– ರಾಘವೇಂದ್ರ ಅಡಿಗ ಎಚ್ಚೆನ್.
ಪ್ರಧಾನಿ ನರೇಂದ್ರ ಮೋದಿ ಅವರಿಗೆ ‘ಭಾರತ ಭಾಗ್ಯವಿಧಾತ‘ ಬಿರುದು
ಕನಕದಾಸರಿಗೆ ನಮಿಸುವ ಪುಣ್ಯ ಇಂದು ನನಗೆ ಸಿಕ್ಕಿದೆ. ನನ್ನಂಥ ಎಲ್ಲಾ ಭಕ್ತರಿಗೂ ಕಿಂಡಿಯ ಮೂಲಕ ಶ್ರೀಕೃಷ್ಣನ ದರ್ಶನ ಆಗುವಂತೆ ಮಾಡಿದ್ದು ಕನಕದಾಸರು. ಭಗವಾನ್ ಕೃಷ್ಣನ ಪ್ರೇರಣೆಯಿಂದಲೇ ಕೆಲವೊಂದು ಸಂಕಲ್ಪ ಮಾಡಲಾಗಿದೆ. ನಮ್ಮ ಮೊದಲ ಸಂಕಲ್ಪ ʻನೀರು ನದಿಯ ರಕ್ಷಿಸೋದುʼ ಆಗಲಿ. ಒಬ್ಬ ಬಡವನ ಉದ್ಧಾರ ಮಾಡಲು ಪ್ರಯತ್ನಿಸೋಣ. ಉತ್ತಮ ಆರೋಗ್ಯ, ಯೋಗ ಸಂಕಲ್ಪ ಮಾಡೋಣ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದರು.
ಉಡುಪಿ ಲಕ್ಷ ಕಂಠ ಭಗವದ್ಗೀತಾ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, ʻಎಲ್ಲರಿಗೂ ನಮಸ್ಕಾರ.. ಜೈ ಶ್ರೀಕೃಷ್ಣʼ ಎನ್ನುತ್ತಾ ಕನ್ನಡದಲ್ಲೇ ಮಾತು ಆರಂಭಿಸಿದರು. ಶ್ರೀ ಕೃಷ್ಣನ ದಿವ್ಯ ದರ್ಶನದ ಸಂತುಷ್ಟಿ, ಭಗವದ್ಗೀತೆ ಮಂತ್ರದ ಆಧ್ಯಾತ್ಮಿಕ ಅನುಭೂತಿ, ಸಂತರು, ಗುರುಗಳ ಉಪಸ್ಥಿತಿ ಎಲ್ಲವೂ ಲಭಿಸಿರುವುದು ನನ್ನ ಪರಮ ಸೌಭಾಗ್ಯ. ಇದು ಇನ್ನೂ ಹೆಚ್ಚಿನ ಕೆಲಸ ಮಾಡಲು ಹಾಗೂ ಜನರ ಅಪೇಕ್ಷೆಗಳನ್ನ ಪೂರೈಸಲು ಶಕ್ತಿ ಸಿಕ್ಕಂತಾಗಿದೆ ಎಂದು ಶ್ಲಾಘಿಸಿದರು.

