ರತ್ನಾ ಎಷ್ಟು ಹೊತ್ತಾದರೂ ಸಂತೆಯಲ್ಲಿ ಚೌಕಾಶಿ ಮಾಡದೆ ತರಕಾರಿ ಕೊಳ್ಳುತ್ತಿರಲಿಲ್ಲ. ಒಂದಲ್ಲ ಅಂತ 4 ಅಂಗಡಿ ತಿರುಗಿ, 40 ಸಲ ಪ್ರಶ್ನೆ ಕೇಳುತ್ತಿದ್ದಳು. ಇದರಿಂದ ರೋಸಿ ಹೋದ ಅವಳ ಗಂಡ, “ಬೇಗ ಏನೋ ಒಂದು ತೆಗೆದುಕೊಂಡು ಬರಬಾರದೇ? ಈಗಾಗಲೇ ಸಂಜೆ 7 ಗಂಟೆ ಆಯ್ತು. ನಾವು ಯಾವಾಗ ಮನೆಗೆ ಹೋಗೋದು? ನಾನು ಯಾವಾಗ ಅಲ್ಲಿಂದ ಕ್ಲಬ್ಬಿಗೆ ಹೋಗೋದು…?”
ಅದಕ್ಕೆ ರತ್ನಾ ಸಾವಧಾನವಾಗಿ, “ಅಯ್ಯೋ…. ಸಾಕು ಸುಮ್ಮನಿರಿ! ಹಾಗೆಲ್ಲ ಅಸರಪಟ್ಟು ನಿಮ್ಮಂಥ ಗಂಡನನ್ನು ಆರಿಸಿಕೊಂಡಿದ್ದಕ್ಕೇ ಈಗ ನಾನು ಇಷ್ಟೊಂದು ಅವಸ್ಥೆ ಪಡುತ್ತಿರುವುದು!” ಸಂಜೆ ವಾಕಿಂಗ್‌ಹೊರಟ ನವ ದಂಪತಿಗಳು ಪೇಟೆ ಬೀದಿ ಹಾದು ಹೋಗುತ್ತಿದ್ದರು. ಅಲ್ಲಿದ್ದ ಎಷ್ಟೋ ಚಿನ್ನದ ಒಡವೆಗಳ ಅಂಗಡಿಗಳನ್ನು ಗಮನಿಸಿ ಪತ್ನಿ ಕೇಳಿದಳು, “ಆಗಿನಿಂದ ನೀವು ಇದನ್ನೆಲ್ಲ ನೋಡ್ತಿದ್ದೀರಿ ತಾನೇ? ನನ್ನ ಕುತ್ತಿಗೆಗೆ ಎದ್ದು ಕಾಣುವಂಥದ್ದು ಏನಾದ್ರೂ ಕೊಡಿಸಬಾರದೇ?” ಎಂದು ಸಿಡುಕಿದಳು.
ಅದಕ್ಕೆ ಪತಿರಾಯ ತಕ್ಷಣ ಹತ್ತಿರದ ಮೆಡಿಕಲ್ ಸ್ಟೋರ್‌ಗೆ ಹೋಗಿ, ಪತ್ನಿಯ ಕುತ್ತಿಗೆಗೆ ಚೆನ್ನಾಗಿ ಒಪ್ಪುವಂಥ, ಎದ್ದು ಕಾಣುವಂಥ ಹೊಸ `ನೆಕ್ ಬೆಲ್ಟ್’ ಖರೀದಿಸಿ ತಂದುಕೊಡುವುದೇ?
