– ರಾಘವೇಂದ್ರ ಅಡಿಗ ಎಚ್ಚೆನ್.
ಹಲವು ವರ್ಷಗಳಿಂದ ಕಿರುತೆರೆ, ಹಿರಿತೆರೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ವಿಜಯ್ ಭಾರದ್ವಾಜ್ ನಾಯಕನಾಗಿ ನಟಿಸಿರುವ ಚಿತ್ರ ‘ನಮೋ ವೆಂಕಟೇಶ’. ಅವರೇ ಚಿತ್ರದ ನಿರ್ದೇಶಕ ಕೂಡಾ. ತೆರೆಗೆ ಬರಲು ಸಿದ್ದವಾಗಿರುವ ಈ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭ ಇತ್ತೀಚೆಗೆ ನೆರವೇರಿತು. ನಮೋ ವೆಂಕಟೇಶ ಚಿತ್ರದ ಬಹುತೇಕ ಕೆಲಸಗಳು ಈಗಾಗಲೇ ಪೂರ್ಣಗೊಂಡಿದ್ದು, ಟ್ರೇಲರ್ ರಿಲೀಸ್ ಮೂಲಕ ಚಿತ್ರದ ಪ್ರಮೋಷನ್‌ಗೆ ಚಾಲನೆ ಸಿಕ್ಕಿದೆ.
ನವಿರಾದ ಹಾಸ್ಯದ ಜೊತೆಗೊಂದು ಪ್ರೇಮಕಥೆ: ಈ ಚಿತ್ರದ ಹೆಸರು ನಮೋ ವೆಂಕಟೇಶ. ಅದಾಗ್ಯೂ, ಈ ಚಿತ್ರಕ್ಕೂ ತಿರುಪತಿಯ ಶ್ರೀನಿವಾಸ ದೇವನಿಗೂ ಯಾವುದೇ ಸಂಬಂಧವಿಲ್ಲ. ಇಂದಿನ ಕಾಲದಲ್ಲಿ ನಡೆಯೋ ಅಪ್ಪಟ ಫ್ಯಾಮಿಲಿ ಎಂಟರ್‌ಟೈನರ್. ಕಥೆಗೆ ಹೊಂದಾಣಿಕೆಯಾಗುತ್ತದೆ ಎಂಬ ಕಾರಣಕ್ಕೆ ಚಿತ್ರತಂಡ ‘ನಮೋ ವೆಂಕಟೇಶ’ ಎಂಬ ಟೈಟಲ್ ಇಟ್ಟಿದೆ. ನವಿರಾದ ಹಾಸ್ಯದ ಜೊತೆಗೊಂದು ಪ್ರೇಮಕಥೆ ಹೇಳುವ ರೊಮ್ಯಾಂಟಿಕ್ ಕಾಮಿಡಿ ಚಿತ್ರವಿದು.
ಆರುಶ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಶ್ರೀನಿವಾಸ ಗೆಜ್ಜಲಗೆರೆ ಅವರು ಈ ಚಿತ್ರವನ್ನು ನಿರ್ಮಿಸುತ್ತಿದ್ದು, ಟಿ.ಎನ್.ಸೀತಾರಾಮ್ ಅವರಂಥ ದಿಗ್ಗಜರೊಂದಿಗೆ ಪಳಗಿದ ಮೈಸೂರಿನ ವಿಜಯ್ ಭಾರದ್ವಾಜ್ ಈ ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಆ್ಯಕ್ಷನ್ ಕಟ್ ಹೇಳಿದ್ದಾರೆ. ಜೊತೆಗೆ ಚಿತ್ರದ ನಾಯಕನಾಗಿಯೂ ನಟಿಸಿದ್ದಾರೆ. ‘ಗಟ್ಟಿಮೇಳ’ ಧಾರಾವಾಹಿಯ ಆದ್ಯ ಪಾತ್ರದಿಂದ ಹೆಸರಾದ ಅನ್ವಿತಾ ಸಾಗರ್ (ಪಾರ್ವತಿ) ‘ನಮೋ ವೆಂಕಟೇಶ’ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದ್ದಾರೆ. ಉಳಿದಂತೆ ಶ್ಯಾಮ್ ಸುಂದರ್, ನಾಗರಾಜರಾವ್, ರವಿಕುಮಾರ್, ದೀಪಾ, ಮಂಜುನಾಥ್ ಹೆಗ್ಡೆ, ಸುಧಾ ಪ್ರಸನ್ನ ಹಾಗೂ ಇತರರು ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ನಾಯಕಿ ಅನ್ವಿತಾ ಸಾಗರ್ ಮಾತನಾಡಿ, ಈ ಚಿತ್ರದಲ್ಲಿ ನಾನು ರಶ್ಮಿ ಎಂಬ ಆರ್ಕಿಟೆಕ್ಟ್ ಸ್ಟೂಡೆಂಟ್ ಪಾತ್ರ ನಿರ್ವಹಿಸಿದ್ದಾರೆ. ಇನೋಸೆಂಟ್ ಅಷ್ಟೇ ಕೋಪಿಷ್ಠೆ ಕೂಡಾ. ತಂದೆಯ ಕಟ್ಟುಪಾಡುಗಳನ್ನು ಮೀರಿ ನಾನೋರ್ವ ಹುಡುಗನನ್ನು ಲವ್ ಮಾಡಿ, ನಂತರ ಆಯ್ಕೆ ಪ್ರಶ್ನೆ ಬಂದಾಗ ನಾನು ಫ್ಯಾಮಿಲಿಯನ್ನೇ ಆಯ್ಕೆ ಮಾಡಿಕೊಳ್ಳುತ್ತೇನೆ. ಆದರೆ ನಾಯಕ ನನ್ನ ಕುಟುಂಬವನ್ನು ಹೇಗೆ ಒಪ್ಪಿಸಿ ಮದುವೆಯಾಗ್ತಾನೆ ಅನ್ನೋದೇ ಚಿತ್ರದ ಎಳೆ ಎಂದು ಹೇಳಿದರು.