ಉಡುಪಿ ಕ್ಷೇತ್ರ ಭಕ್ತಿ ಹಾಗೂ ಸೇವೆಯ ಸಂಗಮ ಕ್ಷೇತ್ರ. ನನ್ನ ಜನ್ಮ ಗುಜರಾತ್ ನಲ್ಲಿ ಆಗಿದ್ದು. ಆದ್ರೂ ಗುಜರಾತ್ ಮತ್ತು ಉಡುಪಿಗೆ ಅವಿನಾಭಾವ ಸಂಬಂಧ ಇದೆ. ಉಡುಪಿ ಕೃಷ್ಣನ ದರ್ಶನ ಪಡೆದಿದ್ದು ಆಧ್ಯಾತ್ಮಿಕ ಖುಷಿ ಸಿಕ್ಕಂತಾಗಿದೆ. ಲಕ್ಷ ಕಂಠದ ಮೂಲಕ ಗೀತಾ ಪಠಣ ಒಂದೇ ಸ್ಥಳದಲ್ಲಿ ಒಂದೇ ವೇಳೆ ಆಗಿರುವುದು ಹೊಸ ಶಕ್ತಿ ನೀಡಿದಂತಾಗಿದೆ. ಈ ಕೆಲಸ ಮಾಡಿರುವ ಸುಗುಣೇಂದ್ರ ಶ್ರೀಗಳಿಗೆ ಪ್ರಣಾಮ ಸಲ್ಲಿಸುತ್ತೇನೆ ಎಂದರಲ್ಲದೇ ಉಡುಪಿಯು ಜನ ಸಂಘ ಹಾಗೂ ಬಿಜೆಪಿಯ ಕರ್ಮಭೂಮಿ. ಜನ ಸಂಘದಲ್ಲಿ ನಮ್ಮ ವಿ.ಎಸ್.ಆಚಾರ್ಯರನ್ನ ಆಯ್ಕೆ ಮಾಡಿದ್ದು ಉಡುಪಿಯ ಜನ. ಮೂರು ದಿನಗಳ ಹಿಂದೆ ನಾನು ಅಯೋಧ್ಯೆಯಲ್ಲಿದ್ದೆ. ಅಯೋಧ್ಯೆಯ ರಾಮ ಜನ್ಮಭೂಮಿಯಲ್ಲಿ ಧರ್ಮಧ್ವಜ ಸ್ಥಾಪನೆ ಆಗಿದೆ. ಅಯೋಧ್ಯೆಯಿಂದ ಉಡುಪಿಯವರೆಗೂ ರಾಮ ಭಕ್ತರು ಸಾಕ್ಷಿಯಾಗಿದ್ದಾರೆ. ಮಧ್ವಾಚಾರ್ಯರು ಭಕ್ತಿಯ ಮಾರ್ಗ ತೋರಿಸಿಕೊಟ್ಟಿದ್ದಾರೆ. ಅವರ ಮಾರ್ಗದರ್ಶನದಿಂದ ಆರಂಭಗೊಂಡ ಈ ಅಷ್ಟ ಮಠಗಳು ಇಂದಿಗೂ ಧರ್ಮಕಾರ್ಯದಲ್ಲಿ ತೊಡಗಿವೆ ಎಂದು ಶ್ಲಾಘಿಸಿದರು.

ರಾಮಮಂದಿರ ಆಂದೋಲನದಲ್ಲಿ ಉಡುಪಿ ಜನರ ಪಾತ್ರ ದೇಶಕ್ಕೇ ಗೊತ್ತಿದೆ
ಶ್ರೀರಾಮಮಂದಿರ ಆಂದೋಲನದಲ್ಲಿ ಉಡುಪಿ ಜನರ ಪಾತ್ರ ಇಡೀ ದೇಶಕ್ಕೆ ಗೊತ್ತಿದೆ. ದಿ. ಪೇಜಾವರ ಶ್ರೀಗಳನ್ನ ನಾವು ಸ್ಮರಿಸಲೇಬೇಕು. ಅಲ್ಲದೇ ರಾಮಮಂದಿರ ನಿರ್ಮಾಣ ಉಡುಪಿಗೆ ಮತ್ತೊಂದು ಕಾರಣಕ್ಕೆ ವಿಶೇಷವಾಗಿದೆ. ಹೊಸ ಮಂದಿರದಲ್ಲಿ ಮಧ್ವಾಚಾರ್ಯರ ಹೆಸರಿನ ಒಂದು ದ್ವಾರ ನಿರ್ಮಾಣ ಮಾಡಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.
ಭಗವದ್ಗೀತೆಯ ಈ ಅಭಿಯಾನ ಸನಾತನ ಪರಂಪರೆಯ ಒಂದು ಸಾಂಸ್ಕೃತಿಕ ಜನಾಂದೋಲನ.