ಇದೇ ನವದಂಪತಿಗಳು ಮುಂದಿನ ವರ್ಷ ಹೆರಿಗೆ ಆಸ್ಪತ್ರೆಗೆ ಬರುವಂತಾಯಿತು. ನವಮಾಸ ತುಂಬಿದ್ದ ಆಕೆಯನ್ನು ಲೇಬರ್‌ವಾರ್ಡಿಗೆ ಅಡ್ಮಿಟ್ ಮಾಡಿಸಿ, ಗಂಡ ಅಲ್ಲಿದ್ದ ನರ್ಸ್‌ಗೆ ಹೇಳಿದ, “ನೋಡಿ ಸಿಸ್ಟರ್, ಮಗು ಹುಟ್ಟಿದ ತಕ್ಷಣ ಬಂದು ತಿಳಿಸಿ. ನಾನು ಹೊರಗಿನ ಕಾರಿಡಾರ್‌ನಲ್ಲೇ ಇರ್ತೀನಿ,” ಎಂದು ಮೊದಲ ಮಗುವಿಗಾಗಿ ಕಾತುರದಿಂದ ಕಾಯುತ್ತಾ ಶತಪಥ ಹೆಜ್ಜೆ ಹಾಕುತ್ತಿದ್ದ.
ಲೇಬರ್ ರೂಂ ಒಳಗೆ ಹೋಗಿ ಬಾಗಿಲು ಹಾಕಿಕೊಂಡ ನರ್ಸ್, ತಕ್ಷಣ ಬಾಗಿಲನ್ನು ತುಸು ತೆರೆದು ಇವನಿಗೆ, “ನೋಡ್ರಿ, ತಕ್ಷಣ ಹೊರಗೆ ಬಂದು ಹೇಳಕ್ಕಾಗಲ್ಲ. ಇಲ್ಲಿಂದಾನೇ ಬಾಗಿಲಲ್ಲಿ ನಿಂತು ಹೇಳಬೇಕು. ಏನಾದ್ರೂ ಶಾರ್ಟ್‌ಆಗಿ ಕ್ಲೂ ಕೊಡಿ,” ಎಂದಳು.
ಆತ ಅದಕ್ಕೆ, “ಗಂಡು ಮಗು ಹುಟ್ಟಿದರೆ ಟೊಮೇಟೊ, ಹೆಣ್ಣು ಮಗಳು ಹುಟ್ಟಿದರೆ ಈರುಳ್ಳಿ ಅಂತ ಹೇಳಿ. ನೀವು ಹೊರಗೆ ನನ್ನ ಬಳಿ ನಡೆದು ಬರುವುದೇನೂ ಬೇಡ,” ಎಂದ.
ಆಕೆ `ಹಾಗೇ ಆಗಲಿ,’ ಎಂದಳು.
1 ಗಂಟೆ ಕಳೆದ ಬಳಿಕ ಗಂಡು ಹೆಣ್ಣು ಅವಳಿ ಮಕ್ಕಳು ಹುಟ್ಟಿದಾಗ, ಇದರ ಬಗ್ಗೆ ಹೇಗೆ ಹೇಳಲಿ ಎಂದು ತಲೆ ಕೆಡಿಸಿಕೊಂಡ ಆಕೆ ಬಾಗಿಲು ತೆರೆದವಳೇ ಅಲ್ಲಿಂದಲೇ ಜೋರಾಗಿ, “ಸಾರ್…ಸಲಾಡ್!” ಎನ್ನುವುದೇ?
ಪತ್ನಿ : ನಾನು ಯಾವ ಕೆಲಸವನ್ನೇ ಶುರು ಮಾಡಿದ್ರೂ ಅದರಲ್ಲಿ ಪೂರ್ತಿ ಮುಳುಗಿ ಹೋಗ್ತೀನಿ!
ಪತಿ : ಛೇ….ಛೇ! ಮದುವೆಯಾಗಿ ಇಷ್ಟು ವರ್ಷಗಳಾಯಿತು, ಒಂದು ದಿನವಾದರೂ ನೀನು ಬಾವಿ ತೋಡುವ ಕೆಲಸಕ್ಕೆ ಹೋಗಬಾರದೇ?
ಉಮೇಶ್ : ನನ್ನಂಥ ಹೊಸದಾಗಿ ಮದುವೆ ಆದವರು ನಿಮ್ಮಂಥ ಬ್ಯಾಚುಲರ್ಸ್‌ಗೆ ಖಂಡಿತಾ ಒಂದು ಒಳ್ಳೆಯ ಸಲಹೆ ಕೊಡಬಹುದು.
