ಬಿಡುವಿನ ಸಮಯದ ಸದುಪಯೋಗ ಪಡಿಸಿಕೊಳ್ಳುತ್ತಾ, ಸಣ್ಣಪುಟ್ಟ ಹವ್ಯಾಸವನ್ನೇ ಅದ್ಭುತ ಕಲೆಯಾಗಿ ಬೆಳೆಸಿಕೊಂಡು, ಅಪಾರ ಪ್ರಶಸ್ತಿ ಪುರಸ್ಕಾರಗಳನ್ನು ಪಡೆದಿರುವ ಅಪ್ಪಟ ಪ್ರತಿಭಾವಂತೆ, ಕಲಾವಿದೆ ವಿದ್ಯಾ ಹರೀಶ್ ರ ಪರಿಚಯ ಪಡೆಯೋಣವೇ……?
ಕಲೆ ಎಂಬುದು ಭಾವನೆಗಳು ಅಥವಾ ಅರಿವಿನ ಮೇಲೆ ಪರಿಣಾಮವಾಗುವ ಹಾಗೆ ಬುದ್ಧಿಪೂರ್ವಕವಾಗಿ ಜೋಡಿಸಲಾದ ಅಂಶಗಳ ರೂಪ. ಕೌಶಲ್ಯ ಮತ್ತು ಕಲ್ಪನೆಗಳನ್ನು ಬಳಸಿ ಕಲಾತ್ಮಕವಾದ ಕಲಾಕೃತಿ, ಪರಿಸರ ಅಥವಾ ಅನುಭವವನ್ನು ಸೃಷ್ಟಿಸುವುದು ಅಥವಾ ಬೇರೆಯವರೊಂದಿಗೆ ಹಂಚಿಕೊಳ್ಳಬಹುದಾದ ಅನುಭವಗಳು ಎಂದು ವ್ಯಾಖ್ಯಾನಿಸಲಾಗುತ್ತದೆ.
ಕಲೆ ಕೇವಲ ಒಂದು ಕಲಾಕೃತಿ ಅಥವಾ ಚಟುವಟಿಕೆಯಲ್ಲ, ಬದಲಾಗಿ ಸಮತೆ ಮತ್ತು ಸಾಮರಸ್ಯವನ್ನು ಆಸ್ವಾದಿಸುವ ಒಂದು ಆಂತರಿಕ ರಸಾನುಭವ. ಹೀಗಾಗಿ ಇದು ಯಾವುದೇ ಉಪಯುಕ್ತತೆಯನ್ನು ಮೀರಿದ, ಮನುಷ್ಯತ್ವದ ಸಹಜಗುಣ. ತಮ್ಮ ಭಾವನೆ ಮತ್ತು ಪ್ರತಿಭೆಯನ್ನು ತೋರಿಸಿಕೊಳ್ಳುವುದು, ತಮ್ಮ ಕಲೆಯ ಮೂಲಕ ಆಶಯಗಳನ್ನು ವ್ಯಕ್ತಪಡಿಸುವುದು ಕಲಾವಿದರ ಲಕ್ಷಣ.
ಬುದ್ಧಿಜೀವಿಗಳದ್ದು ಆಲೋಚನೆ, ಹೃದಯಜೀವಿಗಳದ್ದು ರಸಾನುಭವ. `ಬಲ್ಲವನೇ ಬಲ್ಲ ಬೆಲ್ಲದ ರುಚಿಯ’ ಎನ್ನುವ ಹಾಗೆ ಚಿತ್ರಕಲೆಯ ಸವಿಯು ಸವಿದವನಿಗೇ ಗೊತ್ತು. ಸಮುದ್ರದ ದಡದಲ್ಲಿ ನಿಂತು ಬೊಗಸೆ ಸಮುದ್ರದ ನೀರನ್ನು ಎತ್ತಿ ಹಿಡಿದು, ನೋಡಿ ನನ್ನ ಬೊಗಸೆಯಲ್ಲಿ ಇರುವುದಷ್ಟೇ ಸಮುದ್ರ ಎಂದು ಕೂಗಿಕೊಂಡರೆ ಏನು ಲಾಭ? ಹೀಗಿದ್ದರೂ ಸಹ ತಮ್ಮ ತಮ್ಮ ಪೂರ್ವಾನುಭವಗಳ ಆಧಾರಗಳಿಂದ ಅಥವಾ ಕಲೆಯ ಒಂದಂಶವನ್ನು ಸ್ಪರ್ಶಿಸಿ. ಇಡೀ ಕಲೆಯ ಚಿಕ್ಕ ಪರಿಚಯ ಅಥವಾ ಪ್ರಯತ್ನವನ್ನು ಮಾಡುವ ನಿಟ್ಟಿನಲ್ಲಿ ಚಿಂತಿಸಿ ಹೇಳುವುದಾದರೆ, ಮಾನವನ ವಿಶಿಷ್ಟ ಚಟುವಟಿಕೆಯೇ ಕಲೆ!
ಏನಿದು ಕಲೆ, ಚಿತ್ರಕಲೆ, ಕರಕೌಶಲ್ಯ ಅನ್ಕೊಂಡ್ರಾ…. ಮಲೆನಾಡಿನ ಕಲಾಸರಸ್ವತಿಯನ್ನು ಪರಿಚಯ ಮಾಡಿಕೊಳ್ಳೋಣ. ಅವರು ಬೇರಾರೂ ಅಲ್ಲ, ಮೇಗಟಳ್ಳಿ ವಿದ್ಯಾ ಹರೀಶ್.

