ಎದುರಿಗಿನ ವ್ಯಕ್ತಿ ಸತ್ಯ ಹೇಳುತ್ತಿದ್ದಾನಾ? ಸುಳ್ಳು ಹೇಳುತ್ತಿದ್ದಾನಾ? ಎಂಬುದರ ಬಗ್ಗೆ ತಿಳಿದುಕೊಳ್ಳಲು ಈ ಮಾಹಿತಿ ನಿಮಗೆ ಬಹಳ ಉಪಯುಕ್ತವಾಗಿ ಪರಿಣಮಿಸಬಹುದು.
ಸಂಜೆ 7 ಗಂಟೆ ಸಮಯಕ್ಕೆ ಪ್ರಿಯಾ ಮನೆಯೊಳಗೆ ಪ್ರವೇಶಿಸಿದಾಗ, ಅತ್ತಿಗೆ ಚಂದ್ರಿಕಾ ಎದುರಾದಳು. ಪ್ರಿಯಾ ಕಣ್ಣು ತಪ್ಪಿಸುತ್ತ ಒಳಗೆ ಹೋಗತೊಡಗಿದಳು. ಆಗ ಚಂದ್ರಿಕಾ ಅವಳ ಹಿಂದಿನಿಂದ ಹೋಗಿ, ``ಪ್ರಿಯಾ ಇಷ್ಟೊತ್ತು ಎಲ್ಲಿದ್ದೆ?'' ಎಂದು ಕೇಳಿದಳು. ಅದಕ್ಕೆ ಪ್ರಿಯಾ, ``ಅತ್ತಿಗೆ, ನನಗೆ ಎಕ್ಸ್ ಟ್ರಾ.... ಕ್ಲಾಸ್ ಇತ್ತು,'' ಎಂದು ತಡವರಿಸುತ್ತಾ ಹೇಳಿದಳು.
``ಯಾವ ವಿಷಯದ ಕ್ಲಾಸ್?'' ಅತ್ತಿಗೆ ಕೇಳಿದಳು.
``ಅತ್ತಿಗೆ.... ಆ ಸುಮಾ ಮೇಡಂ ಅಕೌಂಟ್ಸ್ ಕ್ಲಾಸ್ ತಗೊಳ್ಳೋದಾಗಿ ಹೇಳಿದ್ರು.... ನಾವೆಲ್ಲ ಅವರ ಕ್ಲಾಸ್ ಅಟೆಂಡ್ ಆಗಿದ್ವಿ,'' ಎಂದು ಸ್ವಲ್ಪ ಅಳುಕಿನ ಧ್ವನಿಯಲ್ಲಿ ಹೇಳಿದಳು.
``ಆದರೆ, ನಿನ್ನ ಗೆಳತಿ ಬೇರೆಯದನ್ನೇ ಹೇಳುತ್ತಿದ್ದಾಳಲ್ಲ....?''
ಪ್ರಿಯಾಳತ್ತ ದೃಷ್ಟಿ ಹರಿಸುತ್ತಾ ಚಂದ್ರಿಕಾ ಪ್ರಶ್ನಿಸಿದಾಗ, ಪ್ರಿಯಾ ಒಂದು ಕ್ಷಣ ಗಲಿಬಿಲಿಗೊಂಡಳು. ಆಗ ಅವಳ ಬಾಯಿಂದ ಸತ್ಯ ಹೊರಬಂತು, ``ಹೌದು ಅತ್ತಿಗೆ, ನಾನು ಫ್ರೆಂಡ್ಸ್ ಜೊತೆ ಒಂದು ಬರ್ಥ್ ಡೇ ಪಾರ್ಟಿಗೆ ಹೋಗಿದ್ದೆ. ಅವಳು ಒತ್ತಾಯ ಮಾಡಿ ನಮ್ಮನ್ನು ಮಾಲ್ ಗೆ ಕರೆದುಕೊಂಡು ಹೋದಳು,'' ಎಂದು ಹೇಳಿದಳು.
``ಪ್ರಿಯಾ, ನೀನು ಬರ್ಥ್ ಡೇ ಪಾರ್ಟಿಗೆ ಹೋಗಿದ್ದೆಯಾ, ಮಾಲ್ ಗೆ ಹೋಗಿದ್ದೆಯಾ ಅಥವಾ ಬೇರೆಲ್ಲೋ ಎನ್ನುವುದು ನನಗೆ ಸಮಸ್ಯೆಯಲ್ಲ..... ನನಗೆ ಸಮಸ್ಯೆ ಇರುವುದು ನಿನ್ನ ಸುಳ್ಳಿನಲ್ಲಿ. ನಾನು ನಿನಗೆ ಎಷ್ಟೋ ಸಲ ಹೇಳಿದ್ದೆ ನನ್ನ ಮುಂದೆ ಸುಳ್ಳು ಹೇಳಬೇಡವೆಂದು....''
