ಸಮಾಜದಲ್ಲಿ ಮಹಿಳೆಯರ ಪಾತ್ರ ಬದಲಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ, ಅವರು ಆರ್ಥಿಕವಾಗಿ ಬಲಶಾಲಿಯಾಗುವುದು ಏಕೆ ಮುಖ್ಯ? ಎಂಬುದನ್ನು ಅರಿಯೋಣ……..
ದೇಶ ಬದಲಾಗುತ್ತಿದೆ. ಮಹಿಳೆಯರ ಸ್ಥಿತಿಯೂ ಸುಧಾರಿಸುತ್ತಿದೆ. ಸಮಯದ ಜೊತೆ ಜೊತೆಗೆ ಮಹಿಳೆಯರು ಶಕ್ತಿಶಾಲಿಗಳಾಗುತ್ತಿದ್ದಾರೆ. ಇಂದಿರಾಗಾಂಧಿ, ಇಂದಿರಾನೂಯಿ ಮತ್ತು ಕಿರಣ್ ಬೇಡಿಯಿಂದ ಹಿಡಿದು ಸಾನಿಯಾ ಮಿರ್ಜಾ, ಸುನೀತಾ ವಿಲಿಯಮ್ಸ್ ಮತ್ತು ಕಲ್ಪನಾ ಚಾವ್ಲಾವರೆಗೆ ಅನೇಕ ಆಧುನಿಕ ಭಾರತೀಯ ಮಹಿಳೆಯರು ವಿಶ್ವದಾದ್ಯಂತ ದೇಶವನ್ನು ಹೆಮ್ಮೆ ಪಡುವಂತೆ ಮಾಡಿದ್ದಾರೆ. ಆದರೆ ಇನ್ನೂ, ಮನೆಯಲ್ಲಾಗಲಿ ಅಥವಾ ಹೊರಗಾಗಲಿ ಮಹಿಳೆಯರ ವಿರುದ್ಧ ಕೌಟುಂಬಿಕ ದೌರ್ಜನ್ಯ ಮತ್ತು ಲೈಂಗಿಕ ಅಪರಾಧಗಳು ನಿರಂತರವಾಗಿ ಹೆಚ್ಚುತ್ತಿವೆ.
ಮಹಿಳೆಯರು ಪುರುಷರ ಮೇಲೆ ಆರ್ಥಿಕವಾಗಿ ಅವಲಂಬಿತರಾಗಿರುವುದೇ ಇದಕ್ಕೆ ಮೂಲ ಕಾರಣ. ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾದಾಗ ಮಾತ್ರ ಮಹಿಳಾ ಸಬಲೀಕರಣ ಸಾಧ್ಯ.
ಇಂದಿಗೂ ಸಹ ಮಹಿಳೆಯರು ಹೆಚ್ಚಿನ ಸಮಸ್ಯೆಗಳನ್ನು ಎದುರಿಸುವುದಕ್ಕೆ ಕಾರಣವೆಂದರೆ, ಅವರು ಇತರರ ಮೇಲೆ ಆರ್ಥಿಕವಾಗಿ ಅವಲಂಬಿತರಾಗಿರುವುದು. ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇ.48 ರಷ್ಟು ಮಹಿಳೆಯರಿದ್ದರೆ, ಅವರಲ್ಲಿ ಮೂರನೇ ಒಂದು ಭಾಗದಷ್ಟು ಮಹಿಳೆಯರು ಮಾತ್ರ ಕೆಲಸ ಮಾಡುತ್ತಿದ್ದಾರೆ. ಈ ಕಾರಣಕ್ಕಾಗಿಯೇ ಭಾರತದ ಜಿಡಿಪಿಯಲ್ಲಿ ಮಹಿಳೆಯರ ಕೊಡುಗೆ ಕೇವಲ ಶೇ.18ರಷ್ಟು ಮಾತ್ರ ಇದೆ.
ನಮ್ಮ ಸಮಾಜದಲ್ಲಿ ಇಂದಿಗೂ ಮಹಿಳೆಯರ ದೊಡ್ಡ ವರ್ಗ ಸಾಮಾಜಿಕ ಬಂಧಗಳ ಸಂಕೋಲೆಗಳನ್ನು ಸಂಪೂರ್ಣವಾಗಿ ಮುರಿಯಲು ಸಾಧ್ಯವಾಗಿಲ್ಲ. ಅವರು ತಮ್ಮ ಮನೆಯಲ್ಲೇ ತಮ್ಮದೇ ಆದ ಸ್ವತಂತ್ರ ಅಸ್ತಿತ್ವವನ್ನು ಹೊಂದಿರುವುದಿಲ್ಲ. ಒಂದು ರೀತಿಯಲ್ಲಿ, ನಮ್ಮ ಪಿತೃಪ್ರಧಾನ ಸಮಾಜ ಹುಟ್ಟಿನಿಂದಲೇ ಅವರನ್ನು ಹಾಗೆ ರೂಪಿಸಲು ಪ್ರಾರಂಭಿಸುತ್ತದೆ. ಅವರು ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಪುರುಷರ ಬೆಂಬಲನ್ನು ಹುಡುಕುವಂತೆ ಹಾಗೂ ಪ್ರತಿ ಕೆಲಸಕ್ಕೂ ಪುರುಷರ ಮೇಲೆ ಅವಲಂಬಿತರಾಗುವಂತೆ ಮಾಡುತ್ತದೆ.