ವಿದ್ಯಾರ ಸಾಧನೆಗಳು
ತೋಟದ ಮಧ್ಯದಲ್ಲಿರುವ ಅವರ ಮನೆ ಮನಕ್ಕೆ ಮುದ ನೀಡುವ ನೂರಾರು ರೀತಿಯ ಅತ್ಯಾಕರ್ಷಕ ಹೂವಿನ ಗಿಡಗಳು, ಕೈ ಬೀಸಿ ಕರೆಯುವ ಆಂಥೋರಿಯಂ ಪುಷ್ಪಗಳು, ಬಣ್ಣ ಬಣ್ಣದ ಗುಲಾಬಿ ಹೂಗಳು, ಮನೆಯ ಮುಂದೆ ವಿವಿಧ ಕಲಾಕೃತಿಯ ಪಾಟ್ ಗಳಲ್ಲಿ ಚೆಂದ ಚೆಂದದ ಅಲಂಕಾರಿಕ ಹೂಗಿಡಗಳು ನೋಡಲೆರಡು ಕಣ್ಣುಗಳೇ ಸಾಲುವುದಿಲ್ಲ.
ಮನೆಯೊಳಗೆ ಕಾಲಿಟ್ಟರೆ ಕಲಾಮಂದಿರಕ್ಕೆ ಕಾಲಿಟ್ಟ ಅನುಭವವಾಗುತ್ತದೆ. ಏನೋ ಒಂದು ಅವ್ಯಕ್ತ ಆನಂದ ಮನದೊಳಗೆ ಹೊಕ್ಕು ಮಾಯವಾಗುತ್ತದೆ. ಅಷ್ಟು ಅಚ್ಚುಕಟ್ಟಾಗಿ ವಿದ್ಯಾ ತಮ್ಮ ಕಲಾಕೃತಿಗಳನ್ನು ಕಾಪಾಡಿಕೊಂಡಿದ್ದಾರೆ.
ಅಷ್ಟು ದೂರ ಸಂದರ್ಶನಕ್ಕೆ ಹೋಗೋದು ಹೇಗೆ ಎಂದು ಆಲೋಚಿಸುತ್ತಿದ್ದೆ. ಆದರೆ ಅವರ ಮನೆಗೆ ಹೋದಾಗ ಹೋದದ್ದು ನಿಜಕ್ಕೂ ಸಾರ್ಥಕವಾಯಿತು ಎನಿಸಿತು. ವಿದ್ಯಾ ಇಂದಿನ ಎಷ್ಟೋ ಜನ ಮಹಿಳೆಯರಿಗೆ ಮಾದರಿಯಾಗಿದ್ದಾರೆ. ಇಂದಿನ ಎಷ್ಟೋ ಮಹಿಳೆಯರು ಮನೆಗೆಲಸ ಮುಗಿಸಿದ ನಂತರ ಮೊಬೈಲ್ ಹಿಡಿದು ಕುಳಿತುಬಿಡುತ್ತಾರೆ.

ಸೃಜನಾತ್ಮಕ ಚಟುವಟಿಕೆ
ತಮ್ಮ ಅಮೂಲ್ಯವಾದ ಸಮಯವನ್ನು ವ್ಯರ್ಥ ಮಾಡಿಕೊಳ್ಳುತ್ತಿದ್ದಾರೆ. ಇಂತಹ ಸೃಜನಾತ್ಮಕ ಚಟುವಟಿಕೆಗಳಲ್ಲಿ ಪಾಲ್ಗೊಂಡರೆ ಮನಸ್ಸು ಪ್ರಪಲ್ಲವಾಗುತ್ತದೆ. ನಮ್ಮೊಳಗಿರುವ ಕಲೆ ಹೊರಬರುತ್ತದೆ. ಮನಸ್ಸಿದ್ದರೆ ಏನು ಬೇಕಾದರೂ ಸಾಧಿಸಬಹುದು ಎಂಬುದನ್ನು ವಿದ್ಯಾರನ್ನು ನೋಡಿದರೆ ಎಂಥವರಿಗೂ ಅನಿಸದೇ ಇರಲಾರದು. ಇನ್ನು ವಿದ್ಯಾರ ಕಲೆ, ಹೂಗಿಡಗಳು ಇವುಗಳ ಬಗ್ಗೆ ಗಮನ ಹರಿಸೋಣವೇ?
ಯಾವುದೇ ಮಹಾನಗರದ ಮಹಿಳೆಯರಿಗೂ ಕಡಿಮೆ ಇಲ್ಲದಂತೆ, ಹತ್ತಾರು ಬಗೆಯ ವಿನೂತನ ಆಕರ್ಷಣೀಯ ಕಲೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಕಲೆಯನ್ನೇ ಪ್ರೀತಿಸುತ್ತಾ, ಪೋಷಿಸುತ್ತಾ, ಆಸಕ್ತರಿಗೆ ತಮಗೆ ತಿಳಿದಿರುವ ಕಲೆಯ ಬಗ್ಗೆ ತರಬೇತಿಯನ್ನು ನೀಡುತ್ತಾ, ಸಾರ್ಥಕ ಬದುಕನ್ನು ನಡೆಸುತ್ತಿರುವ ಮಹಿಳೆ ವಿದ್ಯಾ ಹರೀಶ್, ಆಲೂರು ತಾಲ್ಲೂಕು ಬೆಳಗೋಡು ಗ್ರಾಮದ ಮೇಗಟಳ್ಳಿ ಕಾಫಿ ಎಸ್ಟೇಟ್ ನವರು.
