಲದೆ, ನಿಮ್ಮ ಫಿಟ್ ನೆಸ್ ನ್ನು ಕಾಯ್ದುಕೊಂಡು ಹೋಗಲು ನೆರವಾಗುತ್ತದೆ.
– ಪ್ರಗತಿ ಎಂ.
ಕ್ವಾರೆಂಟೈನ್ ನಲ್ಲಿ ಈ ಸಂಗತಿಗಳ ಬಗ್ಗೆ ಗಮನಹರಿಸಿ
ನಿಮ್ಮ ದೇಹದ ಉಷ್ಣತೆಯ ಬಗ್ಗೆ ಗಮನಹರಿಸಿ. ದಿನಕ್ಕೆ 4-5 ಸಲ ಜ್ವರ ಪರೀಕ್ಷೆ ಮಾಡಿಸಿ.
ಆಕ್ಸಿ ಮೀಟರ್ ನ ಸಹಾಯದಿಂದ ಆಕ್ಸಿಜನ್ ಲೆವೆಲ್ ನ್ನು ಪರೀಕ್ಷಿಸುತ್ತಾ ಇರಿ. ಒಂದು ವೇಳೆ ಆಕ್ಸಿಜನ್ ಪ್ರಮಾಣ 98-99 ರಿಂದ 94 ಅದಕ್ಕೂ ಕಡಿಮೆ ಆದಲ್ಲಿ ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ. ಏಕೆಂದರೆ ಈ ಸ್ಥಿತಿಯಲ್ಲಿ ಅಡ್ಮಿಟ್ ಆಗಿ ವಿಶೇಷ ಚಿಕಿತ್ಸೆ ನೀಡಬೇಕಾದ ಪರಿಸ್ಥಿತಿ ಉಂಟಾಗುತ್ತದೆ.
ಕೊರೋನಾವನ್ನು ಹಗುರವಾಗಿ ಭಾವಿಸಬೇಡಿ
ಬಹಳಷ್ಟು ಜನರು ನನಗೆ ಕೊರೋನಾ ಬರಲು ಸಾಧ್ಯವಿಲ್ಲ ಎಂದು ಹೇಳುತ್ತಾರೆ. ನನ್ನ ರೋಗ ನಿರೋಧಕ ಶಕ್ತಿ ಬಹಳ ಪ್ರಬಲವಾಗಿದೆ ಎನ್ನುವುದು ಅವರ ಮೊಂಡುವಾದಾಗಿರುತ್ತದೆ. ಆದಾಗ್ಯೂ ಅಂತಹವರೇ ಕೆಲವೊಮ್ಮೆ ಕೊರೋನಾದ ಕಪಿಮುಷ್ಟಿಗೆ ಸಿಲುಕುತ್ತಾರೆ. ಏಕೆಂದರೆ ಆ ವೈರಸ್ ಅಷ್ಟೊಂದು ಭಯಾನಕ ಆಗಿರುತ್ತದೆ. ನಾನು ನನ್ನ ಕಥೆಯನ್ನು ನಿಮಗೆ ಹೇಳಬಯಸುತ್ತೇನೆ. ಕಳೆದ ವರ್ಷ ನನಗೆ ಕೋವಿಡ್‌ಬಂದಿತ್ತು. ವೈದ್ಯರ ನಿರ್ಲಕ್ಷ್ಯ ಅದನ್ನು ಇನ್ನಷ್ಟು ವಿಕೋಪಕ್ಕೆ ತೆಗೆದುಕೊಂಡು ಹೋಯಿತು. ನಾವು ನಮ್ಮ ಫ್ಯಾಮಿಲಿ ಡಾಕ್ಟರ್ ಗೆ ವಿಡಿಯೋ ಕಾಲ್ ಮಾಡಿ ಅವರಿಗೆ ನಮ್ಮ ಪರಿಸ್ಥಿತಿ ವಿವರಿಸಿದಾಗ, ಅವರು ನಮಗೆ ಆರಂಭದ 5 ದಿನಗಳ ಔಷಧಿ ಬರೆದುಕೊಟ್ಟರು. ಆ ಔಷಧಿ ಸೇವನೆ ಮಾಡಿದರೂ ನಮ್ಮ ಗಂಟಲು ನೋವು ಹಾಗೂ ಜ್ವರ ಕಡಿಮೆ ಆಗಲಿಲ್ಲ. ಆ ಬಳಿಕ ಅವರನ್ನು ಪುನಃ ಸಂಪರ್ಕಿಸಲು ಪ್ರಯತ್ನಿಸಿದರೂ ಅವರು ಫೋನ್ ಕರೆ ಸ್ವೀಕರಿಸಲಿಲ್ಲ. ಸಂದೇಶಕ್ಕೂ ಉತ್ತರಿಸಲಿಲ್ಲ. ಆದರೆ ನನ್ನ ವೈರಲ್ ಲೋಡ್ ಹೆಚ್ಚಿಗೆ ಇತ್ತು ಎಂದು ಹೇಳಿ ಆರಂಭದಿಂದಲೇ ಬಹಳ ಎಚ್ಚರಿಕೆಯಿಂದಿರಲು ಸಲಹೆ ನೀಡಿದ್ದರು. ಆದರೆ ಇಂತಹ ಎಚ್ಚರಿಕೆಯಿಂದ ಕೂಡಿದ ಸಲಹೆಗಳ ಪ್ರಯೋಜನವಾದರೂ ಏನು? ಆಗ ಔಷಧಿಗಳ ಕೊರತೆ ಹಾಗೂ ವೈದ್ಯರು ಸಂಪರ್ಕಕ್ಕೆ ಸಿಗದೇ ಇದ್ದರೆ ಪರಿಸ್ಥಿತಿ ನಿಭಾಯಿಸುವುದು ಹೇಗೆ? ಇಂತಹ ಸ್ಥಿತಿಯಲ್ಲಿ ಯಾರೋ ಪರಿಚಿತರ ಹೇಳಿಕೆಯ ಮೇರೆಗೆ ನನ್ನ ಪತಿ ಪುಣೆಯ ವೈದ್ಯರನ್ನು ಸಂಪರ್ಕಿಸಿದರು. ಆಗ ಅವರು ಫ್ರಾಬಿಪ್ಲ್ಯ ಕೋರ್ಸ್ ಮಾಡಲು ಹೇಳಿದರು.
