– ರಾಘವೇಂದ್ರ ಅಡಿಗ ಎಚ್ಚೆನ್.
ಕನ್ನಡ ಚಿತ್ರರಂಗದ ಖ್ಯಾತ ಹಾಸ್ಯನಟ ಉಮೇಶ್ (80) ಇಹಲೋಕ ತ್ಯಜಿಸಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರ ಅಗಲಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿ ಅನೇಕ ಗಣ್ಯರು, ಚಿತ್ರರಂಗದ ಗಣ್ಯರು ನಟ-ನಟಿಯರು, ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ. ತಮ್ಮ ಸೋಷಿಯಲ್ ಮೀಡಿಯಾ ಎಕ್ಸ್ ಖಾತೆಗಳಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ಸಂತಾಪ ಸೂಚಿಸಿದ್ದಾರೆ.
ಕನ್ನಡ ಚಿತ್ರರಂಗದ ಹೆಸರಾಂತ ಹಾಸ್ಯನಟ ಉಮೇಶ್ ಅವರ ನಿಧನದ ಸುದ್ದಿ ನೋವು ತಂದಿದೆ. ತಮ್ಮ ಸಹಜ ಅಭಿನಯದ ಮೂಲಕ ಹಲವು ದಶಕಗಳ ಕಾಲ ಪ್ರೇಕ್ಷಕರನ್ನು ನಗಿಸುತ್ತಾ, ಕನ್ನಡಾಂಬೆಯ ಸೇವೆಗೈದ ಹಿರಿಯ ಜೀವಕ್ಕೆ ಭಾವಪೂರ್ಣ ವಿದಾಯಗಳು. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. – ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಪ್ರಖ್ಯಾತ ಹಾಸ್ಯ ಕಲಾವಿದರಾದ ಶ್ರೀ ಎಂ.ಎಸ್. ಉಮೇಶ್ ಅವರ ನಿಧನದ ಸುದ್ದಿ ಕೇಳಿ ಬಹಳ ದುಃಖವಾಯಿತು. ತಮ್ಮ ನವಿರಾದ ಹಾಸ್ಯದ ಮೂಲಕ ಪ್ರೇಕ್ಷಕರನ್ನು ನಗೆಗಡಲಿನಲ್ಲಿ ತೇಲಿಸುತ್ತಿದ್ದ ಉಮೇಶ್ ಕನ್ನಡ ಚಿತ್ರರಂಗವನ್ನು ಶ್ರೀಮಂತಗೊಳಿಸಿದ ನಟರು. ‘ಗುರು ಶಿಷ್ಯರು’, ‘ಹಾಲು ಜೇನು’, ‘ಅಪೂರ್ವ ಸಂಗಮ’ ಸೇರಿ ಅನೇಕ ಚಿತ್ರಗಳಲ್ಲಿ ಮನೋಜ್ಞ ಅಭಿನಯ ನೀಡಿದ್ದ ಉಮೇಶ್ ಅವರ ಅಗಲಿಕೆ ಕನ್ನಡ ಕಲಾಜಗತ್ತಿಗೆ ಬಹುದೊಡ್ಡ ನಷ್ಟ. ಶ್ರೀಯುತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಅವರ ಕುಟುಂಬಕ್ಕೆ, ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ. ಎಂದು ಟ್ವೀಟ್ ಮಾಡಿ ಕಂಬನಿ ಮಿಡಿದಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಕನ್ನಡ ಚಿತ್ರರಂಗದ ಹಿರಿಯ ಕಲಾವಿದ, ತಮ್ಮ ಹಾಸ್ಯಮಯ ಪಾತ್ರಗಳಿಂದ ಜನಪ್ರಿಯರಾಗಿದ್ದ ಶ್ರೀ ಎಂ.ಎಸ್.ಉಮೇಶ್ ರವರ ನಿಧನದ ಸುದ್ದಿ ತಿಳಿದು ಅತ್ಯಂತ ದುಃಖವಾಯಿತು. ಸುಮಾರು ಐದಾರು ದಶಕಗಳ ಕಾಲ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ಅವರು, ತಮ್ಮ ವಿಶಿಷ್ಟ ಅಭಿನಯ ಮತ್ತು ಸಂಭಾಷಣಾ ಶೈಲಿಯ ಮೂಲಕ ಅಪಾರ ಜನಪ್ರಿಯತೆ ಗಳಿಸಿದ್ದರು. ಅವರ ಅಗಲಿಕೆಯಿಂದ ಚಿತ್ರರಂಗ ತನ್ನ ಒಬ್ಬ ಹಿರಿಯ ಕಲಾವಿದನನ್ನು ಕಳೆದುಕೊಂಡಿದೆ. ಅವರ ಆತ್ಮಕ್ಕೆ ಸದ್ಗತಿಯನ್ನು ಪ್ರಾರ್ಥಿಸುತ್ತೇನೆ. ಅವರ ಕುಟುಂಬ ಸದಸ್ಯರು, ಮತ್ತು ಅಭಿಮಾನಿಗಳಲ್ಲಿ ತೀವ್ರ ಸಂತಾಪಗಳನ್ನು ವ್ಯಕ್ತಪಡಿಸುತ್ತೇನೆ. ಎಂದಿದ್ದಾರೆ.
