– ರಾಘವೇಂದ್ರ ಅಡಿಗ ಎಚ್ಚೆನ್.
ಶಿಲ್ಪಾ ಶೆಟ್ಟಿ (Shilpa Shetty) ಮಂಗಳೂರು ಮೂಲದವರು ಆದರೆ ಮಿಂಚುತ್ತಿರುವುದು ಬಾಲಿವುಡ್ನಲ್ಲಿ. ಹಾಗೆಂದು ಅವರಿಗೆ ಕನ್ನಡ ಚಿತ್ರರಂಗ ಹೊಸತೆಂದೇನೂ ಅಲ್ಲ. ಈ ಹಿಂದೆ ರವಿಚಂದ್ರನ್ ಜೊತೆಗೆ ಎರಡು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ‘ಪ್ರೀತ್ಸೋದ್ ತಪ್ಪಾ’, ‘ಒಂದಾಗೋಣ ಬಾ’ ಸಿನಿಮಾಗಳಲ್ಲಿ ನಟಿಸಿದ್ದಾರೆ. ಉಪೇಂದ್ರ ನಟನೆಯ ‘ಆಟೋ ಶಂಕರ್’ ಸಿನಿಮಾನಲ್ಲಿಯೂ ಶಿಲ್ಪಾ ಶೆಟ್ಟಿ ನಟಿಸಿದ್ದರು. 20 ವರ್ಷಗಳ ಗ್ಯಾಪ್ ಬಳಿಕ ಇದೀಗ ‘ಕೆಡಿ’ ಸಿನಿಮಾ ಮೂಲಕ ಮತ್ತೆ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿರುವ ಶಿಲ್ಪಾ ಶೆಟ್ಟಿ, ಕನ್ನಡ ಚಿತ್ರರಂಗದ ಬಗ್ಗೆ ಹೆಮ್ಮೆಯ ಮಾತುಗಳನ್ನಾಡಿದ್ದಾರೆ.
ಧ್ರುವ ಸರ್ಜಾ ನಾಯಕನಾಗಿ ನಟಿಸಿರುವ ‘ಕೆಡಿ’ ಸಿನಿಮಾನಲ್ಲಿ ಶಿಲ್ಪಾ ಶೆಟ್ಟಿ ಮುಖ್ಯ ಪಾತ್ರದಲ್ಲಿ ನಟಿಸಿದ್ದು, ಸಿನಿಮಾದ ಟೀಸರ್ ಬಿಡುಗಡೆ ಇಂದು (ಜುಲೈ 10) ಮುಂಬೈನಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗಿಯಾಗಿದ್ದ ನಟಿ ಶಿಲ್ಪಾ ಶೆಟ್ಟಿ, ಕನ್ನಡ ಚಿತ್ರರಂಗದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು. ‘ನಾನು ತುಳುನಾಡಿನವಳು, ಹಾಗಾಗಿ ಕರ್ನಾಟಕದ ಜೊತೆಗೆ, ಕನ್ನಡ ಚಿತ್ರರಂಗದ ಜೊತೆಗೆ ನಂಟು ಇದೆ. ಅವರು ಅತ್ಯದ್ಭುತವಾದ ಸಿನಿಮಾಗಳನ್ನು ಮಾಡುತ್ತಾರೆ. ಅದರಲ್ಲೂ ಪ್ರೇಮ್ ಅವರ ಸಿನಿಮಾನಲ್ಲಿ ನಟಿಸಿರುವುದು ನನ್ನ ಅದೃಷ್ಟ’ ಎಂದಿದ್ದಾರೆ.
