ರತ್ನಾ ಎಷ್ಟು ಹೊತ್ತಾದರೂ ಸಂತೆಯಲ್ಲಿ ಚೌಕಾಶಿ ಮಾಡದೆ ತರಕಾರಿ ಕೊಳ್ಳುತ್ತಿರಲಿಲ್ಲ. ಒಂದಲ್ಲ ಅಂತ 4 ಅಂಗಡಿ ತಿರುಗಿ, 40 ಸಲ ಪ್ರಶ್ನೆ ಕೇಳುತ್ತಿದ್ದಳು. ಇದರಿಂದ ರೋಸಿ ಹೋದ ಅವಳ ಗಂಡ, ``ಬೇಗ ಏನೋ ಒಂದು ತೆಗೆದುಕೊಂಡು ಬರಬಾರದೇ? ಈಗಾಗಲೇ ಸಂಜೆ 7 ಗಂಟೆ ಆಯ್ತು. ನಾವು ಯಾವಾಗ ಮನೆಗೆ ಹೋಗೋದು? ನಾನು ಯಾವಾಗ ಅಲ್ಲಿಂದ ಕ್ಲಬ್ಬಿಗೆ ಹೋಗೋದು...?''
ಅದಕ್ಕೆ ರತ್ನಾ ಸಾವಧಾನವಾಗಿ, ``ಅಯ್ಯೋ.... ಸಾಕು ಸುಮ್ಮನಿರಿ! ಹಾಗೆಲ್ಲ ಅಸರಪಟ್ಟು ನಿಮ್ಮಂಥ ಗಂಡನನ್ನು ಆರಿಸಿಕೊಂಡಿದ್ದಕ್ಕೇ ಈಗ ನಾನು ಇಷ್ಟೊಂದು ಅವಸ್ಥೆ ಪಡುತ್ತಿರುವುದು!'' ಸಂಜೆ ವಾಕಿಂಗ್‌ಹೊರಟ ನವ ದಂಪತಿಗಳು ಪೇಟೆ ಬೀದಿ ಹಾದು ಹೋಗುತ್ತಿದ್ದರು. ಅಲ್ಲಿದ್ದ ಎಷ್ಟೋ ಚಿನ್ನದ ಒಡವೆಗಳ ಅಂಗಡಿಗಳನ್ನು ಗಮನಿಸಿ ಪತ್ನಿ ಕೇಳಿದಳು, ``ಆಗಿನಿಂದ ನೀವು ಇದನ್ನೆಲ್ಲ ನೋಡ್ತಿದ್ದೀರಿ ತಾನೇ? ನನ್ನ ಕುತ್ತಿಗೆಗೆ ಎದ್ದು ಕಾಣುವಂಥದ್ದು ಏನಾದ್ರೂ ಕೊಡಿಸಬಾರದೇ?'' ಎಂದು ಸಿಡುಕಿದಳು.
ಅದಕ್ಕೆ ಪತಿರಾಯ ತಕ್ಷಣ ಹತ್ತಿರದ ಮೆಡಿಕಲ್ ಸ್ಟೋರ್‌ಗೆ ಹೋಗಿ, ಪತ್ನಿಯ ಕುತ್ತಿಗೆಗೆ ಚೆನ್ನಾಗಿ ಒಪ್ಪುವಂಥ, ಎದ್ದು ಕಾಣುವಂಥ ಹೊಸ `ನೆಕ್ ಬೆಲ್ಟ್' ಖರೀದಿಸಿ ತಂದುಕೊಡುವುದೇ?
ಇದೇ ನವದಂಪತಿಗಳು ಮುಂದಿನ ವರ್ಷ ಹೆರಿಗೆ ಆಸ್ಪತ್ರೆಗೆ ಬರುವಂತಾಯಿತು. ನವಮಾಸ ತುಂಬಿದ್ದ ಆಕೆಯನ್ನು ಲೇಬರ್‌ವಾರ್ಡಿಗೆ ಅಡ್ಮಿಟ್ ಮಾಡಿಸಿ, ಗಂಡ ಅಲ್ಲಿದ್ದ ನರ್ಸ್‌ಗೆ ಹೇಳಿದ, ``ನೋಡಿ ಸಿಸ್ಟರ್, ಮಗು ಹುಟ್ಟಿದ ತಕ್ಷಣ ಬಂದು ತಿಳಿಸಿ. ನಾನು ಹೊರಗಿನ ಕಾರಿಡಾರ್‌ನಲ್ಲೇ ಇರ್ತೀನಿ,'' ಎಂದು ಮೊದಲ ಮಗುವಿಗಾಗಿ ಕಾತುರದಿಂದ ಕಾಯುತ್ತಾ ಶತಪಥ ಹೆಜ್ಜೆ ಹಾಕುತ್ತಿದ್ದ.
