– ರಾಘವೇಂದ್ರ ಅಡಿಗ ಎಚ್ಚೆನ್.
‘ಮೆಟ್ರೋ ಇನ್ ದಿನೋ’. ಬಾಲಿವುಡ್ನ ಮುಂದಿನ ಬಹುನಿರೀಕ್ಷಿತ ಚಿತ್ರ. ಇದೇ ಜೂನ್ ಆರಂಭದಲ್ಲಿ ಟ್ರೇಲರ್ ಅನಾವರಣಗೊಂಡು ಪ್ರೇಕ್ಷಕರ ಕುತೂಹಲ ಹೆಚ್ಚಿಸಿದ್ದ ಸಿನಿಮಾ ಇದೀಗ ಬಿಡುಗಡೆಯ ಹೊಸ್ತಿಲಲ್ಲಿದೆ.
ಆಶಿಕಿ 2, ಯೇ ಜವಾನಿ ಹೈ ದಿವಾನಿ, ಕಲಂಕ್ ಸಿನಿಮಾಗಳ ಖ್ಯಾತಿಯ ಬಾಲಿವುಡ್ ನಟ ಆದಿತ್ಯ ರಾಯ್ ಕಪೂರ್ ಹಾಗೂ ಪಟೌಡಿ ವಶಂಸ್ಥ ಸೈಫ್ ಅಲಿ ಖಾನ್ ಪುತ್ರಿ ಸಾರಾ ಅಲಿ ಖಾನ್ ತಮ್ಮ ‘ಮೆಟ್ರೋ ಇನ್ ದಿನೋ’ ಪ್ರಮೋಶನ್ನಲ್ಲಿ ಬ್ಯುಸಿಯಾಗಿದ್ದಾರೆ. ಖ್ಯಾತ ನಿರ್ದೇಶಕ ಅನುರಾಗ್ ಬಸು ಆ್ಯಕ್ಷನ್ ಕಟ್ ಹೇಳಿರುವ ಚಿತ್ರ ಮುಂದಿನ ಶುಕ್ರವಾರ ಚಿತ್ರಮಂದಿರ ಪ್ರವೇಶಿಲಿದೆ. ಈ ಹಿನ್ನೆಲೆಯಲ್ಲಿ ಚಿತ್ರದ ನಾಯಕ, ನಾಯಕಿ, ಗಾಯಕ ಶಶ್ವತ್ ಸಿಂಗ್ ಸೇರಿ ಚಿತ್ರತಂಡ ಬೆಂಗಳೂರಿಗೆ ಆಗಮಿಸಿದ್ದರು.
ಟ್ರೇಲರ್ ಮೂಲಕ ಪ್ರೇಕ್ಷಕರಲ್ಲಿ ಕುತೂಹಲ ಹುಟ್ಟಿಸಿರೋ ಮೆಟ್ರೋ ಇನ್ ದಿನೋ ಚಿತ್ರ ನಾಲ್ಕು ರೀತಿಯ ಕಥೆಗಳನ್ನು ಹೊಂದಿದ್ದು, ಪ್ರತೀ ಕಥೆಯು ಪ್ರೀತಿ, ನಿಷ್ಠೆ ಮತ್ತು ಆಧುನಿಕ ಸಂಬಂಧಗಳ ಭಾವನಾತ್ಮಕ ಏರಿಳಿತಗಳನ್ನು ಅನಾವರಣಗೊಳಿಸಲಿದೆ. ಹಾಸ್ಯದ ಜೊತೆಗೆ ಹೃದಯಸ್ಪರ್ಶಿ ನಿರೂಪಣಾ ಶೈಲಿಯನ್ನು ಹೊಂದಿರುವ ಈ ಚಿತ್ರ, ಜನಜೀವನ ಮತ್ತು ಸಂಬಂಧಗಳ ಗೊಂದಲಗಳನ್ನು ಹೇಗೆ ನಿಭಾಯಿಸುತ್ತಾರೆ ಎಂಬುದನ್ನು ಪ್ರತಿಬಿಂಬಿಸಲಿದೆ ಎಂದು ಚಿತ್ರತಂಡ ತಿಳಿಸಿದೆ.
ಚಿತ್ರದಲ್ಲಿ ಪಂಕಜ್ ತ್ರಿಪಾಠಿ, ಕೊಂಕಣ ಸೇನ್ ಶರ್ಮಾ, ಅಲಿ ಫಜಲ್, ಫಾತಿಮಾ ಸನಾ ಶೇಖ್, ಅನುಪಮ್ ಖೇರ್ ಮತ್ತು ನೀನಾ ಗುಪ್ತಾ ಸೇರಿದಂತೆ ದೊಡ್ಡ ತಾರಾಗಣವಿದೆ. ಜುಲೈ 4ರಂದು ದೇಶಾದ್ಯಂತ ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ. ಈ ಸಿನಿಮಾ ತಾರೆಯರ ಜನಪ್ರಿಯತೆ ಹೆಚ್ಚಿಸುವ ಭರವಸೆಯಿದೆ.
‘ಮೆಟ್ರೋ ಇನ್ ದಿನೋ’ ಚಿತ್ರ ಒಂದು ಸಿನಿಮಾಕ್ಕಿಂತ ಶ್ರೇಷ್ಠವಾದದ್ದು ಎಂದು ಈ ಹಿಂದೆ ನಿರ್ದೇಶಕರು ಬಣ್ಣಿಸಿದ್ದರು. ಇದು ನಗರ ಜೀವನದ ಆತುರದ ವೇಗದಲ್ಲಿ ಸುಲಭವಾಗಿ ಮರೆಯಾಗುವ ಜನರು, ಕಥೆಗಳು ಮತ್ತು ಕ್ಷಣಗಳಿಗೊಂದು ಹೃದಯಸ್ಪರ್ಶಿ ಗೌರವ ಎನ್ನುತ್ತದೆ ತಂಡ. ಭಾವನೆಗಳ ಶ್ರೀಮಂತಿಕೆ, ಮನಮುಟ್ಟುವ ಪಾತ್ರಗಳು ಮತ್ತು ವಿಭಿನ್ನ ಕಥೆಗಳೊಂದಿಗೆ, ಈ ಚಿತ್ರವು ಎಲ್ಲಾ ವಯೋಮಾನದವರಿಗೂ ಹೃದಯಸ್ಪರ್ಶಿ ಅನುಭವ ನೀಡುವ ಭರವಸೆಯಿದೆ.