– ರಾಘವೇಂದ್ರ ಅಡಿಗ ಎಚ್ಚೆನ್.
ತಿಥಿ ಸಿನಿಮಾ ಮೂಲಕ ಗಡ್ಡಪ್ಪ ಎಂದೇ ಹೆಸರುವಾಸಿಯಾದ ಮಂಡ್ಯದ ಚನ್ನೇಗೌಡ (89) ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ಹಲವಾರು ಚಿತ್ರಗಳಲ್ಲಿ ನಟಿಸಿದ್ದ ಅವರು ವಯೋಸಹಜ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು.
89 ವರ್ಷದ ಚನ್ನೇಗೌಡ ಮಂಡ್ಯ ಜಿಲ್ಲೆಯ ನೊದೆ ಕೊಪ್ಪಲು ಗ್ರಾಮದವರು. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ಬುಧವಾರ ಸಾವನ್ನಪ್ಪಿದ್ದಾರೆ.
ನಟ ಚನ್ನೇಗೌಡ ಅಸ್ತಮಾ, ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿದ್ದರು. ಕೆಲವು ತಿಂಗಳ ಹಿಂದೆ ಬಿದ್ದು ಸೊಂಟಕ್ಕೆ ಪೆಟ್ಟು ಮಾಡಿಕೊಂಡಿದ್ದರು. ಬಳಿಕ ಅವರಿಗೆ ಆಪರೇಷನ್ ಮಾಡಲಾಗಿತ್ತು.
ಬುಧವಾರ ಚನ್ನೇಗೌಡರು ಮೃತಪಟ್ಟಿದ್ದಾರೆ ಎಂದು ಅವರ ಪುತ್ರಿ ಶೋಭಾ ಮಾಹಿತಿ ನೀಡಿದ್ದಾರೆ. ಸಂಜೆ ನೊದೆಕೊಪ್ಪಲು ಗ್ರಾಮದಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ.
ಚನ್ನೇಗೌಡರು ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ. ಆದರೆ ಕನ್ನಡದ ‘ತಿಥಿ’ ಸಿನಿಮಾದ ಗಡ್ಡಪ್ಪನ ಪಾತ್ರ ಅವರಿಗೆ ಭಾರೀ ಜನಪ್ರಿಯತೆ ತಂದುಕೊಟ್ಟಿತ್ತು. ಈ ಚಿತ್ರಕ್ಕೆ ಹಲವಾರು ಪ್ರಶಸ್ತಿಗಳು ಸಹ ಬಂದಿದ್ದವು.
ಚನ್ನೇಗೌಡರು ತರ್ಲೆ ವಿಲೇಜ್, ಏನ್ ನಿನ್ ಪ್ರಾಬ್ಲಮ್, ಹಳ್ಳಿ ಪಂಚಾಯಿತಿ ಸೇರಿದಂತೆ 8 ಚಿತ್ರಗಳಲ್ಲಿ ನಟಿಸಿದ್ದರು. ಅವರ ಏನ್ ನಿನ್ ಪ್ರಾಬ್ಲಮ್ ಎಂಬ ಸಿಕ್ಟರ್‌ಗಳು ವಾಟ್ಸಪ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. 2018ರಲ್ಲಿಯೂ ಚನ್ನೇಗೌಡರ ಆರೋಗ್ಯ ಕೈ ಕೊಟ್ಟಿತ್ತು. ಕಾಲಿಗೆ ಸಹ ಅವರು ಪೆಟ್ಟು ಮಾಡಿಕೊಂಡಿದ್ದರು. ಚಿಕಿತ್ಸೆ ಬಳಿಕ ಚೇತರಿಕೆ ಕಂಡು ಬಂದಿತ್ತು, ನೊದೆಕೊಪ್ಪಲು ಗ್ರಾಮದಲ್ಲಿಯೇ ಅವರು ವಾಸವಾಗಿದ್ದರು.