‘ಕೆಡಿ’ ಸಿನಿಮಾದ ಪಾತ್ರವನ್ನು ಒಪ್ಪಿಕೊಂಡಿದ್ದು ಏಕೆ ಎಂದು ವಿವರಿಸಿದ ಶಿಲ್ಪಾ ಶೆಟ್ಟಿ, ‘ಮೊದಲಿಗೆ ನಾನು ಸಿನಿಮಾದಲ್ಲಿ ನಟಿಸುವುದಿಲ್ಲ ಎಂದುಬಿಟ್ಟಿದ್ದೆ. ಏಕೆಂದರೆ ಒಂದರ ಹಿಂದೊಂದು ಸಿನಿಮಾ, ರಿಯಾಲಿಟಿ ಶೋನಲ್ಲಿ ಬ್ಯುಸಿ ಆಗಿದ್ದೆ. ಆದರೆ ಅದೇ ಸಮಯದಲ್ಲಿ ರೋಹಿತ್ ಶೆಟ್ಟಿಯ ವೆಬ್ ಸರಣಿಯಲ್ಲಿ ನಟಿಸುವಾಗ ಅಪಘಾತವಾಗಿ ಕಾಲು ಮುರಿದುಕೊಂಡು ವೀಲ್ ಚೇರ್ ನಲ್ಲಿ ಕೂರಬೇಕಾಯ್ತು. ಆಗ ನನ್ನ ಮ್ಯಾನೇಜರ್ ನನಗೆ ಬಲವಂತ ಮಾಡಿ ಕತೆ ಕೇಳುವಂತೆ ಹೇಳಿದರು’ ಎಂದಿದ್ದಾರೆ ಶಿಲ್ಪಾ.
‘ಮೊದಲು ಕತೆ ಕೇಳಿ, ಆ ನಂತರ ನಿಮಗೆ ಇಷ್ಟವಾಗದಿದ್ದರೆ ನೋ ಹೇಳಿ ಎಂದು ಮ್ಯಾನೇಜರ್ ಹೇಳಿದ ಕಾರಣಕ್ಕೆ ವ್ಹೀಲ್ ಚೇರ್ನಲ್ಲಿ ಕೂತೇ ಕತೆ ಕೇಳಿದೆ. ಕತೆ ಕೇಳುತ್ತಾ ಕೇಳುತ್ತಾ ನಾನು ಕತೆಯಲ್ಲಿ ಮಗ್ನಳಾಗಿ ಬಿಟ್ಟೆ. ಅದರಲ್ಲೂ ಇಂಟರ್ವೆಲ್ ಸೀನ್ ವೇಳೆಗಂತೂ ನಾನು ವ್ಹೀಲ್ ಚೇರ್ನಿಂದ ಎದ್ದು ಬಿಟ್ಟೆ. ಆ ಒಂದು ಸೀನ್ಗಾಗಿ ಆದರೂ ಸಿನಿಮಾನಲ್ಲಿ ನಟಿಸಬೇಕು ಎಂದು ಅನಿಸಿ, ನಾನು ಪ್ರೇಮ್ ಅವರಿಗೆ ಓಕೆ ಹೇಳಿದೆ’ ಎಂದಿದ್ದಾರೆ ಶಿಲ್ಪಾ ಶೆಟ್ಟಿ.
‘ಕೆಡಿ’ ಸಿನಿಮಾನಲ್ಲಿ ಸತ್ಯವತಿ ಹೆಸರಿನ ಪಾತ್ರದಲ್ಲಿ ಶಿಲ್ಪಾ ಶೆಟ್ಟಿ ನಟಿಸಿದ್ದಾರೆ. ಸಿನಿಮಾದ ನಿರ್ದೇಶಕ ಪ್ರೇಮ್, ನಾಯಕನಾಗಿ ಧ್ರುವ ಸರ್ಜಾ ನಟಿಸಿದ್ದು ವಿಲನ್ ಪಾತ್ರದಲ್ಲಿ ಬಾಲಿವುಡ್ ನಟ ಸಂಜಯ್ ದತ್ ನಟಿಸಿದ್ದಾರೆ. ಈ ಸಿನಿಮಾನಲ್ಲಿ ರಮೇಶ್ ಅರವಿಂದ್ ಸಹ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರೀಷ್ಮಾ ನಾಣಯ್ಯ ಈ ಸಿನಿಮಾದ ನಾಯಕಿ. ನೋರಾ ಫತೇಹಿ ಸಿನಿಮಾದ ವಿಶೇಷ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ. ಸಿನಿಮಾ ಶೀಘ್ರವೇ ಬಿಡುಗಡೆ ಆಗಲಿದೆ.