ಭಾರತೀಯ ಶೂಟಿಂಗ್‌ಗೆ ನೀಡಿದ ಅತ್ಯುತ್ತಮ ಕೊಡುಗೆಗಳನ್ನು ಗುರುತಿಸಿ, ಒಲಿಂಪಿಯನ್ ಮತ್ತು ಭಾರತೀಯ ಶೂಟಿಂಗ್ ತಂಡದ ಮಾಜಿ ಮುಖ್ಯ ತರಬೇತುದಾರರಾಗಿದ್ದ ಸುಮಾ ಶಿರೂರ್ ಅವರಿಗೆ ಮುಂಬೈನ ಕ್ರೀಡಾ ಪತ್ರಕರ್ತರ ಸಂಘವು 2025 ರ SJAM ಜೀವಮಾನ ಸಾಧನೆ ಪ್ರಶಸ್ತಿ ಪ್ರದಾನ ಮಾಡಿತು.
ವರ್ಲ್ಡ್ ಸ್ಪೋರ್ಟ್ಸ್ ಜರ್ನಲಿಸ್ಟ್ ಡೇ ಅಂಗವಾಗಿ ಆಯೋಜಿಸಿದ್ದ ಸಮಾರಂಭದಲ್ಲಿ, ಭಾರತದ ಶೂಟಿಂಗ್ ದಿಗ್ಗಜರಾದ ದೀಪಾಲಿ ದೇಶಪಾಂಡೆ ಮತ್ತು ಅಂಜಲಿ ಭಗವತ್ ಅವರಿಗೂ ಲೈಫ್ ಟೈಮ್ ಅಚೀವ್ ಮೆಂಟ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಒಲಿಂಪಿಕ್ ಫೈನಲ್ ತಲುಪಿದ್ದ ಎರಡನೇ ಭಾರತೀಯ ಮಹಿಳಾ ಶೂಟರ್ ಎಂಬ ಖ್ಯಾತಿಯಿಂದ ಆರಂಭವಾಗಿ, ಪ್ಯಾರಿಸ್ ಒಲಿಂಪಿಕ್ ಮತ್ತು ಪ್ಯಾರಾಲಿಂಪಿಕ್ಸ್‌ಗಳಲ್ಲಿ ಭಾರತೀಯ ಶೂಟಿಂಗ್ ತಂಡವನ್ನು ಯಶಸ್ಸಿನ ದಾರಿಗೆ ನಡಿಸಿದವರೆಗೆ ಸುಮಾ ಶಿರೂರ್ ನ ಸಾಧನೆ ಅಪಾರ.
SJAM ಜೀವಮಾನ ಸಾಧನೆ ಪ್ರಶಸ್ತಿಯು ಕ್ರೀಡಾ ಪತ್ರಕರ್ತ ಸಮುದಾಯವು ನೀಡುವ ಅತ್ಯಂತ ಅಮೂಲ್ಯವಾದ ಕ್ರೀಡಾ ಪ್ರಶಸ್ತಿಗಳಲ್ಲಿ ಒಂದಾಗಿದೆ. 2016 ರಲ್ಲಿ ಕ್ರಿಕೆಟ್ ಆಟಗಾರ ಸುನಿಲ್ ಗವಾಸ್ಕರ್ ಅವರಿಗೆ ಈ ಪ್ರಶಸ್ತಿ ನೀಡಲಾಗಿತ್ತು.
ಈ ಬಗ್ಗೆ ಮಾತನಾಡಿದ ಸುಮಾ ಶಿರೂರ್ “ಈ ಪ್ರತಿಷ್ಠಿತ ಪ್ರಶಸ್ತಿಗೆ ನನ್ನನ್ನು ಪರಿಗಣಿಸಿದ್ದಕ್ಕಾಗಿ ಮುಂಬೈನ ಕ್ರೀಡಾ ಪತ್ರಕರ್ತರ ಸಂಘಕ್ಕೆ ಕೃತಜ್ಞತೆ ಅರ್ಪಿಸುತ್ತೇನೆ. ಭಾರತದಲ್ಲಿ ಶೂಟಿಂಗ್ ಕ್ರೀಡೆಗಳ ಅಭಿವೃದ್ಧಿ ಮತ್ತು ಪ್ರಗತಿಗೆ ಕೊಡುಗೆ ನೀಡುವ ನನ್ನ ನಿರಂತರ ಪ್ರಯತ್ನಗಳಿಗೆ ಈ ಪ್ರಶಸ್ತಿ ಅರ್ಥಪೂರ್ಣ ಪ್ರೋತ್ಸಾಹದಾಯಕವಾಗಿದೆ” ಎಂದರು.
ಸುಮಾ ಶಿರೂರ್ ಲಕ್ಷ್ಯ ಶೂಟಿಂಗ್ ಕ್ಲಬ್ ಮೂಲಕ, ಟೋಕಿಯೊ ಮತ್ತು ಪ್ಯಾರಿಸ್ ಪ್ಯಾರಾಲಿಂಪಿಕ್ ಚಿನ್ನದ ಪದಕ ವಿಜೇತೆ ಅವ್ನಿ ಲೇಖರಾ, ಜೂನಿಯರ್ ವಿಶ್ವ ಚಾಂಪಿಯನ್ ಪಾರ್ಥ್, ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ಕಿರಣ್ ಜಾಧವ್ ಮತ್ತು ಯುವ ಒಲಿಂಪಿಕ್ ಪದಕ ವಿಜೇತೆ ಶಾಹು ಮಾನೆ ಸೇರಿದಂತೆ 200 ಕ್ಕೂ ಹೆಚ್ಚು ರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳಿಗೆ ಮಾರ್ಗದರ್ಶನ ನೀಡಿದ್ದಾರೆ. ಭಾರತೀಯ ಶೂಟಿಂಗ್ ಮತ್ತು ಕ್ರೀಡಾಪಟು ಅಭಿವೃದ್ಧಿಗೆ ಅವರ ಅತ್ಯುತ್ತಮ ಕೊಡುಗೆಯನ್ನು ಗುರುತಿಸಿ, 2024 ರ ಭಾರತೀಯ ಕ್ರೀಡಾ ಗೌರವಗಳಲ್ಲಿ ವರ್ಷದ ಅತ್ಯುತ್ತಮ ತರಬೇತುದಾರ (ಮಹಿಳಾ) ಪ್ರಶಸ್ತಿಯನ್ನು ಅವರಿಗೆ ನೀಡಿ ಗೌರವಿಸಲಾಗಿದೆ.