ಸ್ಯಾಂಡಲ್ವುಡ್ ನಟ ಧನ್ವೀರ್ ಗೌಡ ಮತ್ತು ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ನಡುವಿನ ವಿವಾದಕ್ಕೆ ಇದೀಗ ಹೊಸ ತಿರುವು ಸಿಕ್ಕಿದೆ. ಧನ್ವೀರ್ ಅವರ ತಂದೆ ತಿಮ್ಮೇಗೌಡ ಅವರು ವಿಜಯಲಕ್ಷ್ಮಿ ಹಾಗೂ ಅವರ ತಂಡದ ವಿರುದ್ಧ ಬೆಂಗಳೂರಿನ ರಾಜಾಜಿನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮನೆಗೆ ಬಂದು ಗಲಾಟೆ ನಡೆಸಿ, ಜೀವ ಬೆದರಿಕೆ ಹಾಕಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ದೂರಿನ ಆಧಾರದ ಮೇಲೆ ಪೊಲೀಸರು ಎನ್ಸಿಆರ್ (Non-Cognizable Report) ದಾಖಲಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.
ತಿಮ್ಮೇಗೌಡ ನೀಡಿರುವ ದೂರಿನ ಪ್ರಕಾರ, ಅಕ್ಟೋಬರ್ 21ರಂದು ರಾತ್ರಿ ಸುಮಾರು 8.30ರ ವೇಳೆಗೆ ಧನ್ವೀರ್ ಗೌಡ ಮೈಸೂರಿಗೆ ತೆರಳಿದ್ದರು. ಆಗ ಮನೆಯಲ್ಲಿ ತಿಮ್ಮೇಗೌಡ, ಅವರ ಪತ್ನಿ ಭಾರತಿ, ತಾಯಿ ಜಯಮ್ಮ ಮತ್ತು ಮಗಳು ನಳಿನಾಕ್ಷಿ ಇದ್ದರು. ಇದೇ ಸಮಯದಲ್ಲಿ ವಿಜಯಲಕ್ಷ್ಮಿ ಮತ್ತು ಅವರ ಮ್ಯಾನೇಜರ್ ನಾಗರಾಜ್ ಮನೆಗೆ ಬಂದಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಮನೆಯ ಕಾಲಿಂಗ್ ಬೆಲ್ ಬಾರಿಸಿದ ಬಳಿಕ ಬಾಗಿಲು ತೆರೆದಾಗ, ಧನ್ವೀರ್ ಎಲ್ಲಿದ್ದಾರೆ ಮತ್ತು ಅವರ ತಂದೆ ಮನೆಯಲ್ಲಿದ್ದಾರೆಯೇ ಎಂದು ವಿಚಾರಿಸಿದ್ದಾರೆ ಎನ್ನಲಾಗಿದೆ. ಧನ್ವೀರ್ ಊರಿನಲ್ಲಿ ಇಲ್ಲ, ಅವರ ತಂದೆ ಊಟ ಮಾಡುತ್ತಿದ್ದಾರೆ ಎಂದು ಮನೆಯವರು ಉತ್ತರಿಸಿದ್ದಾರೆ ಎಂದು ತಿಮ್ಮೇಗೌಡ ದೂರಿನಲ್ಲಿ ತಿಳಿಸಿದ್ದಾರೆ.
ಮಾತಿನ ಚಕಮಕಿ: ಈ ವೇಳೆ ಮನೆಯಲ್ಲಿ ಸಂಬಂಧಿ ಅಜಯ್ ಗೌಡ ಇದ್ದರು. ಅವರನ್ನು ಕಂಡು ಅನುಮಾನ ವ್ಯಕ್ತಪಡಿಸಿದ ವಿಜಯಲಕ್ಷ್ಮಿ ಅವರ ಮ್ಯಾನೇಜರ್ ನಾಗರಾಜ್, ಮನೆಯವರು ರೌಡಿಗಳನ್ನು ಕರೆಸಿದ್ದಾರೆಯೇ ಎಂದು ಪ್ರಶ್ನಿಸಿ ಗಲಾಟೆ ನಡೆಸಿದ್ದಾರೆ ಎಂಬುದು ದೂರಿನಲ್ಲಿರುವ ಆರೋಪ ಮಾಡಿದ್ದಾರೆ.