ಇವರ ಮನೆಯ ಆವರಣ ಆರ್ಟ್ ಗ್ಯಾಲರಿಗೂ ಮೀರಿದ್ದು, ಇವರ ಮನೆಯ ಒಳಗೆ ಪ್ರವೇಶಿಸಿದರೆ ಕಾಣುವುದೆಲ್ಲ ವಿದ್ಯಾ ರಚಿಸಿರುವ ವಿವಿಧ ನಮೂನೆಯ ಚಿತ್ರಕಲೆ, ಅದನ್ನು ಕರಗತ ಮಾಡಿಕೊಂಡಿರುವ ಇವರು ಮುಟ್ಟಿದ್ದೆಲ್ಲಾ ಕಲೆಯಾಗಿ ರೂಪಾಂತರವಾಗುತ್ತದೆ.
ಬೋನ್ಸಾಯ್ ಕಲೆ
ಚೀನೀ ಪಿಂಗಾಣಿಯಲ್ಲಿ ರಚಿಸಿರುವ ಕೃತಕ ಬೋನ್ಸಾಯ್, ಅದರಲ್ಲಿನ ರೆಂಬೆ, ಕೊಂಬೆ, ಹೂ, ಹೂವಿನ ತೊಟ್ಟು, ಹೂವಿನ ಕುಸುರು, ಎಲೆ ಕಣ್ಣೆದುರು ಕುಂಡದಲ್ಲಿ ಹೂ ಅರಳಿ ನಿಂತಂತಿದೆ. ಅದಕ್ಕೆ ಹೊಂದಿಕೊಳ್ಳುವ ಬಣ್ಣ ವಿದ್ಯಾರ ಮನಸ್ಸಿನಲ್ಲಿರುವ ಕಲೆಯನ್ನು ಕೈಯಲ್ಲಿ ಮಾಡಿ ತೋರಿಸಿದ್ದಾರೆ. ಅಪರೂಪ ಎನಿಸುವ ಈ ಕೃತಕ ಬೋನ್ಸಾಯ್ ಗಿಡಗಳು ಕುರುಡು ಮನಸ್ಸನ್ನು ಕಣ್ತೆರೆಸುವಂತಿದೆ. ಚೈನೀಸ್ ಸೆರಾಮಿಕ್ ಆರ್ಟ್ ಇನ್ನೊಂದು ಆಕರ್ಷಣೆ. ಮನಮೋಹಕ ವಾರ್ಲಿ ಆರ್ಟ್, ವಿವಿಧ ನಮೂನೆಯ ವಿವಿಧ ಗಾತ್ರದ ಮಡಕೆ, ಕುಡಿಕೆ, ಹಂಡೆಗಳ ಮೇಲೆ ವಿವಿಧ ಸಂದೇಶಗಳನ್ನು ಸಾರುವ ವಿನೂತನ ನಮೂನೆಯಲ್ಲಿ ರಚಿಸಿರುವ ವಾರ್ಲಿ ಆರ್ಟ್ ವರ್ಣಿಸಲು ಪದ ಸಾಲದು.
ವಿದ್ಯಾರ ಕೈಯಲ್ಲಿ ಅರಳಿರುವ ಕಲೆಗಳು ಸಿಲ್ವರ್ ಫಾಯಿಲ್, ವಾರ್ಲಿ ಆರ್ಟ್, ಕ್ಯಾಂಡಲ್ ಆರ್ಟ್, ಗ್ಲಾಸ್ ಪೇಂಟಿಂಗ್, ಮ್ಯೂರ್‌ಆರ್ಟ್, ಪಿ.ವಿ.ಸಿ ಪೈಪ್ ಮೇಲೆ ರಚಿಸಿರುವ ಕಲೆ, ಸಿಮೆಂಟ್ ಕ್ಲಾತ್ ಪಾಡ್ಸ್, ಉಲ್ಲನ್ ಬಳಸಿ ಕ್ರೋಶ, ಬ್ಯೂಟೀಸ್, ಬ್ಯಾಗ್, ಕ್ಯಾಪ್, ಟೆಕ್ಸ್ ಚರ್ ವರ್ಕ್, ಕಾಫಿ ಗಿಡದಿಂದ ಕಲೆ, ಮದುವೆ ಸಮಾರಂಭಗಳಿಗೆ ತೆಂಗಿನಕಾಯಿ ಡಿಸೈನ್, ಸೀರೆಗಳಿಗೆ ಕುಚ್ಚು ಹಾಕುವುದು….. ಹೀಗೆಯೇ ಹತ್ತಾರು ಕಲೆಗಳನ್ನು ಮೈಗೂಡಿಸಿಕೊಂಡಿದ್ದಾರೆ ವಿದ್ಯಾ ಹರೀಶ್.