ಸುರೇಶ್ : ಅದೇನಪ್ಪ ಅಂಥಾದ್ದು…. ಹೇಳು!
ಉಮೇಶ್ : ಯಾವ ಹುಡುಗಿಯನ್ನು ಮದುವೆಗೆ ಆರಿಸಿಕೊಳ್ಳಬೇಕೋ ಅವಳು ಶಾಲಾ ಕಾಲೇಜುಗಳ ಚರ್ಚಾ ಸ್ಪರ್ಧೆಗಳಲ್ಲಿ ಭಾಗವಹಿಸಿರಬಾರದು ಅಂತ ಮೊದಲೇ ಕಡ್ಡಾಯವಾಗಿ ಹೇಳಿಬಿಡಬೇಕು.
ಪತ್ನಿ : `ಅಂಜಲಿ’ ಚೆನ್ನಾಗಿರಬೇಕು, ನೋಡಲಿಲ್ಲವೇ?
ವಾಟ್ಸ್ ಆ್ಯಪ್‌ಮೆಸೇಜ್‌ಕಳುಹಿಸುತ್ತಾ ಪತಿ ಹೊರಗೆ ಹೊರಟವನು, `ನೋಡ್ತೀನಿ ತಾಳು….” ಎಂದ.
ಪತ್ನಿ : ಬಾಯಿ ಮುಚ್ಚಿಕೊಂಡು ಒಳಗೆ ಬನ್ನಿ! ಪಕ್ಕದ ಮನೆ `ಅಂಜಲಿ’ಯನ್ನು ನೋಡಿ ಅಂತ ಅಲ್ಲ ನಾನು ಹೇಳಿದ್ದು, `ಅಂಜಲಿ’ ಧಾರಾವಾಹಿಯನ್ನು!
ತಮ್ಮ 94ರ ವಯಸ್ಸಿನಲ್ಲಿ ಆಸ್ಪತ್ರೆ ಸೇರಿ ತಿಂಗಳಾಗುವಷ್ಟರಲ್ಲಿ ಈಗಲೋ ಆಗಲೋ ಎಂಬಂತಾಗಿದ್ದ ರಾಮರಾಯರಿಗೆ ಪತ್ನಿಯ ಬಳಿ ಕೊನೆಯಾಸೆ ಹೇಳಿಕೊಳ್ಳಬೇಕು ಅನಿಸಿತು.
ರಾಯರು : ರಮಾ, ನಾನು ತೀರಿಕೊಂಡ ಮೇಲೆ ಅಂಗಡಿ ಪೂರ್ತಿ ಮೋಹನನಿಗೆ ಒಪ್ಪಿಸಿಬಿಡು.
ರಮಾ : ಮೋಹನ್‌ಯಾಕೆ? ಸುರೇಶ್‌ಅದನ್ನು ಇನ್ನೂ ಚೆನ್ನಾಗಿ ನೋಡಿಕೊಳ್ತಾನೆ.
ರಾಯರು : ಸರಿ ರಮಾ, ಕಾರನ್ನು ನನ್ನ ತಮ್ಮ ರಾಮುಗೆ ಕೊಟ್ಟುಬಿಡು.
ರಮಾ : ಅವನಿಗ್ಯಾಕೆ? ನನ್ನ ತಮ್ಮ ರಾಜೂಗೆ ಕೊಡ್ತೀನಿ ಬಿಡಿ.
ರಾಯರು : ಹೋಗಲಿ ಬಿಡು, ನಮ್ಮ ಈ ಬಂಗಲೆಯ ಔಟ್ ಹೌಸ್ ನ್ನು ನಮ್ಮ ಆಳು ರಂಗನಿಗೆ ಕೊಟ್ಟುಬಿಡು.
ರಮಾ : ಅವನಿಗೆ ಯಾಕೆ? ನಮ್ಮ ವಾಚ್ ಮ್ಯಾನ್‌ನಿಂಗನಿಗೆ ಕೊಡೋಣ.