ಬಳಿಕ ವಿಜಯಲಕ್ಷ್ಮಿ ಅವರು ಗೌರವ್ ಶೆಟ್ಟಿ ಎಂಬುವವರಿಗೆ ದೂರವಾಣಿ ಕರೆ ಮಾಡಿ ಬೋಜಣ್ಣ ಮತ್ತು ಬಾಟಲಿ ಪ್ರಮೋದ್ ಅವರನ್ನು ಕಳುಹಿಸುವಂತೆ ಹೇಳಿದ್ದಾರೆ ಎಂದು ತಿಮ್ಮೇಗೌಡ ಆರೋಪಿಸಿದ್ದಾರೆ. ಇದೇ ವೇಳೆ ಮ್ಯಾನೇಜರ್ ನಾಗರಾಜ್ ಕೂಡ ದೂರವಾಣಿ ಕರೆ ಮಾಡಿ ಅವರನ್ನು ಸ್ಥಳಕ್ಕೆ ಬರಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಕೆಲವೇ ನಿಮಿಷಗಳಲ್ಲಿ ಬೋಜ ಮತ್ತು ಬಾಟಲಿ ಪ್ರಮೋದ್ ಎಂಬುವವರು ಧನ್ವೀರ್ ಅವರ ಮನೆಗೆ ಬಂದಿದ್ದಾರೆ. ಈ ನಡುವೆ ಮನೆಯಲ್ಲಿದ್ದವರಿಗೂ ಬಂದ ವ್ಯಕ್ತಿಗಳಿಗೂ ನಡುವೆ ಮಾತಿನ ಚಕಮಕಿ ನಡೆದಿದೆ ಎನ್ನಲಾಗಿದೆ.
ಮನೆಗೆ ಬಂದ ವ್ಯಕ್ತಿಗಳು ಯಾರು ಮತ್ತು ಯಾವ ಕಾರಣಕ್ಕೆ ಬಂದಿದ್ದಾರೆ ಎಂದು ತಿಮ್ಮೇಗೌಡ ಪ್ರಶ್ನಿಸಿದಾಗ, ಬಾಟಲಿ ಪ್ರಮೋದ್ ತಾನು ವಿಜಯಲಕ್ಷ್ಮಿ ಅವರ ತಮ್ಮ ಎಂದು ಹೇಳಿಕೊಂಡಿದ್ದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಇದೇ ಸಂದರ್ಭ ಧನ್ವೀರ್ ಅವರನ್ನು ಉಲ್ಲೇಖಿಸಿ ಬೆದರಿಕೆ ಹಾಕಿದ್ದಾರೆ ಎಂಬ ಆರೋಪವನ್ನೂ ತಿಮ್ಮೇಗೌಡ ಮಾಡಿದ್ದಾರೆ. ಧನ್ವೀರ್ನನ್ನು ಎಲ್ಲಿಗೆ ಕರೆಸಿ ಏನು ಮಾಡಬೇಕೋ ತಮಗೆ ಗೊತ್ತಿದೆ ಎಂಬ ಅರ್ಥದಲ್ಲಿ ಬಂದವರು ಮಾತನಾಡಿದ್ದಾರೆ ಎಂದು ಅವರು ದೂರಿನಲ್ಲಿ ವಿವರಿಸಿದ್ದಾರೆ.
ಇದರಿಂದ ಮನೆಯ ವಾತಾವರಣ ಉದ್ವಿಗ್ನಗೊಂಡಿದ್ದು, ಕುಟುಂಬದವರು ಆತಂಕಕ್ಕೊಳಗಾಗಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಸ್ಥಳದಿಂದ ನಿರ್ಗಮನ: ಮನೆಯೊಳಗೆ ಗಲಾಟೆ ನಡೆಯುತ್ತಿದ್ದ ಸಂದರ್ಭದಲ್ಲಿ ತಾನು ಪೊಲೀಸರಿಗೆ ಕರೆ ಮಾಡುವುದಾಗಿ ಹೇಳಿದ್ದಾಗಿ ತಿಮ್ಮೇಗೌಡ ತಿಳಿಸಿದ್ದಾರೆ. ಇದಾದ ಬಳಿಕ ವಿಜಯಲಕ್ಷ್ಮಿ ಸೇರಿದಂತೆ ಅಲ್ಲಿದ್ದವರು ಒಂದೇ ಕಾರಿನಲ್ಲಿ ಸ್ಥಳದಿಂದ ತೆರಳಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ತಮ್ಮ ಮನೆಗೆ ಪ್ರವೇಶಿಸಿ ಗಲಾಟೆ ನಡೆಸಿ ಜೀವ ಬೆದರಿಕೆ ಹಾಕಿರುವ ಆರೋಪದ ಹಿನ್ನೆಲೆ ವಿಜಯಲಕ್ಷ್ಮಿ, ಮ್ಯಾನೇಜರ್ ನಾಗರಾಜ್, ಬೋಜ ಮತ್ತು ಬಾಟಲಿ ಪ್ರಮೋದ್ ಅವರನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಬೇಕು ಎಂದು ತಿಮ್ಮೇಗೌಡ ಪೊಲೀಸರಲ್ಲಿ ಮನವಿ ಮಾಡಿದ್ದಾರೆ. ಅಲ್ಲದೆ, ಪ್ರಕರಣದ ಕುರಿತು ಸೂಕ್ತ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳುವಂತೆ ಕೋರಿದ್ದಾರೆ.
ಎನ್ಸಿಆರ್ ದಾಖಲು: ತಿಮ್ಮೇಗೌಡ ನೀಡಿರುವ ದೂರಿನ ಆಧಾರದ ಮೇಲೆ ರಾಜಾಜಿನಗರ ಪೊಲೀಸರು ಎನ್ಸಿಆರ್ ದಾಖಲಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.





