``ಅಮ್ಮ..... ಬೇಗ ರೆಡಿಯಾಗು. ಇವತ್ತು ಸಂಜೆ ನಾವು ಹೊರಗೆ ಹೊರಡಬೇಕು,'' ಸ್ಮಿತಾ ತನ್ನ ತಾಯಿ ರೇವತಿಗೆ ಹೇಳಿದಳು.
``ಆದರೆ ಎಲ್ಲಿಗೇ ಹೋಗಬೇಕು? ನನಗಂತೂ ಮನೆಯಲ್ಲಿ ಇನ್ನೂ ಖಂಡುಗ ಕೆಲಸ ಬಾಕಿ ಇದೆ. ನೀನೇ ಹೋಗು,'' ಎಂದು ರೇವತಿ ಮಗಳ ಮಾತು ತಳ್ಳಿ ಹಾಕಿದರು.
``ಅದೆಲ್ಲ ಆಮೇಲೆ ಬಂದು ಮಾಡಿಕೊಳ್ಳೋಣಮ್ಮ. ನಾನೂ ಹೆಲ್ಪ್ ಮಾಡ್ತೀನಿ, ಮೊದಲು ನೀನು ರೆಡಿಯಾಗು!''
``ಹೊಸದಾಗಿ ತಯಾರಾಗೋದು ಏನಿದೆ? ಈ ಸಲ್ವಾರ್ ಸೂಟ್‌ಸಾಕು, ಮೇಲೊಂದು ದುಪಟ್ಟಾ ಹೊದ್ದರೆ ಆಯ್ತು,'' ರೇವತಿ ಹೇಳಿದರು.
``ಇದರ ಬದಲು ಒಳ್ಳೇ ಸೀರೇನಾದರೂ ಉಟ್ಟುಕೊಳ್ಳಬಾರದೇ?''
``ಅಯ್ಯೋ, ಸಾಕು ನಡಿಯೇ! ಅದು ಸರಿ, ಈಗ ಎಲ್ಲಿಗೆ ಹೋಗುತ್ತಿದ್ದೇವೆಎಅಂತ?''
``ಅದೇ ನನ್ನ ಫ್ರೆಂಡ್ ದೀಪಾ ಇದ್ದಾಳಲ್ಲ.... ಅವಳನ್ನು ಭೇಟಿಯಾಗಲು.''
``ಅದಕ್ಕೆ ನಾನು ಯಾಕೆ ಬರಬೇಕು?'' ರೇವತಿಗೆ ಈಗಲೂ ಹೋಗಲು ಮನಸ್ಸಿರಲಿಲ್ಲ.
``ಅಯ್ಯೋ.... ನಡಿಯಮ್ಮ. ಸುಮ್ಮನೆ ಪ್ರಶ್ನೆ ಕೇಳೋದೇ ಆಗೋಯ್ತು. ನನಗೆ ಒಬ್ಬಳೇ ಹೋಗಲು ಇಷ್ಟ ಇಲ್ಲ ಅಂತ ನಿನ್ನ ಹೊರಡಿಸಿದ್ದು!''
ಕೆದರಿದ ತಲೆಗೆ ಒಂದಿಷ್ಟು ಬಾಚಣಿಗೆ ಆಡಿಸಿ, ಹೆರಳು ಹೆಣೆದು, ರೇವತಿ ಬೇಗ ತಯಾರಾಗಿ ನಿಂತರು. ಆಟೋ ಒಂದು ಬ್ಯೂಟಿ ಪಾರ್ಲರ್ ಮುಂದೆ ನಿಂತಾಗ ರೇವತಿ ಕಿರುಚಿದರು, ``ನನ್ನನ್ನು ಯಾಕೆ ಇಲ್ಲಿಗೆ ಕರೆದುಕೊಂಡು ಬಂದಿರುವೆ? ನೀನು ಹೇಳಿದ್ದು ದೀಪಾಳ ಮನೆಗೆ ಹೋಗಬೇಕು ಅಂತ ಅಲ್ವೇ.... ಈ ಬ್ಯೂಟಿ ಪಾರ್ಲರಿಗೆ ಬಂದು ನಾನೇನು ಮಾಡಲಿ?''
``ಅಯ್ಯೋ.... ಅಮ್ಮ.... ಈ ಬ್ಯೂಟಿ ಪಾರ್ಲರ್ ಅವಳದೇ...''