``ಆಯ್ತು ಅತ್ತಿಗೆ, ಇನ್ಮುಂದೆ ಅದರ ಬಗ್ಗೆ ಕಾಳಜಿ ವಹಿಸ್ತೀನಿ,'' ಎಂದು ಹೇಳುತ್ತಾ ಪ್ರಿಯಾ ತನ್ನ ಕೋಣೆ ಕಡೆಗೆ ಹೊರಟು ಹೋದಳು.
ವಿಕಾಸ್ ಪತ್ನಿ ಚಂದ್ರಿಕಾಳತ್ತ ತಿರುಗಿ, ``ಪ್ರಿಯಾ, ನಿನಗೆ ಸುಳ್ಳು ಹೇಳುತ್ತಿದ್ದಾಳೊ, ಸತ್ಯ ಹೇಳುತ್ತಿದ್ದಾಳೊ ಎಂದು ಹೇಗೆ ಗೊತ್ತಾಗುತ್ತದೆ? ನಾನಾಗಿದ್ದರೆ ಅವಳು ಎಕ್ಸ್ ಟ್ರಾ ಕ್ಲಾಸ್ ಗೆ ಹೋಗಿದ್ದಳು ಎಂದು ನಂಬಿಬಿಡುತ್ತಿದ್ದೆ. ನೀನು ಈ ಮುಂಚೆಯೇ ಅವಳ ಸುಳ್ಳನ್ನು ಕಂಡುಹಿಡಿದಿರುವೆ. ನನ್ನದು ಕೂಡ 1-2 ಬಾರಿ ಕಂಡುಹಿಡಿದೆ. ಅದೆಲ್ಲ ನಿನಗೆ ಹೇಗೆ ಗೊತ್ತಾಗುತ್ತದೆ?'' ಎಂದು ಕೇಳಿದ.
``ನೋಡಿ, ಒಬ್ಬ ವ್ಯಕ್ತಿಯ ಸುಳ್ಳು ಕಂಡುಹಿಡಿಯುವುದು ಬಹಳ ಸುಲಭ. ಆ ವ್ಯಕ್ತಿ ಸತ್ಯ ಹೇಳುತ್ತಿದ್ದಾನೋ, ಸುಳ್ಳು ಹೇಳುತ್ತಿದ್ದಾನೋ ಎಂಬುದನ್ನು ಸ್ವತಃ ಆ ವ್ಯಕ್ತಿಯೇ ಸೂಚನೆ ಕೊಡುತ್ತಾನೆ,'' ಎಂದು ನಗುತ್ತಾ ಹೇಳಿದಳು.
``ಸೂಚನೆ, ಅದೇನು?''
``ಅಂದಹಾಗೆ, ಸತ್ಯ ಅಥವಾ ಸುಳ್ಳಿನ ಅಂದಾಜನ್ನು ನಾವು ಆ ವ್ಯಕ್ತಿಯ ಬಾಡಿ ಲ್ಯಾಂಗ್ವೇಜ್ ಅಂದರೆ ಆ ವ್ಯಕ್ತಿಯ ಹಾವಭಾವದಿಂದ ಕಂಡುಕೊಳ್ಳಬಹುದು.
``ಸಾಮಾನ್ಯವಾಗಿ ಎದುರಿಗಿನ ವ್ಯಕ್ತಿ ಸತ್ಯ ಹೇಳುತ್ತಿದ್ದರೆ, ಅವನು ಏನನ್ನಾದರೂ ತಿಳಿಸಿ ಹೇಳಲು ತನ್ನ ಕೈಗಳನ್ನು ಬಳಸಿಕೊಳ್ಳುತ್ತಾನೆ. ಆ ಸಮಯದಲ್ಲಿ ಆ ವ್ಯಕ್ತಿಯ ಕೈಗಳು ಸಾಕಷ್ಟು ಅಲ್ಲಾಡುತ್ತಿರುತ್ತವೆ. ಆದರೆ ಸುಳ್ಳು ಹೇಳುತ್ತಿರುವ ವ್ಯಕ್ತಿ ಕೈಗಳ ಜೊತೆ ತನ್ನ ಇಡೀ ದೇಹವನ್ನು ಸ್ಥಿರವಾಗಿಟ್ಟುಕೊಂಡಿರುತ್ತಾನೆ.''