ರಾಯರು : ಅದೆಲ್ಲ ಸರಿ…. ಈಗ ಹೇಳು, ಸಾಯುತ್ತಿರುವವನು ನಾನೋ ನೀನೋ?
ರಮಾ : ನೀವು ಯಾಕೆ… ಹ್ಞಾಂ ಹ್ಞಾಂ… ನೀವೇ!
ಊಟ ಮಾಡುತ್ತಿದ್ದ ರತ್ನಮ್ಮ ಪತಿ ರಮಣ ಮೂರ್ತಿಗೆ, “ಏನ್ರಿ ಅಡುಗೆಮನೆಯಿಂದ ಸ್ವಲ್ಪ ಉಪ್ಪಿನ ಡಬ್ಬಾ ತಂದು ಕೊಡ್ತೀರಾ?” ಎಂದು ಕೇಳಿದರು.
ರಮಣಮೂರ್ತಿ ಅಡುಗೆಮನೆಗೆ ಹೋಗಿ ಯಾವ ಶೆಲ್ಫ್ ಹುಡುಕಿದರೂ ಉಪ್ಪಿನ ಡಬ್ಬಾ ಸಿಗಲೇ ಇಲ್ಲ. “ಇಲ್ಲಿ ಆ ಡಬ್ಬಾನೇ ಇಲ್ವಲ್ಲೇ?” ಎಂದು ಸುಸ್ತಾದರು.
ರತ್ನಮ್ಮ ಕುಳಿತಲ್ಲಿಂದಲೇ ಗುಡುಗಿದರು, “ಅಯ್ಯೋ ಬಡ್ಕೊಂಡ್ರು ನಿಮ್ಮ ಜಾಣತನಕ್ಕೆ! ಮಹಾ ಸೋಮಾರಿ, ನಿಮ್ಮ ಮೈಗಳ್ಳ ಬುದ್ಧಿ ನನಗೆ ಗೊತ್ತಿಲ್ಲವೇ? ಇಡೀ ದಿನ ಕಾಡು ಹರಟೆಯಲ್ಲೇ ಆಗೋಗುತ್ತೆ… ಯಾವ ಕೆಲಸಾನೂ ನೆಟ್ಟಗೆ ಮಾಡಲು ಬರೋದಿಲ್ಲ. ಮೊಬೈಲ್ ನಲ್ಲಿ ಸದಾ ಹಾಳು ಮೂಳು ಮೆಸೇಜ್‌ನೋಡಿಕೊಂಡು, FB ನೋಡ್ತಾ ಇದ್ದು ಬಿಡೋದು…. ಮುಖ ಮೂತಿ ತಿಳಿಯದವರಿಗೆ ಗುಡ್‌ಮಾರ್ನಿಂಗ್, ಗುಡ್‌ನೈಟ್ ಗಳನ್ನು ಕಳಿಸೋದು…. ಈ ಹಾಳು ಚಟಗಳು ಮುಂದೆ ನಮ್ಮನ್ನು ಕೋರ್ಟಿಗೆ ಎಳೆಯುತ್ತವಷ್ಟೆ. ಫ್ರೆಂಡ್ಸ್ ಜೊತೆ ಅಲೆದಾಟ, ಕಂಡೋರಿಗೆ ಲೈನ್‌ಹೊಡೆಯೋದು…. ಇದೇ ಆಗ್ಹೋಯ್ತು. ಹಾಳಾಗೋಗಲಿ, ಇಲ್ಲೇ ಬಂದು ಊಟ ಮಾಡಿ. ನೀವು ಹೀಗೆ ಮಾಡ್ತೀರಿ ಅಂತಾನೇ ಮೊದಲೇ ನಾನು ಉಪ್ಪಿನ ಡಬ್ಬಿ ತಂದಿಟ್ಟಿದ್ದೆ!”
