ರಾಘವೇಂದ್ರ ಅಡಿಗ ಎಚ್ಚೆನ್.

1970ರ ದಶಕದಲ್ಲಿ ಪ್ರಕಟವಾಗ ತಮಿಳಿನ ಚಿನ್ನಪ್ಪ ಭಾರತಿ ಅವರ ‘ಪವಳಾಯಿ’ ಕಾದಂಬರಿ, ಕೆಲ ವರ್ಷಗಳ ಹಿಂದೆ ಕನ್ನಡ ಭಾಷೆಗೂ ಅನುವಾದವಾಗಿ ಬಿಡುಗಡೆಯಾಗಿತ್ತು. ಇದೀಗ ಈ ‘ಪವಳಾಯಿ’ ಕಾದಂಬರಿ ‘ಸುಳಿ’ ಎಂಬ ಹೆಸರಿನಲ್ಲಿ ಕನ್ನಡದಲ್ಲಿ ಸಿನಿಮಾವಾಗಿಯೂ ತೆರೆಮೇಲೆ ಬರುತ್ತಿದೆ. 2022ರಲ್ಲಿ ‘ಪವಳಾಯಿ’ ಕಾದಂಬರಿಗೆ ‘ಸುಳಿ’ ಎಂಬ ಹೆಸರಿನಲ್ಲಿ ಸಿನಿಮಾ ರೂಪ ಕೊಡುವ ಕೆಲಸ ಶುರುವಾಗಿದ್ದು, ಇದೀಗ ಈ ಸಿನಿಮಾದ ಬಹುತೇಕ ಕೆಲಸಗಳು ಪೂರ್ಣಗೊಂಡಿದ್ದು, ‘ಸುಳಿ’ ಸಿನಿಮಾ ತೆರೆಗೆ ಬರಲು ತಯಾರಾಗಿದೆ.

suli1

ಕನ್ನಡದ ಮಹಿಳಾ ನಿರ್ದೇಶಕರ ಸಾಲಿನಲ್ಲಿ ಗುರುತಿಸಿಕೊಂಡಿರುವ ರಶ್ಮಿ ಎಸ್‌. (ಸಾಯಿ ರಶ್ಮಿ) ‘ಸುಳಿ’ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ‘ಸಹಸ್ರಕೋಟಿ ಮೂವೀ ಎಂಟರ್‌ಟೈನ್ಮೆಂಟ್‌’ ಬ್ಯಾನರಿನಲ್ಲಿ ಬೆಟ್ಟಸ್ವಾಮಿ ಗೌಡ ‘ಸುಳಿ’ ಸಿನಿಮಾಕ್ಕೆ ಬಂಡವಾಳ ಹೂಡಿ ನಿರ್ಮಿಸಿದ್ದಾರೆ. ಯುವನಟ ಸನತ್‌, ಚೈತ್ರಾ ಸಾಕೇಲ್, ಸಂಜನಾ ನಾಯ್ಡು, ಶಿವಕುಮಾರ್‌ ಆರಾಧ್ಯ, ಸೌಭಾಗ್ಯ, ಸಿದ್ಧು ಮಂಡ್ಯ, ಶಂಕರ ನಾರಾಯಣ, ಬೆಟ್ಟಸ್ವಾಮಿ ಗೌಡ, ಕಾವ್ಯಾ, ಹರಿಹರನ್‌ ಮತ್ತಿತರರು ‘ಸುಳಿ’ ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

suli2

ಸದ್ಯ ನಿಧಾನವಾಗಿ ‘ಸುಳಿ’ ಸಿನಿಮಾದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿರುವ ಚಿತ್ರತಂಡ, ಇದೀಗ ಚಿತ್ರದ ಟ್ರೇಲರ್‌ ಮತ್ತು ಹಾಡುಗಳನ್ನು ಬಿಡುಗಡೆ ಮಾಡಿದೆ. ಹಿರಿಯ ಲೇಖಕಿ, ಹೋರಾಟಗಾತಿ ಬಿ. ಟಿ. ಲಲಿತಾ ನಾಯಕ್‌, ಹಿರಿಯ ನಟಿ ಭವ್ಯಾ, ನಟರಾದ ಸುಚೇಂದ್ರ ಪ್ರಸಾದ್‌ ಸೇರಿದಂತೆ ಹಲವು ಗಣ್ಯರ ಸಮ್ಮುಖದಲ್ಲಿ ‘ಸುಳಿ’ ಸಿನಿಮಾದ ಟ್ರೇಲರ್‌ ಮತ್ತು ಹಾಡುಗಳು ಬಿಡುಗಡೆಯಾಯಿತು.