ಭಾರತದಲ್ಲಿ ವೇದ, ಉಪನಿಷತ್, ಶಾಸ್ತ್ರದ ಜ್ಞಾನವನ್ನ ಮುಂದಿನ ಪೀಳಿಗೆಗೆ ಪರಿಚಯಿಸಬೇಕಿದೆ. ಈ ಕಾರ್ಯಕ್ರಮ ಕೂಡ ಭಗವದ್ಗೀತೆಯನ್ನ ಮುಂದಿನ ಪೀಳಿಗೆ ಪರಿಚಯಿಸೋ ಭಾಗವಾಗಿದೆ ಎಂದು ಹೇಳಿದರು. ಶ್ರೀರಾಮಮಂದಿರ ಆಂದೋಲನದಲ್ಲಿ ಉಡುಪಿಯ ಜನರ ಪಾತ್ರ ಇಡೀ ದೇಶಕ್ಕೆ ಗೊತ್ತಿದೆ. ಸ್ವರ್ಗೀಯಾಗಿರುವ ದಿ. ಪೇಜಾವರ ಶ್ರೀಗಳನ್ನ ನಾವು ಸ್ಮರಿಸಲೇಬೇಕು. ಅಲ್ಲದೇ ರಾಮಮಂದಿರ ನಿರ್ಮಾಣ ಉಡುಪಿಗೆ ಮತ್ತೊಂದು ಕಾರಣಕ್ಕೆ ವಿಶೇಷವಾಗಿದೆ. ಹೊಸ ಮಂದಿರದಲ್ಲಿ ಮಧ್ವಾಚಾರ್ಯರ ಹೆಸರಿನ ಒಂದು ದ್ವಾರ ನಿರ್ಮಾಣ ಮಾಡಲಾಗಿದೆ. ರಾಮ ಮಂದಿರ ಪರಿಷತ್‌ನ ಒಂದು ದ್ವಾರ ಮಧ್ವರ ಹೆಸರಿನಲ್ಲಿ ಆಗಿರುವುದು ಉಡುಪಿಗೆ ಮತ್ತೊಂದು ಹೆಮ್ಮೆ. ಜಗದ್ಗುರು ಮಧ್ವಾಚಾರ್ಯರ ಪರಂಪರೆ ಹರಿದಾಸ ಪರಂಪರೆಗಳಲ್ಲಿ ಒಂದು. ಶ್ರೀಕೃಷ್ಣನ ಉಪದೇಶ ಎಲ್ಲಾ ಯುಗಗಳಿಗೆ ಅನ್ವಯವಾಗುತ್ತದೆ ಎಂದು ತಿಳಿಸಿದರು.
ಶ್ರೀ ಕೃಷ್ಣನು ಯುದ್ಧಭೂಮಿಯಲ್ಲಿ ಗೀತೆಯ ಧರ್ಮೋಪದೇಶಗಳನ್ನು ನೀಡಿದ. ಶಾಂತಿ ಮತ್ತು ಸತ್ಯವನ್ನು ಪುನಃಸ್ಥಾಪಿಸಲು ದಬ್ಬಾಳಿಕೆಗಾರರನ್ನು ಕೊನೆಗೊಳಿಸುವುದು ಮುಖ್ಯ ಎಂದು ಭಗವದ್ಗೀತೆ ನಮಗೆ ಕಲಿಸುತ್ತದೆ. ಇದು ರಾಷ್ಟ್ರೀಯ ಭದ್ರತಾ ನೀತಿಯ ಸಾರ. ಈ ಹಿಂದಿನ ಸರ್ಕಾರಗಳು ಭಯೋತ್ಪಾದಕ ದಾಳಿಗಳಿಗೆ ಪ್ರತೀಕಾರ ತೀರಿಸಿಕೊಳ್ಳಲಿಲ್ಲ. ಆದರೆ ಇಂದಿನದು ಹೊಸ ಭಾರತ. ಶಾಂತಿ ಸ್ಥಾಪಿಸುವುದು ಹೇಗೆ ಹಾಗೂ ಅದರ ರಕ್ಷಣೆ ಹೇಗೆಂದು ನಮಗೆ ಗೊತ್ತಿದೆ ಎಂದು ಪ್ರಧಾನಿ ತಿಳಿಸಿದರು.

