ಮಗನನ್ನು ಕಳೆದುಕೊಂಡ ನೋವಿನ ನಡುವೆಯೂ... ಸೊಸೆಯ ಬದುಕಿಗೆ ಹೊಸ ಬೆಳಕು ನೀಡಿದ ಮಾವ!
ಇಂದಿನ ಸಮಾಜದಲ್ಲಿ ಸೊಸೆಯ ಮೇಲಿನ ದೌರ್ಜನ್ಯ, ಕಿರುಕುಳ, ಅಥವಾ ಮಗ ಸತ್ತರೆ ಸೊಸೆಯನ್ನೇ ದೂಷಿಸುವ ಸುದ್ದಿಗಳೇ ಹೆಚ್ಚಾಗಿ ಕೇಳಿಬರುತ್ತವೆ. ಆದರೆ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ನಡೆದ ಈ ಘಟನೆ ಸಮಾಜಕ್ಕೆ ಹೊಸ ಸಂದೇಶ ನೀಡಿದೆ.
2018ರಲ್ಲಿ ಕೇವಲ 19ನೇ ವಯಸ್ಸಿನಲ್ಲಿ ಪ್ರಿಯಾಂಕಾ, ಜೈತಾಲ್ ಗ್ರಾಮದ ಕಪಿಲ್ ಬೈರಾಗಿಯನ್ನು ವಿವಾಹವಾಗಿದ್ದರು. ಅವರ ದಾಂಪತ್ಯ ಜೀವನ ಸಂತೋಷದಿಂದ ಸಾಗುತ್ತಿತ್ತು. ಆದರೆ ವಿಧಿಯಾಟ ಬೇರೆ ಆಗಿತ್ತು. ಕ್ಯಾನ್ಸರ್‌ಗೆ ತುತ್ತಾಗಿದ್ದ ಕಪಿಲ್ ಒಂದು ವರ್ಷದ ಚಿಕಿತ್ಸೆ ಬಳಿಕ 2023ರಲ್ಲಿ ಕೊನೆಯುಸಿರೆಳೆದರು. ಕೇವಲ 24ನೇ ವಯಸ್ಸಿನಲ್ಲೇ ಪ್ರಿಯಾಂಕಾ ವಿಧವೆಯಾದರು.
ಮಗನನ್ನು ಕಳೆದುಕೊಂಡ ನೋವಿನಲ್ಲಿದ್ದ ಮಾವ ದಿನೇಶ್ ಬೈರಾಗಿ, ಸಮಾಜದಂತೆ ಸೊಸೆಯನ್ನು ದೂರ ಮಾಡುವ ಬದಲು, "ಅವಳನ್ನು ನಾನು ಸೊಸೆಯಾಗಿ ಮನೆಗೆ ಕರೆತಂದೆ... ಈಗ ನನ್ನ ಮಗಳಾಗಿ ಘನತೆಯಿಂದ ಹೊಸ ಮನೆಗೆ ಕಳುಹಿಸುತ್ತೇನೆ" ಎಂದು ಸಂಕಲ್ಪ ಮಾಡಿದರು.
ಸುಮಾರು ಎರಡು ವರ್ಷಗಳ ಕಾಲ ಪ್ರಿಯಾಂಕಾಳಿಗೆ ಸೂಕ್ತ ವರನಿಗಾಗಿ ಹುಡುಕಾಟ ನಡೆಸಿದರು. ಅನೇಕ ಕುಟುಂಬಗಳನ್ನು ಭೇಟಿಯಾಗಿ ಪರಿಶೀಲಿಸಿದ ಬಳಿಕ ಗೋವಿಂದ್ ಎಂಬ ಯುವಕ ಹಾಗೂ ಅವರ ಕುಟುಂಬವನ್ನು ಆಯ್ಕೆ ಮಾಡಿದರು. ಎರಡೂ ಕುಟುಂಬಗಳ ಒಪ್ಪಿಗೆಯೊಂದಿಗೆ ಮದುವೆ ನಿಶ್ಚಯವಾಯಿತು.

ಇತ್ತೀಚೆಗೆ ಭೋಪಾಲ್‌ನ ಐಷಾರಾಮಿ ರೆಸಾರ್ಟ್‌ನಲ್ಲಿ ಸುಮಾರು 350 ಅತಿಥಿಗಳ ಸಮ್ಮುಖದಲ್ಲಿ ಅದ್ಧೂರಿಯಾಗಿ ವಿವಾಹ ನೆರವೇರಿತು. ಮದುವೆಯ ಸಂಪೂರ್ಣ ವೆಚ್ಚವನ್ನು ದಿನೇಶ್ ಬೈರಾಗಿಯವರೇ ಭರಿಸಿದರು. ಅಷ್ಟೇ ಅಲ್ಲ, ತಂದೆಯ ಸ್ಥಾನದಲ್ಲಿ ನಿಂತು ಕನ್ಯಾದಾನ ಕೂಡ ಮಾಡಿ ಎಲ್ಲರ ಕಣ್ಣಲ್ಲಿ ನೀರು ತರಿಸಿದರು.
ಈ ಘಟನೆ ಕೇವಲ ಒಂದು ಮದುವೆಯ ಕಥೆಯಲ್ಲ... ಸಂಬಂಧಗಳು ರಕ್ತದಿಂದ ಮಾತ್ರವಲ್ಲ, ಪ್ರೀತಿ, ಕಾಳಜಿ ಮತ್ತು ಮಾನವೀಯತೆಯಿಂದ ಕಟ್ಟಲ್ಪಡುತ್ತವೆ ಎಂಬುದನ್ನು ಸಾಬೀತುಪಡಿಸಿದ ಬದುಕಿನ ಪಾಠ.
ಇಂತಹ ಮಾವನಂತಹ ವ್ಯಕ್ತಿಗಳು ಸಮಾಜದಲ್ಲಿ ಹೆಚ್ಚಾದರೆ ಎಷ್ಟೋ ಹೆಣ್ಣುಮಕ್ಕಳ ಬದುಕಿಗೆ ಹೊಸ ಆಶಾಕಿರಣ ಮೂಡಬಹುದು.
ಈ ಮಾನವೀಯ ಕಾರ್ಯಕ್ಕೆ ನಿಮ್ಮ ಒಂದು ಸಲ್ಲಿಸಿ. ಇಂತಹ ಒಳ್ಳೆಯ ಸುದ್ದಿಗಳು ಹೆಚ್ಚು ಜನರಿಗೆ ತಲುಪಲಿ !!!





