– ರಾಘವೇಂದ್ರ ಅಡಿಗ ಎಚ್ಚೆನ್.
ಸಾವಿರಾರು ಅಭಿಮಾನಿಗಳ ಪಾಲಿನ ಅಭಿನವ ಭಾರ್ಗವ, ಸಾಹಸಸಿಂಹ ಡಾ. ವಿಷ್ಣುವರ್ಧನ್ ಮತ್ತು ಅಭಿನಯ ಸರಸ್ವತಿ, ಬಹುಭಾಷಾ ತಾರೆ ಬಿ. ಸರೋಜಾ ದೇವಿ ಅವರಿಗೆ ರಾಜ್ಯ ಸರ್ಕಾರ ಪ್ರತಿಷ್ಠಿತ ಕರ್ನಾಟಕ ರತ್ನ ಪ್ರಶಸ್ತಿಯನ್ನು ಮರಣೋತ್ತರವಾಗಿ ಘೋಷಿಸಿದೆ. 200ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದ ವಿಷ್ಣುವರ್ಧನ್ ಅವರಿಗೆ ಕರ್ನಾಟಕ ರತ್ನ ನೀಡಬೇಕು ಎನ್ನುವುದು ಅವರ ಅಪಾರ ಅಭಿಮಾನಿಗಳ ಕೋರಿಕೆಯಾಗಿತ್ತು. ಕನ್ನಡ ಚಿತ್ರರಂಗಕ್ಕೆ ಈ ಇಬ್ಬರು ಕಲಾವಿದರು ನೀಡಿದ ಅಪಾರ ಕೊಡುಗೆಯನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ಘೋಷಿಸಲಾಗಿದೆ.
ಸರೋಜಾದೇವಿ ಇತ್ತೀಚೆಗೆ ನಿಧನ ಹೊಂದಿದ್ದರು. ಅವರಿಗೆ 87 ವರ್ಷಗಳಾಗಿತ್ತು. ಕನ್ನಡ ಚಿತ್ರರಂಗಕ್ಕೆ ಗಣನೀಯ ಕೊಡುಗೆ ನೀಡಿದ ವಿಷ್ಣುವರ್ಧನ್ ಮತ್ತು ಸರೋಜಾದೇವಿ ಅವರಿಗೆ ರಾಜ್ಯದ ಅತ್ಯುನ್ನತ ನಾಗರಿಕ ಪ್ರಶಸ್ತಿ ‘ಕರ್ನಾಟಕ ರತ್ನ’ ನೀಡಬೇಕು ಎಂದು ಹಲವರು ಹಿಂದಿನಿಂದಲೇ ಆಗ್ರಹಿಸುತ್ತಲೇ ಬಂದಿದ್ದರು. ಇದೀಗ ಕೊನೆಗೂ ರಾಜ್ಯ ಸರ್ಕಾರ ಗುರುವಾರ (ಸೆಪ್ಟೆಂಬರ್ 11) ‘ಕರ್ನಾಟಕ ರತ್ನ’ ಪ್ರಶಸ್ತಿ ಘೋಷಿಸಿದೆ.
ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಎಚ್.ಕೆ. ಪಾಟೀಲ್, ʼʼನಟ ವಿಷ್ಣುವರ್ಧನ್ ಮತ್ತು ನಟಿ ಬಿ. ಸರೋಜಾದೇವಿ ಅವರಿಗೆ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿ ನೀಡಲು ನಿರ್ಧರಿಸಲಾಗಿದೆʼʼ ಎಂದು ತಿಳಿಸಿದರು. ಕುವೆಂಪು ಅವರನ್ನು ಮರಣೋತ್ತರ ಭಾರತ ರತ್ನ ಪ್ರಶಸ್ತಿಗೆ ಶಿಫಾರಸು ಮಾಡಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ವಿಷ್ಣುವರ್ಧನ್ ಚಿತ್ರರಂಗ ಪಯಣ
1950ರ ಸೆಪ್ಟೆಂಬರ್ 18ರಂದು ಮೈಸೂರಿನಲ್ಲಿ ಜನಿಸಿದ ಡಾ. ವಿಷ್ಣುವರ್ಧನ್, ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದರು. 1972ರಲ್ಲಿ ‘ವಂಶವೃಕ್ಷ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಅವರು, ಪುಟ್ಟಣ್ಣ ಕಣಗಾಲ್ ಅವರ ‘ನಾಗರಹಾವು’ ಚಿತ್ರದಿಂದ ಖ್ಯಾತರಾದರು. ‘ಭೂತಯ್ಯನ ಮಗ ಅಯ್ಯು’, ‘ಸಾಹಸ ಸಿಂಹ’, ‘ಬಂಧನ’, ‘ಯಜಮಾನ’, ‘ಆಪ್ತಮಿತ್ರ’ ಸೇರಿ 200ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ ವಿಷ್ಣುವರ್ಧನ್, ರಾಜ್ಯ ಪ್ರಶಸ್ತಿ, ಡಾ. ರಾಜ್‌ಕುಮಾರ್ ಪ್ರಶಸ್ತಿ ಮತ್ತು ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಪಡೆದಿದ್ದಾರೆ. 2009ರ ಡಿಸೆಂಬರ್ 30ರಂದು ಅವರು ಇಹಲೋಕ ತ್ಯಜಿಸಿದರು.