ಅಬ್ದುಲ್ ಕಲಾಂರವರ ಮೆಚ್ಚುಗೆ
ರಾಷ್ಟ್ರಪತಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂರವರು ಬಾಗೆಯ ಜೆ.ಎಸ್.ಎಸ್. ಶಿಕ್ಷಣ ಸಂಸ್ಥೆಗೆ ಬಂದಿದ್ದಾಗ ಶಾಲೆಯ ವತಿಯಿಂದ ನೆನಪಿನ ಕಾಣಿಕೆಯಾಗಿ ವಿದ್ಯಾ ಹರೀಶ್ ರಚಿಸಿದ್ದ ಕಲಾಕೃತಿಯೊಂದನ್ನು ನೀಡಲಾಗಿತ್ತು. ಕಲಾಂರವರು ಅದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದನ್ನು ವಿದ್ಯಾ ಎಂದಿಗೂ ಮರೆಯಲಾಗದು ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಒಂದು ಬೋನ್ಸಾಯ್ ಮಾಡಲು ಕನಿಷ್ಠ ಒಂದು ತಿಂಗಳು ಬೇಕಾಗುತ್ತದೆ. ಪ್ರಾರಂಭದಲ್ಲಿ ಕೊನೆಗಳು ಮುರಿದು ಬೀಳುತ್ತಿದ್ದವು. ಕ್ರಮೇಣ ತಯಾರಿಕೆಯಲ್ಲಿ ಹದವನ್ನು ಕಂಡುಕೊಂಡಿದ್ದರಿಂದ ಈಗ ಸುಲಭವಾಗಿದೆ ಎನ್ನುವ ವಿದ್ಯಾ, ಕಳೆದ 12 ವರ್ಷಗಳಿಂದ ಈ ಕಲೆಗಳ ರಚನೆಯಲ್ಲಿ ನಿರತರಾಗಿದ್ದಾರೆ. ಹಿಂದೆ ಉದಯ ಟಿ.ವಿಯಲ್ಲಿ ಮೂಡಿ ಬರುತ್ತಿದ್ದ `ವನಿತೆ’ ಕಾರ್ಯಕ್ರಮ ಈ ಕಲೆಗೆ ಪ್ರೇರಣ ಎನ್ನುತ್ತಾರೆ.
ತಾಯಿಯ ಮಾರ್ಗದರ್ಶನ
ವಿದ್ಯಾರ ತಾಯಿ ಪುಷ್ಪಾ ರಾಜಶೇಖರ್ ಇವರಿಗೆ ಮಾರ್ಗದರ್ಶಿಯಾಗಿದ್ದಾರೆ. ಇವರ ತಾಯಿ ಸಹ ಕಲೆಯಲ್ಲಿ ಆಸಕ್ತಿ ಹೊಂದಿದ್ದು ಬುಟ್ಟಿ ಹೆಣೆಯುವುದು, ರಂಗೋಲಿ ಬಿಡಿಸುವುದು ಅವರ ನೆಚ್ಚಿನ ಹವ್ಯಾಸವಂತೆ. ತಾಯಿಯಂತೆಯೇ ಮಗಳು, 5 ವರ್ಷ ಇದ್ದಾಗಲೇ ಚಿತ್ರಕಲೆ ರಚನೆಯ ಹವ್ಯಾಸ ಬೆಳೆಸಿಕೊಂಡಿದ್ದರಂತೆ. ಈಗ ಎಲ್ಲರನ್ನೂ ಬೆರಗುಗೊಳಿಸುವಂಥ ಕಲೆಗಳನ್ನು ರಚಿಸುತ್ತಿದ್ದಾರೆ. ಇವರ ಕಲೆಗೆ ದಿನೇ ದಿನೇ ಬೇಡಿಕೆ ಹೆಚ್ಚಾಗುತ್ತಿದೆ.
ಅದ್ಭುತ ಆಂಥೋರಿಯಂ
ಆಂಥೋರಿಯಂ ಬೆಳೆಯುವ ಹವ್ಯಾಸ ಇವರಿಗಿದ್ದು ನೆರಳು ಪರದೆಯಡಿಯಲ್ಲಿ 20ಕ್ಕೂ ಹೆಚ್ಚಿನ ಬಣ್ಣದ ಆಂಥೋರಿಯಂ ಬೆಳೆದಿರುವ ಇವರು ಸ್ಥಳೀಯವಾಗಿ ಮಾರುಕಟ್ಟೆಯನ್ನು ಹೊಂದಿದ್ದಾರೆ. ಮಣ್ಣಿಲ್ಲದೇ ಬೆಳೆಯುವ ಬೆಳೆ ಆಂಥೋರಿಯಂ ಆಗಿದ್ದು, ತೆಂಗಿನ ಸಿಪ್ಪೆ ಬಳಸಿ ಬೆಳೆಯುತ್ತಿದ್ದಾರೆ. ಅಂತೆಯೇ ಇತರೇ ಹೂಗಳನ್ನು ಬೆಳೆಸಿದ್ದು ಸುಂದರ ನಾಜೂಕಿನ ಎಳೆ ಎಳೆದು, ರಂಗೋಲಿ ಬಿಡಿಸುವುದು ಇವರ ಹವ್ಯಾಸ.