suli3

ಇದೇ ವೇಳೆ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದ ಹಿರಿಯ ಲೇಖಕಿ, ಹೋರಾಟಗಾತಿ ಬಿ. ಟಿ. ಲಲಿತಾ ನಾಯಕ್‌, ‘ಹೆಣ್ಣು ಮತ್ತು ಗಂಡಿನ ಕೂಡಿಕೆ ಪ್ರಕೃತಿ ಸಹಜವಾದದ್ದು. ಪ್ರತಿ ಮನುಷ್ಯನು ಕೂಡ ಪರಸ್ಪರ ಅವಲಂಭನರಯಲ್ಲೇ ಬದುಕಬೇಕಾಗುತ್ತದೆ. ಒಬ್ಬ ವ್ಯಕ್ತಿಗೆ ಮತ್ತೊಬ್ಬ ವ್ಯಕ್ತಿಯ ಸಾಂಗತ್ಯ ಸಹಜ ಮತ್ತು ಅಗತ್ಯ. ಅದನ್ನು ಸಮಾಜ ನೋಡುವ ದೃಷ್ಟಿಕೋನ ಮಾತ್ರ ಬೇರೆ ಬೇರೆಯಾಗಿರುತ್ತದೆ. ಇಂಥದ್ದೊಂದು ಕೂಡಿಕೆಯ ಕಥೆಯನ್ನು ಪ್ರೇಕ್ಷಕರ ಮುಂದೆ ತರುತ್ತಿರುವ ಚಿತ್ರತಂಡದ ಪ್ರಯತ್ನ ಸ್ವಾಗತಾರ್ಹʼ ಎಂದು ಚಿತ್ರದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು. ಹಿರಿಯ ನಟಿ ಭವ್ಯಾ ಮಾತನಾಡಿ, ‘ಸಾಮಾನ್ಯವಾಗಿ ಚಿತ್ರರಂಗ ಹೆಚ್ಚಾಗಿ ಪುರುಷ ಪ್ರಧಾನವಾಗಿರುತ್ತದೆ. ಇಂಥ ಕ್ಷೇತ್ರದಲ್ಲಿ ಮಹಿಳಾ ನಿರ್ದೇಶಕರೊಬ್ಬರು ಇಂಥದ್ದೊಂದು ಕಥೆಯನ್ನು ಸಿನಿಮಾ ಮಾಡುತ್ತಿರುವುದು ನಿಜಕ್ಕೂ ಎಲ್ಲರಿಗೂ ಸ್ಫೂರ್ತಿಯಾಗುವಂಥ ವಿಷಯ. ಚಿತ್ರತಂಡಕ್ಕೆ ಒಳ್ಳೆಯದಾಗಲಿʼ ಎಂದು ಶುಭ ಹಾರೈಸಿದರು. ಹಿರಿಯ ನಟ ಸುಚೇಂದ್ರ ಪ್ರಸಾದ್‌ ಮಾತನಾಡಿ, ‘ಜನಪ್ರಿಯವಾದ ಕೃತಿಯೊಂದನ್ನು ದೃಶ್ಯರೂಪಕ್ಕೆ ಇಳಿಸುವುದು ನಿಜಕ್ಕೂ ಸವಾಲಿನ ಕೆಲಸ. ‘ಸುಳಿ’ ಚಿತ್ರತಂಡ ಅಂಥದ್ದೊಂದು ಸವಾಲಿನ ಕೆಲಸವನ್ನು ಸಲೀಸಾಗಿ ಮಾಡಿ ಮುಗಿಸಿದೆ. ಇಂಥ ಪ್ರಯತ್ನಗಳು ಮುಂದೆ ಅನೇಕರಿಗೆ ಪ್ರೇರಣೆಯಾಗುತ್ತದೆ’ ಎಂದು ಚಿತ್ರತಂಡದ ಬೆನ್ನು ತಟ್ಟಿದರು.
ಇನ್ನು ‘ಸುಳಿ’ ಟ್ರೇಲರ್‌ ಮತ್ತು ಹಾಡುಗಳ ಬಿಡುಗಡೆ ಬಳಿಕ ಮಾತನಾಡಿದ ನಿರ್ದೇಶಕಿ ರಶ್ಮಿ ಎಸ್‌. (ಸಾಯಿ ರಶ್ಮಿ), ‘ಇದೊಂದು ಸಾಮಾಜಿಕ ಕಥಾಹಂದರದ ಸಿನಿಮಾ. 