ಎದುರು ಬಂದ ದೀಪಾ, ``ಬನ್ನಿ, ಆಂಟಿ ಕೂತ್ಕೊಳ್ಳಿ,'' ಎಂದು ಹಾರ್ದಿಕವಾಗಿ ಸ್ವಾಗತ ಕೋರಿ ಇವರನ್ನು ಒಳಗಿನ ಕುರ್ಚಿಯಲ್ಲಿ ಕೂರಿಸಿದಳು. ಎದುರಿಗೆ ಥಳಥಳ ಹೊಳೆಯುತ್ತಿದ್ದ ಕನ್ನಡಿಗಳು. ``ನೀವಿಲ್ಲಿ ಆರಾಮಾಗಿ 2-3 ಗಂಟೆ ಕಾಲ ಕುಳಿತಿರಿ. ನಾವು ಒಂದಿಷ್ಟು ಕೆಲಸ ಮಾಡುತ್ತೇವೆ. ಆಮೇಲೆ ದೊಡ್ಡ ಚಮತ್ಕಾರ ನೋಡ್ತೀರಂತೆ!'' ಎಂದಳು ದೀಪಾ.
ಮುಂದಿನ 2-3 ಗಂಟೆಗಳಲ್ಲಿ ದೀಪಾ, ಅವಳ ಅಸಿಸ್ಟೆಂಟ್ ಸೇರಿ, ರೇವತಿಯರಿಗೆ ಮೇಕ್ ಓವರ್ ಮಾಡಿ, ಅವರ ಸಂಪೂರ್ಣ ರೂಪ ಬದಲಾಯಿಸಿಬಿಟ್ಟರು. ಅವರ ಸೆಕೆಗಂಟಿನ ಕೂದಲು ಬಿಚ್ಚಿ, ನೀಟಾಗಿ ಸ್ಟೆಪ್ ಕಟ್ ಮಾಡಿ, ಶ್ಯಾಂಪೂನಿಂದ ತೊಳೆದು ಲಕಲಕ ಹೊಳೆಯುವಂತೆ ಮಾಡಿದರು. ಬ್ರೌನ್ ಶೇಡ್ ನಲ್ಲಿ ಹೇರ್ ಕಲರಿಂಗ್ ಸಹ ಆಯಿತು. ಕೂದಲಿನ ನಂತರ ಮುಖಕ್ಕೆ ಫೇಶಿಯಲ್ ಮಾಡಲಾಯಿತು. ನಂತರ ತುಸು ಲೈಟಾಗಿ ಮೇಕಪ್ ಮಾಡಲಾಯಿತು. ಬದಲಾದ ತನ್ನ ಮುಖ ಚಹರೆ ಕಂಡು ರೇವತಿ ನಂಬದಾದರು.
ನಿಮ್ಮ ಕಡೆಯೂ ಗಮನವಿರಲಿ
ಮದುವೆಗೆ ಮುಂಚಿನ ಕಾಲದಲ್ಲಿ ರೇವತಿ ಸಹ, ತಮ್ಮ ಮುಖ, ಮೈಮಾಟ, ತಲೆಗೂದಲಿನ ಕಡೆ ಗಮನಕೊಟ್ಟು ಅಲಂಕರಿಸಿಕೊಳ್ಳುತ್ತಿದ್ದರು. ಮುಂದೆ ಮದುವೆ, ಮಕ್ಕಳು ಅಂತ ಸಂಸಾರದಲ್ಲಿ ಮುಳುಗಿ ಹೋದಾಗ, ರೇವತಿ ತಮ್ಮ ಆರೈಕೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದರು. 38 ದಾಟಿದ ತಾನು ಈ ವಯಸ್ಸಿನಲ್ಲಿ ಯಾವ ಅಲಂಕಾರ ಮಾಡಿಕೊಂಡು ಏನಾಗಬೇಕಾಗಿದೆ ಎಂದು ಅವರು ಸುಮ್ಮನಾಗುತ್ತಿದ್ದರು. ಹೀಗಾಗಿ ಅವರ ಮುಖದಲ್ಲಿ ಸದಾ ಸುಸ್ತು, ಫೈನ್ ಲೈನ್ಸ್, ಸುಕ್ಕುಗಳು ಮಾಮೂಲಾಗಿ ಹೋದವು.





