ರಾಘವೇಣ್ದ್ರ ಅಡಿಗ ಎಚ್ಚೆನ್.

ಸಂಗೀತ ಲೋಕದ ದಿಗ್ಗಜ, ಸ್ವರ ಮಾಂತ್ರಿಕ ಇಳಯರಾಜ ಕೊಲ್ಲೂರು ಶ್ರೀ ಮೂಕಾಂಬಿಕಾ  ದೇವಿಯ ಮೇಲಿನ ತಮ್ಮ ಭಕ್ತಿಯನ್ನು ಮತ್ತೊಮ್ಮೆ ಪ್ರದರ್ಶಿಸಿದ್ದಾರೆ. ತಮ್ಮ ಆರಾಧ್ಯ ದೇವಿಯಾದ ಮೂಕಾಂಬಿಕೆಗೆ ಅವರು ಸುಮಾರು 4 ಕೋಟಿ ಮೌಲ್ಯದ ವಜ್ರಖಚಿತ ಕಿರೀಟ  ಮತ್ತು ವಿವಿಧ ಆಭರಣಗಳನ್ನು ಸಮರ್ಪಿಸಿ ಭಕ್ತಿ ಸಮರ್ಪಿಸಿದ್ದಾರೆ.

diamond 1

ಕೊಲ್ಲೂರು ಮೂಕಾಂಬಿಕೆಯ ಪರಮ ಭಕ್ತರಾಗಿರುವ ಇಳಯರಾಜ, ಈ ಹಿಂದೆಯೂ ದೇಗುಲಕ್ಕೆ ಹಲವು ಬಗೆಯ ಆಭರಣಗಳನ್ನು ಅರ್ಪಿಸಿ ತಮ್ಮ ಭಕ್ತಿಭಾವವನ್ನು ತೋರಿದ್ದಾರೆ. ಈ ಬಾರಿ ಅವರು ದೇವಿಗೆ ವಜ್ರದ ಕಿರೀಟದ ಜೊತೆಗೆ ಇತರ ಆಭರಣಗಳನ್ನು ಸಮರ್ಪಿಸಿದ್ದಾರೆ. ಇದರ ಜೊತೆಗೆ, ವೀರಭದ್ರ ದೇವರಿಗೆ ರಜತ ಕಿರೀಟ ಮತ್ತು ಖಡ್ಗವನ್ನೂ ಅರ್ಪಿಸಿದ್ದಾರೆ.

diamond 2

ಆಭರಣಗಳನ್ನು ದೇಗುಲಕ್ಕೆ ಅರ್ಪಿಸುವ ಮುನ್ನ ದೇವಾಲಯದ ಆಡಳಿತ ಮಂಡಳಿ ಮತ್ತು ಅರ್ಚಕರು ಇಳಯರಾಜ ಅವರೊಂದಿಗೆ ಮೆರವಣಿಗೆಯಲ್ಲಿ ಭಾಗಿಯಾದರು. ಈ ಸಂದರ್ಭದಲ್ಲಿ ಇಳಯರಾಜ ಅವರು ಭಕ್ತಿಪರವಶರಾಗಿ ತಮ್ಮ ಜೀವನದಲ್ಲಿ ದೇವಿಯ ಅನುಗ್ರಹದಿಂದ ನಡೆದ ಪವಾಡಗಳನ್ನು ನೆನಪಿಸಿಕೊಂಡು ಭಾವುಕರಾದರು. ಮೂಕಾಂಬಿಕೆ ದೇವಿಯಿಂದ ತಮ್ಮ ಜೀವನದಲ್ಲಿ ಅಸಾಮಾನ್ಯ ಬೆಳವಣಿಗೆಗಳು ನಡೆದಿವೆ ಎಂದು ಅವರು ಹೇಳಿಕೊಂಡಿದ್ದಾರೆ.
ದೇವಾಲಯಕ್ಕೆ ಈ ಮಹಾನ್ ಕೊಡುಗೆಗಳನ್ನು ನೀಡಿದ ಇಳಯರಾಜ ಅವರಿಗೆ, ದೇಗುಲದ ವತಿಯಿಂದ ಗೌರವಾರ್ಪಣೆ ಮಾಡಿ ಕೃತಜ್ಞತೆ ಸಲ್ಲಿಸಲಾಯಿತು. ದೇಶದ ಖ್ಯಾತ ಸಂಗೀತ ನಿರ್ದೇಶಕರಿಂದ ದೇಗುಲಕ್ಕೆ ಇಷ್ಟು ದೊಡ್ಡ ಪ್ರಮಾಣದ ದೇಣಿಗೆ ಬಂದಿರುವುದು ಭಕ್ತರಲ್ಲಿ ಸಂತೋಷ ಮೂಡಿಸಿದೆ. ಈ ಮಹಾನ್ ಕಲಾವಿದ ತಮ್ಮ ಆರಾಧ್ಯ ದೇವಿಯಾಗಿರುವ ಕೊಲ್ಲೂರು ಮೂಕಾಂಬಿಕೆಯ ಕ್ಷೇತ್ರಕ್ಕೆ ಆಗಾಗ ಭೇಟಿ ನೀಡುತ್ತಿರುತ್ತಾರೆ. ಗಾಯಕ ಕೆಜೆ ಯೇಸುದಾಸ್‌ ಅವರು ಸಹ ಕೊಲ್ಲೂರಿಗೆ ಭೇಟಿ ನೀಡುತ್ತಿರುತ್ತಾರೆ.

 

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