ಹಿಂದೂ ಮಹಾಸಾಗರದಲ್ಲಿ (Indian Ocean) ಇರಾನ್‌ನ ಯುದ್ಧನೌಕೆಯೊಂದರ ಮೇಲೆ ಅಮೆರಿಕದ ಜಲಾಂತರ್ಗಾಮಿ (ಸಬ್‌ಮರೀನ್) ಭೀಕರ ದಾಳಿ ನಡೆಸಿದ್ದು, ಕನಿಷ್ಠ 87 ಜನ ಸಾವನ್ನಪ್ಪಿರುವ ಘಟನೆ ಬುಧವಾರ ವರದಿಯಾಗಿದೆ.
ಶ್ರೀಲಂಕಾದ ಕರಾವಳಿ ಬಳಿ ಈ ಘಟನೆ ನಡೆದಿದ್ದು, ನೂರಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ ಎಂದು ಅಂತರಾಷ್ಟ್ರೀಯ ಸುದ್ದಿ ಸಂಸ್ಥೆ ರಾಯಿಟರ್ಸ್ (Reuters) ವರದಿ ಮಾಡಿದೆ.
ಅಮೆರಿಕದಿಂದ ದಾಳಿ: ಶ್ರೀಲಂಕಾದ ಗಾಲೆ (Galle) ಕರಾವಳಿಯ ಬಳಿ ತೆರಳುತ್ತಿದ್ದ ಇರಾನ್‌ನ 'ಐಆರ್‌ಐಎಸ್ ಡೆನಾ' (IRIS Dena) ಎಂಬ ಮಿಲಿಟರಿ ನೌಕೆಯ ಮೇಲೆ ಅಮೆರಿಕದ ಸಬ್‌ಮರೀನ್ ಟಾರ್ಪಿಡೊ (Torpedo) ಮೂಲಕ ದಾಳಿ ನಡೆಸಿ, ಅದನ್ನು ಮುಳುಗಿಸಿದೆ. ಈ ದಾಳಿಯಲ್ಲಿ ಕನಿಷ್ಠ 87 ಮಂದಿ ಮೃತಪಟ್ಟಿದ್ದಾರೆ ಎಂದು ಶ್ರೀಲಂಕಾದ ಉಪ ವಿದೇಶಾಂಗ ಸಚಿವ ಅರುಣ್ ಹೇಮಚಂದ್ರ ಸ್ಥಳೀಯ ಮಾಧ್ಯಮಗಳಿಗೆ ಖಚಿತಪಡಿಸಿದ್ದಾರೆ.
ಅಮೆರಿಕದ ರಕ್ಷಣಾ ಕಾರ್ಯದರ್ಶಿ (US Defence Secretary) ಪೀಟ್ ಹೆಗ್ಸೆತ್ ಕೂಡ ಈ ದಾಳಿಯ ವಿಷಯವನ್ನು ಸ್ಪಷ್ಟಪಡಿಸಿದ್ದಾರೆ.
ಕಾರ್ಯಾಚರಣೆ ಚುರುಕು: ದಾಳಿಗೊಳಗಾದ ತಕ್ಷಣ ಇರಾನ್ ಯುದ್ಧನೌಕೆಯಿಂದ ತುರ್ತು ಸಂದೇಶ (Distress call) ರವಾನೆಯಾಗಿತ್ತು. ಕೂಡಲೇ ಎಚ್ಚೆತ್ತ ಶ್ರೀಲಂಕಾದ ನೌಕಾಪಡೆ ಹಾಗೂ ವಾಯುಪಡೆ ಬೃಹತ್ ರಕ್ಷಣಾ ಕಾರ್ಯಾಚರಣೆ ಆರಂಭಿಸಿವೆ. ಇದುವರೆಗೆ ಸಮುದ್ರದಲ್ಲಿ ಹಲವು ಮೃತದೇಹಗಳು ಪತ್ತೆಯಾಗಿದ್ದು, 32 ಜನರನ್ನು ರಕ್ಷಿಸಲಾಗಿದೆ. ಆದರೆ ನೌಕೆಯಲ್ಲಿದ್ದ 100ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ. ರಕ್ಷಿಸಲ್ಪಟ್ಟವರನ್ನು ಗಾಲೆಯಲ್ಲಿರುವ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಭಾರತದಿಂದ ಹೊರಟಿತ್ತು: “ಐರಿಸ್ ದೆನಾ” ಯುದ್ಧನೌಕೆ ಇತ್ತೀಚೆಗೆ ಭಾರತದಲ್ಲಿ ನಡೆದ “ಇಂಟರ್ನ್ಯಾಷನಲ್ ಫ್ಲೀಟ್ ರಿವ್ಯೂ 2026” ನಲ್ಲಿ ಭಾಗವಹಿಸಿ ತನ್ನ ದೇಶಕ್ಕೆ ಮರಳುತ್ತಿತ್ತು. ಕೆಲವು ವೆಬ್ಸೈಟ್ಗಳ ಪ್ರಕಾರ ಇದು ಫೆಬ್ರವರಿ 18 ರಿಂದ ಫೆಬ್ರವರಿ 25ರ ವರೆಗೆ ಬಂಗಾಳ ಕೊಲ್ಲಿಯಲ್ಲಿ ನಡೆದ ನೌಕಾ ತರಬೇತಿಯಲ್ಲಿ ಭಾಗವಹಿಸಿತ್ತು. ಈ ನೌಕೆಯು ಮುಳುಗಡೆಯಾಗುವ ಎರಡು ವಾರಗಳ ಮೊದಲು, ವಿಶಾಖಪಟ್ಟಣಂ ಬಂದರಿಗೆ ಆಗಮಿಸಿದ್ದ ಸಂದರ್ಭದಲ್ಲಿ ಭಾರತದ ಪೂರ್ವ ನೌಕಾ ಕಮಾಂಡ್ ಇರಾನ್ ನೌಕೆಯನ್ನು ಸ್ವಾಗತಿಸಿತ್ತು.
ಈ ಯುದ್ಧನೌಕೆ ಮುಳುಗಡೆ ಘಟನೆಯು ಮಧ್ಯಪ್ರಾಚ್ಯ ಹಾಗೂ ಜಾಗತಿಕ ಮಟ್ಟದಲ್ಲಿ ಸಂಘರ್ಷವನ್ನು ಮತ್ತಷ್ಟು ತೀವ್ರಗೊಳಿಸುವ ಸಾಧ್ಯತೆಯಿದೆ.