ಕ್ರಮೇಣ ನನ್ನ ಪರಿಸ್ಥಿತಿ ಸುಧಾರಿಸುತ್ತಾ ಹೋಯಿತು. ಆದರೆ ದೇಹ ಬಹಳ ನಿಶ್ಶಕ್ತಿಗೊಂಡಿತ್ತು. ಪರಿಸ್ಥಿತಿ ಇಷ್ಟಕ್ಕೆ ಮುಗಿಯಲಿಲ್ಲ. ನಾನು ಪಾಸಿಟಿವ್ ಆಗುತ್ತಿದ್ದಂತೆಯೇ ನನ್ನ ಪತಿ ಕೂಡ ಔಷಧಿ, ಮಾತ್ರೆ ತೆಗೆದುಕೊಳ್ಳಲು ಆರಂಭಿಸಿದ್ದರು. ಆದರೆ ಅವರ ರಿಪೋರ್ಟ್ ನೆಗೆಟಿವ್ ಬಂದಿತ್ತು. ವೈದ್ಯರು ಮತ್ತೊಂದು ಸಲ ನನ್ನ ಪತಿಗೆ ತೋರಿಸಲು ಹೇಳಿದ್ದರು. ಆದರೆ ವೈದ್ಯರಿಗೆ ಕಾಲ್ ಮಾಡಿದರೆ ಈಚೆಗೆ ಡಾಕ್ಟರ್ ಯಾರನ್ನೂ ನೋಡುತ್ತಿಲ್ಲ ಎಂದು ಹೇಳಿದರು. ಆ ಕಾರಣದಿಂದ ನನ್ನ ಗಂಡನ ಸ್ಥಿತಿ ಬಿಗಡಾಯಿಸುತ್ತಾ ಹೋಯಿತು. ಜ್ವರ 103-104 ತಲುಪಿತ್ತು. ತಲೆ ಹಾಗೂ ದೇಹದಲ್ಲಿ ವಿಪರೀತ ನೋವು. ಅವರ ಆಕ್ಸಿಜನ್ ಲೆವೆಲ್ ತಲುಪಿತ್ತು. ಆದರೆ ಡಾಕ್ಟರ್ ಮಾತ್ರ ತಮ್ಮದೇ ಲೋಕದಲ್ಲಿದ್ದರು. ನಾವು ಬೇರೆ ಡಾಕ್ಟರ್ ನ್ನು ಸಂಪರ್ಕಿಸಿದೆ. ಅವರಿಗೆ ಮಧುಮೇಹ ಬೇರೆ ಇತ್ತು. ವಿಳಂಬ ಮಾಡುವುದು ಅವರ ಜೀವಕ್ಕೆ ಕುತ್ತು ತರುವ ಸಾಧ್ಯತೆ ಇತ್ತು. ಈ ವೈದ್ಯರು ಆಕ್ಸಿಜನ್ ಸಿಲಿಂಡರ್ ನ ವ್ಯವಸ್ಥೆ ಮಾಡಿಕೊಳ್ಳಲು ಫ್ರಾಬಿಪ್ಲ್ಲ್ಯ ಹಾಗೂ ಸ್ಟೆರಾಯ್ಡ್ ತೆಗೆದುಕೊಳ್ಳಲು ಹೇಳಿದರು. ಅದರಿಂದಾಗಿ ಅವರ ಶುಗರ್ ಜಂಪ್ ಮಾಡಿತು. ಹೇಗೋ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿತು. ಆಗ ಆಕ್ಸಿಜನ್ ಸಿಲಿಂಡರ್ ಹೊಂದಿಸುವ ಸವಾಲು ಇತ್ತು. ನನ್ನ ಚಿಕ್ಕಪ್ಪನ ಮಗ ಹೇಗೊ ಸಾಲಿನಲ್ಲಿ ನಿಂತು ಆಕ್ಸಿಜನ್ ಸಿಲಿಂಡರ್ ನ ವ್ಯವಸ್ಥೆಯನ್ನು ಮಾಡಿದ. ಆ ಕಾರಣದಿಂದ ಅವನು ಹಾಗೂ ಚಿಕ್ಕಪ್ಪ ಕೊರೋನಾ ಪಾಸಿಟಿವ್ ಆಗಬೇಕಾಯ್ತು. ಹೀಗಾಗಿ ಯಾರೇ ಆಗಲಿ ಕೊರೋನಾವನ್ನು ಕ್ಷುಲ್ಲಕ ಎಂದು ಭಾವಿಸಬೇಡಿ ಎಂದು ಮಹಿಳೊಬ್ಬರು ತಮ್ಮ ಅನುಭವವನ್ನು ತಿಳಿಸಿದ್ದಾರೆ.