ಲೇಬರ್ ರೂಂ ಒಳಗೆ ಹೋಗಿ ಬಾಗಿಲು ಹಾಕಿಕೊಂಡ ನರ್ಸ್, ತಕ್ಷಣ ಬಾಗಿಲನ್ನು ತುಸು ತೆರೆದು ಇವನಿಗೆ, ``ನೋಡ್ರಿ, ತಕ್ಷಣ ಹೊರಗೆ ಬಂದು ಹೇಳಕ್ಕಾಗಲ್ಲ. ಇಲ್ಲಿಂದಾನೇ ಬಾಗಿಲಲ್ಲಿ ನಿಂತು ಹೇಳಬೇಕು. ಏನಾದ್ರೂ ಶಾರ್ಟ್‌ಆಗಿ ಕ್ಲೂ ಕೊಡಿ,'' ಎಂದಳು.
ಆತ ಅದಕ್ಕೆ, ``ಗಂಡು ಮಗು ಹುಟ್ಟಿದರೆ ಟೊಮೇಟೊ, ಹೆಣ್ಣು ಮಗಳು ಹುಟ್ಟಿದರೆ ಈರುಳ್ಳಿ ಅಂತ ಹೇಳಿ. ನೀವು ಹೊರಗೆ ನನ್ನ ಬಳಿ ನಡೆದು ಬರುವುದೇನೂ ಬೇಡ,'' ಎಂದ.
ಆಕೆ `ಹಾಗೇ ಆಗಲಿ,' ಎಂದಳು.
1 ಗಂಟೆ ಕಳೆದ ಬಳಿಕ ಗಂಡು ಹೆಣ್ಣು ಅವಳಿ ಮಕ್ಕಳು ಹುಟ್ಟಿದಾಗ, ಇದರ ಬಗ್ಗೆ ಹೇಗೆ ಹೇಳಲಿ ಎಂದು ತಲೆ ಕೆಡಿಸಿಕೊಂಡ ಆಕೆ ಬಾಗಿಲು ತೆರೆದವಳೇ ಅಲ್ಲಿಂದಲೇ ಜೋರಾಗಿ, ``ಸಾರ್...ಸಲಾಡ್!'' ಎನ್ನುವುದೇ?
ಪತ್ನಿ : ನಾನು ಯಾವ ಕೆಲಸವನ್ನೇ ಶುರು ಮಾಡಿದ್ರೂ ಅದರಲ್ಲಿ ಪೂರ್ತಿ ಮುಳುಗಿ ಹೋಗ್ತೀನಿ!
ಪತಿ : ಛೇ....ಛೇ! ಮದುವೆಯಾಗಿ ಇಷ್ಟು ವರ್ಷಗಳಾಯಿತು, ಒಂದು ದಿನವಾದರೂ ನೀನು ಬಾವಿ ತೋಡುವ ಕೆಲಸಕ್ಕೆ ಹೋಗಬಾರದೇ?
ಉಮೇಶ್ : ನನ್ನಂಥ ಹೊಸದಾಗಿ ಮದುವೆ ಆದವರು ನಿಮ್ಮಂಥ ಬ್ಯಾಚುಲರ್ಸ್‌ಗೆ ಖಂಡಿತಾ ಒಂದು ಒಳ್ಳೆಯ ಸಲಹೆ ಕೊಡಬಹುದು.
ಸುರೇಶ್ : ಅದೇನಪ್ಪ ಅಂಥಾದ್ದು.... ಹೇಳು!
ಉಮೇಶ್ : ಯಾವ ಹುಡುಗಿಯನ್ನು ಮದುವೆಗೆ ಆರಿಸಿಕೊಳ್ಳಬೇಕೋ ಅವಳು ಶಾಲಾ ಕಾಲೇಜುಗಳ ಚರ್ಚಾ ಸ್ಪರ್ಧೆಗಳಲ್ಲಿ ಭಾಗವಹಿಸಿರಬಾರದು ಅಂತ ಮೊದಲೇ ಕಡ್ಡಾಯವಾಗಿ ಹೇಳಿಬಿಡಬೇಕು.