ಭಾರತೀಯ ನೌಕಾಪಡೆಯು ವಿಶಾಖಪಟ್ಟಣಂನ ಐಎಎನ್‌ಎಸ್‌ ದೇಗಾದಲ್ಲಿ ತರಬೇತಿ ಪಡೆದ ಸಬ್‌ ಲೆಫ್ಟಿನೆಂಟ್‌ ಆಸ್ಥಾ ಪೂನಿಯಾ ಅವರನ್ನು ಫೈಟರ್‌ ವಿಭಾಗಕ್ಕೆ ಸೇರಿಸಿಕೊಂಡಿದೆ. ಈ ಮೂಲಕ ನೌಕಾಪಡೆಯಲ್ಲಿ ಮಹಿಳಾ ಫೈಟರ್‌ ಪೈಲಟ್‌ಗಳ ಹೊಸ ಯುಗಕ್ಕೆ ನಾಂದಿ ಹಾಡಲಾಗಿದೆ. ಆಸ್ಥಾ ಪೂನಿಯಾ ಅವರು ನೌಕಾಪಡೆಯ ವಾಯು ಕಾರ್ಯಾಚರಣೆ ವಿಭಾಗದ ‘ಫೈಟರ್‌ ಸ್ಟ್ರೀಮ್‌’ಗೆ ಸೇರ್ಪಡೆಗೊಂಡ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ನೇವಲ್‌ ಏರ್‌ಆಪರೇಷನ್‌ ಆಫೀಸರ್‌: ”ಈ ಕ್ರಮವು ಅಡೆತಡೆಗಳನ್ನು ಮುರಿದು ನೌಕಾಪಡೆಯಲ್ಲಿ ಮಹಿಳಾ ಫೈಟರ್‌ ಪೈಲಟ್‌ಗಳ ಹೊಸ ಯುಗಕ್ಕೆ ನಾಂದಿ ಹಾಡಿದೆ,” ಎಂದು ಭಾರತೀಯ ನೌಕಾಪಡೆ ಪ್ರಕಟಣೆಯಲ್ಲಿ ತಿಳಿಸಿದೆ. ಭಾರತೀಯ ನೌಕಾಪಡೆಯು ಈಗಾಗಲೇ ಮಹಿಳಾ ಅಧಿಕಾರಿಗಳನ್ನು ಲಘು ಹಾರಾಟ ವಿಮಾನ ಮತ್ತು ಹೆಲಿಕಾಪ್ಟರ್​ಗಳಲ್ಲಿ ಪೈಲಟ್​ಗಳು ಮತ್ತು ನೇವಲ್‌ ಏರ್‌ಆಪರೇಷನ್‌ ಆಫೀಸರ್‌ಗಳಾಗಿ ನೇಮಿಸಿಕೊಂಡಿದೆ.

2025ರ ಜುಲೈ 3ರಂದು ಸಬ್‌ ಲೆಫ್ಟಿನೆಂಟ್‌ ಆಸ್ಥಾ ಪೂನಿಯಾ, ಲೆಫ್ಟಿನೆಂಟ್‌ ಅತುಲ್‌ ಕುಮಾರ್‌ ಧುಲ್‌ ಅವರೊಂದಿಗೆ, ರೇರ್‌ ಅಡ್ಮಿರಲ್‌ ಜನಕ್‌ ಬೆವ್ಲಿಅವರಿಂದ ಪ್ರತಿಷ್ಠಿತ ‘ವಿಂಗ್ಸ್‌ ಆಫ್‌ ಗೋಲ್ಡ್’ ಗೌರವವನ್ನು ಪಡೆದರು ಎಂದು ನೌಕಾಪಡೆ ತಿಳಿಸಿದೆ.

ಆಸ್ಥಾ ಪೂನಿಯಾ ಅವರನ್ನು ಫೈಟರ್‌ ಸ್ಟ್ರೀಮ್‌ಗೆ ಸೇರಿಸಿಕೊಳ್ಳುವ ಮೂಲಕ ನೌಕಾ ವಾಯುಯಾನ ವಿಭಾಗದಲ್ಲಿ ಲಿಂಗ ಸಮಾನತೆ ಮತ್ತು ನಾರಿ ಶಕ್ತಿಯನ್ನು ಉತ್ತೇಜಿಸುವ ಬಗ್ಗೆ ಭಾರತೀಯ ನೌಕಾಪಡೆಯ ಬದ್ಧತೆಯನ್ನು ಎತ್ತಿ ತೋರಿಸುತ್ತದೆ, ಸಮಾನತೆ ಮತ್ತು ಅವಕಾಶದ ಸಂಸ್ಕೃತಿಯನ್ನು ಬೆಳೆಸುತ್ತದೆ ಎಂದು ಭಾರತೀಯ ನೌಕಾಪಡೆ ಪ್ರಕಟಣೆಯಲ್ಲಿ ತಿಳಿಸಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