ಮನೆಯ ಗಾರ್ಡನಿಂಗ್ ನಲ್ಲಿ ಸುಮಾರು 80ಕ್ಕೂ ಹೆಚ್ಚಿನ ಗುಲಾಬಿ ಹೂವಿನ ಗಿಡಗಳು, 150ಕ್ಕೂ ಹೆಚ್ಚು ಬಾಲದಾವರೆ ಪುಷ್ಪ ಮತ್ತು 500ಕ್ಕೂ ಹೆಚ್ಚು ಆಂಥೋರಿಯಂ ಗಿಡಗಳು, 60ಕ್ಕೂ ಹೆಚ್ಚಿನ ಬಗೆಬಗೆಯ ಬೋನ್ಸಾಯ್ ಗಿಡಗಳು, 50ಕ್ಕೂ ಹೆಚ್ಚು ವಿವಿಧ ಜಾತಿಯ ದಾಸವಾಳ ಹೂವಿನ ಗಿಡಗಳನ್ನು ಬೆಳೆಸಿರುವ ಇವರು, ಪ್ರಗತಿಪರ ರೈತ ಮಹಿಳೆಯಾಗಿದ್ದು ಕೃಷಿ ಮತ್ತು ಕಲೆಗೆ ಇವರ ಕೊಡುಗೆ ಅಪಾರವಾಗಿದೆ.
ಮೀಡಿಯಾದಲ್ಲೂ ಜನಪ್ರಿಯ
ಅಲ್ಲದೆ ಜನಪ್ರಿಯ ದಿನಪತ್ರಿಕೆಗಳ ಮಹಿಳಾ ವಿಷಯದಲ್ಲಿ ಇವರ ಕಲೆಯ ಬಗ್ಗೆ `ಯಾವುದೇ ತಗೊಳ್ಳಿ ವಿದ್ಯಾ ಮಾಡಿದ್ದು ಸಾರ್’ ಎಂಬ ಶೀರ್ಷಿಕೆಯಡಿ ಮಾಹಿತಿ ಪ್ರಕಟಗೊಂಡಿದೆ. ಹಾಗೆಯೇ ಕನ್ನಡದ ಜನಪ್ರಿಯ ನ್ಯೂಸ್ ಚಾನೆಲ್ ಗಳಲ್ಲಿ `ಮನೆಯಲ್ಲವಿದು ಕಲಾದೇಗುಲ’ ಎಂಬ ಶೀರ್ಷಿಕೆಯಡಿ ಇವರ ಬಗ್ಗೆ ಕಾರ್ಯಕ್ರಮ ಬಿತ್ತರಗೊಂಡಿರುತ್ತದೆ.
ಇವುಗಳ ಜೊತೆಗೆ ಇವರ ಕಲೆಯನ್ನು ಗುರುತಿಸಿ ಹಲವಾರು ಪ್ರಶಸ್ತಿ, ಸನ್ಮಾನಗಳು ಲಭಿಸಿದ್ದು, ಅವುಗಳಲ್ಲಿ ಕೆಲವೊಂದರೆ ಆರ್ಟ್ ಕ್ರಾಫ್ಟ್ ಮತ್ತು ಆಂಥೋರಿಯಂ ತೋಟಗಾರಿಕಾ ಬೆಳೆಗೆ ಆಲೂರು ತಾಲ್ಲೂಕಿನಿಂದ ಪ್ರಗತಿಪರ ರೈತ ಮಹಿಳೆ ಎಂಬ ರಾಜ್ಯ ಪ್ರಶಸ್ತಿಯನ್ನು ಬೆಂಗಳೂರು ವಿಶ್ವವಿದ್ಯಾನಿಲಯದ ಜಿ.ಕೆ.ವಿ.ಕೆ ಉಪಕುಲಪತಿಗಳಾದ ನಾರಾಯಣಗೌಡರಿಂದ ಪಡೆದಿದ್ದಾರೆ. ಜೊತೆಗೆ ಅರಕಲಗೂಡು, ಬಸವಾಪಟ್ಟಣದಲ್ಲಿ ನಡೆದ ಸಮಾರಂಭವೊಂದರಲ್ಲಿ ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕಾ ಡಾ. ವೀರಸೋಮೇಶ್ವರ ರಾಜದೇಶೀಕೇಂದ್ರ ಶಿವಾಚಾರ್ಯ ಭಗತ್ಪಾದಕರು, ರಂಭಾಪುರಿ ಪೀಠ, ಬಾಳೆಹೊನ್ನೂರು ಇವರಿಂದ ಸನ್ಮಾನ ಸ್ವೀಕರಿಸಿದ್ದಾರೆ.
ಅಲ್ಲದೆ ಕಲೆಯ ಬಗ್ಗೆ ಅಪಾರ ಪ್ರೌಡಿಮೆ ಹೊಂದಿರುವ ಇವರು ತಮ್ಮ ಕಲೆಯನ್ನು ಹಲವಾರು ಆಸಕ್ತಿಯುಳ್ಳ ವಿದ್ಯಾರ್ಥಿನಿಯರಿಗೆ ತರಬೇತಿ ನೀಡುತ್ತಿದ್ದು, ಮುಂದಿನ ಪೀಳಿಗೆಯು ಇವರ ಕಲೆಯನ್ನು ಮೈಗೂಡಿಸಿಕೊಳ್ಳುವಂತಾಗಿದೆ.