1980ರ ಕಾಲಘಟ್ಟದಲ್ಲಿ ಈ ಸಿನಿಮಾದ ಕಥೆ ಸಾಗುತ್ತದೆ. ‘ಸಾಕ್ಷಾತ್ಕಾರ’ ಸಿನಿಮಾದ ಘೋಷಣೆಯೊಂದಿಗೆ ಸಿನಿಮಾ ಶುರುವಾಗುತ್ತದೆ. ‘ಸಾಕ್ಷಾತ್ಕಾರ’ ಸಿನಿಮಾದಲ್ಲಿ ಅಣ್ಣಾವ್ರ ಪಾತ್ರದ ಮಾನವೀಯ ಮೌಲ್ಯ ಮತ್ತು ಪ್ರೀತಿಯ ಆಳದ ಬಗ್ಗೆ ಹೇಳುತ್ತಾ ‘ಸುಳಿ’ ಚಿತ್ರವೂ ತನ್ನ ಕಥೆಯೊಳಗೆ ನೋಡುಗರನ್ನು ಸೆಳೆದುಕೊಳ್ಳುತ್ತದೆ. ಹೆಣ್ಣಿನ ಅಂತರಂಗದ ಭಾವನೆಗಳು, ಸಾಮಾಜಿಕ ಮೌಲ್ಯಗಳು ಎಲ್ಲವನ್ನೂ ಈ ಸಿನಿಮಾದಲ್ಲಿ ತೆರೆಮೇಲೆ ತರುವ ಪ್ರಯತ್ನ ಮಾಡಿದ್ದೇವೆ. ಮಂಡ್ಯದ ಗ್ರಾಮೀಣ ಪರಿಸರವನ್ನು ಹಿನ್ನೆಲೆಯಾಗಿಟ್ಟುಕೊಂಡು ಸಿನಿಮಾದ ಕಥೆ ಸಾಗುತ್ತದೆ’ ಎಂದು ಚಿತ್ರದ ಕಥಾಹಂದರದ ಬಗ್ಗೆ ಮಾಹಿತಿ ನೀಡಿದರು.
‘ಸುಳಿ’ ಚಿತ್ರದ ನಾಯಕ ನಟ ಸನತ್‌ ಮಾತನಾಡಿ, ‘ಇಲ್ಲಿಯವರೆಗೆ ನಾನು ಮಾಡಿರುವ ಸಿನಿಮಾಗಳಿಗಿಂತ ಸಂಪೂರ್ಣ ವಿಭಿನ್ನವಾದ ಪಾತ್ರ ‘ಸುಳಿ’ ಸಿನಿಮಾದಲ್ಲಿ ಸಿಕ್ಕಿದೆ. ಈ ಸಿನಿಮಾದಲ್ಲಿ ಮಂಡ್ಯ ಹಿನ್ನೆಲೆಯ ಹಳ್ಳಿ ಹುಡುಗನಾಗಿ ಕಾಣಿಸಿಕೊಂಡಿದ್ದೇನೆ. ಹಳ್ಳಿಯ ಬಡ ಹುಡುಗನೊಬ್ಬನ ಜೀವನದಲ್ಲಿ ಏನೇನು ತಿರುವುಗಳು ಸಿಗುತ್ತದೆ ಎಂಬುದೇ ನನ್ನ ಪಾತ್ರ’ ಎಂದು ತಮ್ಮ ಪಾತ್ರ ಪರಿಚಯ ಮಾಡಿಕೊಟ್ಟರು.
ನಾಯಕಿ ಚೈತ್ರಾ ಸಾಕೇಲ್‌ ಮಾತನಾಡಿ, ‘ಮೊದಲ ಬಾರಿಗೆ ಗ್ರಾಮೀಣ ಸೊಗಡಿನ ಮಹಿಳೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಮಂಡ್ಯದ ಜೀವನ ಶೈಲಿ, ಭಾಷೆಯ ಬಳಕೆ ನನ್ನ ಪಾತ್ರದಲ್ಲಿದ್ದು, ನನಗೆ ಇದೊಂದು ಹೊಸ ಅನುಭವ. ಈ ಸಿನಿಮಾದಲ್ಲಿ ಸಾಕಷ್ಟು ಕಲಿತಿದ್ದೇನೆ. ನನ್ನ ಪಾತ್ರ ಪ್ರೇಕ್ಷಕರಿಗೆ ಇಷ್ಟವಾಗುತ್ತದೆ’ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಮತ್ತೊಬ್ಬ ನಾಯಕಿ ಸಂಜನಾ ನಾಯ್ಡು ಮಾತನಾಡಿ, ‘ಮೊದಲ ಬಾರಿಗೆ ಒಂದು ಒಳ್ಳೆಯ ಸಾಮಾಜಿಕ ಸಂದೇಶವಿರುವಂಥ ಸಿನಿಮಾದಲ್ಲಿ ಕಾಣಿಸಿಕೊಂಡಿರುವುದಕ್ಕೆ ಖುಷಿಯಾಗುತ್ತಿದೆ. ಸಿನಿಮಾದಲ್ಲಿ ಒಳ್ಳೆಯ ಕಥೆ, ಮೇಕಿಂಗ್‌, ಹಾಡುಗಳು ಎಲ್ಲವೂ ಆಡಿಯನ್ಸ್‌ಗೆ ಇಷ್ಟವಾಗಲಿದೆʼ ಎಂದು ಚಿತ್ರದ ಬಗ್ಗೆ ಭರವಸೆಯ ಮಾತುಗಳನ್ನಾಡಿದರು.