ಒಬ್ಬ ಮಹಿಳೆ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಬಯಸಿದಾಗ, ಪುರಾಣಗಳಲ್ಲಿ ಬರೆಯಲಾದ ಹಲವಾರು ಪದ್ಧತಿ, ಸಂಪ್ರದಾಯ ಮತ್ತು ಬೋಧನೆಗಳನ್ನು ಮಾಡುವ ಮೂಲಕ ಅವಲಂಬಿತ ಜೀವನವನ್ನು ನಡೆಸುವಂತೆ ಒತ್ತಡ ಹೇರಲಾಗುತ್ತದೆ.
ಸಮಾನ ಅವಕಾಶ ನೀಡಬೇಕು
ಭಾರತದ ಸಂಸತ್ತಿನಲ್ಲಿ ಕೇವಲ ಶೇ.14 ಮಹಿಳೆಯರಿದ್ದಾರೆ. ಅದೇ ರೀತಿ, ಪಂಚಾಯತ್ ಮಟ್ಟದಲ್ಲಿ ಹೆಚ್ಚಿನ ಮಹಿಳೆಯರನ್ನು ಮುಖವಾಡದಂತೆ ಬಳಸಲಾಗುತ್ತದೆ. ಅಂದರೆ, ಚುನಾವಣೆಯಲ್ಲಿ ಮಹಿಳೆ ಗೆಲ್ಲುತ್ತಾಳೆ. ಆದರೆ, ಅಧಿಕಾರಕ್ಕೆ ಸಂಬಂಧಿಸಿದ ಎಲ್ಲಾ ನಿರ್ಧಾರಗಳನ್ನು ಅವರ ಕುಟುಂಬದ ಸದಸ್ಯರು ತೆಗೆದುಕೊಳ್ಳುತ್ತಾರೆ. ದೇಶದ ಸುಪ್ರೀಂಕೋರ್ಟ್ ಸೇರಿದಂತೆ ಹೈಹೋರ್ಟ್ ಗಳಲ್ಲಿ ಪ್ರಸ್ತುತ ಇರುವ ನ್ಯಾಯಮೂರ್ತಿಗಳಲ್ಲಿ ಕೇವಲ ಶೇ.11ರಷ್ಟು ಮಾತ್ರ ಮಹಿಳೆಯರಿದ್ದಾರೆ.
ಮಹಿಳೆಯರು ತಮ್ಮ ಸಾಮರ್ಥ್ಯವನ್ನು ಗುರುತಿಸಿಕೊಂಡು, ಸಾಂಪ್ರದಾಯಿಕ ರೂಢಿಗಳನ್ನು ಬಿಟ್ಟು ದೇಶ ಮತ್ತು ಕುಟುಂಬದ ಸದಸ್ಯರಾಗುವುದು ಇಂದಿನ ಅಗತ್ಯವಾಗಿದೆ. ಕುಟುಂಬ ಮತ್ತು ಸಮಾಜದಲ್ಲಿ ಮಹಿಳೆಯರ ವಿರುದ್ಧದ ತಾರತಮ್ಯವನ್ನು ಕೊನೆಗೊಳಿಸಿ, ಪುರುಷರಿಗೆ ಸಮಾನವಾದ ಅವಕಾಶಗಳನ್ನು ಕಲ್ಪಿಸಿದ್ದೇ ಆದರೆ ಗೀತಾ ಗೋಪಿನಾಥ್, ಇಂದಿರಾ ನೂಯಿ, ಕಿರಣ್ ಮಜುಂದಾರ್ ರಂತೆ ಇತರ ಮಹಿಳೆಯರೂ ಸಹ ಸಬಲರಾಗಬಹುದು.
ಶಿಕ್ಷಣ ಮತ್ತು ಸ್ವಾವಲಂಬನೆ
ಹೆಣ್ಣು ಮಕ್ಕಳಿಗೆ ಬಾಲ್ಯದಿಂದಲೇ ಅಡುಗೆ ಮತ್ತು ಮನೆಕೆಲಸದಲ್ಲಿ ಪರಿಣಿತಿಯನ್ನು ಕಲಿಸಲಾಗುತ್ತದೆ. ಆದರೆ ಅದಕ್ಕಿಂತಲೂ ಹೆಚ್ಚಾಗಿ ಮಹಿಳೆಯರು ಶಿಕ್ಷಣ ಪಡೆದು ಆರ್ಥಿಕವಾಗಿ ಸ್ವಾವಲಂಬಿಗಳಾಗುವುದು ಅತಿ ಮುಖ್ಯ. ಇದು ಕೇವಲ ಕುಟುಂಬಕ್ಕೆ ಮಾತ್ರವಲ್ಲದೆ, ಪ್ರತಿಯೊಬ್ಬ ಮಹಿಳೆಗೂ ಅತ್ಯವಶ್ಯಕ. ಕುಟುಂಬ ಆರ್ಥಿಕ ಮುಗ್ಗಟ್ಟನ್ನು ಎದುರಿಸುತ್ತಿರುವಾಗ ಅಥವಾ ಯಾವುದೇ ಹುಡುಗಿಯ ವೈವಾಹಿಕ ಜೀವನದಲ್ಲಿ ಹಠಾತ್ ಸಮಸ್ಯೆ ಎದುರಾದಾಗ ಶಿಕ್ಷಣದ ಮಹತ್ವದ ಬಗ್ಗೆ ಅರಿವಾಗುತ್ತದೆ.