ವಿವಿಧ ಪ್ರಶಸ್ತಿ ಪುರಸ್ಕಾರಗಳು
ಇವರ ಸಾಮಾಜಿಕ ಸೇವೆಯನ್ನು ಪರಿಗಣಿಸಿ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ, ಬೆಂಗಳೂರು ಇವರು ಜಿಲ್ಲಾ ಘಟಕ, ಹಾಸನ ಹಾಗೂ ತಾಲ್ಲೂಕು ಘಟಕ, ಸಕಲೇಶಪುರ ಇವರ ಸಂಯುಕ್ತಾಶ್ರಯದಲ್ಲಿ ನಡೆದ ಸಕಲೇಶಪುರದ ಲಯನ್ಸ್ ಸೇವಾ ಮಂದಿರದಲ್ಲಿ ಅಖಿಲ ಕರ್ನಾಟಕ ಪ್ರಥಮ ಕವಿ ಕಾವ್ಯ ಸಮ್ಮೇಳನದಲ್ಲಿ `ಸಮಾಜ ಸೇವಾ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು ಹಮ್ಮಿಕೊಂಡಿದ್ದ ಕೃಷಿಮೇಳದಲ್ಲಿ, ಇವರು ಕೃಷಿ ಕ್ಷೇತ್ರದಲ್ಲಿ ಸಾಧಿಸಿದ ಪ್ರಗತಿಯನ್ನು ಪರಿಗಣಿಸಿ ಹಾಸನೆ ಜಿಲ್ಲೆ ಆಲೂರು ತಾಲ್ಲೂಕು ಮಟ್ಟದ `ಪ್ರಗತಿಶೀಲ ಯುವ ರೈತ ಮೈಹಿಳೆ’ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
ವಿವಿಧ ವಿನ್ಯಾಸದ ಕಲಾಕೃತಿಗಳನ್ನು ರಚಿಸುವುದರಲ್ಲಿ ಇವರು ಎತ್ತಿದ ಕೈ. ಈ ಕಲಾಕೃತಿಗಳನ್ನು ಬೆಂಗಳೂರಿನಲ್ಲಿ ನಡೆದ ವಸ್ತು ಪ್ರದರ್ಶನಕ್ಕೆ ಇಡಲಾಗಿದೆ. ಅಲ್ಲದೆ, ಹಾರ ಕಡಿಮೆ ಮಾರಾಟಕ್ಕೂ ಇಟ್ಟು ಸಾಕಷ್ಟು ಲಾಭವನ್ನು ಪಡೆದಿದ್ದಾರೆ. ವಿದ್ಯಾ ಹೇಳುವಂತೆ ಮಾರಾಟವಾದವು ಎನ್ನುವ ಖುಷಿಗಿಂತ ಗ್ರಾಹಕರು ಸಂತೋಷದಿಂದ ನನ್ನ ಕಲೆಯನ್ನು ಮೆಚ್ಚಿ ಪ್ರೋತ್ಸಹಿಸುವುದೇ ನನ್ನ ಮನಸ್ಸಿಗೆ ಅತ್ಯಂತ ಆನಂದ ಮತ್ತು ತೃಪ್ತಿಯನ್ನು ನೀಡುತ್ತದೆ ಎನ್ನುತ್ತಾರೆ.
ವಸ್ತು ಪ್ರದರ್ಶನಗಳು
ಚಿಕ್ಕಮಗಳೂರಿನಲ್ಲಿ ನಡೆದ ವಸ್ತು ಪ್ರದರ್ಶನದಲ್ಲಿಯೂ ಇವರ ಕಲಾಕೃತಿಗಳನ್ನು ಪ್ರದರ್ಶನಕ್ಕಿಡಲಾಗಿತ್ತಂತೆ. ಇವರೇ ಹೇಳುವ ಹಾಗೆ ಒಮ್ಮೆ ಮನೆಯಲ್ಲಿರುವ ಕಲಾಕೃತಿಗಳೆಲ್ಲಾ ಗ್ರಾಹಕರ ಪಾಲಾಗುತ್ತಿತ್ತಂತೆ. ಆರ್ಟ್ ಗ್ಯಾಲರಿಯಂತೆ ಇದ್ದ ಮನೆ ಖಾಲಿ ಖಾಲಿಯಾಗಿ ಭಣಗುಡುತ್ತಿತ್ತಂತೆ. ಆಗ ಒಂದು ತಿಂಗಳಲ್ಲಿ ಮತ್ತೆ ಇಡೀ ಮನೆಯನ್ನು ಹೊಸ ಹೊಸ ಕಲಾಕೃತಿಗಳನ್ನು ಮಾಡಿ ಜೋಡಿಸಿಟ್ಟರಂತೆ, ಮನೆಗೆ ಬಂದ ಅತಿಥಿಗಳಿಗೆ ಮನೆಯ ಒಳಗೂ ಹೊರಗೂ ನೋಡಿ, ಅನುಭವಿಸಿ ಆಸ್ವಾದಿಸುವುದೇ ಕಣ್ಣಿಗೆ ಹಬ್ಬ, ಅವರ ಪ್ರಶಂಸಾ ನುಡಿಗಳು ಇವರಿಗೆ ಸ್ಛೂರ್ತಿ, ಸಮಯವಿಲ್ಲ ಎಂದು ಕೊರಗುವುದನ್ನು ಬಿಟ್ಟು ಸಿಕ್ಕ ಸಮಯವನ್ನು ಸೃಜನಾತ್ಮಕ ಚಟುವಟಿಕೆಗಳಿಗೆ ಬಳಸಿಕೊಂಡರೆ ಈ ರೀತಿ ಎಷ್ಟೋ ಮಹಿಳೆಯರು ತಮ್ಮ ಪ್ರತಿಭೆಯನ್ನು ಹೊರಚೆಲ್ಲಬಹುದಾಗಿದೆ, ಮನಸ್ಸಿರಬೇಕಷ್ಟೆ!