ಕೆಂಪು ಕೋಟೆಯಿಂದ ನಾವು ಶ್ರೀಕೃಷ್ಣನ ಕರುಣೆಯ ಸಂದೇಶ ಸಾರುತ್ತೇವೆ. ಅಲ್ಲದೇ, ಆ ಪ್ರಾಚೀನ ಸ್ಫೂರ್ತಿಯಿಂದ ನಾವು ಮಿಷನ್ ಸುದರ್ಶನ ಚಕ್ರವನ್ನೂ ಘೋಷಿಸುತ್ತೇವೆ. ಮಿಷನ್ ಸುದರ್ಶನ ಚಕ್ರ ಎಂದರೆ ದೇಶದ ಪ್ರಮುಖ ಸ್ಥಳಗಳು, ಅದರ ಕೈಗಾರಿಕಾ ಮತ್ತು ಸಾರ್ವಜನಿಕ ವಲಯಗಳ ಸುತ್ತಲೂ ಅಂತಹ ರಕ್ಷಣಾತ್ಮಕ ಗುರಾಣಿಯನ್ನು ರಚಿಸುವುದಾಗಿದೆ. ಯಾವ ಶತ್ರುಗಳೂ ಸಹ ಅದನ್ನು ಭೇದಿಸಲು ಸಾಧ್ಯವಿಲ್ಲ. ಶತ್ರುಗಳು ಆಕ್ರಮಣಶೀಲತೆ ಪ್ರದರ್ಶನದ ಧೈರ್ಯ ಮಾಡಿದರೆ, ನಮ್ಮ ಸುದರ್ಶನ ಚಕ್ರವು ಅದನ್ನು ನಾಶಪಡಿಸುತ್ತದೆ ಎಂದು ಪ್ರಧಾನಿ ಮೋದಿ ಘೋಷಿಸಿದರು.

ಸ್ವಚ್ಛತಾ ಅಭಿಯಾನ ನಾವು ಆರಂಭಿಸೋ ಮೊದಲೇ ಉಡುಪಿಯಲ್ಲಿ ಆರಂಭವಾಗಿತ್ತು. ಜಲಸಂರಕ್ಚಣೆ, ಒಳ ಚರಂಡಿ ವ್ಯವಸ್ಥೆ ಹಲವು ವರ್ಷಗಳ ಹಿಂದೆಯೇ ಉಡುಪಿಯಲ್ಲಿ ಆರಂಭಿಸಲಾಗಿದೆ. ಮಧ್ವಾಚಾರ್ಯರು ಅಷ್ಟ ಮಠಗಳ ಸ್ಥಾಪನೆ ಮಾಡಿ ಹೊಸ ಯುಗಕ್ಕೆ ದಾರಿ ಮಾಡಿ ಕೊಟ್ಟರು, ಹಲವು ಸಂಕಷ್ಟಗಳ ಮಧ್ಯೆ ಭಕ್ತಿ ಮಾರ್ಗ ತೋರಿಸಿಕೊಟ್ಟರು. ಇಲ್ಲಿ ಶ್ರೀಕೃಷ್ಣನ ಭಕ್ತಿಯ ಜೊತೆಗೆ ಅನ್ನದಾಸೋಹದ ಸೇವೆಯೂ ಇದೆ. ಹೀಗಾಗಿ ಇಲ್ಲಿನ ಅಷ್ಟ ಮಠಗಳು ನಿತ್ಯ ಲಕ್ಷಾಂತರ ಜನರಿಗೆ ಸೇವೆ ಸಲ್ಲಿಸುತ್ತಿದೆ ಎಂದು ಹಾಡಿಹೊಗಳಿದರು.