ಚಿತ್ರದ ನಾಯಕ ವಿಜಯ್ ಭಾರದ್ವಾಜ್ ಮಾತನಾಡಿ, ಈ ಚಿತ್ರದಲ್ಲಿ ನಾಯಕನ ಹೆಸರು ವೆಂಕಟೇಶ. ಆತ ಏಕೆ ನಮೋ ವೆಂಕಟೇಶ ಆದ ಅನ್ನೋದನ್ನು ಚಿತ್ರದಲ್ಲಿ ನೋಡಿಯೇ ತಿಳಿಯಬೇಕು. ಎರಡು ಬೇರೆ ಬೇರೆ ಪೀಳಿಗೆಗೆ ಸೇರಿದ ಇಬ್ಬರು ವ್ಯಕ್ತಿಗಳ ಸುತ್ತ ಸುತ್ತುವ ಕಥೆ.
ಒಂದು ಪೀಳಿಗೆಯ ವ್ಯಕ್ತಿಗಳ ಭಿನ್ನ, ವಿಭಿನ್ನ ಆಲೋಚನೆಗಳಿಂದ ಮತ್ತೊಂದು ಪೀಳಿಗೆಗೆ ಸೇರಿದ ವ್ಯಕ್ತಿಗಳ ಜೀವನದ ಮೇಲೆ ಬೀರುವ ಸೂಕ್ಷ್ಮ ಪ್ರಭಾವಗಳು, ಅದರಿಂದ ಅವರವರ ಬದುಕು ಪಡೆದುಕೊಳ್ಳುವ ತಿರುವುಗಳು, ಆ ತಿರುವುಗಳಿಂದ ಕೆಲವೊಮ್ಮೆ ಸೃಷ್ಠಿಯಾಗುವ ಹೊಸ ದಾರಿಗಳ ಸುತ್ತ ನಡೆಯುವ ಕಥೆಯಿದು. ಯಾವುದೇ ಲಾಂಗು, ಮಚ್ಚು, ಬ್ಲಡ್ ಇಲ್ಲದ ಸುಂದರ ದೃಶ್ಯಗಳ ಹೂರಣವೇ ನಮೋ ವೆಂಕಟೇಶ. ಚಿತ್ರ ರಿಲೀಸ್ಗೆ ರೆಡಿಯಾಗಿದ್ದು, ಸದ್ಯದಲ್ಲೇ ಪ್ರೇಕ್ಷಕರ ಮುಂದೆ ಬರುತ್ತೇವೆ ಎಂದು ಹೇಳಿದರು.
ಟ್ರೇಲರ್ ಬಿಡುಗಡೆ ಸಂದರ್ಭದಲ್ಲಿ ಹಿರಿಯ ಕಲಾವಿದರಾದ ಕೆವಿ.ಮಂಜಯ್ಯ, ನಾಗರಾಜರಾವ್, ಸುಧಾಪ್ರಸನ್ನ, ವಿ.ಮನೋಹರ್, ರವಿಕುಮಾರ್, ದೀಪ, ಪಾರ್ವತಿ ಮುಂತಾದವರು ನಿರ್ದೇಶಕರ ಜತೆ ಕೆಲಸ ಮಾಡಿದ ಅನುಭವಗಳನ್ನು ಹಂಚಿಕೊಂಡರು.
ಚಿತ್ರದಲ್ಲಿ ಒಟ್ಟು 5 ಹಾಡುಗಳಿದ್ದು, ಶರತ್ ಆರೋಹಣ ಅವರ ಸಂಗೀತ ಸಂಯೋಜನೆಯಿದೆ. ಹಿರಿಯ ಸಂಗೀತ ನಿರ್ದೇಶಕ ವಿ.ಮನೋಹರ್ ಅವರು ಶೀರ್ಷಿಕೆ ಹಾಡನ್ನು ರಚಿಸಿದ್ದು, ಉಳಿದ 3 ಹಾಡುಗಳಿಗೆ ನಿರ್ಮಾಪಕ ಶ್ರೀನಿವಾಸ ಗೆಜ್ಜಲಗೆರೆ ಅವರೇ ಸಾಹಿತ್ಯ ರಚಿಸಿದ್ದಾರೆ. ಮತ್ತೊಂದು ಗೀತೆಗೆ ಗಣೇಶ್ ಪ್ರಸಾದ್ ಸಾಲುಗಳನ್ನು ಬರೆದು, ಹಾಡಿದ್ದಾರೆ. ನಿರಂಜನ್‌ದಾಸ್ ಮತ್ತು ವಿನೋದ್ ಲೋಕಣ್ಣನವರ್ ಛಾಯಾಗ್ರಹಣ, ಸಮೀರ್ ನಗರದ್ ಅವರ ಸಂಕಲನ ಈ ಚಿತ್ರಕ್ಕಿದೆ. ಮೈಸೂರು, ಚಿಕ್ಕಮಗಳೂರಿನ ಬಾಳೂರು, ಕೊಟ್ಟಿಗೆಹಾರ, ದೇವರಮನೆ, ಬಣಕಲ್, ದೇವರಮನೆ ಸೇರಿದಂತೆ ಮುಂತಾದ ಸುಂದರ ತಾಣಗಳಲ್ಲಿ ನಮೋ ವೆಂಕಟೇಶ ಚಿತ್ರದ ಚಿತ್ರೀಕರಣ ನಡೆಸಲಾಗಿದೆ.