ಸ್ಟ್ರಾಬೆರಿ ಕೃಷಿ
ಕೇವಲ ಕಲಾಕೃತಿಗಳೇ ಅಲ್ಲದೆ ಇತ್ತೀಚೆಗೆ ಸ್ಟ್ರಾಬೆರಿ ಗಿಡಗಳನ್ನು ಹಾಕಿಸಿ ಸಾಕಷ್ಟು ಲಾಭ ಗಳಿಸಿದ್ದಾರೆ. ಎರಡೇ ಬುಟ್ಟಿಗಳಷ್ಟನ್ನು ಬೆಳೆಸಿದ್ದ ವಿದ್ಯಾ, ಈಗ 400-500ಕ್ಕೂ ಹೆಚ್ಚು ಬುಟ್ಟಿಗಳನ್ನು ಮಾಡಿದ್ದಾರೆ. ಮನೆಗೆ ಬಂದ ಅತಿಥಿಗಳಿಗೆ ಮನೆಯ ಸ್ಟ್ರಾಬೆರಿ ಬುಟ್ಟಿಗಳಿಂದಲೇ ಜ್ಯೂಸ್, ಗ್ರಾಹಕರಿಗೂ ಸಾಕಷ್ಟು ಸ್ಟ್ರಾಬೆರಿ ಬುಟ್ಟಿಗಳನ್ನು ನೀಡುತ್ತಿದ್ದಾರೆ. ಈ ಬಾರಿ ಮಳೆ ಜಾಸ್ತಿಯಾಗಿರುವುದರಿಂದ ಹಣ್ಣುಗಳು ಸ್ವಲ್ಪ ಕಮ್ಮಿಯಾಗಿವೆ ಎನ್ನುತ್ತಾರೆ.
ಆಂಥೋರಿಯಂ ಕೃಷಿ ಇವರಿಗೆ ಬಹಳ ಅಚ್ಚುಮೆಚ್ಚು. ಆಂಥೋರಿಯಂ ಇದುವರೆಗೂ ಎಷ್ಟು ಬಣ್ಣಗಳಲ್ಲಿ ಲಭ್ಯವಿದೆಯೋ ಅಷ್ಟೂ ಬಣ್ಣಗಳು ಇವರಲ್ಲಿ ಲಭ್ಯವಿವೆ. ಮದುವೆ ಸಮಾರಂಭಗಳಿಗೆ ಇವರ ಮನೆಯ ಆಂಥೋರಿಯಂ ಪುಷ್ಟಗಳು ಬಹುವಾಗಿ ಉಪಯೋಗಿಸಲ್ಪಟ್ಟಿವೆ. ಬಾಳ್ಳುಪೇಟೆಯಲ್ಲಿರುವ ತಮ್ಮದೇ ಕಲ್ಯಾಣ ಮಂಟಪಕ್ಕೆ ಇವರ ಆಂಥೋರಿಯಂ ಬಳಸಲಾಗಿದೆಯಂತೆ.
ಕೃಷಿ ಮತ್ತು ಕಲೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ಮಲೆನಾಡಿನ ಹೆಣ್ಣುಮಕ್ಕಳಲ್ಲಿಯೇ ಇವರು ಮೊದಲಿಗರಾಗಿ ಕಂಡುಬರುತ್ತಾರೆ. ಅರಳು ಹುರಿದಂತೆ ಮಾತನಾಡುವ ವಿದ್ಯಾ, ಸಕಲೇಶಪುರದ ರೋಟರಿ ಶಾಲೆಯಲ್ಲಿ 3 ಬಾರಿ `ಪ್ರತಿಭಾ ದಿನ’ದ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಿದ್ದಾರೆ. ಹಾಗೆಯೇ ಹಲವಾರು ಕಾರ್ಯಕ್ರಮಗಳಲ್ಲಿ, ಕೃಷಿ ಕಾರ್ಯಾಗಾರಗಳಲ್ಲಿ ಭಾಗವಹಿಸಿದ್ದಾರೆ.
ವಿವಿಧ ಹೂಗಿಡಗಳ ಪಾಲನೆ
ಕಲಾಕೃತಿಗಳು ಮತ್ತು ಹೂಗಿಡಗಳ ಪಾಲನೆ, ಪೋಷಣೆ ಜೊತೆಗೆ ಮನೆಯಲ್ಲಿಯೇ ವಿವಿಧ ಫ್ಲೇವರ್ಸ್ ಮತ್ತು ವಿನ್ಯಾಸದ ಕೇಕ್ ಗಳನ್ನು ತಯಾರಿಸುತ್ತಾರೆ. ಒಟ್ಟಾರೆಯಾಗಿ ಹೇಳುವುದಾದರೆ, `ಕೃಷಿ ಮತ್ತು ಕಲೆಯ ಸಮಾಗಮದ ಸುಂದರ ಪುಷ್ಪ’ ನಮ್ಮ ವಿದ್ಯಾ.
