ವಿಶ್ವ ವಿಖ್ಯಾತ ದಸರಾ‌ ಜಂಬೂಸವಾರಿಯಲ್ಲಿ ಭಾಗಿಯಾಗಿದ್ದ ಆನೆಗಳಿಗೆ ಭಾವುಕ ಬೀಳ್ಕೊಡುಗೆ ನೀಡಲಾಯಿತು.

ಮೈಸೂರು ಅರಮನೆಯ ಕೋಡಿ ಸೋಮೇಶ್ವರ ದೇವಾಲಯದ ಬಳಿ ಆನೆಗಳಿಗೆ ಪೂಜೆ ಸಲ್ಲಿಸಿದ ನಂತರ ಬೀಳ್ಕೊಡಲಾಯಿತು.

ಅಭಿಮನ್ಯು, ಭೀಮ, ಧನಂಜಯ, ಪ್ರಶಾಂತ, ಶ್ರೀಕಂಠ, ಸುಗ್ರೀವ, ಏಕಲವ್ಯ, ಮಹೇಂದ್ರ, ಗೋಪಿ, ಕಂಜನ್, ಹೇಮಾವತಿ, ರೂಪ, ಕಾವೇರಿ, ಲಕ್ಷ್ಮಿ ಆನೆಗಳಿಗೆ ಅರಣ್ಯ ಇಲಾಖೆ‌ ಅಧಿಕಾರಿಗಳು ಪೂಜೆ ಸಲ್ಲಿಸಿದರು.

ದಸರಾ ಜಂಬೂಸವಾರಿ ಯಶಸ್ವಿಗೊಳಿಸಿ ತನ್ನ ಶಿಬಿರಗಳಿಗೆ ತೆರಳುತ್ತಿದ್ದ ಅಭಿಮನ್ಯು ನೇತೃತ್ವದ 14 ಆನೆಗಳನ್ನು ನೋಡಲು ಜನಸಾಗರವೇ ಹರಿದು ಬಂದಿತ್ತು.

ಎಲ್ಲ ಆನೆಗಳನ್ನು ಸಂತಸದಿಂದ ಕಣ್ತುಂಬಿಕೊಂಡ ಜನರು ಮೊಬೈಲ್​ನಲ್ಲಿ ಫೋಟೊ ಕ್ಲಿಕ್ಕಿಸುವುದರಲ್ಲಿ ಮಗ್ನರಾಗಿದ್ದರು. ಭೀಮಾ, ಅಭಿಮನ್ಯು ಎಂದು ಅಭಿಮಾನಿಗಳು ಕೂಗುತ್ತಿದ್ದಂತೆ, ಅನೆಗಳು ತಮ್ಮ ಸೊಂಡಿಲು ಎತ್ತಿ ನಮಸ್ಕರಿಸಿದವು.

ಒಂದೂವರೆ ತಿಂಗಳಿನಿಂದ ಮೈಸೂರಿನಲ್ಲಿದ್ದ ಆನೆಗಳು ಲಾರಿಗಳ ಮೂಲಕ ತಮ್ಮ,ತಮ್ಮ ಶಿಬಿರಗಳಿಗೆ ಮರಳಿದವು. ಆನೆಗಳೊಂದಿಗೆ ಆಗಮಿಸಿದ್ದ ಮಾವುತ ಮತ್ತು ಕಾವಾಡಿಗಳ ಕುಟುಂಬಸ್ಥರು ತಮ್ಮ ತಮ್ಮ ಊರುಗಳಿಗೆ ಹಿಂದಿರುಗಿದರು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