ಆಫ್ರಿಕಾ ಖಂಡದ ಇಥಿಯೋಪಿಯಾದ ಅಫಾರ್ ಪ್ರದೇಶದಲ್ಲಿರುವ ಹಾಯ್ಲಿ ಗುಬ್ಬಿ ಜ್ವಾಲಾಮುಖಿ ಸ್ಫೋಟಗೊಂಡ ಪರಿಣಾಮವಾಗಿ ಹೊರಹೊಮ್ಮಿದ ಬೂದಿ ಮೋಡಗಳು ಬಲವಾದ ಮೇಲ್ಮಟ್ಟದ ಗಾಳಿಯ ಸಹಾಯದಿಂದ ಅರಬ್ಬಿ ಸಮುದ್ರದ ಮೂಲಕ ಭಾರತದ ವಾಯುವ್ಯ ಮತ್ತು ಪಶ್ಚಿಮ ಭಾಗಗಳನ್ನು ತಲುಪಿವೆ.
ಇದರಿಂದಾಗಿ ಗುಜರಾತ್, ರಾಜಸ್ಥಾನ, ಪಂಜಾಬ್ ಮತ್ತು ದೆಹಲಿ-ಎನ್‌ಸಿಆರ್ ಸೇರಿದಂತೆ ಹಲವು ರಾಜ್ಯಗಳಲ್ಲಿ ಗೋಚರತೆ ಕಡಿಮೆಯಾಗಿ ವಿಮಾನಯಾನ ಕಾರ್ಯಾಚರಣೆಗಳಿಗೆ ಅಲ್ಪ ಮಟ್ಟಿಗೆ ಅಡ್ಡಿಯುಂಟಾಗಿದೆ. ಇದರ ಪರಿಣಾಮ ದಿಲ್ಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಏಳು ಅಂತಾರಾಷ್ಟ್ರೀಯ ವಿಮಾನಗಳ ಹಾರಟ ರದ್ದುಪಡಿಸಲಾಗಿತ್ತು. 10ಕ್ಕೂ ಹೆಚ್ಚು ವಿಮಾನಗಳ ಹಾರಾಟ ವಿಳಂಬವಾಯಿತು.
ಬೂದಿಯ ದಟ್ಟ ಮೋಡವು ಸುಮಾರು 4500 ಕಿ.ಮೀ. ಕ್ರಮಿಸಿ ಭಾರತದ ಗುಜರಾತ್, ರಾಜಸ್ಥಾನ, ಪಂಚಾಬ್ ಮತ್ತು ದಿಲ್ಲಿ ಮುಖಾಂತರ ಚೀನಾದ ಕಡೆ ಸಾಗುತ್ತಿದೆ.
ಭಾರತೀಯ ಹವಾಮಾನ ಇಲಾಖೆಯ ಮಹಾನಿರ್ದೇಶಕ ಮೃತ್ಯುಂಜಯ ಮಹಾಪಾತ್ರ ಅವರು ನೀಡಿರುವ ಮಾಹಿತಿಯಂತೆ, ಗುಜರಾತ್‌ಗೆ ಪ್ರವೇಶಿಸಿದ್ದ ಈ ಬೂದಿ ಮೋಡವು ರಾತ್ರಿಯಿಡೀ ರಾಜಸ್ಥಾನ, ಮಹಾರಾಷ್ಟ್ರ, ದೆಹಲಿ-ಎನ್‌ಸಿಆರ್, ಹರಿಯಾಣ ಮತ್ತು ಪಂಜಾಬ್ ರಾಜ್ಯಗಳಿಗೂ ವ್ಯಾಪಿಸಿತ್ತು.
ನಾಗರಿಕ ವಿಮಾನಯಾನ ನಿರ್ದೇಶನಾಲಯವು ಹಾರು ಬೂದಿಯ ಬಗ್ಗೆ ಎಚ್ಚರ ವಹಿಸುವಂತೆ ಎಲ್ಲಾ ವಿಮಾನಯಾನ ಸಂಸ್ಥೆಗಳಿಗೆ ಸಂದೇಶ ಕಳುಹಿಸಿದೆ. ವಿಮಾನಗಳ ಹಾರಟಕ್ಕೆ ಸೂಕ್ತ ಸಮಯ, ಮಾರ್ಗ ಮತ್ತು ಇಂಧನವನ್ನು ಸಮರ್ಪಕವಾಗಿ ನಿರ್ವಹಿಸುವಂತೆ ನಿರ್ದೇಶನ ನೀಡಿದೆ.
ಇಥಿಯೋಪಿಯಾದ ಅಫಾರ್ ಪ್ರದೇಶದಲ್ಲಿರುವ “ಹಾಯ್ಲಿ ಗುಬ್ಬಿ” ಜ್ವಾಲಾಮುಖಿಯು ಸುಮಾರು 12 ಸಾವಿರ ವರ್ಷಗಳ ಸುದೀರ್ಘ ಸುಪ್ತತೆಯ ನಂತರ ಭಾನುವಾರ ಸ್ಫೋಟಗೊಂಡಿತು. ಈ ಸ್ಫೋಟದಿಂದ ಸುಮಾರು 14 ಕಿಮೀ (45,000 ಅಡಿ) ಎತ್ತರದವರೆಗೆ ಬೂದಿ ಚಿಮ್ಮಿತ್ತು. ಟೌಲೌಸ್ ಜ್ವಾಲಾಮುಖಿ ಬೂದಿ ಸಲಹಾ ಕೇಂದ್ರದ ಪ್ರಕಾರ, ಸ್ಫೋಟಕ ಚಟುವಟಿಕೆಯು ಭಾನುವಾರ ಬೆಳಿಗ್ಗೆ ಪ್ರಾರಂಭವಾಯಿತು. ಅಫಾರ್ ಪ್ರದೇಶದಿಂದ (ಎರಿಟ್ರಿಯಾ ಗಡಿಯ ಬಳಿ, ಅಡಿಸ್ ಅಬಾಬಾದಿಂದ ಸುಮಾರು 800 ಕಿ.ಮೀ ಈಶಾನ್ಯಕ್ಕೆ) ದಟ್ಟವಾದ ಬೂದಿಯ ರಾಶಿಗಳು ಮೇಲ್ಮಟ್ಟದ ಗಾಳಿಯಿಂದ ಕೆಂಪು ಸಮುದ್ರದ ಮೂಲಕ ಯೆಮೆನ್ ಮತ್ತು ಒಮಾನ್ ಕಡೆಗೆ ಸಾಗಿದವು. ನಂತರ ಅರಬ್ಬಿ ಸಮುದ್ರದ ಮೇಲೆ ಹಾದು, ಪಶ್ಚಿಮ ಮತ್ತು ಉತ್ತರ ಭಾರತದ ಕಡೆಗೆ ಬೂದಿ ಮೋಡವು ತೇಲಿಕೊಂಡು ಬಂದಿತು. ಬೂದಿ ಮೋಡವು “ಇಥಿಯೋಪಿಯಾದಿಂದ ಕೆಂಪು ಸಮುದ್ರದ ಮೂಲಕ ಯೆಮೆನ್ ಮತ್ತು ಒಮಾನ್‌ಗೆ ಮತ್ತು ನಂತರ ಅರಬ್ಬಿ ಸಮುದ್ರದ ಮೇಲೆ ಪಶ್ಚಿಮ ಮತ್ತು ಉತ್ತರ ಭಾರತದ ಕಡೆಗೆ” ಸಾಗಲು ಬಲವಾದ ಮೇಲ್ಮಟ್ಟದ ಗಾಳಿಯೇ ಕಾರಣ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.