ಉಮೇಶ್ ಅವರು ಚಿತ್ರರಂಗ ಕಂಡ ಅತ್ಯಂತ ಪ್ರತಿಭಾನ್ವಿತ ನಟ, ಬಾಲ ಕಲಾವಿದರಾಗಿ ಮಕ್ಕಳ ರಾಜ್ಯ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ಅವರು 400ಕ್ಕೂ ಹೆಚ್ಚು ಚಿತ್ರಗಳಲ್ಲಿ ನಮ್ಮನ್ನು ರಂಜಿಸಿದ್ದಾರೆ. ಡಾ. ರಾಜಕುಮಾರ್, ವಿಷ್ಣುವರ್ಧನ್, ಅಂಬರೀಶ್, ಅನಂತ್ ನಾಗ್ ಸೇರಿದಂತೆ ಕನ್ನಡದ ಎಲ್ಲಾ ನಾಯಕ ನಟರ ಜೊತೆಯಲ್ಲಿ ಅಭಿನಯಿಸಿದ ಹೆಗ್ಗಳಿಕೆ ಉಮೇಶ್ ಅವರದ್ದು, ಗುರು ಶಿಷ್ಯರು, ಗೋಲ್ಮಾಲ್ ರಾಧಾಕೃಷ್ಣ ಮುಂತಾದ ಚಿತ್ರಗಳಲ್ಲಿನ ಅವರ ಅಭಿನಯ ಮರೆಯಲಾಗದಂತಹುದು. ಅಂತಹ ಮನೋಜ್ಞ ಅಭಿನಯದ ಅದ್ಭುತ ಕಲಾವಿದ ಕ್ಯಾನ್ಸರ್ ರೋಗದಿಂದ ನರಳಿ ಪ್ರಾಣ ಬಿಡುವಂತಾಗಿದ್ದು ದುರ್ದೈವ, ಅವರ ನಿಧನದಿಂದ ಕನ್ನಡ ಚಿತ್ರರಂಗ ಒಬ್ಬ ಅತ್ಯುತ್ತಮ ಕಲಾವಿದನನ್ನು ಕಳೆದುಕೊಂಡಿದೆ, ಅವರ ಅಭಿಮಾನಿಗಳಿಗೆ ಮತ್ತು ಅವರ ಕುಟುಂಬವರ್ಗಕ್ಕೆ ಅವರ ಅಗಲಿಕೆಯ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಸಚಿವ ಶಿವರಾಜ ತಂಗಡಗಿ ತಮ್ಮ ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.
“ಕನ್ನಡ ಚಿತ್ರರಂಗದ ಹಿರಿಯ ಹಾಸ್ಯ ನಟರಾದ ಎಂ.ಎಸ್ ಉಮೇಶ್ ಅವರ ನಿಧನದ ಸುದ್ದಿ ನೋವು ತಂದಿದೆ. 350ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಉಮೇಶ್ ಅವರು ಕನ್ನಡ ಚಿತ್ರರಂಗಕ್ಕೆ ಅತಿದೊಡ್ಡ ಕೊಡುಗೆ ನೀಡಿದ್ದರು. ನಾಗರ ಹೊಳೆ, ಗುರು ಶಿಷ್ಯರು, ಅನುಪಮಾ, ಕಾಮನಬಿಲ್ಲು, ಅಪೂರ್ವ ಸಂಗಮ, ಶ್ರುತಿ ಸೇರಿದಾಗ, ಹಾಲು ಸಕ್ಕರೆ, ಗೋಲ್ಮಾಲ್ ರಾಧಾಕೃಷ್ಣ ಅವರ ಪ್ರಮುಖ ಸಿನಿಮಾಗಳಾಗಿವೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬಕ್ಕೆ ದೇವರು ನೋವು ಭರಿಸುವ ಶಕ್ತಿ ನೀಡಲೆಂದು ಪ್ರಾರ್ಥಿಸುತ್ತೇನೆ” ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.