ಪತಿ ಪತ್ನಿ ಇಬ್ಬರಲ್ಲೂ ಕೊನೆ ಮೊದಲು ಇಲ್ಲದಂತೆ ವಾದ ವಿವಾದ ಶುರುವಾಗಿತ್ತು. ಇಡೀ ದಿನ ಕಳೆದರೂ ವಾದಕ್ಕೆ ಅಂತ್ಯ ಕಾಣಲಿಲ್ಲ. ಕೊನೆಗೆ ಪತ್ನಿ ಹೇಳಿದಳು, “ನೀವೀಗ ವಾದದಲ್ಲಿ ಗೆಲ್ಲುವುದು ಮುಖ್ಯವೋ… ನೆಮ್ಮದಿ ಆಗಿ ಮಲಗುವುದೋ?” ಅಲ್ಲಿಗೆ ವಾದ ಮುಗಿಯಿತು!
ಅಜಯ್: ನಿನ್ನೆ ರಾತ್ರಿ ಏನಾಯ್ತು ಗೊತ್ತಾ? ಗುಂಡು ಪಾರ್ಟಿ ಮುಗಿಸಿ ಬಹಳ ತಡವಾಗಿ ಮನೆ ತಲುಪುವಷ್ಟರಲ್ಲಿ 12 ಗಂಟೆ ದಾಟಿತ್ತು. ಮನೆಗೆ ಬಂದು ಬೆಲ್ ಬಾರಿಸಿ ಎಷ್ಟು ಹೊತ್ತಾದರೂ ಹೆಂಡತಿ ಬಂದು ಬಾಗಿಲು ತೆರೆಯುವುದು ಬೇಡವೇ? ಕೊನೆಗೆ ಹೊರಗಿನ ಜಗುಲಿ ಮೇಲೆ ಮಲಗಿ ಇಡೀ ರಾತ್ರಿ ಕಳೆಯಬೇಕಾಯ್ತು.
ವಿಜಯ್: ಛೇ…ಛೇ! ಬೆಳಗ್ಗೆ ಎದ್ದು ಹೆಂಡತಿಯನ್ನು ಸರಿಯಾಗಿ ತರಾಟೆಗೆ ತೆಗೆದುಕೊಂಡೆ ತಾನೇ?
ಅಜಯ್: ಏ… ವಿಷಯ ಅದಲ್ಲ. ಅವಳು ನಿನ್ನೆ ಬೆಳಗ್ಗೆ ತವರಿಗೆಂದು ಶಿವಮೊಗ್ಗಕ್ಕೆ ಹೊರಟಿದ್ದಳು. ಮನೆ ಬೀಗದ ಕೈ ನನ್ನ ಜೇಬಿನಲ್ಲೇ ಇತ್ತು. ಹೆಂಡತಿ ತವರಿಗೆ ಹೋದವಳಲ್ಲ ಎಂಬ ಖುಷಿಯಲ್ಲಿ ಪಾರ್ಟಿಗೆ ಹೋಗಿ ಗುಂಡು ಹಾಕಿದವನಿಗೆ, ಅವಳು ಹೋದದ್ದೇ ಮರೆತು ಹೋಗಬೇಕೇ….?
ಕೊರೆಯು ಚಳಿಯಲ್ಲಿ ನಡುಗುತ್ತಾ ಹೊರಟಿದ್ದ ಹೆಂಗಸರ ಗುಂಪನ್ನು ಕಂಡು ಯಾರೋ ಪಾಪ ಅಂತ ಅವರಿಗೆ ಶಾಲು ಹೊದೆಯಲು ನೀಡಿದರೆ, ಕೋಪಗೊಂಡ ಆ ಹೆಂಗಸರು, “ಛೇ….ಛೇ! ಹೋಗಿ ನಿಮ್ಮ ಕೆಲಸ ನೋಡ್ರಿ! ನಮ್ಮನ್ನು ಗತಿಗೆಟ್ಟವರು ಅಂದುಕೊಂಡ್ರಾ? ನಾವೆಲ್ಲರೂ ಗ್ರಾಂಡಾಗಿ ಡ್ರೆಸ್‌ಮಾಡಿಕೊಂಡು, ಮದುವೆಗೆ ಹೊರಟಿದ್ದೇವೆ!” ಎನ್ನುವುದೇ?