ಮಧ್ವಾಚಾರ್ಯರು ದಾಸ ಪರಂಪರೆಗೂ ಪ್ರೇರಣೆ ನೀಡಿದವರು. ಭಗವದ್ಗೀತೆಯ ಸಾರ ಏನೆಂದರೆ ಲೋಕ ಕಲ್ಯಾಣದ ಕೆಲಸ ಮಾಡಿ ಎನ್ನುವುದು, ಕೇಂದ್ರ ಸರ್ಕಾರದ ಪ್ರತೀ ಯೋಜನೆಯೂ ಶ್ರೀಕೃಷ್ಣನ ಶ್ಲೋಕದ ಪ್ರೇರಣೆ. ಕೃಷ್ಣ ಗೀತೆಯ ಸಂದೇಶ ಯುದ್ಧ ಭೂಮಿಯಲ್ಲಿ ಕೊಟ್ಟದ್ದು, ಅದು ಇಂದಿಗೂ ಪ್ರಸ್ತುತ ಎಂದು ಸ್ಮರಿಸಿದರು

ಪ್ರಧಾನಿಗೆ ಭಾರತ ಭಾಗ್ಯವಿಧಾತ ಬಿರುದು: ಲಕ್ಷ ಕಂಠ ಗೀತಾ ಪಠಣ ಸಮಾವೇಶದಲ್ಲಿ ಕೃಷ್ಣಮಠದ ವತಿಯಿಂದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ‘ಭಾರತ ಭಾಗ್ಯವಿಧಾತ‘ ಬಿರುದು ನೀಡಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಪ್ರಧಾನಿಗೆ ಬೆಳ್ಳಿಯ ಕಡೆಗೋಲು ನೀಡಿ ಗೌರವಿಸಲಾಯಿತು.
ಇದಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ, ಶ್ರೀ ಕೃಷ್ಣನ ದರ್ಶನ ಪಡೆದು, ಕನಕದಾಸರಿಗೆ ಪುಷ್ಪಾರ್ಚನೆ ಮಾಡಿ ಕನಕನ ಕಿಂಡಿಗೆ ಹೊದಿಸಿರುವ ಚಿನ್ನದ ಕವಚ, ಸುವರ್ಣ ತೀರ್ಥ ಮಂಟಪವನ್ನು ಅನಾವರಣಗೊಳಿಸಿದರು.
ಜಲಸಂರಕ್ಷಣೆ ಸೇರಿ 9 ಸಂಕಲ್ಪಕ್ಕೆ ಕರೆ
ಜಲ ಸಂರಕ್ಷಣೆ, ನದಿಗಳ ಉಳಿಸುವಿಕೆ ಸೇರಿದಂತೆ ಪ್ರತಿಯೊಬ್ಬ ಭಾರತೀಯರು 9 ಸಂಕಲ್ಪಗಳನ್ನು ತೊಡುವಂತೆ ಪ್ರಧಾನಿ ನರೇಂದ್ರ ಮೋದಿ ಆವರು ದೇಶದ ಜನತೆಗೆ ಕರೆ ನೀಡಿದ್ದಾರೆ.
ಪ್ರತಿಯೊಬ್ಬರೂ ತಮ್ಮ ತಾಯಿಯ ಹೆಸರಲ್ಲಿ ಒಂದು ಮರ ನೆಡುವಂತೆ, ತಲಾ ಒಬ್ಬನಾದರೂ ಬಡವನಿಗೆ ಸಹಾಯ ಮಾಡುವಂತೆ, ಸ್ವದೇಶಿ, ಆತ್ಮನಿರ್ಭರ ಭಾರತಕ್ಕೆ ಬೆಂಬಲ, ಸಾವಯವ ಕೃಷಿಗೆ ಒತ್ತು, ಆರೋಗ್ಯಪೂರ್ಣ ಬದುಕು, ಯೋಗಾಭ್ಯಾಸ, ಹಸ್ತಪ್ರತಿಗಳ ಸಂರಕ್ಷಣೆಯ ಸಂಕಲ್ಪ ತೊಡುವಂತೆ ಅವರು ಹೇಳಿದರು ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಬಿ.ವೈ ರಾಘವೇಂದ್ರ, ಮುಖಂಡ ರಾದ ಬಿ. ವೈ. ವಿಜಯೇಂದ್ರ, ರಾಜ್ಯ ಸಭಾ ಸಂಸದ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ, ಶಾಸಕರಾದ ವಿ ಸುನಿಲ್ ಕುಮಾರ್, ಯಶ್ ಪಾಲ್ ಎ ಸುವರ್ಣ, ಗುರುರಾಜ್ ಶೆಟ್ಟಿ ಗಂಟಿಹೊಳೆ, ಎ ಕಿರಣ್ ಕುಮಾರ್ ಕೊಡ್ಗಿ ಹಾಗೂ ಗುರ್ಮೆ ಸುರೇಶ ಶೆಟ್ಟಿ ಹಾಗೂ ಇತರರು ಉಪಸ್ಥಿತರಿದ್ದರು