ನಿರ್ಮಾಪಕ ಬೆಟ್ಟಸ್ವಾಮಿ ಗೌಡ ಮಾತನಾಡಿ, ‘ಹಲವು ಸಾಮಾಜಿಕ ಹೋರಾಟಗಳಲ್ಲಿ ತೊಡಗಿಸಿಕೊಂಡಿರುವ ನನಗೆ ಚಿತ್ರರಂಗದಲ್ಲಿ ಇದು ಮೊದಲ ಅನುಭವ. ಸಿನಿಮಾದ ಕಥೆ ಇಷ್ಟವಾಗಿದ್ದರಿಂದ, ಅದನ್ನು ಸಿನಿಮಾ ಮಾಡಿ ತೆರೆಮೇಲೆ ತರುವ ಕೆಲಸಕ್ಕೆ ಕೈ ಹಾಕಿದ್ದೇನೆ. ಸಿನಿಮಾ ನಾವಂದುಕೊಂಡಂತೆ ತುಂಬ ಚೆನ್ನಾಗಿ ಮೂಡಿಬಂದಿದೆ. ಗ್ರಾಮೀಣ ಸೊಗಡು, ಮನರಂಜನೆ, ಸಂದೇಶ ಎಲ್ಲವೂ ‘ಸುಳಿ’ ಸಿನಿಮಾದಲ್ಲಿದೆ. ಎಲ್ಲರಿಗೂ ಇಷ್ಟವಾಗುವಂಥ ಸಿನಿಮಾ ಮಾಡಿದ್ದೇವೆ’ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಹಾಜರಿದ್ದ ನಟರಾದ ಶಿವಕುಮಾರ ಆರಾಧ್ಯ, ಶಂಕರ ನಾರಾಯಣ್‌, ಸಿದ್ಧು ಮಂಡ್ಯ, ಹರಿಹರನ್‌, ನಟಿ ಕಾವ್ಯಾ, ಛಾಯಾಗ್ರಹಕ ವಿಕ್ರಂ ಯೋಗಾನಂದ್‌, ಸಾಹಿತಿ ಸತೀಶ್‌ ಜೋಶಿ ಮೊದಲಾದವರು ‘ಸುಳಿ’ ಚಿತ್ರದ ಬಗ್ಗೆ ತಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ಹಂಚಿಕೊಂಡರು. ಅಂದಹಾಗೆ, ‘ಸುಳಿ’ ಚಿತ್ರವನ್ನು ಆಲಭುಜನಹಳ್ಳಿ, ನಗರಕೆರೆ, ಮಾಲಗಾರನಹಳ್ಳಿ, ಕೆ. ಎಂ. ದೊಡ್ಡಿ (ಭಾರತೀನಗರ), ಮದ್ದೂರು ಸೇರಿದಂತೆ ಹಲವು ತಾಣಗಳಲ್ಲಿ ಸುಮಾರು 20 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ. ‘ಸುಳಿ’ ಚಿತ್ರದ ಹಾಡುಗಳಿಗೆ ಎನ್‌. ರಾಜು ಸಂಗೀತ ಸಂಯೋಜಿಸಿದ್ದಾರೆ. ಎಲ್ಲ ಅಂದುಕೊಂಡಂತೆ ನಡೆದರೆ, ಮುಂದಿನ ಅಕ್ಟೋಬರ್‌ ಅಂತ್ಯದೊಳಗೆ ‘ಸುಳಿ’ ಚಿತ್ರವನ್ನು ಥಿಯೇಟರಿನಲ್ಲಿ ಪ್ರೇಕ್ಷಕರ ಮುಂದೆ ತರುವ ಯೋಜನೆಯಲ್ಲಿದೆ ಚಿತ್ರತಂಡ.

 

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