ಜಾಗೀರ್ದಾರ್*
ಕಲರ್ಸ್ ಕನ್ನಡ, ಸದಾ ಪ್ರೇಕ್ಷಕರ ಹೃದಯವನ್ನು ಮುಟ್ಟುವ ಮನಮಿಡಿಯುವ ಕತೆಗಳ ಮೂಲಕ
ಜನಪ್ರಿಯವಾಗಿದೆ. ಇದೀಗ ‘ನಂದಗೋಕುಲ’ ಎಂಬ ವಿನೂತನ ಧಾರಾವಾಹಿಯನ್ನು ಪ್ರೇಕ್ಷಕರಿಗೆ ತಲುಪಿಸುತ್ತಿದೆ. ‘ಮಕ್ಕಳನ್ನು ಹೀರೋ ಮಾಡೋಕೆ ಹೋರಾಡೋ ಪ್ರತಿಯೊಬ್ಬ ಅಪ್ಪನ ಕತೆ’ಯನ್ನು ಹೇಳುವ, ಈ ಬಹುನಿರೀಕ್ಷಿತ ಧಾರಾವಾಹಿ ‘ನಂದಗೋಕುಲ’ ಜೂನ್4 ಬುಧವಾರ ದಿಂದ ರಾತ್ರಿ 9ಕ್ಕೆ ನಿಮ್ಮ ಕಲರ್ಸ್ ಕನ್ನಡದಲ್ಲಿ ಪ್ರಸಾರಗೊಳ್ಳಲಿದೆ.
ನಂದಕುಮಾರ್ ಒಬ್ಬ ಅನಾಥ. ಕಟ್ಟುನಿಟ್ಟಾದ ನಡವಳಿಕೆಯ ಆತ್ಮವಿಶ್ವಾಸವೇ ತುಂಬಿದ ಛಲಗಾರ. 25 ವರ್ಷಗಳ ಹಿಂದೆ ಸೂರ್ಯಕಾಂತ್ – ಚಂದ್ರಕಾಂತ್ ಸಹೋದರರ ದಿನಸಿ ಅಂಗಡಿಯಲ್ಲಿ ಕೆಲಸ ಮಾಡುತ್ತಿರುತ್ತಾನೆ. ಸಹೋದರರ ಏಕೈಕ ತಂಗಿ ಗಿರಿಜಾಳನ್ನು ಪ್ರೀತಿಸಿ ಅವರ ಇಷ್ಟಕ್ಕೆ ವಿರುದ್ಧವಾಗಿ ಮದುವೆಯಾಗುತ್ತಾನೆ. ಸಹೋದರರಿಗೆ ತಮ್ಮ ಅಂತಸ್ತಿನವನಲ್ಲ ಅನ್ನಿಸಿ ಅವರಿಬ್ಬರನ್ನು ಹೊರ ಹಾಕುತ್ತಾರೆ. ನಂದಕುಮಾರ್ ಅವರ ಅಂತಸ್ತಿಗೆ ತಕ್ಕಂತೆ ಬೆಳೆಯುವ ಹಟದಿಂದ ‘ಗಿರಿಜಾ ಸ್ಟೋರ್ಸ್’ ಎಂಬ ದಿನಸಿ ಅಂಗಡಿಯನ್ನು ತೆರೆದು ಯಶಸ್ವಿಯಾಗುತ್ತಾನೆ. ಸಹೋದರರರಿಗೆ ಸವಾಲಾಗುವಂತೆ ಅವರ ಮನೆ ಎದುರೇ ‘ನಂದ ಗೋಕುಲ’ವನ್ನು ಕಟ್ಟುತ್ತಾನೆ. ಕೊನೆ ಮೊದಲೇ ಇಲ್ಲದ ಸಹೋದರರ ಹಗೆಗೆ ಇದು ಇನ್ನಷ್ಟು ದ್ವೇಷ, ಅಸೂಯೆ, ಆಕ್ರೋಶ ತುಂಬಿದೆ.
ಎರಡೂ ಕುಟುಂಬಗಳ ನಡುವೆ ನಿರಂತರ ಜಗಳ. ಗಿರಿಜಾಗೆ ಎದುರುಮನೆಯಲ್ಲೇ ತವರು ಮನೆಯವರಿದ್ದರೂ ಎದುರುಬದುರಾದರೂ ಪ್ರೀತಿಯ ಮಾತುಗಳಿಲ್ಲ. ಪ್ರತಿಕ್ಷಣವೂ ದುರುದುರು ನೋಟ, ದ್ವೇಷವನ್ನು ಎದುರಿಸಬೇಕಾದ ಪರಿಸ್ಥಿತಿ ಅವಳದು. ಒಂದು ಸಣ್ಣ ಗೆರೆ ದಾಟಿದರೆ ಗಂಡನ ಕಡೆಯಿಂದ, ಅಣ್ಣಂದಿರ ಕಡೆಯಿಂದ -ಒಟ್ಟಿನಲ್ಲಿ ಎರಡೂ ಕಡೆಯಿಂದ ಯುದ್ಧ, ದಾಳಿ!
ಕೂಡು ಕುಟುಂಬದ ಮೇಲೆ ಯಾರ ದೃಷ್ಟಿ ತಾಗುತ್ತದೆ? ತಲೆಮಾರುಗಳ ನಡುವಿನ ತಲ್ಲಣಗಳನ್ನು ಹೇಳುವ ಕುಟುಂಬದ ಪ್ರತಿಯೊಬ್ಬರೂ ಮೆಚ್ಚುವ ಕತೆಯುಳ್ಳ ‘ನಂದ ಗೋಕುಲ’ ಧಾರಾವಾಹಿ ಯನ್ನು ನೋಡಿ ಕಲರ್ಸ್ ಕನ್ನಡದಲ್ಲಿ.
‘ಬಣ್ಣ ಟಾಕೀಸ್’ ನಿರ್ಮಿಸುತ್ತಿರುವ ‘ನಂದ ಗೋಕುಲ’ ಧಾರಾವಾಹಿಯ ತಾರಾಗಣದಲ್ಲಿ ಅರವಿಂದ್ ರಾವ್, ಅಮೃತಾ ನಾಯ್ಡು, ರವಿ ಚೇತನ್, ರಘು ಮಂಡ್ಯ, ಅಭಿಷೇಕ್ ದಾಸ್, ಯಶವಂತ್, ವಿಜಯ್ ಚಂದ್ರ, ಊರ್ಜಿತ ವಲ್ತಾಜೆ, ಅರ್ಚನಾ ಗಾಯಕ್ವಾಡ್, ನವ್ಯಾ, ಮೇಘಾ, ಕೃಷ್ಣಪ್ರಿಯ, ಶೈಲಜಾ ಮುಂತಾದವರು ಇದ್ದಾರೆ.