ಇತ್ತೀಚೆಗೆ ಹಾಸನ ಆಕಾಶವಾಣಿಯಲ್ಲಿ ಇವರ ಕೃಷಿಯಲ್ಲಿನ ಸಾಧನೆಯನ್ನು ಗುರುತಿಸಿ ಸಂದರ್ಶನ ಪ್ರಸಾರಗೊಂಡಿತು. ಇವೆಲ್ಲದರ ಜೊತೆಗೆ ಪ್ರತಿನಿತ್ಯ ಕಾಫಿ ತೋಟದ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಅಡಿಕೆ, ಕಾಫಿ ತೋಟದ ನಿರ್ವಹಣೆಯನ್ನು ಶಿಸ್ತಾಗಿ ಕ್ರಮಬದ್ಧವಾಗಿ ನಿರ್ವಹಿಸಿಕೊಂಡು ಹೋಗುತ್ತಿದ್ದಾರೆ. ಎಷ್ಟು ಸಮಯವಿಲ್ಲದ್ದೂ ಸಮಯವೇ ಸಿಗುವುದಿಲ್ಲ ಎಂದು ಗೊಣಗುವ ಎಷ್ಟೋ ಮಹಿಳೆಯರ ಮಧ್ಯೆ ವಿದ್ಯಾ ವಿಭಿನ್ನ ಕಲಾವಿದೆಯಾಗಿ ಕಾಣುತ್ತಾರೆ. ಇವರು ನಮ್ಮ ನಾಡಿನ ಎಷ್ಟೋ ಮಹಿಳೆಯರಿಗೆ ಮಾದರಿ ಹೆಣ್ಣುಮಗಳು ಎಂದರೆ ಅತಿಶಯೋಕ್ತಿ ಆಗಲಾರದು.
ಪತಿಯ ಸಹಕಾರ
ಈ ಸಾಧನೆಗೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಇವರ ಪತಿ ಎಂ.ಪಿ. ಹರೀಶ್ ಕಾರಣ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ ವಿದ್ಯಾ. ಸ್ವತಃ ಹವ್ಯಾಸಿ ಜನಪದ ಕಲಾವಿದ ಆಗಿರುವ ಎಂ.ಪಿ. ಹರೀಶ್, ಪತ್ನಿಯ ಕಲಾಭಿರುಚಿಗೆ ಆಸರೆಯಾಗಿ ನಿಂತಿದ್ದಾರೆ. ಕಲಾಕುಸುಮದ ಈ ದೈತ್ಯ ಪ್ರತಿಭೆಗೆ ನೀರೆರೆದು ಪೋಷಿಸುತ್ತಿರುವ ಹರೀಶ್ ರಿಗೆ ಅಭಿನಂದನೆಗಳು.
ಸಿಕ್ಕ ಕೆಲವೇ ಸಮಯದಲ್ಲಿ ಕೃತಕ ದಾಸವಾಳ ಹೂಗಳನ್ನು ಮಾಡುವುದನ್ನು ತೋರಿಸಿಕೊಟ್ಟರು. ಎಲೆ, ಹೂ ಕುಸುರಿ, ಪ್ರತಿಯೊಂದು ಹಂತಗಳನ್ನು ಆಸಕ್ತಿಯಿಂದ ಹೇಳಿಕೊಟ್ಟರು. ಯಾವುದೇ ಗುರುಗಳ ಬಳಿಯೂ ತರಬೇತಿ ಇಲ್ಲದೆ, ತನ್ನ ಸ್ವಅಭಿರುಚಿಯಿಂದ, ಸ್ವಪ್ರತಿಭೆಯಿಂದ ಮೇಲೆ ಬಂದಿರುವ ಇವರ ಪ್ರತಿಭೆಯನ್ನು ಎಷ್ಟು ಬಣ್ಣಿಸಿದರೂ ಸಾಲದು.
ನಮ್ಮ ಮಲೆನಾಡಿನ ಕಲಾಕುಸುಮ ವಿದ್ಯಾರ ಮುಂದಿನ ಕನಸುಗಳೆಲ್ಲ ನನಸಾಗಲಿ, ಇನ್ನಷ್ಟು ಕಲೆಯನ್ನು ಮೈಗೂಡಿಸಿಕೊಂಡು ಮತ್ತಷ್ಟು ಸಾಧನೆಗೈದು ನಮ್ಮ ಮಲೆನಾಡಿನ ಹೆಸರನ್ನು ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳಗಲಿ. ಇವರ ಮನೆಯಂಗಳದಲ್ಲಿನ ಕುಸುಮಗಳು ಮಾಸದಿರಲೆಂದು, ಮನೆಯೊಳಗಿರುವ ಕಲಾಕೃತಿಗಳು ಮಸುಕಾಗದಿರಲೆಂದು ಗೃಹಶೋಭಾ ಮನಃಪೂರ್ವಕವಾಗಿ ಹಾರೈಸುತ್ತಾಳೆ.
– ಕೀರ್ತಿ ಕಿರಣ್ ಕುಮಾರ್





