- ರಾಘವೇಂದ್ರ ಅಡಿಗ ಎಚ್ಚೆನ್.
ಅಯೋಧ್ಯೆ ಇಂದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಯಿತು. ಶ್ರೀ ರಾಮ ಮಂದಿರದ ಮೇಲೆ ಧರ್ಮ ಧ್ವಜವನ್ನು ಹಾರಿಸಲಾಯಿತು. ಅಭಿಜಿತ್ ಮುಹೂರ್ತದ ಶುಭ ಸಮಯದಲ್ಲಿ ನಡೆದ ವೇದ ಮಂತ್ರಗಳ ಪಠಣ ಮತ್ತು ಧ್ವಜಾರೋಹಣವು ಇಡೀ ರಾಮನಗರಿಯನ್ನು ಹಬ್ಬದ ವಾತಾವರಣದಲ್ಲಿ ಮುಳುಗಿಸಿತು. ಈ ಸಂದರ್ಭದಲ್ಲಿ, ಶತಮಾನಗಳ ನಂತರ ಗಾಯಗಳು ಈಗ ಗುಣವಾಗುತ್ತಿವೆ ಎಂದು ಪ್ರಧಾನಿ ಹೇಳಿದರು.ಅಯೋಧ್ಯಾ ನಗರವು ಭಾರತದ ಸಾಂಸ್ಕೃತಿಕ ಪ್ರಜ್ಞೆಯ ಮತ್ತೊಂದು ಪರಾಕಾಷ್ಠೆಗೆ ಸಾಕ್ಷಿಯಾಗುತ್ತಿದೆ.

ಶ್ರೀ ರಾಮ ಜನ್ಮಭೂಮಿ ದೇವಾಲಯದ ಶಿಖರದಲ್ಲಿ ಧ್ವಜಾರೋಹಣ ಸಮಾರಂಭದ ಈ ಕ್ಷಣ ವಿಶಿಷ್ಟ ಮತ್ತು ಅಲೌಕಿಕವಾಗಿದೆ.ಈ ಧರ್ಮ ಧ್ವಜವು ಕೇವಲ ಧ್ವಜವಲ್ಲ. ಇದು ಭಾರತೀಯ ನಾಗರಿಕತೆಯ ಪುನರುಜ್ಜೀವನದ ಧ್ವಜವಾಗಿದೆ. ಈ ಧ್ವಜವು ಹೋರಾಟದ ಮೂಲಕ ಸೃಷ್ಟಿಯ ಕಥೆಯಾಗಿದೆ, ಶತಮಾನಗಳಿಂದ ನಡೆಯುತ್ತಿರುವ ಕನಸುಗಳ ಸಾಕಾರವಾಗಿದೆ. ಶತಮಾನಗಳ ನೋವು ಇಂದು ಕೊನೆಗೊಳ್ಳುತ್ತಿದೆ, ಶತಮಾನಗಳ ಸಂಕಲ್ಪ ಇಂದು ಯಶಸ್ಸನ್ನು ಸಾಧಿಸುತ್ತಿದೆ. 500 ವರ್ಷಗಳ ಕಾಲ ಹೊತ್ತಿಕೊಂಡ ಆ ಯಾಗದ ಅಂತ್ಯ ಇಂದು. ಒಂದು ಕ್ಷಣವೂ ನಂಬಿಕೆಯಿಂದ ವಿಚಲಿತವಾಗದ ಯಾಗ. ಬಡತನವಿಲ್ಲದ, ಯಾರೂ ದುಃಖಿತರಲ್ಲದ ಅಥವಾ ಅಸಹಾಯಕರಲ್ಲದ ಸಮಾಜವನ್ನು ಸೃಷ್ಟಿಸೋಣ ಎಂದು ಪ್ರಧಾನಿ ಮೋದಿ ಹೇಳಿದರು.

ಧ್ವಜಾರೋಹಣಕ್ಕೆ ಮುನ್ನ, ಪ್ರಧಾನಿ ಮೋದಿ ಅವರು ಅಯೋಧ್ಯೆಯ ಸಪ್ತಮಂದಿರ ಪ್ರದೇಶಕ್ಕೆ ಭೇಟಿ ನೀಡಿ ಮಹರ್ಷಿ ವಶಿಷ್ಠ, ವಿಶ್ವಾಮಿತ್ರ, ಅಗಸ್ತ್ಯ, ವಾಲ್ಮೀಕಿ ಮಂದಿರಗಳಲ್ಲಿ ದರ್ಶನ ಪಡೆದರು. ನಂತರ ಅವರು ನಿಷಾದರಾಜ್ ಗುಹಾ ಮತ್ತು ಮಾತಾ ಶಬರಿ ದೇವಾಲಯಗಳಿಗೂ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಈ ಧಾರ್ಮಿಕ ಯಾತ್ರೆ ಬಳಿಕ, ಶೇಷಾವತಾರ ಮಂದಿರ ಹಾಗೂ ಮಾತಾ ಅನ್ನಪೂರ್ಣ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆಗಳನ್ನು ನೆರವೇರಿಸಿದರು.
ಪ್ರಧಾನಿಯವರು ಧ್ವಜಾರೋಹಣಕ್ಕೆ ತೆರಳುವ ಮೊದಲು ರಾಮ ದರ್ಬಾರ್ ಗರ್ಭಗೃಹದಲ್ಲಿ ದರ್ಶನ ಮಾಡಿದ್ದು, ನಂತರ ರಾಮಲಲ್ಲಾ ಗರ್ಭಗೃಹದಲ್ಲಿಯೂ ಪೂಜೆ ಸಲ್ಲಿಸಿದರು. ಇಂದಿನ ಧ್ವಜಾರೋಹಣ ಕಾರ್ಯಕ್ರಮವು ಮಾರ್ಗಶಿರ ಮಾಸದ ಶುಕ್ಲ ಪಕ್ಷದ ಶುಭ ಪಂಚಮಿಯಂದು ನೆರವೇರಿದೆ.
ಇದೇ ದಿನ ಗುರು ತೇಜ್ ಬಹದ್ದೂರ್ ಅವರ ಹುತಾತ್ಮ ದಿನವೂ ಆಗಿದ್ದು, ಐತಿಹಾಸಿಕ ದಾಖಲೆಗಳ ಪ್ರಕಾರ, ಅವರು 17ನೇ ಶತಮಾನದಲ್ಲಿ ಅಯೋಧ್ಯೆಯಲ್ಲಿ 48 ಗಂಟೆಗಳ ಕಾಲ ನಿರಂತರ ಧ್ಯಾನ ಮಾಡಿದ್ದರು. ಈ ಕಾರಣಕ್ಕಾಗಿ ಇಂದಿನ ಧ್ವಜಾರೋಹಣವು ಧಾರ್ಮಿಕ, ಐತಿಹಾಸಿಕ ಮತ್ತು ಸಾಂಸ್ಕೃತಿಕ ಮಹತ್ವದ್ದಾಗಿದೆ.