“ಕನ್ನಡ ಚಿತ್ರರಂಗದ ಪ್ರಸಿದ್ಧ ಹಾಸ್ಯ ಕಲಾವಿದ ಎಂ.ಎಸ್. ಉಮೇಶ್ ಅವರು ವಿಧಿವಶರಾದ ಸುದ್ದಿ ದುಃಖತರಿಸಿದೆ. ರಂಗಭೂಮಿಯಿಂದ ಆರಂಭವಾದ ಅವರ ಕಲಾಜೀವನ ಸಿನಿಮಾರಂಗ ಮತ್ತು ಕಿರುತೆರೆಯವರೆವಿಗೂ ವಿಸ್ತರಿಸಿ, ತಮ್ಮದೇ ಆದ ಛಾಪು ಮೂಡಿಸಿ ಪ್ರೇಕ್ಷಕರ ಮನಗೆದ್ದಿದ್ದರು. . ಉಮೇಶ್ ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ, ಕುಟುಂಬಸ್ಥರು ಹಾಗೂ ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿ ನೀಡುವಂತೆ ಪರಮಾತ್ಮನಲ್ಲಿ ಪ್ರಾರ್ಥಿಸುತ್ತೇನೆ” ಎಂದು ಸಚಿವ ಎಂ ಬಿ ಪಾಟೀಲ್ ತಿಳಿಸಿದ್ದಾರೆ.
“ಕನ್ನಡ ಚಿತ್ರರಂಗದ ಹಿರಿಯ ಕಲಾವಿದ, ಜನಪ್ರಿಯ ಹಾಸ್ಯನಟ ಶ್ರೀ ಎಂ.ಎಸ್.ಉಮೇಶ್ ರವರ ನಿಧನದ ಸುದ್ದಿ ತಿಳಿದು ಅತ್ಯಂತ ದುಃಖವಾಯಿತು. ಐದು ದಶಕಗಳ ಕಾಲ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ಅವರ ಅಗಲಿಕೆಯಿಂದ ಚಿತ್ರರಂಗ ತನ್ನ ಒಬ್ಬ ಹಿರಿಯ ಕಲಾವಿದನನ್ನು ಕಳೆದುಕೊಂಡಿದೆ. ಅವರ ಆತ್ಮಕ್ಕೆ ಸದ್ಗತಿಯನ್ನು ಪ್ರಾರ್ಥಿಸುತ್ತೇನೆ. ಅವರ ಕುಟುಂಬ ಸದಸ್ಯರಿಗೆ ತೀವ್ರ ಸಂತಾಪಗಳನ್ನು ವ್ಯಕ್ತಪಡಿಸುತ್ತೇನೆ” ಎಂದು ಶಾಸಕ ಡಾ. ಸಿ ಎನ್ ಅಶ್ವತ್ಥ್ ನಾರಾಯಣ್ ಟ್ವೀಟ್ ಮಾಡಿದ್ದಾರೆ.
ಇನ್ನು ಹಿರಿಯ ಕಲಾವಿದರಾದ ಡಿಂಗ್ರಿ ನಾಗರಾಜ್ ಅವರು ಉಮೇಶ್ ಅವರು ಬಹಳ ಕಷ್ಟಪಟ್ಟು ಜೀವನ ನಡೆಸಿದವರು. ಅವರ ತಂದೆಯವರು ವಾರಾನ್ನದವರಾಗಿದ್ದರು ಎಂದು . ಉಮೇಶ್ ಅವರ ಬಾಲ್ಯದ ಗೆಳೆಯರಾಗಿರುವ ನಟ ಹೇಳುತ್ತಾರೆ. ಅವರು ಉಮೇಶ್ ಅವರ ಜೀವನದ ಪ್ರತಿ ಹಂತವನ್ನು ಹತ್ತಿರದಿಂದ ನೋಡಿದ್ದು ಅವರ ಜೀವನವನ್ನು ಸ್ಮರಿಸಿದರು.





